ಹದಿವಯಸ್ಸಿನ ನನ್ನಮಗ ಈಗಿನ ಬಹುತೇಕ ಮಕ್ಕಳಂತೆ ಪುಸ್ತಕದ ಓದಿಗಿಂತ ಆನ್‌ಲೈನ್ ಪ್ರಪಂಚದಲ್ಲೇ ಹೆಚ್ಚು ಕಾಲ ಕಳೆಯುತ್ತಾನೆ. ಪುಸ್ತಕ ಓದಿದರಷ್ಟೇ ಜ್ಙಾನ ಸಂಪಾದಿಸಬಹುದು ಎಂಬುದೆಲ್ಲ ನಿಮ್ಮ ಕಾಲಕ್ಕಾಯಿತು, ಈಗ ಆನ್‌ಲೈನ್ ಮೂಲಕವೂ ಜ್ಞಾನ ಸಂಪಾದಿಸಬಹುದು ಎಂದು ವಾದಿಸುತ್ತಾನೆ. ಆದರೆ, ನೋಡಿದ್ದಕ್ಕಿಂತ ಓದಿದ್ದು ಮನಸ್ಸಿನಾಳಕ್ಕೆ ಚೆನ್ನಾಗಿ ಇಳಿಯುತ್ತದೆ ಎನ್ನುವುದು ನನ್ನ ಅನಿಸಿಕೆ. ಪುಸ್ತಕ ಓದಿನತ್ತ ಅವನ ಆಸಕ್ತಿ ಕೆರಳುವಂತೆ ಮಾಡುವುದು ಹೇಗೆ?--ಪವಿತ್ರಾ ಕೆ., ಕೊಪ್ಪಳ
ಉ: ಇವತ್ತಿನ ಸಂದರ್ಭದಲ್ಲಿ ಉತ್ತರಿಸೋದಕ್ಕೆ ಇದು ನಿಜಕ್ಕೂ ಕ್ಲಿಷ್ಟಕರವಾದ ಪ್ರಶ್ನೆ. ಅನೇಕ ಕಾರಣಗಳಿಂದ ಮನುಷ್ಯರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಾಗಂತ ಪುಸ್ತಕ ವ್ಯಾಪಾರಿಗಳನ್ನು ಕೇಳಿದರೆ, ಅವರ ವ್ಯಾಪಾರವು ಇತರೇ ವ್ಯವಹಾರಗಳಂತೆಯೇ ಏರುಗತಿಯಲ್ಲಿಯೇ ಮುಂದುವರೆಯುತ್ತಿದೆ. ಸುಶಿಕ್ಷಿತರಲ್ಲಿಯೂ ಓದುವ ಹವ್ಯಾಸವಿರುವವರ ಸಂಖ್ಯೆ ಲಾಗಾಯ್ತಿನಿಂದಲೂ ಕಡಿಮೆ (ಒಂದೇ) ಪ್ರಮಾಣದಲ್ಲಿದೆ.
ಪವಿತ್ರಾ ಅವರೇ, ಭಾಷೆಯೇ ಇಲ್ಲದ ಕಾಲದಿಂದ ಹಲವಾರು ಭಾಷೆಗಳು, ಹಲವಷ್ಟು ಲಿಪಿಗಳು ಇರುವ ಕಾಲಕ್ಕೆ ಮನುಷ್ಯನು ಬೆಳೆದು ಬಂದಿದ್ದಾನೆ. ಅಕ್ಷರಗಳು ಇಲ್ಲದಿದ್ದ ಕಾಲದಲ್ಲಿ ಮನುಷ್ಯರು ಪರಸ್ಪರ ಮಾತಾಡುವ ಮೂಲಕ ವ್ಯವಹರಿಸುತ್ತಿದ್ದರು. ಪರಸ್ಪರರನ್ನು ಕೇಳುವ ಮೂಲಕ ಅರಿವನ್ನು ಪಡೆದುಕೊಳ್ಳುತ್ತಿದ್ದರು. ಅಲ್ಲಿಂದ ಮುಂದೆ ಲಕ್ಷಾಂತರ ವರ್ಷಗಳಲ್ಲಿ ಸಾವಿರಾರು ಭಾಷೆಗಳು, ಲಿಪಿಗಳು ಹುಟ್ಟಿ, ಸಂಸ್ಕೃತಿಗಳು ಬೆಳೆದು ಬಂದವು. ಕಾಲಪ್ರವಾಹದಲ್ಲಿ ಎಷ್ಟೋ ಭಾಷೆಗಳು, ಅವೆಷ್ಟೋ ಲಿಪಿಗಳು, ಅವೆಷ್ಟೋ ಜನಾಂಗಗಳು ಭೂಮಿಯಿಂದ ಶಾಶ್ವತವಾಗಿ ಅಳಿಸಿಯೂ ಹೋಗಿವೆ. ಲಿಪಿ ಇಲ್ಲದ ಕೆಲವು ಭಾಷೆಗಳು ಇವತ್ತಿಗೂ ನಮ್ಮ ಸುತ್ತಲಿನ ಜನರಲ್ಲಿ ಆಡುಭಾಷೆಯಾಗಿ ಉಳಿದುಕೊಂಡಿರುವುದನ್ನು ನಾವು ಕಾಣುತ್ತೇವೆ.
