ADVERTISEMENT

ಆ.28 ರಿಂದ 30ರವರೆಗೆ ಸಿಇಟಿ-2021; 530 ಕೇಂದ್ರಗಳಲ್ಲಿ ನಡೆಸಲು ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 14:19 IST
Last Updated 26 ಆಗಸ್ಟ್ 2021, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದೇ 28ರಿಂದ 30ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಇಟಿ) ರಾಜ್ಯದ 530 ಕೇಂದ್ರಗಳಲ್ಲಿ ನಡೆಯಲಿದೆ.

‘ಒಟ್ಟು 2,01,816 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಕೋವಿಡ್ ಗಮನದಲ್ಲಿರಿಸಿಕೊಂಡು ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

28ರಂದು ಜೀವವಿಜ್ಞಾನ ಮತ್ತು ಗಣಿತ, 29ರಂದು ಭೌತವಿಜ್ಞಾನ ಮತ್ತು ರಸಾಯನ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ. ಹೊರನಾಡು ಹಾಗೂ ಗಡಿಭಾಗದ ವಿದ್ಯಾರ್ಥಿಗಳಿಗೆ ರಾಜ್ಯದ ಆರು ಸ್ಥಳಗಳಲ್ಲಿ ಇದೇ 30ರಂದು ಕನ್ನಡ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೀದರ್, ವಿಜಯಪುರ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ನಡೆಯುವ ಈ ಪರೀಕ್ಷೆಗೆ 1,682 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

530 ಪರೀಕ್ಷಾ ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿ, ಉಳಿದ 444 ಕೇಂದ್ರಗಳು ಇನ್ನುಳಿದ ಜಿಲ್ಲೆಗಳಲ್ಲಿವೆ. ಆಯಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಪರೀಕ್ಷೆ ನಡೆಯುವ ದಿನಗಳಂದು ಗೃಹ ಇಲಾಖೆಯು ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಿದೆ. ಒಟ್ಟು 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.