ADVERTISEMENT

ಪರೀಕ್ಷೆಯೇ ಬದುಕಿನ ಕೊನೆಯಲ್ಲ!

ಬೇಂದ್ರೆ ಮಂಜುನಾಥ್‌ ಕೆ.ಟಿ.ಹಳ್ಳಿ
Published 30 ಏಪ್ರಿಲ್ 2019, 19:45 IST
Last Updated 30 ಏಪ್ರಿಲ್ 2019, 19:45 IST
   

ಇದು ಪರೀಕ್ಷಾ ಫಲಿತಾಂಶದ ಸಮಯ. ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕದಿಂದ ಇಲ್ಲವೇ ಸಂತೋಷದಿಂದ ಪರಿಣಾಮವನ್ನು ನಿರೀಕ್ಷಿಸುತ್ತಿರುವ ಘಳಿಗೆ. ಯಶಸ್ಸು ಸಿಕ್ಕಲ್ಲಿ, ಅಂದುಕೊಂಡಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬಂದಲ್ಲಿ ಖುಷಿಪಡುವ, ನಿರೀಕ್ಷಿತ ಅಂಕಗಳು ಕಡಿಮೆಯಾದಲ್ಲಿ ಇಲ್ಲವೇ ಒಂದೆರಡು ವಿಷಯಗಳಲ್ಲಿ ಫೇಲ್ ಆದಲ್ಲಿ ಮುಖ ಕೆಳಗೆ ಹಾಕಿ ನೊಂದುಕೊಳ್ಳುವ ಸನ್ನಿವೇಶ.

ಎಷ್ಟೇ ಅಂಕಗಳು ಬರಲಿ ಇಲ್ಲ ಫೇಲ್ ಆಗಿರಲಿ, ಮತ್ತೊಮ್ಮೆ ಗೆಲ್ಲುವ ಛಲ ನಮ್ಮಲ್ಲಿದೆ ಎಂದು ಫಲಿತಾಂಶವನ್ನು ಸವಾಲಾಗಿ ಸ್ವೀಕರಿಸುವವರ ಸಂಖ್ಯೆ ಹೆಚ್ಚುತ್ತಲಿರುವುದು ಆಶಾದಾಯಕ ಅಂಶ. ತೀರಾ ಅಂದರೆ ತೀರಾ ಕಡಿಮೆ ಪ್ರಮಾಣದಲ್ಲಿಯಾದರೂ ಕೆಲವು ದುರ್ಬಲ ಮನಸ್ಸಿನವರು ಪರಿಸ್ಥಿತಿಯ ಒತ್ತಡವನ್ನು ನಿಭಾಯಿಸಲಾಗದೇ ಅತಿರೇಕದ ತೀರ್ಮಾನ ತೆಗೆದುಕೊಂಡು ಹೆತ್ತವರ ಕನಸುಗಳೊಂದಿಗೆ ಕಣ್ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಗದಿರಲಿ ಎಂಬ ಹಾರೈಕೆ ಎಲ್ಲರದ್ದು.

ಸೋಲೇ ಗೆಲುವಿನ ಸೋಪಾನ
ಎಲ್ಲಾ ಸಂದರ್ಭಗಳಲ್ಲಿಯೂ ಗೆಲುವು ನಮ್ಮದೇ ಆಗಬೇಕೆಂದೇನಿಲ್ಲ. ತೀವ್ರತರ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹೋರಾಡಿದರೂ ಗೆಲುವು ಕೂದಲೆಳೆಯ ಅಂತರದಲ್ಲಿ ನುಣುಚಿಕೊಳ್ಳಲೂಬಹುದು. ಸೋತವರು ಹತಾಶರಾಗಿ, ಲೈಫು ಇಷ್ಟೇನೇ ಎಂದು ಹಿಂದಿರುಗಿ ಬರಲಾರದಂತಹ ನಿರ್ಣಯಗಳನ್ನು ತೆಗೆದುಕೊಳ್ಳುವ ಅತಿರೇಕಕ್ಕೂ ಹೋಗಬಹುದು. ಆದರೆ, ಬದುಕಿ, ಹೋರಾಡಿ, ಕಳೆದುಕೊಂಡಲ್ಲೇ ಮತ್ತೆ ಹುಡುಕಿ, ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ. ಸೋಲು ಒಪ್ಪಿಕೊಳ್ಳುವುದನ್ನೂ, ತಮ್ಮ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನೂ ಕಲಿಯಬೇಕಾಗಿದೆ. ಅತಿ ಹೆಚ್ಚಿನ ಸಾಧನೆ ಮಾಡುವ ಗುರಿಯ ಬೆನ್ನು ಹತ್ತಿದವರಂತೂ ಹತಾಶೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು.

