
ಭಾರತಕ್ಕೆ ನವೆಂಬರ್ 11 ಮಹತ್ವದ ದಿನ. 2008ರಿಂದ ಆರಂಭಿಸಿ ಪ್ರತಿವರ್ಷ ಈ ದಿನವನ್ನು ‘ರಾಷ್ಟ್ರೀಯ ಶಿಕ್ಷಣ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಹಾಗೂ ದೇಶದ ಮೊದಲ ಶಿಕ್ಷಣ ಸಚಿವ ಅಬುಲ್ ಕಲಾಂ ಆಜಾದ್ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಶಿಕ್ಷಣ ದಿನವನ್ನಾಗಿ ಆಚರಿಸಿ, ಅವರ ಕೊಡುಗೆಯನ್ನು ಸ್ಮರಿಸಲಾಗುತ್ತದೆ.
1888ರ ನ. 11ರಂದು ಮೆಕ್ಕಾದಲ್ಲಿ ಜನಿಸಿದ ಆಜಾದ್ ಅವರ ಪೂರ್ಣ ಹೆಸರು ಅಬುಲ್ ಕಲಾಂ ಗುಲಾಂ ಮುಹಿಯುದ್ದೀನ್. ನಂತರ ಅವರ ಕುಟುಂಬ ಕೋಲ್ಕತ್ತದಲ್ಲಿ ನೆಲಸಿತು. ಆಜಾದ್ ಅವರು ಪಾಶ್ಚಾತ್ಯ ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯದ ಅಧ್ಯಯನದಿಂದ ಪ್ರಗತಿಪರ ಮನೋಭಾವ ರೂಢಿಸಿಕೊಂಡರು. ಪತ್ರಕರ್ತರೂ ಆಗಿದ್ದ ಅವರು ಗಾಂಧೀಜಿಯವರ ನಿಕಟವರ್ತಿಯಾಗಿದ್ದರು. ತಮ್ಮ 35ನೇ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದರು. ಸ್ವಾತಂತ್ರ್ಯ ಹೋರಾಟದ ವೇಳೆ ಹಲವು ಬಾರಿ ಕಾರಾಗೃಹ ವಾಸ ಅನುಭವಿಸಿದರು.
ದೇಶವು ಸ್ವಾತಂತ್ರ್ಯ ಪಡೆದ ನಂತರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಆಜಾದ್, ಆಧುನಿಕ ಭಾರತದ ಶಿಕ್ಷಣದ ಚೌಕಟ್ಟನ್ನು ರೂಪಿಸಿದವರು. ಅವರು ಪ್ರಾಥಮಿಕ, ಪ್ರೌಢ, ತಾಂತ್ರಿಕ ಹಾಗೂ ವಯಸ್ಕರ ಶಿಕ್ಷಣಕ್ಕೆ ಆದ್ಯತೆ ನೀಡಿದರು. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಬಲವರ್ಧನೆಯ ಜೊತೆಗೆ ಸಾಹಿತ್ಯ ಅಕಾಡೆಮಿ, ಲಲಿತಕಲಾ ಅಕಾಡೆಮಿ ಮತ್ತು ಸಂಗೀತ ನಾಟಕ ಅಕಾಡೆಮಿಯ ಸ್ಥಾಪನೆಗೂ ಕೊಡುಗೆ ನೀಡಿದರು.
ಆಜಾದ್ ಅವರ ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಸಮಾಜದ ಪ್ರಗತಿಯ ಶಕ್ತಿ. ಜಾತಿ, ಧರ್ಮ, ವರ್ಗ ಅಥವಾ ಲಿಂಗಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ದೊರೆಯಬೇಕು ಎಂಬುದು ಅವರ ಆಶಯ. ಮಹಿಳಾ ಶಿಕ್ಷಣವಿಲ್ಲದೆ ಯಾವ ಶಿಕ್ಷಣ ನೀತಿಯೂ ಪೂರ್ಣವಾಗುವುದಿಲ್ಲ ಎಂದು ಅವರು ಎಚ್ಚರಿಸಿದರು. ಮಕ್ಕಳಿಗೆ 14 ವರ್ಷ ವಯಸ್ಸಿನ ತನಕ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ದೊರೆಯಬೇಕು, ಅದು ಅವರ ಮಾತೃಭಾಷೆಯಲ್ಲಿ ಮತ್ತು ಮನೆಯ ಹತ್ತಿರದಲ್ಲೇ ಸಿಗುವಂತಾಗಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಇಂದು ನೂರಾರು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ, ಶಿಕ್ಷಣ ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆಜಾದ್ ಅವರು ಬಿತ್ತಿದ ‘ಸಮಾನ ಶಿಕ್ಷಣ’ದ ಕನಸನ್ನು ಸರ್ಕಾರಗಳು ನೆನಪಿಸಿಕೊಳ್ಳಬೇಕಿದೆ. ಶಿಕ್ಷಣವನ್ನು ಬರೀ ಉದ್ಯೋಗ ಗಳಿಕೆಯ ಸಾಧನವಾಗಿ ಕಾಣದೆ, ರಾಷ್ಟ್ರದ ಸಾಮಾಜಿಕ ಪುನರ್‌ನಿರ್ಮಾಣದ ಸಾಧನವೆಂದು ಪರಿಗಣಿಸಬೇಕಾಗಿದೆ. ಆಜಾದ್ ಕನಸಿನ ‘ಎಲ್ಲರಿಗೂ ಶಿಕ್ಷಣ’ ಎಂಬ ಧ್ಯೇಯವನ್ನು ಜೀವಂತವಾಗಿ ಇಡುವುದು ಮತ್ತು ಅದನ್ನು ಸಾಕಾರಗೊಳಿಸುವುದು ಎಲ್ಲರ ಕರ್ತವ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.