ADVERTISEMENT

ರೈತನ ಪುತ್ರಿಯ ‘ಅಪೂರ್ವ’ ಸಾಧನೆ

ಕಾಸರಗೋಡಿನ ಅಸ್ಮಥ್‌ಗೆ 13 ಚಿನ್ನದ ಪದಕ ಪ್ರದಾನ

ಎಂ.ಮಹೇಶ
Published 3 ಏಪ್ರಿಲ್ 2021, 19:30 IST
Last Updated 3 ಏಪ್ರಿಲ್ 2021, 19:30 IST
ಬೆಳಗಾವಿಯ ವಿಟಿಯುನಲ್ಲಿ ಶನಿವಾರ ನಡೆದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎಚ್‌.ಆರ್. ಅಪೂರ್ವಾ, ಅಸ್ಮಥ್ ಶರ್ಮೀನ್, ಗಗನಾ ರೆಡ್ಡಿ ಮತ್ತು ಡಿ.ಅರುಣ್‌ ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯ ವಿಟಿಯುನಲ್ಲಿ ಶನಿವಾರ ನಡೆದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎಚ್‌.ಆರ್. ಅಪೂರ್ವಾ, ಅಸ್ಮಥ್ ಶರ್ಮೀನ್, ಗಗನಾ ರೆಡ್ಡಿ ಮತ್ತು ಡಿ.ಅರುಣ್‌ ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ. ಹೊನ್ನಲಗೆರೆಯ ರೈತನ ಪುತ್ರಿ ಎಚ್.ಆರ್‌. ಅಪೂರ್ವಾ ಬಿಇ (ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌) ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಗಳಿಸಿ 7 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡು ಸಾಧನೆ ತೋರಿದ್ದಾರೆ.

ಅವರಿಗೆ, ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ‘ಜ್ಞಾನಸಂಗಮ’ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಕ್ಷಣಾ ಇಲಾಖೆಯ ಮಾಜಿ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ. ಆತ್ರೆ ಪದಕಗಳನ್ನು ಪ್ರದಾನ ಮಾಡಿ ಬೆನ್ನು ತಟ್ಟಿದರು. ನೆರೆದಿದ್ದವರು ಚಪ್ಪಾಳೆಯ ಸುರಿಮಳೆಯ ಮೂಲಕ ಅಭಿನಂದಿಸಿದರು.

ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾದ ಅವರು ಎಚ್‌.ಸಿ. ರಮೇಶ್–ಗೀತಾ ದಂಪತಿಯ ಪುತ್ರಿ. ‘ನಮಗೆ ಎಕರೆ ಜಮೀನಷ್ಟೆ ಇದೆ. ಕೃಷಿಯೇ ಆಧಾರ. ತಂದೆ–ತಾಯಿ ಕಷ್ಟಪಟ್ಟು ನನ್ನನ್ನು ಓದಿಸಿದ್ದಾರೆ. ಚಿನ್ನದ ಪದಕಗಳನ್ನು ಪಡೆಯುವುದನ್ನು ಅಪ್ಪ ನೋಡಲಾಗಲಿಲ್ಲ. ಡಿಸೆಂಬರ್‌ನಲ್ಲಿ ಅವರಿಗೆ ಪಾರ್ಶ್ವವಾಯು ಆಗಿದ್ದು, ಹಾಸಿಗೆ ಹಿಡಿದಿದ್ದಾರೆ’ ಎನ್ನುವಾಗ ಅವರ ಕಣ್ಣಾಲಿಗಳು ತುಂಬಿಹೋದವು.

