
ಪ್ರಾತಿನಿಧಿಕ ಚಿತ್ರ
ಕೃಪೆ: ಎಐ
ನನಗೀಗ 17 ವರ್ಷ. ಪಿಯುಸಿ ಫೇಲಾಗಿದ್ದೇನೆ. ಮತ್ತೆ ಓದಿ ಪಾಸಾಗುವ ಆಸೆ ಇದೆ. ಆದರೆ ಓದುವುದಕ್ಕೆ ಆಸಕ್ತಿ ಇಲ್ಲ. ಓದಿದ್ದು ನೆನಪಿರುವುದಿಲ್ಲ. ಪಾಲಕರಿಗೆ ನನ್ನ ಬಗ್ಗೆ ಬಹಳ ಬೇಸರವಾಗಿದೆ. ನನಗೆ ಗಂಟೆಗಟ್ಟಲೆ ಮೊಬೈಲ್ ಫೋನ್ ನೋಡುವ ಹುಚ್ಚು. ಊಟ, ತಿಂಡಿ ಸೇರುತ್ತಿಲ್ಲ. ರಾತ್ರಿ ನಿದ್ರೆಯಲ್ಲಿ ಹುಡುಗಿಯರ ಬಗ್ಗೆ ಕನಸುಗಳು ಬೀಳುತ್ತವೆ. ಹುಡುಗಿಯರ ಹತ್ತಿರ ಮಾತಾಡಬೇಕು ಎನ್ನುವ ಆಸೆ ತುಂಬಾ ಇದೆ. ಆದರೆ ಮಾತನಾಡಲಿಕ್ಕೆ ಭಯವಾಗುತ್ತದೆ. ಒಬ್ಬಳಾದರೂ ಗರ್ಲ್ ಫ್ರೆಂಡ್ ಇದ್ದಿದ್ದರೆ ಉತ್ಸಾಹ ಬರುತ್ತಿತ್ತು. ಏನು ಮಾಡಲಿ, ದಾರಿ ತೋರಿಸಿ, ಸರ್.
-ಗಿರೀಶ್ ಚಿನ್ನಾಪುರ, ಬೆಂಗಳೂರು
ರಾತ್ರಿ ಬೀಳುವ ಕನಸುಗಳಿಗಿಂತಲೂ ಹಗಲಲ್ಲಿ ಸಕಾರಾತ್ಮಕ ಕನಸುಗಳನ್ನು ಕಾಣಬೇಕು ಮತ್ತು ಅವನ್ನು ನನಸು ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಆಗಲೇ ಜೀವನ ಸಾರ್ಥಕವಾಗುತ್ತದೆ. ಪಿಯು ಫೇಲಾಗಿದ್ದರ ಬಗ್ಗೆ ನಿನಗೇನೂ ಅಂಥ ನೋವಿದ್ದ ಹಾಗಿಲ್ಲ. ಅದು ಪರವಾಗಿಲ್ಲ. ಮತ್ತೆ ಓದಿ ಪಾಸಾಗಬಹುದು. ಒಂದು ಸಲವೋ ಎರಡು ಸಲವೋ ಪರೀಕ್ಷೆಯಲ್ಲಿ ನಪಾಸಾದ ಬಹಳಷ್ಟು ಮಂದಿ ಮುಂದೆ ಶ್ರದ್ಧೆಯಿಂದ ಓದಿ, ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಉತ್ತಮ ಜೀವನ ಸಾಗಿಸುತ್ತಿದ್ದಾರೆ.
