ADVERTISEMENT

ವ್ಯಾಪಾರ ಕೌಶಲ ಕಲಿಸುವ ಎಂಬಿಎ ಉದ್ಯಮಶೀಲತೆ

ಡಾ.ಗಿರಿ ಯರಲಕಟ್ಟಿಮಠ
Published 25 ಸೆಪ್ಟೆಂಬರ್ 2022, 19:30 IST
Last Updated 25 ಸೆಪ್ಟೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಉದ್ಯಮ ನಡೆಸಲು ಅನುಭವದ ಜೊತೆಗೆ, ವ್ಯಾಪಾರದ ಕೌಶಲ, ತಂತ್ರಗಾರಿಕೆ, ಹಣಕಾಸು ನಿರ್ವಹಣೆ, ಮಾರುಕಟ್ಟೆಯ ಆಳ–ಅಗಲ... ಹೀಗೆ ಹಲವು ಜ್ಞಾನ ಅಗತ್ಯ. ಅಂತ ಎಲ್ಲ ಕೌಶಲ–ಜ್ಞಾನವನ್ನು ನೀಡುತ್ತದೆ ಮಾಸ್ಟರ್ಸ್‌ ಆಫ್‌ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌(MBA in Entrepreneurship) ಪ್ರೋಗ್ರಾಂ.

ಈ ಉದ್ಯಮಶೀಲತಾ ಮ್ಯಾನೇಜ್‌ಮೆಂಟ್‌ ಕೋರ್ಸ್‌, ವಿದ್ಯಾರ್ಥಿಗಳಿಗೆ ಯಶಸ್ವಿ ಉದ್ಯಮಿಯಾಗಲು ಅಗತ್ಯವಿರುವ ಜ್ಞಾನ, ಕೌಶಲ ಮತ್ತು ನೆಟ್‌ವರ್ಕಿಂಗ್‌ (ಸಂಪರ್ಕ) ಜೊತೆಗೆ, ವ್ಯಾಪಾರದ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಹಾಗೆಯೇ ಉದ್ದಿಮೆ ನಡೆಸಲು ಉತ್ತೇಜಿಸುತ್ತಾ, ಅದಕ್ಕೆ ಅಗತ್ಯವಾದ ಶಕ್ತಿ–ಸಾಮರ್ಥ್ಯ ವೃದ್ಧಿಗೆ ಬೇಕಾದ ಜ್ಞಾನವನ್ನು ನೀಡುತ್ತದೆ. ಮಾತ್ರವಲ್ಲ, ಪ್ರತಿಷ್ಠಿತ ಕಂಪನಿಗಳಲ್ಲಿ ಉತ್ತಮ ಮ್ಯಾನೇಜ್‌ಮೆಂಟ್‌ ಹುದ್ದೆ ಪಡೆದುಕೊಳ್ಳಲು ನೆರವಾಗುತ್ತದೆ.

ಕೋರ್ಸ್‌ ಕಲಿಕೆಗೆ ಎಂಥ ಕೌಶಲ ಬೇಕು?

ADVERTISEMENT

l ಯಾವುದೇ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಜ್ಞಾನ ಹೊಂದಿರಬೇಕು.

l ವ್ಯಾಪಾರದ ತಂತ್ರಗಾರಿಕೆ ಅರ್ಥ ಮಾಡಿಕೊಳ್ಳುವುದು ಮತ್ತು ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಗುಣವಿರಬೇಕು.

l ಭವಿಷ್ಯದಲ್ಲಿ ತಮ್ಮ ವ್ಯಾಪಾರಕ್ಕೆ ಒದಗಿಬರಬಹುದಾದ ಅಪಾಯ ಎದುರಿಸುವ ಶಕ್ತಿ ಸಾಮರ್ಥ್ಯ ಹೊಂದಿರಬೇಕು.

l ನವ ನವೀನ ಆವಿಷ್ಕಾರಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಉತ್ಸಾಹವಿರಬೇಕು.

l ಸ್ವಯಂ ಶಿಸ್ತು ಹಾಗೂ ಸಮಗ್ರತೆ ದೃಷ್ಟಿಕೋನ ಅಗತ್ಯ

l ಸಕಾಲದಲ್ಲಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರಬೇಕು.

l ಮಾರುಕಟ್ಟೆ ವಿಶ್ಲೇಷಣಾ ಕೌಶಲವಿರಬೇಕು.

