ADVERTISEMENT

ಐರ್ಲೆಂಡ್‌ ಉನ್ನತ ಶಿಕ್ಷಣದ ಹೆಬ್ಬಾಗಿಲು

ಹೇಮಾ ವೆಂಕಟ್
Published 19 ಮಾರ್ಚ್ 2019, 19:30 IST
Last Updated 19 ಮಾರ್ಚ್ 2019, 19:30 IST
Ireland 
Ireland    

ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂಬ ತುಡಿತ ಭಾರತೀಯರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಸರಿಯಾಗಿ ವಿದೇಶಿ ಶೈಕ್ಷಣಿಕ ಸಂಸ್ಥೆಗಳು, ಅದರಲ್ಲೂ ಯುರೋಪಿಯನ್‌ ದೇಶಗಳ ಸಂಸ್ಥೆಗಳು ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪೈಪೋಟಿ ನಡೆಸುತ್ತಿವೆ. ಕಳೆದ ಒಂದೆರಡು ವರ್ಷಗಳಿಂದ ಐರ್ಲೆಂಡ್‌ನ ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ. ಅಲ್ಲಿನ ಸರ್ಕಾರವೂ ಇದಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಭಾರತದ ವಿವಿಧ ನಗರಗಳಲ್ಲಿ ಶಿಕ್ಷಣ ಮೇಳ ನಡೆಸುವ ಮೂಲಕ ಇಲ್ಲಿಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ನೀಡುವ ಕೆಲಸ ಮಾಡುತ್ತಿದೆ.

500ಕ್ಕೂ ಅಧಿಕ ಕೋರ್ಸ್‌ಗಳು

ಅಲ್ಲಿರುವ ಸುಮಾರು 5000ಕ್ಕೂ ಅಧಿಕ ಕೋರ್ಸ್‌ಗಳಿಗೆ ಪ್ರವೇಶ ನೀಡುತ್ತಿವೆ. ಉದ್ಯಮ ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾನವಿಕ, ಭಾಷಾಶಾಸ್ತ್ರ ಹಾಗೂ ಕಲಾ ವಿಭಾಗದಲ್ಲಿ ಪ್ರವೇಶ ಪಡೆಯಬಹುದು. ಪದವಿಪೂರ್ವ, ಪದವಿ, ಸ್ನಾತಕೋತ್ತರ, ಸಂಶೋಧನ, ಡಿಪ್ಲೊಮ ಸರ್ಟಿಫಿಕೇಟ್‌ ಕೋರ್ಸ್‌ಗಳಿಗಾಗಿ ಅಧ್ಯಯನ ನಡೆಸಬಹುದು. ಇಮ್ಯುನೊಲಜಿ, ನ್ಯಾನೊ ತಂತ್ರಜ್ಞಾನ, ಕೃಷಿ ವಿಜ್ಞಾನ, ನ್ಯೂರೊಸೈನ್ಸ್‌, ಮೈಕ್ರೊಬಯಾಲಜಿ, ಡೈರಿ ಮೊದಲಾದ ವಿಭಾಗಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿವೆ. ಕಲಾ ವಿಭಾಗಗಳಲ್ಲಿ, ಅನಿಮೇಷನ್‌–ಮಲ್ಟಿಮೀಡಿಯಾ, ಡಿಸೈನ್‌ ಅಂಡ್‌ ಆರ್ಟ್‌, ಅರ್ಥಶಾಸ್ತ್ರ, ಶಿಕ್ಷಣ, ಇಂಗ್ಲಿಷ್‌ ಸಾಹಿತ್ಯ, ಫ್ಯಾಷನ್‌, ಸಿನಿಮಾ ತಯಾರಿ– ಸಂಗೀತ– ನಾಟಕ ಅಧ್ಯಯನ, ಭೂಗೋಳ ಶಾಸ್ತ್ರ–ಇತಿಹಾಸ, ಪ್ರವಾಸೋದ್ಯಮ, ಮಾನವ ಸಂಪನ್ಮೂಲ, ಅಂತರರಾಷ್ಟ್ರೀಯ ಸಂಬಂಧಗಳು, ಪತ್ರಿಕೋದ್ಯಮ, ಕಾನೂನು, ಸಂಗೀತ– ಸಂಗೀತ ತಂತ್ರಜ್ಞಾನ, ರಾಜ್ಯಶಾಸ್ತ್ರ, ಮನಶಾಸ್ತ್ರ, ಸಾಮಾಜ ಸೇವೆ, ಸಮಾಜಶಾಸ್ತ್ರ, ಕ್ರೀಡಾ ವಿಜ್ಞಾನ ವಿಷಯಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಅವಕಾಶವಿದೆ.

