ADVERTISEMENT

ಪರೀಕ್ಷಾ ಯಶಸ್ಸಿಗೆ ಸ್ವಮೌಲ್ಯಮಾಪನ

ಆರ್.ಬಿ.ಗುರುಬಸವರಾಜ
Published 5 ಮೇ 2021, 19:30 IST
Last Updated 5 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವುದೇ ಓದು ಇರಲಿ, ಕಲಿಕೆಯಿರಲಿ, ಅದು ಪರಿಣಾಮಕಾರಿಯಾದಾಗ ಮಾತ್ರ ನಿರೀಕ್ಷಿತ ಫಲ ದೊರಕುತ್ತದೆ. ಈ ಓದಿನ ಫಲಶೃತಿಯನ್ನು ಅರಿಯಲು ಹಲವಾರು ವಿಧಾನಗಳಿವೆ. ಫಲಶೃತಿ ಅರಿಯುವ ಒಂದು ವಿಧಾನವೆಂದರೆ ಅದು ಮೌಲ್ಯಮಾಪನ. ಈ ಮೌಲ್ಯಮಾಪನವನ್ನುಕಲಿಕಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಯಾದರೆ ಸ್ಪರ್ಧಾರ್ಥಿಗಳು ಮಾಡಿಕೊಳ್ಳುವ ವಿಧಾನವೂ ಜನಪ್ರಿಯ. ಅದೇ ಸ್ವಮೌಲ್ಯಮಾಪನ.

ಸಾಮಾನ್ಯವಾಗಿ ಮೌಲ್ಯಮಾಪನ ಎಂಬ ಪದವನ್ನು ಪರೀಕ್ಷೆ ಎಂಬ ಪದಕ್ಕೆ ಸಂವಾದಿಯಾಗಿ ಬಳಸುತ್ತಾರೆ. ಆದರೆ ಪರೀಕ್ಷೆಯು ಸೀಮಿತ ವ್ಯಾಪ್ತಿ ಹೊಂದಿದ್ದರೆ ಮೌಲ್ಯಮಾಪನವು ವಿಶಾಲವಾದ ವ್ಯಾಪ್ತಿ ಹೊಂದಿದೆ. ಸ್ಪರ್ಧಾರ್ಥಿಗಳ ಕ್ರಿಯಾತ್ಮಕ, ಭಾವನಾತ್ಮಕ ಹಾಗೂ ಜ್ಞಾನಾತ್ಮಕ ವಲಯಗಳನ್ನು ತಿಳಿಯುವುದೇ ಮೌಲ್ಯಮಾಪನದ ವ್ಯಾಪಕ ಅರ್ಥವಾಗಿದೆ.

ಸ್ವಮೌಲ್ಯಮಾಪನವು ಸ್ಪರ್ಧಾರ್ಥಿಗಳ ದೌರ್ಬಲ್ಯ ಮತ್ತು ಸಾಮರ್ಥ್ಯವನ್ನು ನಿರ್ಣಯಿಸುವ ಪ್ರಮುಖ ಅಂಶವಾಗಿದೆ. ಇದು ಅವರ ಕಲಿಕಾ ವಿಧಾನ ಹಾಗೂ ವೇಗಕ್ಕೆ ಅನುಗುಣವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿ ಸ್ಪರ್ಧಾರ್ಥಿ ಮತ್ತು ಮೌಲ್ಯಮಾಪಕ ಇಬ್ಬರೂ ಒಬ್ಬರೇ ಆಗಿರುವುದರಿಂದ ಓದು ಹೆಚ್ಚು ಸಬಲಗೊಳ್ಳಲು ಅವಕಾಶ ದೊರೆಯುತ್ತದೆ.

ADVERTISEMENT

ಸ್ವಮೌಲ್ಯಮಾಪನದ ಪ್ರಯೋಜನಗಳು

ಅರಿವಿನ ಕೌಶಲಗಳನ್ನು ಹೆಚ್ಚಿಸುವ ಮೂಲಕ ಸಾಮರ್ಥ್ಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಅಭ್ಯಾಸದ ಪ್ರತಿಫಲನದ ಮಟ್ಟವನ್ನು ತಿಳಿಸುತ್ತದೆ ಮತ್ತು ಹೊಸ ಜ್ಞಾನಕ್ಕೆ ದಾರಿ ತೋರುತ್ತದೆ.

ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಅಭ್ಯಾಸದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ವಿಮರ್ಶಾತ್ಮಕ ಓದಿನ ಕೌಶಲವನ್ನು ವೃದ್ಧಿಸುತ್ತದೆ.

ರಚನಾತ್ಮಕ ಕಲಿಕಾ ಅನುಭವಗಳನ್ನು ನೀಡುತ್ತದೆ.

ಓದಿನ ಶೈಲಿಯ ಮೇಲೆ ಹಿಡಿತ ಸಾಧಿಸಲು ನೆರವಾಗುತ್ತದೆ.

