ADVERTISEMENT

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ಸರ್ಕಾರಿ ಉದ್ಯೋಗ ಲಭ್ಯವೇ?

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 19:30 IST
Last Updated 19 ನವೆಂಬರ್ 2019, 19:30 IST
bhel
bhel   

ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ಆರು ತಿಂಗಳಾಗಿದೆ. ಸರ್ಕಾರಿ ಕೆಲಸ ಪಡೆಯಬೇಕು ಎಂದು ಓದುತ್ತಿದ್ದೇನೆ. ಯಾವ ಉದ್ಯೋಗ ಪಡೆಯಬಹುದು. ಸರಿಯಾದ ಮಾರ್ಗ ತಿಳಿಸಿ.

ಕಾವ್ಯ, ಅರಸೀಕೆರೆ

ಕಾವ್ಯ, ನೀವು ಸರ್ಕಾರಿ ಹುದ್ದೆಯಲ್ಲಿ ನಿಮ್ಮ ಕ್ಷೇತ್ರವಾದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಇತರ ಬೇರೆ ಕ್ಷೇತ್ರಗಳಲ್ಲಿ ನಿಮ್ಮ ಆಸಕ್ತಿಗೆ ಹೊಂದುವ ಕ್ಷೇತ್ರವನ್ನು ಆಯ್ದುಕೊಂಡು ತಯಾರಿ ಮಾಡಿಕೊಳ್ಳಬಹುದು. ನಿಮ್ಮದೇ ಕ್ಷೇತ್ರ ಎಂದು ನೋಡಿದಾಗ ಒ.ಎನ್.ಜಿ.ಸಿ,. ಬಿ.ಎಚ್.ಇ.ಎಲ್., ಐ.ಒ.ಸಿ.ಎಲ್., ಬಿ.ಪಿ.ಸಿ.ಎಲ್., ಎಚ್.ಪಿ.ಸಿ.ಎಲ್., ಜಿ.ಎ.ಐ.ಎಲ್., ಡಿ.ಅರ್.ಡಿ.ಓ., ಎಚ್.ಎ.ಎಲ್., ಎನ್‌.ಎ.ಪಿ.ಸಿ. ಮೊದಲಾದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು. ಇಸ್ರೊ ಮತ್ತು ಭಾರತೀಯ ರೈಲ್ವೆ ಕೂಡ ನೇಮಕಾತಿಯನ್ನು ಮಾಡಿಕೊಳ್ಳುತ್ತವೆ.

ADVERTISEMENT

ಇದಲ್ಲದೆ, ಇತರೆ ಕ್ಷೇತ್ರಗಳ ಸರ್ಕಾರಿ ಕೆಲಸಗಳಿಗಾಗಿ ಪದವಿ ಶಿಕ್ಷಣದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬೇರೆ ಬೇರೆ ಸಂಸ್ಥೆಗಳ ಹುದ್ದೆಗಳಿಗೆ ಪ್ರಯತ್ನಪಡಬಹುದು. ಬ್ಯಾಂಕಿಂಗ್ ಕ್ಷೇತ್ರದ ಹುದ್ದೆಗಳಿಗೆ ಐಬಿಪಿಎಸ್ ಮುಖಾಂತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕ್ಲರಿಕಲ್ ಮತ್ತು ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಪರೀಕ್ಷೆ ಎದುರಿಸಬಹುದು. ಅದಲ್ಲದೆ ಎಸ್.ಬಿ.ಐ. ಬ್ಯಾಂಕಿಂಗ್ ಸಮೂಹ ಮತ್ತು ಆರ್.ಬಿ.ಐ. ನಡೆಸುವ ನೇಮಕಾತಿಗೂ ಪ್ರಯತ್ನಿಸಬಹುದು. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಸಕ್ತಿ ಇದ್ದಲ್ಲಿ ಕೇಂದ್ರ ಸರ್ಕಾರದ ಯುಪಿಎಸ್‌ಸಿ ಮತ್ತು ಕರ್ನಾಟಕ ಸರ್ಕಾರದ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳನ್ನು ಎದುರಿಸಬಹುದು. ಹಾಗೆಯೇ ಎಸ್.ಎಸ್.ಸಿ. ಮುಖಾಂತರ ಆಗುವ ನೇಮಕಾತಿಗಳಿಗೆ, ಕರ್ನಾಟಕ ಸರ್ಕಾರದ ಎಸ್.ಡಿ.ಎ., ಎಫ್.ಡಿ.ಎ. ಇತ್ಯಾದಿ ನೇಮಕಾತಿಗೂ ಪ್ರಯತ್ನಿಸಬಹುದು.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಆಯಾ ಸಂಸ್ಥೆಯ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ ಅಥವಾ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ನೀಡುವ www.ncs.gov.in, www.sarkari-naukri.in ಗಳಂತಹ ಪೋರ್ಟಲ್ ಪರಿಶೀಲಿಸಬಹುದು.
‌‌