ADVERTISEMENT

ವಿಜ್ಞಾನ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್‌ ಸೆಕ್ಯುರಿಟಿ, ಫುಡ್‌ಸೈನ್ಸ್‌, ನರ್ಸಿಂಗ್, ಪಶುವೈದ್ಯಕೀಯ ವಿಜ್ಞಾನ, ಫಾರ್ಮಸಿ, ಮಾನಸಿಕ ಆರೋಗ್ಯ, ಫಿಜಿಯೋಥೆರಪಿ, ಪ್ರಾಣಿಶಾಸ್ತ್ರ, ಮೆಡಿಸಿನ್‌, ದಂತ ವೈದ್ಯಕೀಯ, ಬಯೊಟೆಕ್, ಕೆಮಿಕಲ್‌, ಸಿವಿಲ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಶಿಲ್ಪಶಾಸ್ತ್ರ, ವಾಸ್ತುಶಾಸ್ತ್ರ ವಿಭಾಗದಲ್ಲೂ ಪದವಿ ಪಡೆಯಲು ಅವಕಾಶವಿದೆ. ಜಾಹೀರಾತು–ಮಾರುಕಟ್ಟೆ ಮತ್ತು ಸಂವಹನ, ಕಂಪ್ಯೂಟರ್ ಸೈನ್ಸ್‌, ಬ್ಯುಸಿನೆಸ್‌, ಭಾಷಾವಿಜ್ಞಾನ ವಿಭಾಗದಲ್ಲೂ ಅವಕಾಶವಿದೆ. ತತ್ವಶಾಸ್ತ್ರ, ಅಧ್ಯಾತ್ಮ ವಿಷಯದಲ್ಲೂ ಪದವಿ ಕೋರ್ಸ್‌ ಮಾಡಬಹುದು.

ಜಗತ್ತಿನಲ್ಲಿರುವ ಒಟ್ಟು ಸಂಶೋಧನಾ ಸಂಸ್ಥೆಗಳ ಪೈಕಿ ಶೇ 1ರಷ್ಟು ಸಂಸ್ಥೆಗಳು ಐರ್ಲೆಂಡ್‌ನಲ್ಲಿಯೇ ಇವೆ. ನೈಸರ್ಗಿಕ ವಿಜ್ಞಾನ, ಸಮಾಜ ವಿಜ್ಞಾನ, ಮಾನವಿಕ ವಿಭಾಗಗಳಲ್ಲಿ ಹೆಚ್ಚು ಅವಕಾಶಗಳಿವೆ. ಸುಮಾರು 160 ದೇಶಗಳ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಐರ್ಲೆಂಡ್‌ಗೆ ತನ್ನದೇ ಆದ ಭಾಷೆ, ಸಂಸ್ಕೃತಿ ಇದ್ದರೂ ಇಂಗ್ಲಿಷ್‌ ಭಾಷೆಯನ್ನು ಸಾರ್ವತ್ರಿಕವಾಗಿ ಬಳಸಲಾಗುತ್ತಿದೆ. ಹೀಗಾಗಿ ಭಾಷೆಯ ವಿಷಯದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಷ್ಟ ಎನಿಸುವುದಿಲ್ಲ. ಕೆಲವು ವಿಶ್ವವಿದ್ಯಾನಿಲಯಗಳು ಇಂಗ್ಲಿಷ್‌ ಭಾಷೆಯಲ್ಲಿ ಪ್ರಾಥಮಿಕ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ತೇರ್ಗಡೆ ಹೊಂದಬೇಕೆಂಬ ನಿಯಮಗಳನ್ನು ರೂಪಿಸಿವೆ.