ADVERTISEMENT

ಆತ್ಮಹತ್ಯೆಯಿಂದಾಗುವ ಜೀವಹಾನಿಯನ್ನು ತಡೆಯುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಹಲವು ಸಂಘ ಸಂಸ್ಥೆಗಳು, ಮಾನಸಿಕ ಆರೋಗ್ಯ ವಿಭಾಗಗಳು ಕೆಲಸ ಮಾಡುತ್ತಿವೆ. ಜೀವನದಲ್ಲಿ ಬರುವ ಕಷ್ಟಗಳಿಗೆ ಬೆದರಿ ಓಡಿಹೋಗದಂತೆ ಸಾಂತ್ವನ ಹೇಳುವ ಕೆಲಸ ಸ್ಥಳೀಯವಾಗಿಯೂ ಅಲ್ಲಲ್ಲಿ ನಡೆಯುತ್ತಿವೆ. ಆತ್ಮಹತ್ಯೆಯ ಭಾವನೆ ಮನದಲ್ಲಿ ಸುಳಿಯಿತೆಂಬ ಸುಳಿವು ಸಿಕ್ಕರೂ ಸಾಕು ಅದನ್ನು ಕೂಡಲೇ ತೆಗೆದುಹಾಕುವಂತೆ, ಜೀವನ್ಮುಖಿಯಾಗಿ ಗೆಲ್ಲುವಂತೆ ಮಾಡುವ ಕೌನ್ಸೆಲರ್‌ಗಳು ನಮ್ಮ ಸುತ್ತಮುತ್ತಲೂ ಇದ್ದಾರೆ, ಪತ್ರಿಕೆಗಳ ಮೂಲಕ ಆಪ್ತಸಲಹೆ ನೀಡುವವರೂ ಇದ್ದಾರೆ, ಹಾಗೆಯೇ ಅಂತರ್ಜಾಲದಲ್ಲಿ ಸಮಸ್ಯೆ ಪರಿಹರಿಸುವವರೂ ಇದ್ದಾರೆ.

ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ
ಇದು ಗೆಲ್ಲುವವರ ಕಾಲ. ಬೆಳಕೇ ಇಲ್ಲದ ದಾರಿಯಲ್ಲಿ ನಡೆಯಬಹುದು; ಆದರೆ ಕನಸೇ ಇಲ್ಲದ ಹಾದಿಯಲ್ಲಿ ನಡೆಯುವುದೆಂತು? ಎಂಬ ಮಾತಿನಂತೆ ತಾವು ಕಂಡ ಕನಸಿನ ಹಾದಿಯಲ್ಲೇ ನಡೆದು ಅದನ್ನು ನನಸಾಗಿಸಿಕೊಂಡವರು ಹಲವರಿದ್ದಾರೆ. ಒಂದೊಂದು ಹಂತದ ಸಾಧನೆ ಮಾಡಿದಾಗಲೂ ಅವರು, ಅಬ್ಬ! ಎಲ್ಲಾ ಆಯಿತಲ್ಲಾ ಎಂದು ಇತಿಶ್ರೀ ಹಾಡಲಿಲ್ಲ; ಬದಲಿಗೆ ಮತ್ತೂ ಮುಂದುವರೆಸಿದರು. ಏಕೆಂದರೆ ಸಾಧನೆಗೆ ಮಿತಿಯಿಲ್ಲ ಎಂಬುದು ಅವರಿಗೆ ಗೊತ್ತು.