ನಿರಂತರವಾಗಿ ಮುಂದುವರಿಯುತ್ತಲೇ ಇರುವ ಕಾಲದಗುಂಟ ಇವತ್ತಿಗೆ ಬಹುತೇಕರು ಓದುವುದನ್ನು ಬಿಡುತ್ತಾ, ವಿಡಿಯೊಗಳನ್ನು ನೋಡುತ್ತಾ, ತಿಳಿದುಕೊಳ್ಳುತ್ತಾ, ತಿಳಿಸುತ್ತಾ ವ್ಯವಹರಿಸುವ ಕಾಲಕ್ಕೆ ಬಂದಿದ್ದೇವೆ. ಪುಣ್ಯವಶಾತ್ ಇನ್ನೂ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಓದುವುದನ್ನು, ಬರೆಯುವುದನ್ನು ಕಲಿಸಲಾಗುತ್ತಿದೆ. ಹಾಗಾಗಿ ಅಷ್ಟರ ಮಟ್ಟಿಗೆ ಅಕ್ಷರಗಳು ಉಳಿದುಕೊಂಡಿವೆ. ಕೇಳಿದ್ದನ್ನು, ನೋಡಿದ್ದನ್ನು ಬರೆದು ಪಾಸಾಗುವ ವ್ಯವಸ್ಥೆ ಇದೆ. ಮುಂದೆ ಇದರಲ್ಲಿಯೂ ಏನೇನು ಬದಲಾವಣೆಗಲಾಗುತ್ತವೆಯೋ ಕಾಲವೇ ಹೇಳಬೇಕು.
ಇರಲಿ. ನಮ್ಮ ತಲೆಮಾರಿನ ಪಾಲಕರಿಗೆ ಇರುವ ಸಹಜವಾದ ಆತಂಕ ನಿಮಗೂ ಇದೆ. ಅದು ತಪ್ಪಲ್ಲ. ಹಾಗಂತ, ನೀವು ಅದರ ಬಗ್ಗೆ ಅತಿಯಾಗಿ ವ್ಯಾಕುಲರಾಗಬೇಕಿಲ್ಲ. ಪಿಯುಸಿಯಲ್ಲಿ ಪುಸ್ತಕಗಳನ್ನು ಓದದೆಯೇ, ಕೇವಲ ಯೂಟ್ಯೂಬ್ ವಿಡಿಯೊ ಪಾಠಗಳನ್ನು ನೋಡಿಕೊಂಡು, ಕಾಲೇಜಿನ ಪಾಠಗಳನ್ನೂ ‘ಆನ್‌ಲೈನ್ʼನಲ್ಲಿ ನೋಡಿಕೊಂಡು, ಪರೀಕ್ಷೆಯನ್ನು ಬರೆದು, ಒಳ್ಳೆಯ ಅಂಕಗಳನ್ನು ಗಳಿಸಿಕೊಂಡು, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಕೋರ್ಸುಗಳಿಗೆ ಸೇರಿಕೊಂಡಿರುವ ಕೆಲವರು ನನಗೆ ಗೊತ್ತು!
ಇನ್ನು, ಒಬ್ಬೊಬ್ಬರ ಕಲಿಯುವ ಕ್ರಮ, ನೆನಪಿಟ್ಟುಕೊಳ್ಳುವ ರೀತಿ ಭಿನ್ನವಾಗಿರುತ್ತದೆ. ಕೆಲವರಿಗೆ ಓದಿದ್ದು ನೆನಪಿದ್ದರೆ, ಇನ್ನು ಕೆಲವರಿಗೆ ನೋಡಿದ್ದು, ಕೇಳಿದ್ದು ಮನಸ್ಸಿನಾಳಕ್ಕಿಳಿದು ಬಹಳ ಕಾಲ ನೆನಪಿರುತ್ತದೆ. (ಮನುಷ್ಯನಿಗೆ ಮರೆವು ಎನ್ನುವುದೇ ಇಲ್ಲ! ಮಗು ಹುಟ್ಟಿದಾಗಿನಿಂದ, ಬದುಕಿರುವಷ್ಟು ಕಾಲ ನೋಡಿದ್ದೆಲ್ಲವನ್ನೂ, ಕೇಳಿದ್ದೆಲ್ಲವನ್ನೂ, ಓದಿದ್ದೆಲ್ಲವನ್ನೂ ನೆನಪಿಟ್ಟುಕೊಳ್ಳುತ್ತದೆ. ಇದರ ಬಗ್ಗೆ ಮುಂದೆ ಯಾವಾಗಲಾದರೂ ವಿವರವಾಗಿ ಹೇಳುತ್ತೇನೆ.)