ಸ್ವತಂತ್ರ ಅಧ್ಯಯನಕ್ಕೆ ಮಾರ್ಗದರ್ಶಿಯಾಗಿದ್ದು, ಕಲಿಕೆಯನ್ನು ಉತ್ಕೃಷ್ಟಗೊಳಿಸುತ್ತದೆ.

ಕಲಿಕಾ ಮಾಧ್ಯಮಗಳ ಆಯ್ಕೆಯಲ್ಲಿನ ಗೊಂದಲಗಳನ್ನು ನಿವಾರಿಸುತ್ತದೆ.

ನಿಜವಾದ ಗ್ರಹಿಕೆಯ ಒಳನೋಟವನ್ನು ನೀಡುತ್ತದೆ ಮತ್ತು ಪರಸ್ಪರ ಜ್ಞಾನದಲ್ಲಿನ ಅಂತರ ಗುರುತಿಸಲು ಸಹಾಯ ಮಾಡುತ್ತದೆ.

ಇದು ಸ್ಪರ್ಧಾರ್ಥಿಗಳ ಎಚ್ಚರಿಕೆ ಗಂಟೆಯಾಗಿದೆ. ಸುಧಾರಣೆ ಅಗತ್ಯವಿರುವ ಕ್ಷೇತ್ರಗಳ ಬಗ್ಗೆ ನಿಖರ ಮಾಹಿತಿ ನೀಡುತ್ತದೆ.

ಸ್ಪರ್ಧಾರ್ಥಿ ಕೇಂದ್ರಿತ ಕಲಿಕೆಯನ್ನು ಉತ್ತೇಜಿಸುವ ಮೂಲಕ ಅವರ ಗುರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಲು ನೆರವಾಗುತ್ತದೆ.

ನ್ಯಾಯಸಮ್ಮತವಾದ ಸ್ವಯಂ ತೀರ್ಮಾನ ಕೌಶಲವನ್ನು ಬೆಳೆಸುತ್ತದೆ.

ಸ್ವಮೌಲ್ಯಮಾಪನ ಹೇಗೆ?

ಸ್ವಮೌಲ್ಯಮಾಪನ ನಿಜಕ್ಕೂ ಅದ್ಭುತವಾದ ಮಾನದಂಡ. ಇದನ್ನು ಅಳವಡಿಸಿಕೊಳ್ಳುವುದು ಒಂದಿಷ್ಟು ಸಂಕೀರ್ಣ ಕಾರ್ಯ. ಆದರೂ ಕೆಲವು ತಂತ್ರಗಾರಿಕೆಯ ಮೂಲಕ ಇದನ್ನು ಅಳವಡಿಸಿಕೊಳ್ಳಬಹುದು.

ಪರಿಕಲ್ಪನೆ/ಸಾಮರ್ಥ್ಯ ಆಯ್ಕೆ: ಸ್ವಮೌಲ್ಯಮಾಪನಕ್ಕೆ ತೊಡಗುವ ಮೊದಲು ಮೌಲ್ಯಮಾಪನಕ್ಕೆ ಒಳಪಡುವ ಪರಿಕಲ್ಪನೆ/ ಸಾಮರ್ಥ್ಯವನ್ನು ನಿರ್ಧರಿಸಿಕೊಳ್ಳಬೇಕು. ನಂತರ ನಿಮ್ಮ ಮೌಲ್ಯಮಾಪನದ ಮಾಧ್ಯಮ ಆಯ್ಕೆ ಮಾಡಿಕೊಳ್ಳಿ. ಅದು ಡಿಜಿಟಲ್ ಅಥವಾ ಮ್ಯಾನುವಲ್ ಮಾಧ್ಯಮವಾಗಿರಬಹುದು.

ಕಠಿಣತೆಯ ಮಟ್ಟವನ್ನು ನಿರ್ಧರಿಸಿ: ನಿಮ್ಮ ಮೌಲ್ಯಮಾಪನದಲ್ಲಿನ ಪ್ರಶ್ನೆಗಳ ಕಠಿಣತೆಯ ಮಟ್ಟವನ್ನು ನಿರ್ಧರಿಸಿ. ಇದು ನಿಮ್ಮ ಓದಿನ ವೇಗ ಮತ್ತು ಕಲಿಕೆಯ ಆಯಾಮಗಳನ್ನು ಆಧರಿಸಿರಲಿ. ನಿಮ್ಮ ಓದಿನ ಮಟ್ಟ ಉನ್ನತವಾಗಿದ್ದರೆ ಮೌಲ್ಯಮಾಪನ ಕಠಿಣತೆಯಿಂದ ಕೂಡಿರಲಿ. ಪ್ರಶ್ನೆಗಳ ಕಠಿಣತೆಯ ಮಟ್ಟ ಆರೋಹಣ ಕ್ರಮದಲ್ಲಿರಲಿ.