ಮನಸ್ಸು ವಿಚಲಿತಗೊಂಡಾಗ ಸಹಜವಾಗಿಯೇ ಓದಿದ್ದು ನೆನಪಿರುವುದಿಲ್ಲ. ಓದಿನಲ್ಲಿ ಆಸಕ್ತಿ, ಶ್ರದ್ಧೆ ಇಲ್ಲದಿದ್ದರೂ ಅಷ್ಟೇ. ಪರೀಕ್ಷೆಯಲ್ಲಿ ನಪಾಸಾದೆ ಎನ್ನುವ ಬೇಸರ ಇರಬೇಕು. ಮತ್ತೆ ಓದಿ ಪಾಸಾಗುತ್ತೇನೆ ಎನ್ನುವ ಭರವಸೆಯೂ ಬೇಕು. ಅದಕ್ಕಾಗಿ ಮತ್ತೆ ಓದಿನಲ್ಲಿ ಒಂದಿಷ್ಟು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಒಂದು ದಿನಚರಿಯನ್ನು ಬರೆದುಕೊಳ್ಳಬೇಕು. ಬೆಳಿಗ್ಗೆ ಎಷ್ಟು ಗಂಟೆಗೆ ಏಳಬೇಕು, ನಂತರ ಏನೇನು ಮಾಡಬೇಕು ಎನ್ನುವುದನ್ನು ಬರೆದಿಟ್ಟುಕೊಳ್ಳಬೇಕು. ನಿತ್ಯ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಹೀಗೆ ನೀನು ಕನಿಷ್ಠ ಮೂರು ತಿಂಗಳಾದರೂ ಮಾಡಬೇಕು.
ಬೆಳಿಗ್ಗೆ ಎರಡು ತಾಸು ಹಾಗೂ ಮಧ್ಯಾಹ್ನದ ಮೇಲೆ ಎರಡು ತಾಸು ಓದಿಗೆ ಮೀಸಲಿಡಬೇಕು. ಓದುವಾಗ ಇಪ್ಪತ್ತೈದು ನಿಮಿಷ ಓದಿದ ನಂತರ ಐದು ನಿಮಿಷ ಕಣ್ಣುಮುಚ್ಚಿ ವಿಶ್ರಾಂತಿ ಮಾಡಬೇಕು. ಮತ್ತೆ ಓದನ್ನು ಮುಂದುವರಿಸಬೇಕು. ಒಮ್ಮೆ ಓದಲು ಶುರುಮಾಡಿದ ಮೇಲೆ ಕುಳಿತಲ್ಲಿಂದ ಏಳಬಾರದು. ಎರಡು ತಾಸು ಓದು ಮುಗಿಸಿದ ನಂತರ ಓದಿದ್ದರಲ್ಲಿ ನೆನಪಿರುವಷ್ಟನ್ನು ಬರೆಯಬೇಕು. ಓದುವುದು ಮತ್ತು ಬರೆಯುವುದನ್ನು ಮಾಡುತ್ತಿರಬೇಕು. ಒಂದು ತಿಂಗಳು ಇಷ್ಟು ಮಾಡಿದರೆ ಸಾಕು. ಮುಂದೆ ಓದಿನಲ್ಲಿ ಆಸಕ್ತಿ ಬಂದಿರುತ್ತದೆ, ಓದಿದ್ದೂ ನೆನಪಿರುತ್ತದೆ. ಪರೀಕ್ಷೆಯಲ್ಲೂ ಪಾಸಾಗಬಹುದು.