ಕೋರ್ಸ್‌ ಪರಿಕಲ್ಪನೆ

‌ಎಂಬಿಎ(ಉದ್ಯಮಶೀಲತಾ) ಕೋರ್ಸ್‌ನಲ್ಲಿ ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್‌) ಅವಧಿಯಲ್ಲಿ ಸಾಫ್ಟ್‌ ಸ್ಕಿಲ್‌ ಅಂದರೆ, ತಂಡದ ಅಭಿವೃದ್ಧಿ(ಟೀಂ ಡೆವೆಲಪ್‌ಮೆಂಟ್‌), ಸಂಪರ್ಕ (ನೆಟ್‌ವರ್ಕಿಂಗ್‌), ಸೃಜನಶೀಲತೆ, ನಾಯಕತ್ವ ಕೌಶಲ, ಉತ್ತಮ ನಿರ್ಧಾರ ತೆಗೆದುಕೊಳ್ಳುವ ಕೌಶಲಗಳು, ಅಂತರ್‌ವ್ಯಕ್ತಿ ಸಂವಹನ ಕೌಶಲಗಳು, ಸಮಾಲೋಚನಾ ಕೌಶಲಗಳು ಸೇರಿದಂತೆ ಉದ್ಯಮಕ್ಕೆ ಅಗತ್ಯವಾದ ಎಲ್ಲಾ ಕೌಶಲಗಳು ಸೇರುತ್ತವೆ. ಇವುಗಳ ಜೊತೆಗೆ, ಯಶಸ್ವಿ ಹಣಕಾಸು ನಿರ್ವಹಣೆ, ನವ ನವೀನ ವಿಧಾನಗಳೊಂದಿಗೆ ಆದಾಯಗಳಿಸುವುದು, ಮಾರುಕಟ್ಟೆ ಸಂಶೋಧನೆ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ವಿಷಯಗಳನ್ನು ವಿದ್ಯಾರ್ಥಿಗಳು ಕ್ರಮ ಬದ್ಧವಾಗಿ ಕಲಿಯುತ್ತಾರೆ.‌

ಈ ಮೇಲೆ ಉಲ್ಲೇಖಿಸಿದ ಎಲ್ಲ ಕೌಶಲಗಳು, ಕೋರ್ಸ್‌ ಮುಗಿಸಿ ಹೊರ ಬಂದು ನವೋದ್ಯಮಿಗಳಾಗುವವರಿಗೆ ಸ್ಟಾರ್ಟ್‌ ಅಪ್‌ಗಳನ್ನು ಆರಂಭಿಸಲು ನೆರವಾಗುತ್ತವೆ. ಮಾತ್ರವಲ್ಲ, ಒಬ್ಬ ಯಶಸ್ವಿ ಉದ್ಯಮಿಯಾಗಲು ದಾರಿ ತೋರುತ್ತವೆ.

ವಿದ್ಯಾರ್ಹತೆ

l ಶೇ 45 ಅಂಕಗಳೊಂದಿಗೆ ಯಾವುದೇ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

l ಎಂಬಿಎ ಪ್ರವೇಶಕ್ಕಾಗಿ ನಡೆಸುವ ಜಿಮ್ಯಾಟ್‌(GMAT), ಎಕ್ಸ್‌ಎಟಿ(XAT) ಮತ್ತು ಮ್ಯಾಟ್‌(MAT) ಪ್ರವೇಶ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನೂ ಪರಿಗಣಿಸಲಾಗುತ್ತದೆ. ಆದರೆ, ಎರಡು ವರ್ಷಗಳಿಗಿಂತ ಹಿಂದೆ ಪ್ರವೇಶ ಪರೀಕ್ಷೆ ಪಾಸು ಮಾಡಿದ ಅಂಕಗಳನ್ನು ಪರಿಗಣಿಸುವುದಿಲ್ಲ.

