ADVERTISEMENT

ಮನೆಪಾಠಕ್ಕೆ ಇಲ್ಲಿ ಅವಕಾಶವಿಲ್ಲ: ಶಾಲೆಯಲ್ಲೂ ಎಐಸಿಯು

ಎಸ್.ರಶ್ಮಿ
Published 21 ನವೆಂಬರ್ 2018, 3:51 IST
Last Updated 21 ನವೆಂಬರ್ 2018, 3:51 IST
ಶಾಲೆಯಲ್ಲೂ ಎಐಸಿಯು
ಶಾಲೆಯಲ್ಲೂ ