ADVERTISEMENT

ಒಂದು ಫೋಟೊ ಪ್ರಸಂಗ

ಎ.ಶ್ರೀನಿವಾಸ.ತೋರಣಗಟ್ಟೆ
Published 19 ಫೆಬ್ರುವರಿ 2019, 19:45 IST
Last Updated 19 ಫೆಬ್ರುವರಿ 2019, 19:45 IST
ಕಾಲೇಜ್ ಕ್ಯಾಂಪಸ್ 
ಕಾಲೇಜ್ ಕ್ಯಾಂಪಸ್    

ನಾನು ಎಂ.ಎಸ್ಸಿ ಓದಿದ್ದು ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ. ಅಲ್ಲಿ ನಮ್ಮದು ವಿಶೇಷವಾದ ಬ್ಯಾಚ್ ಎನಿಸಿಕೊಂಡಿತ್ತು. ಇನ್ನೊಂದು ವಿಶೇಷವೆಂದರೆ ನಮ್ಮಲ್ಲಿ ಪ್ರತಿಯೊಬ್ಬರ ಹುಟ್ಟುಹಬ್ಬವನ್ನು ಕೊಂಚ ಭಿನ್ನವಾಗಿ ಆಚರಿಸುತ್ತಿದ್ದೆವು. ಅವತ್ತು ನನ್ನ ಹುಟ್ಟುಹಬ್ಬ. ನನ್ನ ಕ್ಲಾಸ್‍ಮೇಟ್ಸ್ ಎಲ್ಲಾ ಸೇರಿ ಕ್ಯಾಂಪಸ್ಸಿನ ಶಂಕರಮಠದಲ್ಲಿ ಸೆಲೆಬ್ರೇಟ್ ಮಾಡಲು ನಿರ್ಧರಿಸಿದರು. ಅದೊಂದು ಎತ್ತರವಾದ, ಸುಂದರ, ರಮಣೀಯ ತಾಣ. ಎಲ್ಲರೂ ಅಲ್ಲಿ ಸೇರಿಕೊಂಡೆವು. ಒಂದಿಷ್ಟು ಗೆಳೆಯರು ಕೇಕ್, ಕ್ಯಾಂಡಲ್, ಸಿಹಿತಿನಿಸುಗಳನ್ನು ತಂದಿಟ್ಟರು. ಒಂದಷ್ಟು ಗೆಳತಿಯರು ಅಲ್ಲಿನ ಜಾಗವನ್ನು ಸಿದ್ಧಗೊಳಿಸಿದರು. ಇನ್ನೊಂದಷ್ಟು ಗೆಳೆಯ ಗೆಳತಿಯರು ‘ಯಾಕಾದ್ರೂ ಹುಟ್ಟಿದಿಯಾ ನಮ್ಮನ್ನು ಗೋಳು ಹೋಯ್ಕೊಳೋಕೆ’ ಎಂದು ನನ್ನನ್ನು ಚೇಡಿಸುತ್ತಿದ್ದರು. ಗೆಳೆಯ ಸತೀಶ ನನಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಪೋಸ್ಟರ್‌ ಒಂದನ್ನು ಅಲ್ಲಿದ್ದ ಕಲ್ಲಿನ ಮೇಲೆ ಅಂಟಿಸಿದ್ದ. ಅವಾಗಿನ್ನೂ ನಮ್ಮ ಹತ್ತಿರ ಮೊಬೈಲ್ ಫೋನ್‍ಗಳು ಇಲ್ಲದಿದ್ದರಿಂದ ವಾಕ್‍ಮ್ಯಾನ್‍ನಲ್ಲಿ ‘ನಗುತಾ ನಗುತಾ ಬಾಳು ನೀನು ನೂರು ವರುಷ’ ಸಾಂಗ್ ಹಾಕಿ ಮರದ ಕೊಂಬೆಗೆ ಅದನ್ನು ನೇತು ಹಾಕಿದ.