ಯಶಸ್ವೀ ಆಯ್ಕೆಯ ಸೂತ್ರ
ಯಾವುದೇ ಕೋರ್ಸ್ ಆಯ್ದುಕೊಳ್ಳುವ ಮುನ್ನ ವಿದ್ಯಾರ್ಥಿಯನ್ನು ಸ್ವಾಟ್ ಅನಾಲಿಸಿಸ್‌ಗೆ ಒಳಪಡಿಸುವುದು ಸೂಕ್ತ. ಪ್ರಚಂಡ ಇಚ್ಛಾಶಕ್ತಿಯ ಬಲದಿಂದ ಅಸಾಧ್ಯವಾದದ್ದನ್ನು ಕೂಡ ಸಾಧಿಸಲು ಸಾಧ್ಯ. ಅವಕಾಶಗಳು ಮತ್ತು ಆತಂಕಗಳು ಬಾಹ್ಯ ಅಂಶಗಳು. ತೀವ್ರತರ ಸ್ಪರ್ಧಾತ್ಮಕ ವಾತಾವರಣದಲ್ಲಿ ಅತ್ಯಂತ ಸಹಜವಾಗಿ ಎದೆಗುಂದಿಸುವಂಥವು. ಸಾಮರ್ಥ್ಯ ಮತ್ತು ಅವಕಾಶಗಳು ಏಳಿಗೆಗೆ ನೆರವಾಗುವ ಅಂಶಗಳು. ದೌರ್ಬಲ್ಯ ಮತ್ತು ಆತಂಕಗಳು ಹಿಮ್ಮೆಟ್ಟಿಸುವ ತಡೆಗಳು. ವಿದ್ಯಾರ್ಥಿಗೆ ತಿಳಿದಿರುವ, ಪರಿಣತಿ ಇರುವ, ಅವರು ಯಶಸ್ವಿಯಾಗಿ ನಿರ್ವಹಿಸಬಲ್ಲ ವಿಷಯಗಳ ಜ್ಞಾನ, ಧನಾತ್ಮಕ ಆಲೋಚನೆ, ಅವರ ಸಾಮರ್ಥ್ಯಗಳಾದರೆ ಅವರಿಗೆ ನಿರ್ದಿಷ್ಟ ವಿಷಯದಲ್ಲಿ ಪರಿಣತಿ ಇರದೇ ಇರುವುದು, ಹಿಂಜರಿಕೆ, ಋಣಾತ್ಮಕ ಆಲೋಚನೆಗಳು ಅವರ ದೌರ್ಬಲ್ಯಗಳಾಗುತ್ತವೆ.

ಔದ್ಯೋಗಿಕ ಕ್ಷೇತ್ರದ ಅನಂತ ಅವಕಾಶಗಳನ್ನು ಬಾಚಿಕೊಳ್ಳಲು ಸಿದ್ಧರಾಗಿ, ಎದುರಾಗಬಹುದಾದ ಎಲ್ಲ ಆತಂಕಗಳನ್ನು ನಿವಾರಿಸಿ, ದೌರ್ಬಲ್ಯಗಳನ್ನು ಮೆಟ್ಟಿನಿಂತು, ಗೆಲುವಿನ ಬೆನ್ನುಹತ್ತುವವರಿಗೆ ಸೋಲೆಲ್ಲಿದೆ?

**
ಸ್ಮಾರ್ಟ್ ಅನಾಲಿಸಿಸ್ ಕೂಡ ಯಶಸ್ವೀ ಗುರಿ ನಿಗದಿಗೆ ಈಗ ಬಳಕೆಯಾಗುತ್ತಿದೆ. ಸುಮ್ಮನೇ ಸಮಯ ಹಾಳುಮಾಡುವುದು, ಕಾಡುಹರಟೆ ಹೊಡೆಯುವುದು, ಅಸಾಧ್ಯವಾದದ್ದನ್ನೆಲ್ಲಾ ಸಾಧಿಸುತ್ತೇನೆಂದು ಕನಸುಕಟ್ಟುವುದರಿಂದ ಯಶಸ್ಸು ಸಿಗುವುದಿಲ್ಲ. ಸಾಧಿಸುವ ಗುರಿ ನಿರ್ದಿಷ್ಟವಾಗಿದ್ದು, ನಮ್ಮ ಅಳತೆಗೆ ಸಿಗುವ, ಸಾಧಿಸಲು ಸಾಧ್ಯವಾದ, ನೈಜವಾದ ಮತ್ತು ನಿಗದಿತ ಸಮಯದೊಳಗೇ ಮಾಡಿಮುಗಿಸುವಂತಿದ್ದರೆ ಯಶಸ್ಸು ನಮ್ಮದೇ!

