ADVERTISEMENT

ಒಂದೇ ಪರೀಕ್ಷೆ; ಬಗೆ ಬಗೆ ಶುಲ್ಕ

medical labs cost

ಮಾನಸ ಬಿ.ಆರ್‌
Published 27 ಡಿಸೆಂಬರ್ 2018, 19:45 IST
Last Updated 27 ಡಿಸೆಂಬರ್ 2018, 19:45 IST
...
...   

ಮಗಳಿಗೆ ಯಕೃತ್‌ ಸೋಂಕು ಆಗಿತ್ತು. ಮೊದಲು ಖಾಸಗಿ ಆಸ್ಪತ್ರೆಗೆ ಹೋದೆವು ವಾರಕ್ಕೊಮ್ಮೆಎಲ್‌ಎಫ್‌ಟಿ (ಲಿವರ್‌ ಫಂಗ್‌ಷನಿಂಗ್‌ ಟೆಸ್ಟ್‌) ಮಾಡುತ್ತಿದ್ದರು. ಒಂದು ಬಾರಿ ರಕ್ತ ಪರೀಕ್ಷೆ ಮಾಡಲು ₹ 1,400 ಕೊಡಬೇಕಿತ್ತು. ಆಸ್ಪತ್ರೆಯಲ್ಲಿಪರೀಕ್ಷೆ ಮಾಡಿಸಲು ಸಾಧ್ಯವಾಗದೇ ಇದ್ದಾಗ ಒಮ್ಮೆ ನಮ್ಮಮನೆಯ ಹತ್ತಿರ ಇದ್ದ ಸಂಘ, ಸಂಸ್ಥೆ ನಡೆಸುವ ಲ್ಯಾಬ್‌ ಒಂದರಲ್ಲಿ ಪರೀಕ್ಷೆ ಮಾಡಿಸಿದೆವು. ಅಲ್ಲಿ ಕೇವಲ ₹290 ತೆಗೆದುಕೊಂಡರು. ನಾವು ಮೋಸ ಹೋಗಿರುವುದು ಆಗಲೇ ಗೊತ್ತಾಗಿದ್ದು‘ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋರಮಂಗಲದ ರೋಗಿ ಸಹನಾಳ ತಾಯಿ ದುಃಖ ತೋಡಿಕೊಂಡರು.

‘ನಮಗೆ ಎಲ್ಲಾ ಗೊತ್ತಾಗುವಷ್ಟರಲ್ಲಿ ₹ 20 ಸಾವಿರದಷ್ಟು ಹಣವನ್ನು ಕೇವಲ ರಕ್ತ ಪರೀಕ್ಷೆಗಾಗಿಯೇ ಖರ್ಚುಮಾಡಿದ್ದೆವು.ಆ ನಂತರ ಖಾಸಗಿ ಆಸ್ಪತ್ರೆ ಸಹವಾಸ ಸಾಕು ಎನ್ನಿಸಿ ಸರ್ಕಾರಿ ಆಸ್ಪತ್ರೆಗೆ ಮಗಳನ್ನು ದಾಖಲು ಮಾಡಿದೆವು. ಇಲ್ಲಿ ಎಲ್ಲವೂ ಉಚಿತವಾಗಿ ಆಗುತ್ತಿದೆ’ ಎಂದು ಅವರು ತಮ್ಮ ಅನುಭವ ಹೇಳಿಕೊಂಡರು.

ಈ ರೀತಿಯ ಅನ್ಯಾಯಗಳನ್ನು ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ರಕ್ತ ಮತ್ತು ರೋಗ ತಪಾಸಣಾ (ಖಾಸಗಿ) ಕೇಂದ್ರಗಳನ್ನು ಏಕರೂಪ ಶುಲ್ಕ ವ್ಯವಸ್ಥೆಯಡಿ ತರಲು ಯೋಜಿಸಿದೆ.

ADVERTISEMENT

ನಗರದ ವಿವಿಧ ರಕ್ತ ಪರೀಕ್ಷಾ ಕೇಂದ್ರಗಳು ಮನಬಂದಂತೆ ಒಂದೊಂದು ರೀತಿಯ ಶುಲ್ಕ ವಿಧಿಸುತ್ತಿರುವುದು ‘ಮೆಟ್ರೊ’ ನಡೆಸಿದ ‘ರಿಯಾಲಿಟಿ ಚೆಕ್‌‘ನಲ್ಲಿ ಬಹಿರಂಗಗೊಂಡಿದೆ.