ಎಲ್ಲವೂ ಸಿದ್ಧಗೊಂಡಿತ್ತು. ನಾನು ಕ್ಯಾಂಡಲ್ ಹೊತ್ತಿಸಿ ಕೇಕ್ ಕಟ್ ಮಾಡಿದೆ. ಎಲ್ಲರೂ ಶುಭಾಶಯ ಹೇಳಿ ನನಗೆ ಕೇಕ್ ತಿನ್ನಿಸಿ ಅವರು ಒಬ್ಬರಿಗೊಬ್ಬರು ಕೇಕ್ ಹಂಚಿಕೊಂಡು ತಿಂದರು. ಎಲ್ಲರೂ ಕ್ಷಣಹೊತ್ತು ಮಾತು, ಹಾಡು - ಹರಟೆಯ ಆನಂದದಲ್ಲಿ ಮಿಂದೆದ್ದೆವು. ಆ ಎಲ್ಲಾ ಸಂತೋಷ - ಸಂಭ್ರಮದ ಕ್ಷಣಗಳನ್ನು ಗೆಳತಿಯೊಬ್ಬಳು ಅವಳು ತಂದಿದ್ದ ಕ್ಯಾಮೆರಾದಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಳು.

ಎಲ್ಲರೂ ಖುಷಿ - ಖುಷಿಯಾಗಿ ಶಂಕರಮಠದಿಂದ ಕೆಳಗಿಳಿದೆವು. ನಮ್ಮೆಲ್ಲರಿಗೂ ಫೋಟೊಗಳನ್ನು ನೋಡುವ ಕಾತರ. ವಿಶ್ವವಿದ್ಯಾಲಯದ ಗೇಟಿನ ಬಳಿ ಇದ್ದ ಸ್ಟುಡಿಯೊಗೆ ಹೋಗಿ ಫೋಟೊ ಪ್ರಿಂಟ್ ಹಾಕಲು ಅದರೊಳಗಿನ ರೀಲ್ ತೆಗೆದುಕೊಳ್ಳಲು ಕ್ಯಾಮೆರಾ ನೀಡಿದೆವು. ಅವಾಗೆಲ್ಲಾ ಈಗಿನ ಹಾಗೆ ಚಿಪ್, ಮೆಮೊರಿ ಕಾರ್ಡ್ ಇರಲಿಲ್ಲ. ಅವರು ಡಾರ್ಕ್‌ರೂಮ್‌ಗೆ ಹೋಗಿ ರೀಲ್ ತೆಗೆದುಕೊಳ್ಳಲು ನೋಡಿ ಹೊರಗೆ ಬಂದು ‘ಕ್ಯಾಮೆರಾದಲ್ಲಿ ರೀಲ್ ಇಲ್ವಲ್ಲ’ ಎಂದರು. ನಾನು ಆಶ್ಚರ್ಯದಿಂದ ಪಕ್ಕದಲ್ಲೇ ನಿಂತಿದ್ದ ಕ್ಯಾಮೆರಾ ತಂದಿದ್ದ ಗೆಳತಿಯ ಮುಖವನ್ನೊಮ್ಮೆ ನೋಡಿದೆ. ಅದಕ್ಕವಳು ‘ಸಾರಿ ಕಣೋ, ಕ್ಯಾಮೆರಾದಲ್ಲಿ ರೀಲ್ ಇಲ್ಲದಿದ್ದು ನನಗೆ ಗೊತ್ತಾಗಲಿಲ್ಲ’ ಅಂದಳು. ಆ ಕ್ಷಣ ನನಗೆ ನಿರಾಸೆ, ಮುಜುಗರವೆನಿಸಿದರೂ ನಕ್ಕು ಸುಮ್ಮನಾದೆ.

ADVERTISEMENT

ಆ ದಿನ ರೀಲೇ ಇಲ್ಲದ ಕ್ಯಾಮೆರಾಗೆ ಡಿಫೆರೆಂಟಾಗಿ ಪೋಸ್ ಕೊಟ್ಟದ್ದು ಹಾಗೂ ಸ್ನೇಹಿತರೆಲ್ಲರೂ ಸೇರಿ ಸಂಭ್ರಮಿಸಿದ ಸನ್ನಿವೇಶಗಳ ಸಂಪೂರ್ಣ ಚಿತ್ರಣ ಇವತ್ತಿಗೂ ನನ್ನ ಮನಸ್ಸಿನಾಳದಲ್ಲಿ ಸಿಹಿನೆನಪಾಗಿ ಉಳಿದುಕೊಂಡಿದೆ. ಪ್ರತಿ ವರ್ಷ ನನ್ನ ಬರ್ತ್‍ಡೇ ಬಂದಾಗಲಂತೂ ಆ ಫೋಟೊ ಪ್ರಸಂಗ ನೆನಪಾಗದೇ ಇರದು.

ಎ. ಶ್ರೀನಿವಾಸ, ತೋರಣಗಟ್ಟೆ, ಕುವೆಂಪು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.