ADVERTISEMENT

ಆರೋಗ್ಯ ಮಾಹಿತಿದಾರರ ಕೆಲಸಕ್ಕೆ ತಂತ್ರಜ್ಞಾನದ ಅರಿವು ಮುಖ್ಯ

ರೇಷ್ಮಾ
Published 26 ಮಾರ್ಚ್ 2020, 20:30 IST
Last Updated 26 ಮಾರ್ಚ್ 2020, 20:30 IST
   

ಕೊರೊನಾ ಸೋಂಕಿಗೆ ಇಡೀ ವಿಶ್ವವೇ ಕಂಗೆಟ್ಟು ಹೋಗಿದೆ. ಇಂತಹ ಹೊಸ ಮಾರಕ ಕಾಯಿಲೆಗೆ ಔಷಧಿ ಕಂಡು ಹಿಡಿಯುವುದು ವೈದ್ಯ ರಂಗಕ್ಕೆ ದೊಡ್ಡ ಸವಾಲೇ ಸರಿ. ಆದರೆ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅನೇಕ ವಿಭಾಗಗಳು ಶ್ರಮಿಸುತ್ತಿವೆ. ಅಂತಹ ವಿಭಾಗಗಳಲ್ಲಿ ಒಂದು ಆರೋಗ್ಯ ಮಾಹಿತಿದಾರರು ಅಥವಾ ಮಾಹಿತಿ ಸಂಗ್ರಹಕಾರರ ವಿಭಾಗ.

ಮಾನವನ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಜೈವಿಕ ವಿಜ್ಞಾನದ ದತ್ತಾಂಶ, ಮಾಹಿತಿ ಹಾಗೂ ಜ್ಞಾನದ ಮೂಲಕ ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ನೀಡುವುದು, ನಿರ್ಧಾರ ಕೈಗೊಳ್ಳುವುದು ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಪ್ರೇರಣೆ ನೀಡುವುದು ‘ಆರೋಗ್ಯ ಮಾಹಿತಿದಾರರು’ ಅಥವಾ ‘ಜೈವಿಕವಿಜ್ಞಾನ ಮಾಹಿತಿದಾರರ’ ಕೆಲಸ.

ಈ ವೃತ್ತಿಯು ಸಂಪೂರ್ಣವಾಗಿ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ್ದಾಗಿದ್ದು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರಿಗೆ ವೈದ್ಯಕೀಯ ವಿಜ್ಞಾನ, ಮೂಲವಿಜ್ಞಾನ ಹಾಗೂ ಜೀವವಿಜ್ಞಾನದ ಕುರಿತು ಸಂಪೂರ್ಣ ಜ್ಞಾನ ಅಗತ್ಯ. ಈ ಎಲ್ಲಾ ಕ್ಷೇತ್ರದ ಜೊತೆಗೆ ತಂತ್ರಜ್ಞಾನದ ಅರಿವು ಕೂಡ ಬೇಕು. ಆ ಮೂಲಕ ಸಮಸ್ಯೆಗಳನ್ನು ಕಂಡುಹಿಡಿದು, ಅದನ್ನು ವಿಶ್ಲೇಷಿಸಿ ಪರಿಹಾರ ಹುಡುಕುವ ಹಾಗೂ ನಿರ್ಧಾರ ಕೈಗೊಳ್ಳುವ ಕೆಲಸವನ್ನು ಆರೋಗ್ಯ ಮಾಹಿತಿದಾರರು ಮಾಡುತ್ತಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಚಿಕಿತ್ಸಾ ವಿಧಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಆ ಮಾಹಿತಿಯನ್ನು ಆರೋಗ್ಯ ದತ್ತಾಂಶಗಳಲ್ಲಿ ಸಂಗ್ರಹಿಸುವ ಕೆಲಸವನ್ನು ಮಾಡುತ್ತಾರೆ.

ADVERTISEMENT

ಆರೋಗ್ಯ ಮಾಹಿತಿದಾರರು ರೋಗಿಯ ಆರೋಗ್ಯ ಸ್ಥಿತಿ ಹಾಗೂ ಆರೈಕೆ ಪ್ರಕ್ರಿಯೆಗಳ ಕುರಿತು ವಿವರವಾದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ರೀತಿ ದತ್ತಾಂಶ ಸಂಗ್ರಹಣೆಯಿಂದ ವೈದ್ಯಕೀಯ ದೋಷ ನಿವಾರಣೆ ಹಾಗೂ ಶುಶ್ರೂಷೆಯ ವೆಚ್ಚ ಕಡಿತದ ಮೂಲಕ ರೋಗಿಯ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಆರೋಗ್ಯ ಮಾಹಿತಿದಾರರು ಸಹಾಯ ಮಾಡುತ್ತಾರೆ.