ಮಧುಮೇಹ ಕಾಯಿಲೆಗೆ ಸಂಬಂಧಿಸಿದಂತೆ ರಕ್ತ ಪರೀಕ್ಷೆಗೆ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ₹20 ಶುಲ್ಕ ಪಡೆಯಲಾಗುತ್ತಿದೆ. ಇನ್ನೂ ಕೆಲ ಸರ್ಕಾರಿ ಆಸ್ಪತ್ರಗಳಲ್ಲಿ ಇದನ್ನು ಉಚಿತಗೊಳಿಸಲಾಗಿದೆ. ಆದರೆ ನಗರದ ಬಹುತೇಕ ಖಾಸಗಿ ಆಸ್ಪತ್ರೆ ಮತ್ತು ಲ್ಯಾಬ್‌ಗಳು ಈ ಪರೀಕ್ಷೆಗಳಿಗೆ ವಿಭಿನ್ನ ಶುಲ್ಕವನ್ನು ಪಡೆಯುತ್ತಿವೆ. ಉದಾಹರಣೆಗೆ ಬಿಜಿಎಸ್‌ ಆಸ್ಪತ್ರೆಯಲ್ಲಿ ₹ 240, ಪೀಪಲ್‌ ಟ್ರೀ ಆಸ್ಪತ್ರೆಯಲ್ಲಿ ₹ 200, ಸುಹಾಸ್‌ ಲ್ಯಾಬ್‌ನಲ್ಲಿ ₹ 80, ಭಗವಾನ್‌ ಮಹಾವೀರ ಜೈನ್‌ ಲ್ಯಾಬ್‌ನಲ್ಲಿ ₹ 20 ಇದೆ, ಡೆಲ್ಟಾ ಲ್ಯಾಬ್‌ಗಳಲ್ಲಿ ₹ 140 ಶುಲ್ಕ ವಿಧಿಸಲಾಗುತ್ತಿದೆ.

ಕೆಲವೊಂದು ಸಂಘ, ಸಂಸ್ಥೆಗಳು ನಡೆಸುತ್ತಿರುವ ಲ್ಯಾಬ್‌ಗಳಲ್ಲಿ ಕಡಿಮೆ ದರದಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಲ್ಯಾಬ್‌ಗಳಲ್ಲಿ ಹೆಚ್ಚಿನ ಹಣ ವಿಧಿಸಲಾಗುತ್ತಿದೆ. ಅಲ್ಲದೆ ಪ್ರತಿಷ್ಠಿತ ಲ್ಯಾಬ್‌ಗಳು ತಮ್ಮದೇ ಆದ ಶುಲ್ಕ ಪಟ್ಟಿಯನ್ನು ಹೊಂದಿವೆ.

‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ದೊರೆಯುತ್ತದೆ. ನಮ್ಮಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಿ ಪರೀಕ್ಷೆ ಮಾಡುತ್ತೇವೆ. ಕಟ್ಟಡ, ಯಂತ್ರಗಳು, ಸಿಬ್ಬಂದಿ ಹೀಗೆ...ಎಲ್ಲಕ್ಕೂ ಸಾಕಷ್ಟು ಹಣ ಹೂಡಬೇಕು’ ಎಂದು ಹೆಸರು ಹೇಳಲು ಇಚ್ಛಿಸದಖಾಸಗಿ ಆಸ್ಪತ್ರೆಯ ಮಾಲೀಕರೊಬ್ಬರು ಪ್ರತಿಕ್ರಿಯಿಸಿದರು.

‘ಪ್ರತಿ ದಿನ ನಮ್ಮ ಲ್ಯಾಬ್‌ಗೆ ಮಧುಮೇಹ, ಕೊಲೆಸ್ಟ್ರಾಲ್‌, ಥೈರಾಯ್ಡ್‌ ಪರೀಕ್ಷೆಗಳಿಗೆ ಸಾಕಷ್ಟು ಜನ ಬರುತ್ತಾರೆ. ಕಡಿಮೆ ವೆಚ್ಚದಲ್ಲಿಯೇ ನಾವು ಅವರಿಗೆ ಈ ಸೇವೆ ನೀಡಬಹುದು. ಈ ಪರೀಕ್ಷೆಗಳನ್ನು ಮಾಡಲು ಯಂತ್ರದ ಹೊರತಾಗಿ ಹೆಚ್ಚಿನದೇನೂ ಖರ್ಚು ಇಲ್ಲ. ಆದರೂ ಕೆಲವು ಲ್ಯಾಬ್‌ಗಳು ಇದರಿಂದ ಹೊರತಾಗಿ ಸುಲಿಗೆ ಮಾಡುತ್ತಿವೆ‘ ಎಂದು ಭಗವಾನ್‌ ಲ್ಯಾಬ್‌ನ ತಂತ್ರಜ್ಞರೊಬ್ಬರು ಅಭಿಪ್ರಾಯಪಟ್ಟರು.