ಮಾನದಂಡಗಳು ನಿರ್ದಿಷ್ಟವಾಗಿರಲಿ: ನಿಮ್ಮ ಮೌಲ್ಯಮಾಪನ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾನದಂಡಗಳನ್ನು ನೀವೇ ರೂಪಿಸಿಕೊಳ್ಳಿ. ಪ್ರತಿಯೊಂದು ಸಾಮರ್ಥ್ಯಕ್ಕೂ ಕನಿಷ್ಠ ಐದು ಡೊಮೇನ್‌ಗಳನ್ನು ನಿರ್ಧರಿಸಿಕೊಳ್ಳಿ.

ಪ್ರಶ್ನಾವಳಿ: ನೀವು ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳುವ ಸಾಮರ್ಥ್ಯ/ ಪರಿಕಲ್ಪನೆ ಆಧರಿಸಿ ಪ್ರಶ್ನಾವಳಿಗಳನ್ನು ರೂಪಿಸಿಕೊಳ್ಳಿ. ಎಲ್ಲಾ ಆಯಾಮಗಳಿಂದಲೂ ಪ್ರಶ್ನೆಗಳು ರೂಪಿತವಾಗಿರಲಿ.

ಪ್ರಾಮಾಣಿಕವಾಗಿ ಉತ್ತರಿಸಿ: ನೆನಪಿಡಿ. ಸ್ವಮೌಲ್ಯಮಾಪನ ಇರುವುದು ನಿಮ್ಮನ್ನು ನೀವು ಉತ್ತಮಪಡಿಸಿಕೊಳ್ಳಲು. ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಾಮಾಣಿಕವಾಗಿರಿ. ಯಾವುದೇ ಪೂರ್ವಗ್ರಹಗಳಿಗೆ ಒಳಗಾಗದೇ ನಿರ್ದಿಷ್ಟವಾಗಿ ಉತ್ತರಿಸಿ. ನಿಮ್ಮ ಸಾಧನೆಯ ಅಳತೆ ಯಾವುದೇ ಪ್ರಚಾರಕ್ಕೆ ಅಥವಾ ಉತ್ಪ್ರೇಕ್ಷೆ ಮಾಡಲು ಅಲ್ಲ ಎಂಬುದು ನೆನಪಿರಲಿ. ನಿಗದಿತ ಸಮಯದಲ್ಲಿ ಪ್ರಾಮಾಣಿಕವಾಗಿ ಉತ್ತರಿಸಿ.

ಎದುರಿಸಿದ ನಿದರ್ಶನಗಳನ್ನು ಉಲ್ಲೇಖಿಸಿ: ಸ್ವಮೌಲ್ಯಮಾಪನದ ವೇಳೆ ನೀವು ಎದುರಿಸಿದ ಸಮಸ್ಯೆಗಳು ಹಾಗೂ ತೊಂದರೆಗಳ ಬಗ್ಗೆ ನಿದರ್ಶನಗಳೊಂದಿಗೆ ಉಲ್ಲೇಖ ಮಾಡಿಕೊಳ್ಳಿ. ಇದು ನಿಮ್ಮ ದೌರ್ಬಲ್ಯಗಳನ್ನು ತೊಡೆದು ಹಾಕಲು ಮತ್ತು ಹೊಸ ಅವಕಾಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ವಿಶ್ಲೇಷಣೆ ಸಮರ್ಪಕವಾಗಿರಲಿ: ಮೌಲ್ಯಮಾಪನದ ನಂತರ ಫಲಿತಾಂಶ ವಿಶ್ಲೇಷಣೆಯು ನಿಖರವಾಗಿರಲಿ ಮತ್ತು ಸ್ಪಷ್ಟವಾಗಿರಲಿ. ನಿಮ್ಮ ಕಲಿಕೆಯ ಮಟ್ಟ ಯಾವ ಹಂತದಲ್ಲಿದೆ ಎಂಬುದನ್ನು ಮತ್ತು ಅದಕ್ಕೆ ಬೇಕಾದ ಸಹಾಯದ ಬಗ್ಗೆ ತಿಳಿಯಲು ವಿಶ್ಲೇಷಣೆ ತುಂಬಾ ಅಗತ್ಯ.

ನ್ಯೂನ್ಯತೆಗಳನ್ನು ಸರಿಪಡಿಸಿ: ಸ್ವಮೌಲ್ಯಮಾಪನದ ವೇಳೆ ನಿಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಿ. ಅಂದರೆ ನಿಮ್ಮ ಗುರಿ ತಲುಪಲು ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಿ.

ಸಮಯದ ನಿರ್ಧಾರ ಇರಲಿ

ನೀವು ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳುವ ಸಾಮರ್ಥ್ಯದ ಆಧಾರದ ಮೇಲೆ ಸಮಯ ನಿರ್ಧರಿಸಿ. ಮೌಲ್ಯಮಾಪನದ ಪ್ರತಿಯೊಂದು ಹಂತಕ್ಕೂ ಸಮಯ ಮೀಸಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.