ಹದಿಹರೆಯದಲ್ಲಿ ಹುಡುಗಿಯರ ಬಗ್ಗೆ ಕನಸು ಬೀಳುವುದು ಕೆಟ್ಟದ್ದೇನಲ್ಲ. ಕನಸಿನಿಂದಾಗಿ ನಿನಗೆ ಸ್ವಪ್ನಸ್ಖಲನವಾದರೆ ಅದಕ್ಕೆ ಹೆದರಿಕೊಳ್ಳಬೇಕಾಗಿಲ್ಲ. ಇದೆಲ್ಲವೂ ಸಹಜ. ಮೊಬೈಲಿನಲ್ಲಿ ನೀನು ಕಾಮಪ್ರಚೋದಕ ರೀಲ್ಸ್, ವಿಡಿಯೊಗಳನ್ನು ನೋಡು ವುದರಿಂದ ತಲೆತುಂಬಾ ಅವೇ ಚಿತ್ರಗಳು, ಧ್ವನಿಗಳು, ದೃಶ್ಯಗಳು ತುಂಬಿರುತ್ತವೆ. ವಯೋಸಹಜ ಕಾಮನೆಗಳು ಮಿತಿಮೀರಿ ನಿನ್ನನ್ನು ಅತಿಕ್ರಮಿಸಿವೆ. ನಿನ್ನ ಸಮಸ್ಯೆಗಳಿಗೆ ಮೊಬೈಲ್ ಫೋನ್ ಮುಖ್ಯ ಕಾರಣವಾಗಿದೆ. ನಮ್ಮ ಅಂಗೈಯೊಳಗಿರುವ ಪುಟ್ಟ ಮೊಬೈಲು ನಮ್ಮನ್ನೇ ಆಳುವಷ್ಟರಮಟ್ಟಿಗೆ ನಾವು ಅದರ ಕೈವಶ ಆಗಬಾರದು. ಅಗತ್ಯವಿದ್ದಷ್ಟು ಉಪಯೋಗವನ್ನು ಮಾತ್ರ ಮಾಡಿ ಕೊಳ್ಳಬೇಕು. ಮೊಬೈಲಿನ ಮಾಯಾಜಾಲದಿಂದ ಎಷ್ಟು ಬೇಗ ತಪ್ಪಿಸಿಕೊಳ್ಳುತ್ತೀಯೊ ಅಷ್ಟು ಬೇಗ ನೀನು ಕಷ್ಟಗಳಿಂದ ಬಚಾವಾಗಬಹುದು. ಸಂತೋಷದಿಂದ ಕೂಡಿದ ಜೀವನಕ್ಕೆ ಶಕ್ತಿಯುತವಾದ ದೇಹ ಹಾಗೂ ಶಾಂತವಾದ ಮನಸ್ಸು ಬಹಳ ಮುಖ್ಯ. ಆತ್ಮವಿಶ್ವಾಸ ಇದ್ದಾಗ ಹುಡುಗಿಯರ ಹತ್ತಿರ ಮಾತನಾಡುವುದು ಕಷ್ಟವಾಗದು.
ಗರ್ಲ್‌ಫ್ರೆಂಡ್ ಇದ್ದರೆ ಉತ್ಸಾಹ ಬರುತ್ತದೆ ಎನ್ನುವ ನಿನ್ನ ಆಲೋಚನೆ ಅಷ್ಟೇನೂ ಸರಿಯಲ್ಲ. ಈ ಬಗ್ಗೆ ಈಗ ತಲೆಕೆಡಿಸಿಕೊಳ್ಳಬೇಡ. ಮೊದಲು ಪರೀಕ್ಷೆಯನ್ನು ಪಾಸು ಮಾಡು. ನಿನಗೆ ಆಸಕ್ತಿ ಇರುವ ವಿಷಯದಲ್ಲಿ ಚೆನ್ನಾಗಿ ಓದಿ ಒಳ್ಳೆಯ ಕೆಲಸವನ್ನು ಗಳಿಸಿಕೊ. ನಿನ್ನ ಕಾಲ ಮೇಲೆ ನೀನು ನಿಂತುಕೊಂಡಾಗ ಸಹಜವಾಗಿ ನಿನಗೆ ಒಳ್ಳೆಯ ಜೀವನಸಂಗಾತಿ ಸಿಗುತ್ತಾಳೆ. ಸುಖವಾದ ಜೀವನವನ್ನು ಅನುಭವಿಸಬಹುದು. ನಾಳೆಯ ಸುಖಕ್ಕೆ ಇವತ್ತಿನ ಕಷ್ಟ, ಶ್ರದ್ಧೆ ಮುಂತಾದವುಗಳೇ ಅಡಿಪಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.