ಇನ್ನು ಬಹಳ ಮುಖ್ಯವಾಗಿ, ಉದ್ಯೋಗದ ಕ್ಷೇತ್ರವನ್ನು ನೋಡುವಾಗ ಸರ್ಕಾರಿ ಮತ್ತು ಖಾಸಗಿ ಎಂದು ನೋಡುವುದು ಬಹಳ ಸೀಮಿತ ದೃಷ್ಟಿಕೋನವಾಗುತ್ತದೆ. ಮುಂದೆ ನಿಮ್ಮ 30–35 ವರ್ಷಗಳನ್ನು ಮತ್ತು ಪ್ರತಿ ದಿನದ ಎಂಟು ಗಂಟೆಯನ್ನು ಆ ಕ್ಷೇತ್ರದಲ್ಲಿ ಕಳೆಯಬೇಕಾಗಿರುವುದರಿಂದ ಕೇವಲ ಸರ್ಕಾರದ ಕೆಲಸ ಎಂಬ ಸೀಮಿತ ದೃಷ್ಟಿಕೋನದಿಂದ ನೋಡದೆ ನಿಮ್ಮನ್ನು ಬೆಳೆಸುವ ಮತ್ತು ನಿಮ್ಮ ಸಾಮರ್ಥ್ಯದಿಂದ ನೀವು ಕೊಡುಗೆ ನೀಡಬಹುದಾದ ಕ್ಷೇತ್ರವನ್ನು ಆಯ್ದುಕೊಳ್ಳಿ. ಅದಲ್ಲದಿದ್ದರೂ ನೀವು ನೆಮ್ಮದಿ ಮತ್ತು ಸಂತೃಪ್ತಿಯಿಂದ ಕೆಲಸ ಮಾಡಬಹುದಾದ ಕ್ಷೇತ್ರವನ್ನಾದರೂ ಆಯ್ದುಕೊಳ್ಳಿ. ಶುಭಾಶಯ.

ನಾನು ಖಾಸಗಿಯಾಗಿ ಸರ್ಕಾರಿ ಪಿಯು ಕಾಲೇಜ್‌, ಹುಬ್ಬಳ್ಳಿಯಲ್ಲಿ ಪಿಯುಸಿ ಮುಗಿಸಿದ್ದೇನೆ. ಬಾಹ್ಯವಾಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಹಾಗೂ ಎಂ.ಎ. ಮುಗಿಸಿದ್ದು, ಈಗ ಎಲ್‌.ಎಲ್‌.ಬಿ. ಮಾಡಬಹುದೇ? ಇದು ಮಾನ್ಯ ಆಗುತ್ತದೆಯೇ?

ಮಹೇಶ್‌ ಪಾಟೀಲ, ಧಾರವಾಡ

ಸಾಮಾನ್ಯವಾಗಿ ಎಲ್.ಎಲ್.ಬಿ. ಡಿಗ್ರಿಗೆ ಪ್ರವೇಶಾತಿ ಪಡೆಯಲು ಯು.ಜಿ.ಸಿ.ಯಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಪದವಿ ಡಿಗ್ರಿ ಹೊಂದಿರಬೇಕು ಮತ್ತು ಆ ಡಿಗ್ರಿಯನ್ನು ಶೇ 45 ಅಂಕದೊಂದಿಗೆ ತೇರ್ಗಡೆ ಹೊಂದಿರಬೇಕು. ಆದರೆ ಈ ಡಿಗ್ರಿಯನ್ನು ದೂರ ಶಿಕ್ಷಣದಲ್ಲಿ ಪಡೆದಿರಬಾರದು ಎಂದು ಎಲ್ಲೂ ನಿಯಮ ಹೊಂದಿಲ್ಲ. ಹೀಗಾಗಿ ನೀವು ಧಾರಳವಾಗಿ ನಿಮ್ಮ ಶಿಕ್ಷಣ ಮುಂದುವರಿಸುವ ಕುರಿತು ಆಲೋಚಿಸಿ ಮುಂದುವರೆಯ ಬಹುದು.

