ADVERTISEMENT

ಹಸಿರ ಸಿರಿ; ಕಂಪ್ಯೂಟರ್ ಶಿಕ್ಷಣ

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಆಶಾಕಿರಣ ಅಥರ್ಗಾ ಎಲ್‌.ಟಿ.1ರಲ್ಲಿನ ಸರ್ಕಾರಿ ಶಾಲೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 6:30 IST
Last Updated 12 ಜನವರಿ 2019, 6:30 IST
ತಾಂಬಾ ಸಮೀಪದ ಅಥರ್ಗಾ ಎಲ್‌.ಟಿ. 1ರಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ
ತಾಂಬಾ ಸಮೀಪದ ಅಥರ್ಗಾ ಎಲ್‌.ಟಿ. 1ರಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ   

ತಾಂಬಾ: ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ ಇಲ್ಲಿಗೆ ಸಮೀಪದ ಅಥರ್ಗಾ ಲಂಬಾಣಿ ತಾಂಡಾ ಒಂದರಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ.

ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಪ್ರತಿ ವರ್ಷವೂ ಒಂದಲ್ಲಾ ಒಂದು ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ ಮಿಂಚುವ ಮೂಲಕ ಶಾಲೆ, ಊರಿನ ಕೀರ್ತಿಯನ್ನು ನಾಡಿನ ಎಲ್ಲೆಡೆ ಪಸರಿಸಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗಾಗಿಯೇ ಆರಂಭಗೊಂಡ ಶಾಲೆಯಿದು. ‘ಶಿಕ್ಷಣವೇ ಶಕ್ತಿ. ಶಿಕ್ಷಣದಿಂದಲೇ ಸಂಸ್ಕಾರ’ ಎಂಬಂತೆ ಈ ಶಾಲೆಯಲ್ಲಿ 219 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಒಂದರಿಂದ ಎಂಟನೇ ತರಗತಿಯವರೆಗೂ ಕಲಿಕೆಗೆ ಅವಕಾಶವಿದ್ದು, ತಾಂಡಾದ ಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷಣವೂ ಸಿಗುತ್ತಿರುವುದು ಇಲ್ಲಿನ ವಿಶೇಷ.

ADVERTISEMENT

ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಿರುವ ಮೂಲ ಸೌಲಭ್ಯಗಳು ಈ ಶಾಲೆಯಲ್ಲಿ ಲಭ್ಯ. ವಿಶಾಲ ಆಟದ ಮೈದಾನ, ಗ್ರಂಥಾಲಯ, ಅಡುಗೆ ಕೋಣೆ, ಊಟದ ಸಭಾಂಗಣ, ಮನರಂಜನೆಗಾಗಿ, ಸಭೆ ಸಮಾರಂಭ ನಡೆಸಲು ಪ್ರತ್ಯೇಕ ಕೋಣೆಯೊಂದಿದ್ದು, ಎಲ್ಲವೂ ಆಕರ್ಷಕವಾಗಿವೆ.

ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಹಸಿರ ಸಿರಿ ಕಂಗೊಳಿಸುತ್ತದೆ. ಮೈದಾನದ ಸುತ್ತಲೂ ತರಹೇವಾರಿ ಗಿಡ–ಮರಗಳಿವೆ. ಇವುಗಳ ನೆರಳಲ್ಲಿ ಚಿಣ್ಣರ ಕಲರವ ನಿರಂತರವಾಗಿರಲಿದೆ.

ಸರ್ಕಾರದ ಸೌಲಭ್ಯ, ಅನುದಾನವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಶ್ರಮ ಧಾರೆ ಎರೆಯುವ ಮೂಲಕ ಶಿಕ್ಷಕರು ಮಾದರಿ ಶಾಲೆ ನಿರ್ಮಿಸಿದ್ದಾರೆ ಎಂದು ತಾಂಡಾ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ಮಾದರಿ ಶಾಲೆ:

ಶಾಲಾ ಆವರಣದ ಪರಿಸರ ಹಸಿರಿನಿಂದ ಕೂಡಿದೆ. ಪುಟ್ಟ ಪುಟ್ಟ ಉದ್ಯಾನ ಇಲ್ಲಿವೆ. ಇದರಿಂದ ವಿದ್ಯಾರ್ಥಿಗಳು ಖುಷಿಯಿಂದಲೇ ಶಾಲೆಗೆ ಬರುತ್ತಾರೆ. ಇಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ. ಆಟವಾಡಿ ನಲಿಯುತ್ತಾರೆ. ಪಾಠಗಳ ಕುರಿತು ಚರ್ಚೆಯೂ ನಡೆಯಲಿದೆ.

ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆಯಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆ ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದೆ. ಮಕ್ಕಳಲ್ಲಿ ರಾಷ್ಟ್ರೀಯತೆ, ದೇಶಭಕ್ತಿ ಮೂಡಿಸಲು ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಶಾಲೆಯ ಗೋಡೆ ಮೇಲೆ ಚಿತ್ರಿಸಲಾಗಿದೆ. ಇಂಥ ಹತ್ತು ಹಲವು ಕಾರ್ಯಗಳಿಂದ ಇದೊಂದು ಮಾದರಿ ಶಾಲೆಯಾಗಿದೆ ಎನ್ನುತ್ತಾರೆ ಇಂಡಿ ಬಿ.ಇ.ಒ. ಎಸ್.ಬಿ.ಬಿಂಗೇರಿ.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

‘ಶಾಲೆಯಲ್ಲಿ ಪಠ್ಯದ ಜತೆಯಲ್ಲೇ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ವಿಜ್ಞಾನ ವಿಷಯದ ಪ್ರಾಯೋಗಿಕ ಪರೀಕ್ಷೆಗಾಗಿ ಹಲವು ಸಲಕರಣೆಗಳಿವೆ. ಪ್ರತಿ ವಾರವೂ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸುವುದು ನಮ್ಮ ಶಾಲೆಯ ವಿಶೇಷ’ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಅಶೋಕ ಅಂಕಲಗಿ.

‘ನಮ್ಮಲ್ಲಿ ಕ್ರೀಡಾ ಸಲಕರಣೆಗಳು ಚಲೋ ಇವೆ. ವಿದ್ಯಾರ್ಥಿಗಳು ಸಾಧನೆಗೈಯುತ್ತಿದ್ದಾರೆ. ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟ, ಪ್ರತಿಭಾ ಕಾರಂಜಿಯಲ್ಲಿ ಮೊದಲಿಗರಾಗಿ ಆಯ್ಕೆಯಾಗಿದ್ದಾರೆ. ಹಲವರು ಪ್ರತಿ ವರ್ಷವೂ ರಾಜ್ಯ ಮಟ್ಟದಲ್ಲಿ ಭಾಗವಹಿಸುವುದು ನಮ್ಮಲ್ಲಿನ ವೈಶಿಷ್ಟ್ಯ’ ಎಂದು ಅವರು ಹೇಳಿದರು.

‘2011-12ನೇ ಮತ್ತು 2012-13ನೇ ಸಾಲಿನಲ್ಲಿ ಶಾಲೆಯ ಸಂಜೀವ ನಾಥು ರಾಠೋಡ ಎಂಬ ವಿದ್ಯಾರ್ಥಿ, ಓಟದಲ್ಲಿ ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ಪ್ರತಿಭೆಗಳ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾನೆ’ ಎಂದು ಅಂಕಲಗಿ ಹೆಮ್ಮೆಯಿಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.