ADVERTISEMENT

ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ–2019

ಪ್ರಭಾಕರ್ ಆರ್.
Published 4 ಡಿಸೆಂಬರ್ 2018, 19:45 IST
Last Updated 4 ಡಿಸೆಂಬರ್ 2018, 19:45 IST
ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌ 2018 ರ ದೃಶ್ಯ
ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌ 2018 ರ ದೃಶ್ಯ   

ಸ್ಪರ್ಧಾತ್ಮಕ ಯುಗದಲ್ಲಿಇಂದಿನ ಮಕ್ಕಳ ಜ್ಞಾನಾರ್ಜನೆಯು ಶಾಲಾ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಬೇಕು. ಅವರ ಜ್ಞಾನಾಭಿವೃದ್ಧಿಗಾಗಿ ರಸಪ್ರಶ್ನೆಯಂಥ ಸ್ಪರ್ಧೆಗಳು ನೆರವಾಗುತ್ತವೆ.

ಸ್ಪರ್ಧಾತ್ಮಕತೆಯನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅವರಲ್ಲಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸುವುದರ ಜತೆಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಹುರಿದುಂಬಿಸುತ್ತದೆ. ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್‌, ಕೆಎಎಸ್‌ ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಉನ್ನತ ಸ್ಥಾನಕ್ಕೆ ಏರಲು ಅವರಿಗೆ ಸ್ಫೂರ್ತಿ ಸಿಗುತ್ತದೆ.

‘ಪ್ರಜಾವಾಣಿ’ ಪ್ರತಿವರ್ಷದಂತೆ ಈ ಬಾರಿಯೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿರುವ ಬೌದ್ಧಿಕ ಪ್ರತಿಭೆಯನ್ನು ಗುರುತಿಸಲು ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್–2019’ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ADVERTISEMENT

5ನೇ ಆವೃತ್ತಿಯ ಈ ರಸಪ್ರಶ್ನೆ ಸ್ಪರ್ಧೆಯು, ಜನವರಿ 8ರಿಂದ 24ರವರೆಗೆ ರಾಜ್ಯದ ಹತ್ತು ವಲಯಗಳಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ 1000ಕ್ಕೂ ಹೆಚ್ಚು ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಹತ್ತು ವಲಯಗಳಲ್ಲಿ ನಡಯಲಿದೆ ಸ್ಪರ್ಧೆ: ಮೈಸೂರು, ಹಾಸನ, ಮಂಗಳೂರು, ಧಾರವಾಡ, ವಿಜಯಪುರ, ಕಲಬುರ್ಗಿ, ರಾಯಚೂರು, ದಾವಣಗೆರೆ, ತುಮಕೂರು ಮತ್ತು ಬೆಂಗಳೂರಿನಲ್ಲಿ ವಲಯಮಟ್ಟದ ಸ್ಪರ್ಧೆಗಳು ನಡೆಯಲಿವೆ.

ಒಂದು ಶಾಲೆಯಿಂದ ಗರಿಷ್ಠ ಮೂರು ತಂಡಗಳು ಭಾಗವಹಿಸಬಹುದಾಗಿದೆ. ಒಂದು ತಂಡದಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಪ್ರತಿ ವಲಯದಿಂದ ಆರು ತಂಡಗಳನ್ನು ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ 10 ತಂಡಗಳು ಅಂತಿಮ ಹಂತಕ್ಕೆ ಪ್ರವೇಶ ಪಡೆಯಲಿವೆ. ಪ್ರತಿ ಸೆಮಿಫೈನಲ್‌ ಸುತ್ತಿನಲ್ಲಿ ಮೊದಲ ಮೂರು ಸ್ಥಾನ ಪಡೆದ ಶಾಲೆಗಳಿಗೆ ‘ದೀಕ್ಷಾ ಶಿಕ್ಷಣ ಸಂಸ್ಥೆ’ ಉಚಿತ ವೃತ್ತಿಜೀವನದ ಅಸೆಸ್ಮೆಂಟ್ ಪರೀಕ್ಷೆಗಳನ್ನು ಆಯೋಜಿಸುತ್ತದೆ.