ವಿದ್ಯಾರ್ಥಿ ವೀಸಾ ನಿಯಮಗಳೂ ಸರಳವಾಗಿದ್ದು, ಇತರ ಯುರೋಪಿಯನ್‌ ದೇಶಗಳು ಯಾವ ರೀತಿಯ ನಿಯಮಗಳನ್ನು ರೂಪಿಸಿವೆಯೋ ಅದನ್ನೇ ಅನುಸರಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಐರಿಶ್‌ ಎಂಬೆಸ್ಸಿ ವೆಬ್‌ಸೈಟ್‌ ಅನ್ನು ನೋಡಿಕೊಳ್ಳಬಹುದು.
ಅಲ್ಲಿ ಒಂದು ವರ್ಷಕ್ಕೆ ಸುಮಾರು 7000– 12,000 ಯುರೋ ವೆಚ್ಚ ಬರಲಿದ್ದು,ಬಹುತೇಕ ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲ ಒದಗಿಸಿ ಕೊಡುತ್ತವೆ. ಬೇರೆ ಕಡೆ ಹುಡುಕಿಕೊಳ್ಳಲು ವೆಬ್‌ಸೈಟ್‌ಗಳಿವೆ. HousingAnywhere.com ನಲ್ಲಿ ಹುಡುಕಿಕೊಳ್ಳಬಹುದು.

ಉದ್ಯೋಗಾವಕಾಶ

ಆ್ಯಪಲ್‌, ಗೂಗಲ್‌, ಎಚ್‌ಪಿ, ಫೇಸ್‌ಬುಕ್‌ ಸೇರಿದಂತೆ ಸುಮಾರು ಒಂದು ಸಾವಿರಕ್ಕಿಂತ ಅಧಿಕ ಬಹುರಾಷ್ಟ್ರೀಯ ಕಂಪನಿಗಳು ಐರ್ಲೆಂಡ್‌ನಲ್ಲಿವೆ. ಸಾಫ್ಟ್‌ವೇರ್‌ಗಳ ರಫ್ತಿನಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಮೆಡಿಕಲ್‌ ಡಿವೈಸ್‌ ತಯಾರು ಮಾಡುವ 15 ಕಂಪೆನಿಗಳು ಇಲ್ಲಿವೆ. ಐರ್ಲೆಂಡಿನಲ್ಲಿ ಉದ್ಯೋಗಾವಕಾಶವೂ ಹೇರಳವಾಗಿದೆ. ವಿದೇಶಿ ವಿದ್ಯಾರ್ಥಿಗಳಿಗೆ ಐರ್ಲೆಂಡ್‌ನಲ್ಲಿ ಹೆಚ್ಚು ಸುರಕ್ಷತೆ ಇದೆ ಎಂಬುದು ಮತ್ತೊಂದು ಸಮಾಧಾನದ ಸಂಗತಿ. ವಿದೇಶಿ ವಿದ್ಯಾರ್ಥಿಗಳಿಗೆ ಭಾಷೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡದಂತೆ ನಿಗಾ ವಹಿಸುವ, ಆಪ್ತ ಸಮಾಲೋಚನಾ ವಿಭಾಗಗಳಿವೆ.

ಇದಲ್ಲದೇ ಐರ್ಲೆಂಡ್‌ನಲ್ಲಿ ಶಿಕ್ಷಣ ಪಡೆದವರಿಗೆ ಯುರೋಪ್‌ನ ಇತರ ದೇಶಗಳಲ್ಲಿ ಉದ್ಯೋಗಾವಕಾಶಗಳು ವಿಪುಲ. ಇದೂ ಕೂಡ ಭಾರತದ ವಿದ್ಯಾರ್ಥಿಗಳು ಅಲ್ಲಿಗೆ ಧಾವಿಸಲು ಒಂದು ಕಾರಣ.

