ADVERTISEMENT

ಆನ್‌ಲೈನ್ ಶಿಕ್ಷಣ: ನಗರ ಸಜ್ಜು, ಗ್ರಾಮಾಂತರ?

ಶಾಲೆ ಆರಂಭ ಕುರಿತು ಅಕಾಡೆಮಿ ಫಾರ್ ಕ್ರಿಯೇಟಿವ್‌ ಟೀಚಿಂಗ್ ಸಂಸ್ಥೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 21:10 IST
Last Updated 16 ಜೂನ್ 2020, 21:10 IST
ಆನ್ ಲೈನ್ ಶಿಕ್ಷಣ
ಆನ್ ಲೈನ್ ಶಿಕ್ಷಣ   

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮತ್ತೆ ಯಾವಾಗ ತೆರೆಯಬೇಕು? ಆನ್‌ಲೈನ್‌ ತರಗತಿಗೆ ಪೋಷಕರು ಸಿದ್ಧರಿದ್ದಾರೆಯೇ ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ನಗರದ ಅಕಾಡೆಮಿ ಫಾರ್ ಕ್ರಿಯೇಟಿವ್‌ ಟೀಚಿಂಗ್ ಸಂಸ್ಥೆ ಸಮೀಕ್ಷಾ ಕಾರ್ಯದಲ್ಲಿ ತೊಡಗಿದೆ.

ಈ ಸಂಸ್ಥೆ ಬೆಂಗಳೂರು ನಗರದಲ್ಲಿ ಈಗಾಗಲೇ ಸುಮಾರು 200 ಶಾಲೆಗಳ ಮುಖ್ಯಸ್ಥರು ಹಾಗೂ ಸುಮಾರು 800 ಪೋಷಕರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಸಂಗ್ರಹಿಸಿದೆ. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್ ತರಗತಿ ನಡೆಸಬೇಕು ಎಂದು ಬಹುತೇಕ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆನ್‌ಲೈನ್ ತರಗತಿ ನಡೆಸುವುದಾದರೆ ಅದಕ್ಕೆ ಬೇಕಾದ ಅಗತ್ಯದ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಒದಗಿಸಲು ತಾವು ಸಿದ್ಧ ಎಂದು ಬಹುತೇಕ ಪೋಷಕರು ಹೇಳಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ.

ಗ್ರಾಮೀಣದತ್ತ ಗಮನ: ಬೆಂಗಳೂರು ನಗರದ ಜನರ ನಾಡಿಮಿಡಿತ ದೊರೆತರಷ್ಟೇ ಸಾಲದು, ರಾಜ್ಯದ ಇತರ ಜಿಲ್ಲೆಗಳು, ಗ್ರಾಮೀಣ ಪ್ರದೇಶಗಳ ಶಾಲೆಗಳು, ಪೋಷಕರ ಮನೋಭಾವವನ್ನೂ ಅರಿಯಬೇಕು ಎಂಬ ಉದ್ದೇಶದೊಂದಿಗೆ ಸಂಸ್ಥೆ ಇದೀಗ ಇತರ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಲು ಮುಂದಾಗಿದೆ. ಅದಕ್ಕಾಗಿ ಸಂಸ್ಥೆಯು ಅರ್ಜಿ ನಮೂನೆಯೊಂದನ್ನು ಸಾರ್ವಜನಿಕರ ಲಭ್ಯತೆಗೆ ಒದಗಿಸಿದ್ದು, https://bit.ly/3ftaaUV ಇಲ್ಲಿಗೆ ಕ್ಲಿಕ್‌ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. 9845259235 ಇಲ್ಲಿಗೆ ವಾಟ್ಸ್‌ಆ್ಯಪ್‌ ಸಹ ಕಳುಹಿಸಬಹುದು.

ADVERTISEMENT

‘ನಮ್ಮ ಮುಖ್ಯ ಗುರಿ ಎಲ್‌ಕೆಜಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಎಂತಹ ಶಿಕ್ಷಣ ಕೊಡಬೇಕು ಎಂಬುದು. ಜತೆಗೆ 10ನೇ ತರಗತಿವೆರೆಗೆ ಕಲಿಕೆಗೆ ಯಾವ ವಿಧಾನ ಅನುಸರಿಸಬಹುದು ಎಂಬ ಅಧ್ಯಯನ ನಡೆಸುವುದೂ ಸೇರಿದೆ. ಆನ್‌ಲೈನ್‌ ತರಗತಿ ಬೇಕೇ? ಎಲ್ಲಿಂದ ಆರಂಭಿಸಬೇಕು? ಶಾಲೆ ವಿಳಂಬವಾಗಿ ಆರಂಭವಾದರೆ ಪಠ್ಯವನ್ನು ಕಡಿಮೆ ಮಾಡಬೇಕೇ? ಪರೀಕ್ಷೆ ನಡೆಸುವುದು ಹೇಗೆ? ಶಾಲೆ ತೆರೆಯಲು ಸಾಧ್ಯವಿಲ್ಲದಿದ್ದರೆ ಮಕ್ಕಳನ್ನು ಕಲಿಕೆಗೆ ತೊಡಗಿಸುವುದು ಹೇಗೆ? ಮೊದಲಾಗಿ ಯಾವುದೇ ಅಭಿಪ್ರಾಯಗಳನ್ನೂ ನೀಡಬಹುದು. ಎಲ್ಲವನ್ನೂ ಕ್ರೋಡೀಕರಿಸಿ ಸರ್ಕಾರ ರಚಿಸಿರುವ ತಜ್ಞರ ಸಮಿತಿಗೆ ಸಮೀಕ್ಷೆಯ ವರದಿಯನ್ನು ಸಲ್ಲಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕಿ ದೀಪ್ತಿ ಅಶೋಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.