ಮೂರು ತಿಂಗಳಿನ ಗರ್ಭಿಣಿಯರಿಗೆ ಮಾಡುವ ಅಲ್ಟ್ರಾಸೌಂಡ್‌ಸ್ಕ್ಯಾನಿಂಗ್‌ ದರಗಳಲ್ಲೂ ಸಾಕಷ್ಟು ವ್ಯತ್ಯಾಸ ಇದೆ. ಡೆಲ್ಟಾ ಲ್ಯಾಬ್‌ಗಳು ಇದಕ್ಕೆ ₹ 1,400 ವಿಧಿಸುತ್ತಿವೆ. ಭಗವಾನ್‌ ಮಹಾವೀರ್‌ ಜೈನ್‌ ಲ್ಯಾಬ್‌ನಲ್ಲಿ ಇದೇ ಪರೀಕ್ಷೆಯನ್ನು ₹ 300ಕ್ಕೆ ಮಾಡಲಾಗುತ್ತಿದೆ.

ಬಿಜಿಎಸ್‌ ಸೇರಿದಂತೆ ಕೆಲವು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಗರ್ಭಧಾರಣಾ ಪರೀಕ್ಷೆಗೆ ₹ 290 ಇದ್ದರೆ ಸಣ್ಣ ಮಟ್ಟದ ಲ್ಯಾಬ್‌ಗಳು ಇದಕ್ಕೆ ₹ 50 ಮಾತ್ರ ಚಾರ್ಜ್‌ ಮಾಡುತ್ತಿವೆ.

ರಾಜ್ಯದಲ್ಲಿ ತಜ್ಞರ ಸಮಿತಿ

ರಾಜ್ಯದ ಎಲ್ಲಾ ಖಾಸಗಿ ಲ್ಯಾಬ್‌ಗಳಲ್ಲೂ ಒಂದೇ ದರ ವಿಧಿಸುವ ಕುರಿತು ತಜ್ಞರ ಸಮಿತಿಯನ್ನು ರಚಿಸಿ ಅಭಿಪ್ರಾಯ ಪಡೆಯುವ ಕೆಲಸ ಆಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ಸರ್ಕಾರಿ ಆದೇಶ ಹೊರಬೀಳಲಿದೆ

ಡಾ. ಪ್ರಭಾಕರ್‌, ಹೆಚ್ಚುವರಿ ನಿರ್ದೇಶಕರು, ಆರೋಗ್ಯ ಇಲಾಖೆ

ಒಂದೇ ಶುಲ್ಕ ಉತ್ತಮ ಕ್ರಮ

ರಾಜ್ಯದ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆದರೆ ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅತಿ ಕಡಿಮೆ ಶುಲ್ಕ ವಿಧಿಸಲಾಗುತ್ತಿದೆ. ಆದರೆ ಉಚಿತವಾಗಿ ಮಾಡುವ ಗುರಿಯೆಡೆಗೆ ನಾವು ಸಾಗುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೇ ಮಾದರಿಯ ಶುಲ್ಕ ವಿಧಿಸುವುದು ಅತ್ಯುತ್ತಮ ಕ್ರಮ. ಇದರಿಂದ ರೋಗಿಗಳಿಗೆ ಅನುಕೂಲ ಆಗಲಿದೆ.

ಡಾ. ರೇಣುಕಾ, ಉಪನಿರ್ದೇಶಕರು, ಆರೋಗ್ಯ ಇಲಾಖೆ

ದುಬಾರಿ ಶುಲ್ಕಕ್ಕೆ ಕಡಿವಾಣ

ಖಾಸಗಿ ಲ್ಯಾಬ್‌ಗಳು ಮನಬಂದಂತೆ ದುಬಾರಿ ಶುಲ್ಕ ವಿಧಿಸುವುದು ತಪ್ಪಬೇಕೆಂದರೆ ಒಂದೇ ಮಾದರಿಯ ಶುಲ್ಕ ವ್ಯವಸ್ಥೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕರಡು ನಿಯಮಾವಳಿ ರೂಪಿಸಿರುವುದು ಸ್ವಾಗತಾರ್ಹ. ಅದು ಅಂತಿಮಗೊಂಡು ಸರಿಯಾದ ರೀತಿಯಲ್ಲಿ ಜಾರಿಯಾಗಬೇಕು.

ಅಸೀಮಾ ಬಾನು, ನೋಡಲ್‌ ಅಧಿಕಾರಿ, ವಿಕ್ಟೋರಿಯಾ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.