* ಯುರೋಪಿನ ಹೃದಯಭಾಗದಲ್ಲಿರುವ ಐರ್ಲೆಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪೂರೈಸುವವರಿಗೆ ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುವ ಅವಕಾಶ ಸುಲಭವಾಗಿ ಸಿಗಲಿದೆ. ಶಿಕ್ಷಣಕ್ಕೆ ತೆರಳುವ ವಿದೇಶಿ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆಯನ್ನೂ ನೀಡಲಾಗುತ್ತದೆ. ನೆರೆಯ ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿಗಳಲ್ಲಿ ಉದ್ಯೋಗಾವಕಾಶ ಹೇರಳವಾಗಿದೆ. ಅಲ್ಲಿಗೆ ಶಿಕ್ಷಣಕ್ಕೆಂದು ಹೋಗುವ ವಿದ್ಯಾರ್ಥಿಗಳಿಗೆ ಪಾರ್ಟ್‌ಟೈಮ್‌ ಉದ್ಯೋಗದ ಅವಕಾಶವೂ ಇರುತ್ತದೆ. ಶಿಕ್ಷಣ ಮುಗಿದ ನಂತರ 24 ತಿಂಗಳು ಅಲ್ಲಿಯೇ ನೆಲೆಸಲು ವೀಸಾ ನೀಡಲಾಗುತ್ತದೆ. ಇದರಿಂದಾಗಿ ಕೆಲಸ ಹುಡುಕಲೂ ಅನುಕೂಲವಾಗುತ್ತದೆ.

– ಬ್ಯಾರಿ ಒಡ್ರಿಸ್ಕಾಲ್, ಐರ್ಲೆಂಡ್‌ನ ಹಿರಿಯ ಶಿಕ್ಷಣಸಲಹೆಗಾರ

ಪ್ರಮುಖ ವಿಶ್ವವಿದ್ಯಾಲಯಗಳು

ಅಥ್ಲೇನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಕಾರ್ಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಡುಬ್ಲಿನ್ ಬ್ಯುಸಿನೆಸ್ ಸ್ಕೂಲ್; ಡುಬ್ಲಿನ್ ಸಿಟಿ ಯುನಿವರ್ಸಿಟಿ; ಡನ್‍ಡಲ್ಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಗ್ರಿಫಿತ್ ಕಾಲೇಜ್; ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಲೋ; ಲಿಮೆರಿಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಲೆಟರ್‍ಕೆನ್ನಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಮೆನೂತ್ ಯುನಿವರ್ಸಿಟಿ; ನ್ಯಾಷಿನಲ್ ಕಾಲೇಜ್ ಆಫ್ ಐರ್ಲೆಂಡ್; ನ್ಯಾಷನಲ್ ಯುನಿವರ್ಸಿಟಿ ಆಫ್ ಐರ್ಲೆಂಡ್, ಗಾಲ್ವೆ; ಟ್ರಿನಿಟಿ ಬ್ಯುಸಿನೆಸ್ ಸ್ಕೂಲ್; ಟ್ರಿನಿಟಿ ಕಾಲೇಜ್ ಡುಬ್ಲಿನ್; ಯುಸಿಡಿ ಮೈಕಲ್ ಸ್ಮರ್ಫಿಟ್ ಗ್ರಾಜುಯೇಟ್ ಬ್ಯುಸಿನೆಸ್ ಸ್ಕೂಲ್; ಯುನಿವರ್ಸಿಟಿ ಕಾಲೇಜ್ ಕಾರ್ಕ್; ಯುನಿವರ್ಸಿಟಿ ಕಾಲೇಜ್ ಡಬ್ಲಿನ್; ಯುನಿವರ್ಸಿಟಿ ಆಫ್ ಲಿಮೆರಿಕ್; ವಾಟರ್‌ರ್ಪೋರ್ಡ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.