ADVERTISEMENT

‘ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತಿದ್ದೇನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 96ರಷ್ಟು ಹಾಗೂ ಪಿಯುಸಿಯಲ್ಲಿ ಶೇ 93ರಷ್ಟು ಅಂಕ ಗಳಿಸಿದ್ದೆ. ಎಂಜಿನಿಯರಿಂಗ್‌ ಸೇರಿದಾಗ, ಚಿನ್ನದ ಪದಕಗಳನ್ನು ಪಡೆಯುತ್ತೇನೆ ಎಂಬ ಭರವಸೆ ಇರಲಿಲ್ಲ. ಕಲಿಯುತ್ತಾ ಕಲಿಯುತ್ತಾ ಆತ್ಮವಿಶ್ವಾಸ ಹೆಚ್ಚಾಯ್ತು. ಪೋಷಕರ ತ್ಯಾಗದಿಂದಾಗಿ ಈ ಸಾಧನೆ ಸಾಧ್ಯವಾಯಿತು. ಕೋವಿಡ್‌ನಿಂದಾಗಿ ಕೊನೆಯ ಸೆಮಿಸ್ಟರ್‌ ಆನ್‌ಲೈನ್‌ ತರಗತಿ ಇತ್ತು. ಊರಲ್ಲಿ ನೆಟ್‌ವರ್ಕ್‌ ಸಮಸ್ಯೆ ಇತ್ತು. ಈ ನಡುವೆಯೂ ಉತ್ತಮ ಅಂಕ ಗಳಿಸಿದೆ’ ಎಂದು ತಿಳಿಸಿದರು.

‘ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿರುವುದರಿಂದಾಗಿ, ಉನ್ನತ ಶಿಕ್ಷಣಕ್ಕೆ ಹೋಗುತ್ತಿಲ್ಲ. ಉದ್ಯೋಗ ಆಯ್ಕೆ ಮಾಡಿಕೊಂಡಿದ್ದೇನೆ. ಎಲ್‌ ಅಂಡ್ ಟಿ ಕಂಪನಿಯಲ್ಲಿ ಅಸೋಸಿಯೇಟ್ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿದ್ದೇನೆ. ಒಂದೆರಡು ವರ್ಷ ಗಳಿಸಿದ ನಂತರ, ಉನ್ನತ ಶಿಕ್ಷಣದತ್ತ ಗಮನಹರಿಸುವೆ’ ಎಂದು ಹಂಚಿಕೊಂಡರು.

ಅಮೆರಿಕದಲ್ಲಿ ಸೀಟು

ಬಿಇ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ 7 ಚಿನ್ನದ ‍ಪದಕ ಬಾಚಿಕೊಂಡ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಸಂಸ್ಥೆಯ ಗಗನಾ ರೆಡ್ಡಿ ಅಮೆರಿಕದ ನಾರ್ಥ್‌ ಕೆರೆಲಿನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿಎಲ್‌ಎಸ್‌ಐ ಡಿಸೈನ್ ಸ್ನಾತಕೋತ್ತರ ಪದವಿಗೆ ಸೀಟು ಗಿಟ್ಟಿಸಿದ್ದಾರೆ. ಪ್ರಸ್ತುತ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಕೀಲ ತಿಮ್ಮಾರೆಡ್ಡಿ–ಗೃಹಿಣಿ ಚಂದ್ರಕಲಾ ದಂಪತಿಯ ಪುತ್ರಿ ಅವರು.

‘10ನೇ ಸ್ಥಾನದೊಳಗೆ ಬರುತ್ತೇನೆ ಎಂದುಕೊಂಡಿದ್ದೆ. ಮೊದಲ ರ‍್ಯಾಂಕ್‌ ಸಿಕ್ಕಿದ್ದು ಖುಷಿಯಾಗಿದೆ. ಪೋಷಕರು, ಬೋಧಕರ ಸಹಕಾರ ದೊಡ್ಡದು. ಮುಂಜಾನೆ ಹೆಚ್ಚು ಓದುತ್ತಿದ್ದೆ. ಕೊನೆಯ ಸೆಮಿಸ್ಟರ್‌ ಆನ್‌ಲೈನ್‌ ತರಗತಿ ಇತ್ತು. ಮೊಬೈಲ್‌ ಫೋನ್‌ ಸ್ಕ್ರೀನ್ ನೋಡಿ ಆಯಾಸ ಆಗುತ್ತಿತ್ತು’ ಎಂದು ಪ್ರತಿಕ್ರಿಯಿಸಿದರು.

‘ಕೋರ್ಸ್‌ ಮುಗಿದ ಬಳಿಕ ಒಂದಷ್ಟು ವರ್ಷ ಅಲ್ಲೇ ದುಡಿದು ನಂತರ ಭಾರತಕ್ಕೆ ಮರಳುತ್ತೇನೆ’ ಎಂದು ತಿಳಿಸಿದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಅಶುತೋಷ್ ಶರ್ಮಾ ಅವರಿಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ‘ಡಾಕ್ಟರ್ ಆಫ್ ಸೈನ್ಸ್‌’ ಗೌರವ ಪದವಿ ಪ್ರದಾನ ಮಾಡಿದರು.