ಯು.ಜಿ.ಸಿ.ಯಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ನೀವು ರೆಗ್ಯುಲರ್ ಮಾದರಿಯಲ್ಲಿ ಎಲ್.ಎಲ್.ಬಿ. ಮಾಡಿದಲ್ಲಿ ಅದು ಮಾನ್ಯವಾಗುತ್ತದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಎಲ್.ಎಲ್.ಬಿ. ಶಿಕ್ಷಣ ಓದಲು ಇಚ್ಛಿಸಿದರೆ ಪ್ರವೇಶಾತಿ ಪಡೆಯಲು ಸಿ.ಎಲ್.ಎ.ಟಿ. ಪ್ರವೇಶಾತಿ ಪರೀಕ್ಷೆ ಮುಖಾಂತರ ಪ್ರಯತ್ನಿಸಬಹುದು.
ಭಾರತೀಯ ಬಾರ್ ಕೌನ್ಸಿಲ್‌ನ ನಿಯಮದ ಪ್ರಕಾರ ಅದು ಅಡ್ವೋಕೇಟ್ ನೋಂದಣಿಗೆ ದೂರ ಶಿಕ್ಷಣದಲ್ಲಿ ಮಾಡಿರುವ ಎಲ್.ಎಲ್.ಬಿ. ಯನ್ನು ಪರಿಗಣಿಸುವುದಿಲ್ಲ. ಕೇವಲ ಜ್ಞಾನ ಮತ್ತು ಹೆಚ್ಚಿನ ವಿದ್ಯಾರ್ಹತೆಗೆ ದೂರ ಶಿಕ್ಷಣದಲ್ಲಿ ಎಲ್.ಎಲ್.ಬಿ. ಮಾಡಬಹುದೆ ವಿನಃ ವಕೀಲರಾಗಿ ಅಭ್ಯಾಸ ಮಾಡಲು ರೆಗ್ಯುರಲ್ ಶಿಕ್ಷಣದಲ್ಲೇ ಮಾಡಬೇಕು.

ನಿಮಗೆ ದೂರ ಶಿಕ್ಷಣದಲ್ಲೇ ಮಾಡಬೇಕಾದ ಅನಿವಾರ್ಯತೆ ಇದ್ದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಬೆಂಗಳೂರು ಇಲ್ಲಿಯ ಡಿಸ್ಟನ್ಸ್ ವಿಭಾಗದಿಂದ ಕೊಡಮಾಡುವ ಡಿಪ್ಲೋಮಾ ಕೋರ್ಸ್‌ ಅನ್ನು ಓದಬಹುದು. ಆ ಬಗ್ಗೆ ಮಾಹಿತಿಗೆ ded.nls.ac.in ಪರಿಶೀಲಿಸಿ. ಅಥವಾ ಯು.ಜಿ.ಸಿ. ಯಿಂದ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯಗಳಿಂದ ಓದಬಹುದು. ಆಲ್ ದಿ ಬೆಸ್ಟ್.

ಬಿ.ಸಿ.ಎ.ನಲ್ಲಿ ಕೊನೆಯ ವರ್ಷ ಓದುತ್ತಿದ್ದೇನೆ. ಮುಂದೆ ಶಿಕ್ಷಣವನ್ನು ಮುಂದುವರಿಸಲು ಇಷ್ಟವಿದ್ದರೂ ಯಾವ ಕೋರ್ಸ್‌ ಓದಬೇಕು ಎಂಬುದರ ಬಗ್ಗೆ ಗೊಂದಲವಿದೆ. ಆದರೆ ಕಂಪ್ಯೂಟರ್‌ ಸೈನ್ಸ್‌ ಕ್ಷೇತ್ರದಲ್ಲೇ ಆಸಕ್ತಿ ಇದೆ. ಎಂ.ಸಿ.ಎ. ಸೇರಿದರೆ, ಬ್ಯಾಂಕ್‌ ಸಾಲ ಸಿಗಬಹುದೇ? ಇದರ ಪ್ರಕ್ರಿಯೆ ಹೇಗೆ? ಎರಡನೇ ಆಯ್ಕೆ ಉದ್ಯೋಗಕ್ಕೆ ಸೇರುವುದು. ನನ್ನ ಪದವಿಗೆ ಸರ್ಕಾರಿ ಅಥವಾ ಖಾಸಗಿ ಐಟಿ ಕ್ಷೇತ್ರದಲ್ಲಿ ಒಳ್ಳೆಯ ಉದ್ಯೋಗ ಯಾವುದು?

