ADVERTISEMENT

 ಚಿತ್ರಕಲೆಯಲ್ಲಿ ಆಸಕ್ತಿ ಇರುವವರು ಉತ್ಪನ್ನಗಳ ವಿನ್ಯಾಸಕರಾಗಬಹುದು!

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 6:28 IST
Last Updated 20 ಡಿಸೆಂಬರ್ 2019, 6:28 IST
   

ನಿಮಗೆ ಚಿತ್ರಕಲೆಯ ಬಗ್ಗೆ ಹೆಚ್ಚಿನ ಒಲವಿದ್ದರೆ ಆ ಕಲೆಯ ಮೂಲಕ ನೀವು ವಿನ್ಯಾಸಕಾರರಾಗಿ ಕಾರ್ಯ ನಿರ್ವಹಿಸಬಹುದು. ಹೊಸ ಶೈಲಿಯ ಪೀಠೋಪಕರಣಗಳು, ಬ್ಯಾಗ್, ಶೂ, ಬೊಂಬೆಗಳು ಹಾಗೂ ವಿವಿಧ ಪರಿಕರಗಳಿಗೆ ವಿನ್ಯಾಸ ಮಾಡುವ ವಿನ್ಯಾಸಕರಾಗಬಹುದು. ನಿಮ್ಮ ಸೃಜನಶೀಲ ಕಲೆಯ ಮೂಲಕ ಹೊಸ ಉತ್ಪನ್ನಗಳಿಂದ ಗ್ರಾಹಕರನ್ನು ಸೆಳೆದು ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು.

ಕೌಶಲಗಳು

ಕಂಪ್ಯೂಟರ್ ಜ್ಞಾನ l ಆಕರ್ಷಕ ವಿನ್ಯಾಸದ ಕಲೆ

ADVERTISEMENT

ಗ್ರಾಹಕರ ಅಭಿರುಚಿಗಳು l ಬಣ್ಣಗಳ ಆಯ್ಕೆ

ಗುಣಮಟ್ಟದ ವಸ್ತುಗಳ ಆಯ್ಕೆ l ಮಾರುಕಟ್ಟೆ ಜ್ಞಾನ
ವ್ಯವಹಾರ ಜ್ಞಾನ l ತಂತ್ರಜ್ಞಾನದ ಅರಿವು

ಅರ್ಹತೆಗಳು

ವಿನ್ಯಾಸಕಾರರಾಗಲು ಅಲ್ಪಾವಧಿ ಕೋರ್ಸ್‌ಗಳು, ಒಂದು ವರ್ಷದ ಡಿಪ್ಲೋಮಾ ಅಥವಾ ಪದವಿ ಪಡೆಯಬಹುದು. ಅದು ನೀವು ಆಯ್ಕೆ ಮಾಡಿಕೊಳ್ಳುವ ಡಿಸೈನಿಂಗ್ ಕೋರ್ಸ್‌ ಮೇಲೆ ನಿರ್ಧಾರವಾಗುತ್ತದೆ. ವಿನ್ಯಾಸದ ಕಲಿಕೆಗಾಗಿ ಸಾಕಷ್ಟು ತರಬೇತಿ ನೀಡುವ ಇನ್‌ಸ್ಟಿಟ್ಯೂಟ್‌ಗಳಿವೆ. ಈ ಕೋರ್ಸ್‌ ಮಾಡಲು ಇಂತಹದೇ ಪದವಿ ಪಡೆದಿರಬೇಕು ಎಂಬ ಯಾವುದೇ ನಿಯಮಗಳಿಲ್ಲ. ನಿಮ್ಮಲ್ಲಿರುವ ಸೃಜನಶೀಲ ಕಲೆಯನ್ನು ಹೆಚ್ಚಿಸಿಕೊಂಡು ಡಿಸೈನರ್ ಆಗಬಹುದು.

ವಿನ್ಯಾಸದ ಬಗ್ಗೆ ಕೋರ್ಸ್‌ಗಳನ್ನು ಪಡೆಯಲೇಬೇಕು ಎಂಬ ನಿಯಮವಿಲ್ಲ. ಅದು ನಿಮ್ಮ ಆಸಕ್ತಿ ಹಾಗೂ ನಿಮ್ಮಲ್ಲಿರುವ ಜಾಣತನದ ಮೇಲೆ ಅವಲಂಬಿತವಾಗಿರುತ್ತದೆ. ಸಂಬಳ ಪಡೆಯುತ್ತ ಪ್ರಾಯೋಗಿಕವಾಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಬಹುದು. ಕಲಿಕೆ ಹಾಗೂ ನಿಮ್ಮ ವಿನ್ಯಾಸದ ಮೇಲೆ ನಿಮ್ಮ ಮುಂದಿನ ಸ್ಥಾನ ಬದಲಾಗುತ್ತಾ ಹೋಗುತ್ತದೆ. ಅದರ ಆಧಾರದ ಮೇಲೆ ನಿಮ್ಮ ಸಂಭಾವನೆಯೂ ನಿರ್ಧಾರವಾಗುತ್ತದೆ. ವಿನ್ಯಾಸಕರಾಗಿ ಹೀಗೇ ಕೆಲಸ ಮಾಡಬೇಕೆಂದಿಲ್ಲ. ನಿಮ್ಮಲ್ಲಿರುವ ಕೌಶಲದ ಆಧಾರದ ಮೇಲೆ ಕಂಪನಿಗಳ ನಡುವೆ ಒಪ್ಪಂದ ಮಾಡಿಕೊಂಡು ಕೆಲಸ ಮಾಡಬಹುದು. ಇಲ್ಲವೆ ಗುತ್ತಿಗೆ ಮೂಲಕವೂ ಕಾರ್ಯ ನಿರ್ವಹಿಸಬಹುದು.