ಕಾಂಡಿಮೆಂಟ್ಸ್‌ ಅಂಗಡಿ ಪುತ್ರನ ಸಾಧನೆ

ಬೆಂಗಳೂರಿನ ಬಿಎಂಎಸ್ ತಾಂತ್ರಿಕ ಸಂಸ್ಥೆಯ ಡಿ. ಅರುಣ್‌ ಬಿಇ ಮಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದು 7 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಕೆಳ ಮಧ್ಯಮ ಕುಟುಂಬದಿಂದ ಬಂದ ಪ್ರತಿಭೆ. ಕಾಂಡಿಮೆಂಟ್ಸ್‌ ಅಂಗಡಿ ನಡೆಸುತ್ತಿರುವ ದಿನಕರನ್‌–ಜ್ಯೋತಿಲಕ್ಷ್ಮಿ ಪುತ್ರ. ಪ್ರಸ್ತುತ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದಾರೆ.

‘ತಂದೆ–ತಾಯಿ ಎಸ್ಸೆಸ್ಸೆಸ್ಸಿ ಮಾತ್ರವೇ ಓದಿದ್ದಾರೆ. ಆದರೆ, ಕಷ್ಟಪಟ್ಟು ಗಳಿಸಿ ನನ್ನನ್ನು ಎಂಜಿನಿಯರಿಂಗ್ ಮಾಡಿಸಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ಹೇಳುವುದು? ರಜೆ ಇದ್ದಾಗ ನಾನೂ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ನಿತ್ಯವೂ ಸರಾಸರಿ 3 ತಾಸು ಓದಿಕೊಳ್ಳುತ್ತಿದ್ದೆ. ಕ್ಯಾಂಪಸ್‌ ಸಂದರ್ಶನದಲ್ಲಿ ಕೆಲಸದ ಆಫರ್ ಬಂದಿತ್ತು. ಕೋವಿಡ್ ಕಾರಣದಿಂದ ತಡೆ ಹಿಡಿದಿದ್ದಾರೆ. ಹೀಗಾಗಿ, ಕೆಲಸ ಹುಡುಕುತ್ತಿದ್ದೇನೆ. ಆರ್ಥಿಕವಾಗಿ ಶಕ್ತನಾದ ನಂತರ ಸ್ನಾತಕೋತ್ತರ ಪದವಿ ಬಗ್ಗೆ ಯೋಚಿಸುತ್ತೇನೆ’ ಎಂದು ತಿಳಿಸಿದರು.

ಕಾಸರಗೋಡು ಯುವತಿಯಿಂದ ‘ಹೊನ್ನಿನ ಬೇಟೆ’

ಕಾಸರಗೋಡಿನವರಾದ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಅಸ್ಮಥ್‌ ಶರ್ಮೀನ್‌ ಟಿ.ಎಸ್. ಬಿಇ ಸಿವಿಲ್ ಎಂಜಿನಿಯರಿಂಗ್‌ನಲ್ಲಿ 13 ‍ಚಿನ್ನದ ಪದಕಗಳಿಗೆ ಮುತ್ತಿಟ್ಟರು. ಬಿಸಿನೆಸ್‌ಮನ್‌ ಶರೀಫ್‌ ಟಿ.ಎ.–ಗೃಹಿಣಿ ಶಹೀದಾ ಕೆ.ಎಚ್‌. ದಂಪತಿಯ ಪುತ್ರಿ.

‘ಮೊದಲ ರ‍್ಯಾಂಕ್‌ ನಿರೀಕ್ಷೆ ಮಾಡಿದ್ದೆ. ಈ ಸಾಧನೆಯನ್ನು ಪೋಷಕರು, ಗುರುಗಳು ಹಾಗೂ ಸ್ನೇಹಿತರಿಗೆ ಅರ್ಪಿಸುತ್ತೇನೆ. ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಿದ್ದು ನೆರವಾಯಿತು. ಕೆಲಸ ಹುಡುಕುತ್ತಿದ್ದೇನೆ. ನನ್ನ ಹಣದಲ್ಲೇ ಉನ್ನತ ಶಿಕ್ಷಣ ಪಡೆಯಬೇಕು ಎಂದುಕೊಂಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.