ದೀಪಿಕಾ, ತುಮಕೂರು

ದೀಪಿಕಾ, ನಿಮಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿ ಇರುವುದರಿಂದ ನೀವು ಎಂ.ಸಿ.ಎ. ಓದಬಹುದು ಅಥವಾ ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಬಹುದು. ಕೆಲಸಕ್ಕಾಗಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ, ನೌಕರಿ ಡಾಟ್ ಕಾಮ್ ತರಹದ ಜಾಬ್ ಪೋರ್ಟಲ್‌ಗಳಲ್ಲಿ ಅರ್ಜಿ ಸಲ್ಲಿಸಿ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ನಿಮ್ಮ ಪರಿಚಿತರು, ಸ್ನೇಹಿತರು ಮತ್ತು ಶಿಕ್ಷಕರ ಸಹಾಯದಿಂದ ರೆಫರೆನ್ಸ್ ಪಡೆಯಿರಿ. ಉದ್ಯೋಗ ಮೇಳ, ಜಾಬ್ ಡ್ರೈವ್, ವಾಕ್‌ ಇನ್ ಮತ್ತು ಕ್ಯಾಂಪಸ್ ನೇಮಕಾತಿಗಳಲ್ಲಿ ಭಾಗವಹಿಸಿ. ಕಂಪನಿ ಚಿಕ್ಕದಿರಲಿ, ದೊಡ್ಡದಿರಲಿ ಮೊದಲು ಕೆಲಸಕ್ಕೆ ಸೇರಿ ಅನುಭವ ಪಡೆಯಿರಿ. ಯಾವುದಾದರೂ ನಿರ್ದಿಷ್ಟ ಪ್ರೋಗಾಮಿಂಗ್ ಲ್ಯಾಂಗ್ವೇಜ್‌ನಲ್ಲಿ ಕೌಶಲ ಬೇಕಾದಲ್ಲಿ ಅದಕ್ಕೆ ಸಂಬಂಧಿಸಿದ ಕೋರ್ಸ್‌ ಮಾಡಿಕೊಳ್ಳಿ.

ಎಂ.ಸಿ.ಎ. ಮಾಡಲು ಶೈಕ್ಷಣಿಕ ಸಾಲಕ್ಕಾಗಿ ನಿಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‌ನ ವ್ಯವಸ್ಥಾಪಕರೊಂದಿಗೆ ಮಾತನಾಡಿ. ಕಾಲೇಜ್‌ನಲ್ಲಿ ಎಂ.ಸಿ.ಎ. ಪ್ರವೇಶಾತಿ ಪ್ರಕ್ರಿಯೆ ಜೊತೆಗೆ ಫೀಸ್ ಕೊಟೇಷನ್ ಅನ್ನು ಪಡೆದು ಬ್ಯಾಂಕ್‌ನಲ್ಲಿ ನೀಡಬೇಕು. ನಂತರದ ಪ್ರಕ್ರಿಯೆನ್ನು ಬ್ಯಾಂಕ್‌ನಲ್ಲಿ ವಿವರಿಸುತ್ತಾರೆ. ಸಹಜವಾಗಿ ಬ್ಯಾಂಕ್‌ನಲ್ಲಿ ಶೈಕ್ಷಣಿಕ ಸಾಲ ನೀಡಬೇಕಾದರೂ ಭಾರತೀಯ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳು ಬರುವುದರಿಂದ ನಿಮ್ಮ ಮನೆಯವರದೋ, ಶಿಕ್ಷಕರದೋ ಅಥವ ಇನ್ಯಾರೋ ಹಿರಿಯರ ಸಹಾಯ ಪಡೆದು ಬ್ಯಾಂಕ್‌ನೊಂದಿಗೆ ವ್ಯವಹರಿಸಿ. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.