ಪ್ರವೇಶ ಉಚಿತ

ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದ್ದು, ಭಾಗವಹಿಸಲು ಇಚ್ಛಿಸುವ ತಂಡಗಳು ಕಡ್ಡಾಯವಾಗಿ ತಮ್ಮ ಶಾಲೆಯ ಅನುಮತಿಯನ್ನು ಪಡೆದಿರಬೇಕು. ಸ್ಪರ್ಧೆ ನಡೆಯುವ ದಿನದವರೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ.

ಸಿದ್ಧತೆ ಹೀಗಿರಲಿ

ಶಾಲೆಯ ಪಠ್ಯಪುಸ್ತಕಗಳಲ್ಲಿರುವ ವಿಷಯಗಳು ಮಾತ್ರವಲ್ಲದೇ, ಮಕ್ಕಳು ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಲು ದಿನಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಬರುವ ಪ್ರಚಲಿತ ಘಟನೆಗಳು, ವಿಶೇಷವಾಗಿ ರಾಜಕೀಯ, ಆರ್ಥಿಕತೆ, ಕ್ರೀಡೆಗಳು, ಇತಿಹಾಸ, ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಓದಬೇಕು.

ಬಹು ಆಯ್ಕೆ ಉತ್ತರಗಳಿರುವ ಪ್ರಶ್ನೆಗಳನ್ನು ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇಳಲಾಗುತ್ತದೆ. ಹಿಂದಿನ ಆವೃತ್ತಿಗಳಲ್ಲಿ ಕೇಳಲಾಗಿದ್ದ ಪ್ರಶ್ನೋತ್ತರಗಳು ಪ್ರಜಾವಾಣಿ ವೆಬ್‌ಸೈಟ್‌ನಲ್ಲಿ(www.Prajavani.net) ದೊರೆಯುತ್ತವೆ. ಇದರಿಂದ ಯಾವ ಮಾದರಿಯ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ತಿಳಿಯಬಹುದು.

ದೀಕ್ಷಾ ಶಿಕ್ಷಣ ಸಂಸ್ಥೆ ಪ್ರಸ್ತುತಪಡಿಸುತ್ತರುವ ‘ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್–2019’ ಕಾರ್ಯಕ್ರಮವನ್ನು ಕ್ವಿಜ್ ಮಾಸ್ಟರ್ ಆದ ಮೇಘವಿ ಮಂಜುನಾಥ್ ಅವರು ನಡೆಸಿಕೊಡಲಿದ್ದಾರೆ.

**

ವಿಜೇತರಿಗೆ ಬಹುಮಾನ

ಮೊದಲ ಸ್ಥಾನ – ₹ 50,000

ಎರಡನೇ ಸ್ಥಾನ – ₹ 30,000

ಮೂರನೇ ಸ್ಥಾನ –₹ 10,000

ನಾಲ್ಕನೇ ಸ್ಥಾನ – ₹ 6,000

ಐದನೇ ಸ್ಥಾನ – ₹ 4,000

**

ಹಿಂದಿನ ನಾಲ್ಕು ಆವೃತ್ತಿಗಳ ವಿಜೇತರು

2015– ಮರಿಮಲ್ಲಪ್ಪ ಶಾಲೆ, ಮೈಸೂರು

2016– ಪ್ರೆಸಿಡೆನ್ಸಿ ಸ್ಕೂಲ್, ಬೆಂಗಳೂರು

2017– ಸೇಂಟ್ ಪಾಲ್ಸ್ ಇಂಗ್ಲಿಷ್ ಸ್ಕೂಲ್, ಬೆಂಗಳೂರು

2018– ವಿದ್ಯೋದಯ ಪಬ್ಲಿಕ್ ಶಾಲೆ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.