ಪುಸ್ತಕ ಓದುವುದು, ವಿಡಿಯೊಗಳನ್ನು ನೋಡುವುದು ಎರಡೂ ಕೂಡ ಮಹತ್ವವಾದ ಕಲಿಯುವ ಮಾಧ್ಯಮಗಳು. ವ್ಯಕ್ತಿಗೆ ಯಾವುದು ಇಷ್ಟವೋ ಅದರ ಮೂಲಕ ಕಲಿಯುತ್ತಾನೆ. ಅದು ಅವನ ಇಚ್ಛೆಗೆ ಬಿಟ್ಟಿದ್ದು. ಓದುವುದರಿಂದ ಮನುಷ್ಯನ ವಿಚಾರಶೀಲತೆ ಚುರುಕಾಗುತ್ತದೆ ಹಾಗೂ ಕ್ರಿಯಾಶೀಲತೆ, ಕಾಲ್ಪನಿಕ ಶಕ್ತಿ, ಜಾಸ್ತಿಯಾಗುತ್ತದೆ ಎನ್ನುವ ವಾದವಿದೆ. ಇಲ್ಲಿಯರೆಗಂತೂ ಅದು ನಿಜವೇ ಆಗಿದೆ. ಈಗ ನಿಮ್ಮ ಮಗನಿಗೆ ಆನ್‌ಲೈನ್ ಪ್ರಪಂಚದಲ್ಲಿ ವಿಹರಿಸುವುದ ಕೆರಳಿದೆ. ಅದರಿಂದ ಅವನ ಕಣ್ಣುಗಳಿಗೆ ಅಗಬಹುದಾದ ತೊಂದರೆಯ ಬಗ್ಗೆ ತಿಳಿಸಿ ಹೇಳೋಣ. ನೇತ್ರತಜ್ಙರ ಸಲಹೆಯನ್ನು ಪಡೆಯೋಣ. ಮುಂದೆ ಅವನಲ್ಲಿಯೂ ಧನಾತ್ಮಕ ಬದಲಾವಣೆಗಳು ಬರಬಹುದು. ಕಾಯೋಣ. ಯಾವುದಕ್ಕೂ ಅವನ ಕಾರ್ಯ ಚಟುವಟಿಕೆಗಳ ಬಗ್ಗೆ ಒಂದು ಕಣ್ಣಿಟ್ಟಿರಿ. ಅವನ ಗೆಳೆಯರ ಬಗ್ಗೆ ಕೂಡ. ಮಕ್ಕಳು ಸರಿ ದಾರಿಯಲ್ಲಿ ಮುಂದುವರೆಯುವಂತೆ ಮಾರ್ಗದರ್ಶನ ಮಾಡುವುದಷ್ಟೇ ಪಾಲಕರ ಹಿರಿಯರ ಕೆಲಸ.
‘ತಾಳಕ್ಕೆ ತಕ್ಕಂತೆ ಕುಣಿಯಬೇಕು, ಕಾಲಕ್ಕೆ ತಕ್ಕಂತೆ ನಡೆಯಬೇಕುʼ ಎನ್ನುವ ರಾಜಣ್ಣನವರ ಮುತ್ತಿನಂತ ಮಾತನ್ನು ನೆನಪಿಟ್ಟುಕೊಂಡು, ನಿರಾಳವಾಗಿ ಬದುಕುವುದನ್ನು ನಾವು ರೂಢಿಸಿಕೊಳ್ಳಬೇಕು. ಮೊದಲು ನೀವು ನಿಶ್ಚಿಂತರಾಗಿರಿ. ನಿಮ್ಮ ಮನೆಯ ಎಲ್ಲರೂ ಆರಾಮಾಗಿರಲಿಕ್ಕೆ ಅವಕಾಶವಾಗುತ್ತದೆ. ಶುಭವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.