ಎಲ್ಲೆಲ್ಲಿ ಕೋರ್ಸ್‌ಗಳಿವೆ ?

ಭಾರತದಲ್ಲಿ ಎಂಬಿಎ(ಎಂಟರ್‌ಪ್ರನರ್‌ಶಿಪ್‌) ಕೋರ್ಸ್‌ ನೀಡುವ ಶಿಕ್ಷಣ ಸಂಸ್ಥೆಗಳು ಹೀಗಿವೆ; ದೇಶದ ಎಲ್ಲ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌(ಐಐಎಂ) ಸಂಸ್ಥೆಗಳಲ್ಲಿ ಈ ಕೋರ್ಸ್‌ ಕಲಿಸಲಾಗುತ್ತದೆ.

ಅಲ್ಲದೇ ಬೆಂಗಳೂರಿನ ಅಲಯನ್ಸ್‌ ಅಸೆಂಟ್ಸ್‌ ಕಾಲೇಜು, ಪುಣೆಯ ಎಂಐಟಿ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಸಿಂಬಿಯಾಸಿಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ರಾಜಸ್ಥಾನದ ಜೈಪುರದ ಸುರೇಶ್ ಜ್ಞಾನ್ ನಿಹಾರ್ ಯೂನಿವರ್ಸಿಟಿ, ಮುಂಬೈನ ಡಿ.ವೈ.ಪಾಟೀಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌, ಫ್ಲೇಮ್ ವಿಶ್ವವಿದ್ಯಾಲಯ, ಡೆಹ್ರಾಡೂನ್‌ನ ಸ್ಕೂಲ್ ಆಫ್ ಬಿಸಿನೆಸ್ ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ ಆ್ಯಂಡ್‌ ಎನರ್ಜಿ ಸ್ಟಡೀಸ್, ನೋಯ್ಡಾದ ಅಮಿತಿ ಬಿಸಿನೆಸ್ ಸ್ಕೂಲ್ ಹಾಗೂ ಜೆ.ಎಸ್.ಎಸ್. ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ಸಂಸ್ಥೆಗಳಲ್ಲಿ ಈ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಇದೆ.

ಉದ್ಯೋಗ ಸಾಧ್ಯತೆಯ ಕ್ಷೇತ್ರಗಳು

ಈ ಕೋರ್ಸ್‌ ಅನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಜಾಹೀರಾತು, ಆಟೊಮೊಬೈಲ್, ಕೃಷಿಕ್ಷೇತ್ರ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರ, ಬ್ಯಾಂಕಿಂಗ್‌, ಮಾಹಿತಿ ತಂತ್ರಜ್ಞಾನ(ಐಟಿ), ಸ್ಮಾರ್ಟ್‌ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಿಂಗ್ ಮ್ಯಾನೇಜ್‌ಮೆಂಟ್, ಗಣಿಗಾರಿಕೆ ಕ್ಷೇತ್ರ, ವಿಮಾ ಕ್ಷೇತ್ರಗಳು ಸೇರಿದಂತೆ, ಇನ್ನೂ ಹಲವು ಕ್ಷೇತ್ರಗಳಲ್ಲಿ ಉದ್ಯಮುಶೀಲತಾ ವಿಷಯದಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್‌ ಕಲಿತವರಿಗೆ ಉದ್ಯೋಗಾವಕಾಶಗಳಿವೆ.

(ಲೇಖಕರು: ಸಹಾಯಕ ಪ್ರಾಧ್ಯಾಪಕರು, ಎಂ.ಬಿ.ಎ ವಿಭಾಗ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.