ಸಾಮಾನ್ಯವಾಗಿ ಆರೋಗ್ಯ ಮಾಹಿತಿದಾರರು ಔಷಧಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಫಾರ್ಮಸಿ ನಿರ್ವಹಣೆ, ಜೈವಿಕ ಮಾಹಿತಿ ವಿಜ್ಞಾನ, ಜೀವವಿಜ್ಞಾನದಲ್ಲಿ ಪದವಿ ಪಡೆದವರೇ ಆಗಿರುತ್ತಾರೆ. ಆರೋಗ್ಯ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದು ಕಂಪ್ಯೂಟರ್ ವಿಜ್ಞಾನದ ಹಿನ್ನೆಲೆಯುಳ್ಳವರಿಗೂ ಆರೋಗ್ಯ ಮಾಹಿತಿ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇದು ಇಎಚ್ಆರ್‌ಎಸ್, ಎಚ್ಐಎಸ್, ಎಲ್ಐಎಸ್, ಪಿಎಸಿಎಸ್‌ನಂತರ ತಂತ್ರಾಂಶ ಅಥವಾ ಕಂಪ್ಯೂಟರ್‌ ಲಿಪಿ ಅಭಿವೃದ್ಧಿಪಡಿಸುವುದು ಆಗಿರಬಹುದು ಅಥವಾ ಸಾಫ್ಟ್‌ವೇರ್‌ಗಳಿಂದ ಸಂಗ್ರಹಿಸಿದ ದತ್ತಾಂಶಗಳ ನಿರ್ವಹಣೆಯೂ ಆಗಿರಬಹುದು. ಆರೋಗ್ಯ ಮಾಹಿತಿದಾರರು ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಲ್ಲಿರುವ ರೋಗಿಗಳ ದತ್ತಾಂಶದ ಸಂಗ್ರಹ ನಿರ್ವಹಣೆ ಹಾಗೂ ವಿಶ್ಲೇಷಣೆಯ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಕೌಶಲಗಳು:ನಿರ್ವಹಣೆ,ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ನಿಭಾಯಿಸುವುದು,ವಿನ್ಯಾಸ ಮತ್ತು ಅಭಿವೃದ್ಧಿ,ಹಣಕಾಸು ನಿರ್ವಹಣೆ,ಅನುಷ್ಠಾನ,ವಿಶ್ಲೇಷಣೆ ಹಾಗೂ ಮೌಲ್ಯಮಾಪನ‌,ಕಂಪ್ಯೂಟರ್‌ ಹಾಗೂ ದತ್ತಾಂಶಗಳ ನಿರ್ವಹಣೆ,

ಉದ್ಯೋಗಾವಕಾಶಗಳು

ಆರೋಗ್ಯ ವ್ಯವಸ್ಥೆಯ ಅಭಿವರ್ಧಕರು,ಆಸ್ಪತ್ರೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕರು,ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವವರು,ರೋಗಿಯ ದತ್ತಾಂಶ ವಿಶ್ಲೇಷಕರು,ಆರೋಗ್ಯ ದೃಶ್ಯೀಕರಣ ತಜ್ಞರು,ಆರೋಗ್ಯ ದತ್ತಾಂಶ ಸಂರಕ್ಷಕರು,ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವವರು,ಆರೋಗ್ಯ ಸಂವೇದಕಗಳ ಅಭಿವೃದ್ಧಿಪಡಿಸುವವರು.

ಇಷ್ಟೇ ಅಲ್ಲದೇ ಸಂಶೋಧನಾ ಕ್ಷೇತ್ರದ ನೂತನ ತಂತ್ರಜ್ಞಾನ, ಕಾಗ್ನೇಟಿವ್ ಸೈನ್ಸ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ವಿವಿಧ ಮಜಲುಗಳ ಕುರಿತು ಓದಿಕೊಂಡರೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಇದೆ. ಅಲ್ಲದೇ ಇಂದಿನ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ಇವು ಅತಿ ಅವಶ್ಯ ಕೂಡ ಹೌದು.

ಆರೋಗ್ಯ ರಕ್ಷಣಾ ಡೊಮೇನ್‌ನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಉದ್ಯಮದಾರರು ಹಾಗೂ ಡೆವಲಪರ್‌ಗಳಿಗೂ ಆರೋಗ್ಯ ಮಾಹಿತಿ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆರೋಗ್ಯ ರಕ್ಷಣೆ ಕ್ಷೇತ್ರವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ವಿವಿಧ ಶೈಕ್ಷಣಿಕ ಹಿನ್ನೆಲೆಯುಳ್ಳವರಿಗೆ ಅವಕಾಶ ಸಿಗುತ್ತಿದ್ದು ನಿಮ್ಮಲ್ಲೂ ಇಂತಹ ಶೈಕ್ಷಣಿಕ ಹಿನ್ನೆಲೆ ಇದ್ದರೆ ನೀವೂ ಈ ವೃತ್ತಿಗೆ ಸೇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.