ಹೊಸದಾಗಿ ವೃತ್ತಿ ಆರಂಭಿಸುವವರು ಅಥವಾ ಸ್ವತಃ ಉತ್ಪನ್ನಗಳ ಕಂಪನಿ ಆರಂಭಿಸುವವರು ಈ ಕೌಶಲಗಳನ್ನು ಕರಗತ ಮಾಡಿಕೊಂಡಿರಬೇಕು. ಜೊತೆಗೆ ಬೇರೆ ಬೇರೆ ವಿನ್ಯಾಸಗಳನ್ನು ಗಮನಿಸುತ್ತಿರಬೇಕು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಹೊಸ ಹೊಸ ಆಕರ್ಷಕ ವಿನ್ಯಾಸಗಳನ್ನು ತಯಾರಿಸುವ ಮೂಲಕ ಗ್ರಾಹಕರನ್ನು ಸೆಳೆದು ಉತ್ಪನ್ನಗಳನ್ನು ಪರಿಚಯಿಸಿ ಮಾರುಕಟ್ಟೆ ಸೃಷ್ಟಿಸಬಹುದು.

ಗ್ರಾಹಕರ ಕೈಗೆಟಕುವ ಬೆಲೆಗೆ ಉತ್ಪನ್ನಗಳನ್ನು ತಯಾರಿಸುವುದು ಬಹಳ ಮುಖ್ಯ. ವಸ್ತು ಹಾಗೂ ಅವುಗಳ ಬಾಳಿಕೆ, ಗುಣಮಟ್ಟದ ಆಧಾರದ ಮೇಲೆ ಬೆಲೆ ನಿರ್ಧಾರವಾಗುವುದರಿಂದ ಅವುಗಳನ್ನು ಗಮನದಲ್ಲಿಟ್ಟುಕೊಂಡು ಪರಿಕರಗಳನ್ನು ತಯಾರಿಸುವುದು ಸೂಕ್ತ. ಹೆಚ್ಚಾಗಿ ಗ್ರಾಹಕರು ಗುಣಮಟ್ಟ ಹಾಗೂ ವಿನ್ಯಾಸ ಗಮನಿಸುವುದರಿಂದ ಇವುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿನ್ಯಾಸಕ ಪರಿಕರಗಳನ್ನು ತಯಾರಿಸಬೇಕಾಗುತ್ತದೆ.

ಈ ವ್ಯವಹಾರಗಳು ಹೆಚ್ಚು ಗ್ರಾಹಕರ ಮೇಲೆ ಅವಲಂಬನೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ವಿನ್ಯಾಸ ಹಾಗೂ ಬೆಲೆಗಳ ಮೇಲೆ ಸ್ಪರ್ಧೆ ಹೆಚ್ಚಿರುತ್ತದೆ. ಉತ್ಪನ್ನಗಳನ್ನು ಗ್ರಾಹಕರಿಗೆ ಹೇಗೆ ಪೂರೈಸಬೇಕು ಹಾಗೂ ಡಿಜಿಟಲ್‌ ಮಾರುಕಟ್ಟೆ ಹೇಗೆ ಸೃಷ್ಟಿಸಿಕೊಳ್ಳಬೇಕು ಎಂಬುದು ವಿನ್ಯಾಸಕರಿಗೆ ತಿಳಿದಿರಬೇಕು.

ಸಂವಹನ ಕಲೆ

ಸಂವಹನ ಎಂಬುದು ಈ ವ್ಯವಹಾರದಲ್ಲಿ ಬಹಳ ಮುಖ್ಯ. ಉತ್ಪನ್ನಗಳನ್ನು ಪರಿಚಯಿಸಲು, ಹೊಸ ವಿನ್ಯಾಸದ ಹಾಗೂ ಆ ವಸ್ತುವಿನ ಗುಣಮಟ್ಟ ತಿಳಿಸಲು ಗ್ರಾಹಕರೊಂದಿಗೆ ಮತ್ತು ವಿವಿಧ ಕಂಪನಿಗಳಿಗೆ ಪರಿಕರಗಳನ್ನು ಪರಿಚಯಿಸಲು ಮಾತುಕತೆ ನಡೆಸಲು ಸಂವಹನ ಕೌಶಲ ಅಗತ್ಯ. ಬಹುಭಾಷೆ ತಿಳಿದಿದ್ದರೆ ಹೆಚ್ಚು ಅನುಕೂಲ.

ವಿನ್ಯಾಸಕರು ಸಂದರ್ಭಕ್ಕೆ ಅನುಗುಣವಾಗಿ ಪ್ರಸ್ತುತತೆಗೆ ತಕ್ಕಂತೆ ವಿನ್ಯಾಸಗೊಳಿಸುವುದು ಬಹಳ ಮುಖ್ಯ. ದಿನ ಕಳೆದಂತೆ ಟ್ರೆಂಡ್‌ಗಳು ಬದಲಾಗುವ ಕಾರಣ ಗ್ರಾಹಕರ ಅಭಿರುಚಿಗಳು ಕೂಡ ಬದಲಾಗುತ್ತವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ವಿನ್ಯಾಸ ಮಾಡುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.