
ನವದೆಹಲಿ: ದೇಶದಾದ್ಯಂತ 18 ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಖಾಲಿ ಉಳಿದಿರುವುದರಿಂದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಯು (ಎನ್‌ಬಿಇಎಂಎಸ್) 2025ರ ನೀಟ್–ಪಿಜಿ ಪ್ರವೇಶದ ಅರ್ಹತಾ ಅಂಕಗಳನ್ನು ಕಡಿತಗೊಳಿಸಿದೆ.
ಎನ್‌ಬಿಇಎಂಎಸ್ ಮಂಗಳವಾರ ಪ್ರಕಟಿಸಿದ ಆದೇಶದ ಪ್ರಕಾರ, ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ ಶೇ 40ರಷ್ಟು ಅರ್ಹತಾ ಅಂಕಗಳನ್ನು ಶೂನ್ಯಕ್ಕೆ ಇಳಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಶೇ 50ರಿಂದ ಶೇ 7ಕ್ಕೆ ಇಳಿಸಲಾಗಿದೆ. ಎರಡನೇ ಸುತ್ತಿನ ಕೌನ್ಸೆಲಿಂಗ್ ಪೂರ್ಣಗೊಂಡ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ವೈದ್ಯಕೀಯ ಸೀಟುಗಳನ್ನು ಖಾಲಿ ಬಿಡುವುದರಿಂದ ಆರೋಗ್ಯ ಸೇವೆಯನ್ನು ಸುಧಾರಿಸುವ ಪ್ರಯತ್ನಗಳು ದುರ್ಬಲಗೊಳ್ಳುತ್ತವೆ. ಶೈಕ್ಷಣಿಕ ಸಂಪನ್ಮೂಲಗಳ ನಷ್ಟಕ್ಕೆ ಕಾರಣವಾಗುತ್ತದೆ. ತಜ್ಞವೈದ್ಯರ ಸಂಖ್ಯೆ ಹೆಚ್ಚಿಸಲು ಲಭ್ಯವಿರುವ ಸೀಟುಗಳ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವೈದ್ಯಕೀಯ ಸೀಟುಗಳು ವ್ಯರ್ಥವಾಗುವುದನ್ನು ತಡೆಗಟ್ಟಲು ಹಾಗೂ ಆರೋಗ್ಯ ಸೇವೆಗಳನ್ನು ಬಲಪಡಿಸಲು ಅರ್ಹತಾ ಅಂಕಗಳನ್ನು ಪರಿಷ್ಕರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘವು ಜನವರಿ 12ರಂದು ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.