ಬಹುಶಃ ನಮ್ಮ ಯುವ ಮಿತ್ರರು ತಮ್ಮ ಶಾಲಾ ಕಾಲೇಜು ಜೀವನದ ಫಲಿತಾಂಶವನ್ನು ಅದು ಇರುವಂತೆಯೇ ಸ್ವೀಕರಿಸಿ, ಗೆದ್ದೇ ಗೆಲ್ಲುವೆವು ಎಂಬ ವಿಶ್ವಾಸದಿಂದ ಮುನ್ನಡೆಯುವರು ಎಂಬುದೇ ನಮ್ಮೆಲ್ಲರ ಹಾರೈಕೆ.

ತ್ರೀ ಈಡಿಯಟ್ಸ್ ಮಾದರಿ!
ನಿನ್ನ ಮನಸ್ಸಿಗೆ ಏನು ತೋಚುತ್ತೋ ಅದನ್ನು ಮಾಡು. ಏನು ಓದಬೇಕು ಅನ್ಸುತ್ತೋ, ಅದನ್ನು ಓದು. ರೇಸ್ ಅಂತ ಹುಚ್ಚು ಹಿಡಿದವರ ಹಾಗೆ ನೀನೂ ಓಡಬೇಡ. ಯೋಗ್ಯತೆ ಗಳಿಸಿಕೊಳ್ಳಲಿಕ್ಕೆ ಏನು ಬೇಕೋ ಅದನ್ನು ಮಾಡು. ಒಮ್ಮೆ ಯೋಗ್ಯ ಅನ್ನಿಸಿಕೊಂಡರೆ ಸಾಕು ಯಶಸ್ಸು ನಿನ್ನ ಹಿಂದೆ ನೆರಳಿನಂತೆ ಬರುತ್ತೆ. ಬರಲೇಬೇಕು.

ಕಾಬಿಲ್ ಬನೋ, ಕಾಬಿಲ್. ಕಾಮ್‌ಯಾಬಿ ಝುಕ್ ಮಾರ್‌ಕೆ ಪೀಛೆ ಆಯೇಗಿ!

ಬಹುಚರ್ಚಿತವಾದ ‘ತ್ರೀ ಈಡಿಯಟ್ಸ್’ ಚಿತ್ರ ನೋಡಿದವರೆಲ್ಲ ನೆನಪಿಟ್ಟುಕೊಂಡಿರುವ ಮಾತುಗಳಿವು. ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯ ಪ್ರೆಷರ್ ಕುಕ್ಕರ್‌ನಂತಹ ಪರಿಸ್ಥಿತಿಯನ್ನು ಯಥಾವತ್ತಾಗಿ ಅದು ಹಿಡಿದಿಟ್ಟಿದೆ. ಹುಟ್ಟಿದ ಕೂಡಲೇ ಎಂಜಿನಿಯರ್ / ಡಾಕ್ಟರ್ ಆಗಲೇಬೇಕೆಂಬ ಠಸ್ಸೆ ಹೊಂದಿದ್ದ ಸಾಂಪ್ರದಾಯಿಕ ಕಲಿಕೆಯನ್ನು ಪ್ರಶ್ನಿಸಿ ಮನಸ್ಸಿಗೆ ಹಿತವಾದದ್ದನ್ನೇ ಮಾಡುವ ಪ್ರೇರಣೆ ನೀಡುತ್ತಿದೆ.
ಕೋರ್ಸ್‌ಗಳ ಆಯ್ಕೆಯ ವಿಷಯದಲ್ಲಿ ತಂದೆ ತಾಯಿ, ಅಜ್ಜ ಅಜ್ಜಿಯರು, ನೆಂಟರಿಷ್ಟರು ತೋರಿಸಿದ ಕೋರ್ಸನ್ನೇ ಆರಿಸಿಕೊಳ್ಳುವ ನಿರ್ಬಧವನ್ನು ಇಂದಿನ ವಿದ್ಯಾರ್ಥಿಗಳು ಪ್ರಶ್ನಿಸಿ, ತಮ್ಮ ಆಯ್ಕೆಯನ್ನು ಸ್ಪಷ್ಟವಾಗಿ ತಿಳಿಸುವಷ್ಟು ಪ್ರಬುದ್ಧತೆ ತೋರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ.
-ಡಾ. ಎಸ್. ಧನಂಜಯ,ಆಪ್ತ ಸಮಾಲೋಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.