ADVERTISEMENT

ಜೆಇಇ ಮೇನ್ಸ್‌ ಫಲಿತಾಂಶ: 20 ವಿದ್ಯಾರ್ಥಿಗಳಿಂದ ‘ಶತಕ’ ಸಾಧನೆ

ಪಿಟಿಐ
Published 7 ಫೆಬ್ರುವರಿ 2023, 13:21 IST
Last Updated 7 ಫೆಬ್ರುವರಿ 2023, 13:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ–ಮೇನ್ಸ್‌ ಮೊದಲ ಅವಧಿಯ ಪರೀಕ್ಷೆಯ ಫಲಿತಾಂಶವು ಮಂಗಳವಾರ ಪ್ರಕಟವಾಗಿದ್ದು, 20 ಅಭ್ಯರ್ಥಿಗಳು 100 ಅಂಕ ಗಳಿಸಿದ್ದಾರೆ. ‘ಶತಕ’ದ ಸಾಧನೆ ಮಾಡಿರುವವರೆಲ್ಲರೂ ಪುರುಷರು.

100 ಅಂಕ ಗಳಿಸಿರುವವರ ಪೈಕಿ 14 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರು. 4 ಮಂದಿ ಒಬಿಸಿ ಹಾಗೂ ತಲಾ ಒಬ್ಬರು ಜನರಲ್‌–ಇಡಬ್ಲ್ಯುಎಸ್‌ ಮತ್ತು ಪರಿಶಿಷ್ಟ ಜಾತಿಯ ಕೋಟಾಗೆ ಸೇರಿದವರಾಗಿದ್ದಾರೆ. ಅಂಗವಿಕಲರ ಕೋಟಾದಲ್ಲಿ ಮೊಹಮ್ಮದ್‌ ಸಾಹೀಲ್‌ ಅಖ್ತರ್‌ ಅಗ್ರಸ್ಥಾನ ಗಳಿಸಿದ್ದಾರೆ. ಅವರು 99.98 ಸ್ಕೋರ್‌ ಪಡೆದಿದ್ದಾರೆ. ಪರಿಶಿಷ್ಟ ಜಾತಿ ವಿಭಾಗದಲ್ಲಿ ದೇಶಾಂಕ್‌ ಪ್ರತಾಪ್‌ ಸಿಂಗ್‌ (100) ಹಾಗೂ ಎಸ್‌ಟಿ ವಿಭಾಗದಲ್ಲಿ ಧೀರಾವತ್‌ ತನುಜ್‌ (99.99) ಅಗ್ರ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

‘50 ಅಭ್ಯರ್ಥಿಗಳ ಎನ್‌ಟಿಎ ಸ್ಕೋರ್‌ ತಡೆಹಿಡಿಯಲಾಗಿದೆ. ಇವರ ಪ್ರಕರಣವನ್ನು ಪ್ರತ್ಯೇಕ ಸಮಿತಿ ಎದುರು ಇಡಲಾಗುತ್ತದೆ. ಸಮಿತಿಯು ಅಂತಿಮ ವರದಿ ಸಲ್ಲಿಸಿದ ಬಳಿಕ ಇವರ ಅಂಕಗಳನ್ನು ಬಹಿರಂಗಪಡಿಸಲಾಗುತ್ತದೆ’ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಜನವರಿ ಆವೃತ್ತಿಯಲ್ಲಿ 8.23 ಲಕ್ಷಕ್ಕೂ ಅಧಿಕ ಮಂದಿ ಅಸ್ಸಾಮಿ, ಬೆಂಗಾಲಿ, ಇಂಗ್ಲಿಷ್‌, ಗುಜರಾತಿ, ಹಿಂದಿ, ಕನ್ನಡ, ಮಲಯಾಳಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಗಳಲ್ಲಿ ಪರೀಕ್ಷೆ ಬರೆದಿದ್ದರು. ದೋಹಾ, ದುಬೈ, ಕಠ್ಮಂಡು, ಮಸ್ಕತ್‌, ರಿಯಾದ್, ಶಾರ್ಜಾ, ಸಿಂಗಪುರ, ಕುವೈತ್‌ ಸಿಟಿ, ಕೊಲಂಬೊ, ಜಕಾರ್ತ, ಮಾಸ್ಕೊ, ಬ್ಯಾಂಕಾಕ್‌ ಸೇರಿದಂತೆ ವಿವಿಧ ನಗರಗಳಲ್ಲೂ ಪರೀಕ್ಷೆ ಆಯೋಜಿಸಲಾಗಿತ್ತು.

ಎರಡನೇ ಆವೃತ್ತಿಯ ಪರೀಕ್ಷೆಯು ಏಪ್ರಿಲ್‌ನಲ್ಲಿ ನಿಗದಿಯಾಗಿದೆ. ನಂತರ ಅಭ್ಯರ್ಥಿಗಳ ರ‍್ಯಾಂಕ್‌ ಬಿಡುಗಡೆ ಮಾಡಲಾಗುತ್ತದೆ. ಜೆಇಇ–ಮೇನ್ಸ್‌ ಪತ್ರಿಕೆ–1 ಮತ್ತು ಪತ್ರಿಕೆ–2ರಲ್ಲಿ ಗರಿಷ್ಠ ಅಂಕ ಗಳಿಸಿದ ಅಗ್ರ 2.6 ಲಕ್ಷ ಮಂದಿ ಜೆಇಇ–ಮೇನ್ಸ್‌ ಅಡ್ವಾನ್ಸ್ಡ್‌ಪರೀಕ್ಷೆಗೆ ಅರ್ಹತೆ ಗಳಿಸಲಿದ್ದಾರೆ.

100 ಅಂಕ ಪಡೆದವರು

ಅಭಿನೀತ್‌ ಮಜೇತಿ, ಅಮೋಘ್‌ ಜಲನ್‌, ಅಪೂರ್ವ ಸಮೋತಾ, ಆಶಿಕ್‌ ಸ್ಟೆನ್ನಿ, ಬಿಕ್ಕಿನಾ ಅಭಿನವ್‌ ಚೌಧರಿ, ದೇಶಾಂಕ್‌ ಪ್ರತಾಪ್‌ ಸಿಂಗ್‌, ಧ್ರುವ್‌ ಸಂಜಯ್‌ ಜೈನ್‌, ದ್ಯಾನೇಶ್‌ ಹೇಮೇಂದ್ರ ಶಿಂದೆ, ದುಗ್ಗಿನೇನಿ ವೆಂಕಟ ಯುಗೇಶ್‌, ಗುಲ್ಸನ್‌ಕುಮಾರ್‌, ಗುತಿಕೊಂಡ ಅಭಿರಾಮ್‌, ಕೌಶಲ್‌ ವಿಜಯವರ್ಗೀಯ, ಕ್ರಿಷ್‌ ಗುಪ್ತಾ, ಮಯಂಕ್‌ ಸನ್‌, ಎನ್‌.ಕೆ.ವಿಶ್ವಜಿತ್‌, ನಿಪುಣ್‌ ಗೋಯಲ್‌, ರಿಷಿ ಕಾಲ್ರಾ, ಸೋಹಮ್‌ ದಾಸ್‌, ಸುತಾರ್‌ ಹರ್ಷುಲ್‌ ಸಂಜಯ್‌ಭಾಯ್‌ ಮತ್ತು ವವಿಲಾಲಾ ಚಿದ್ವಿಲಾಸ್‌ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.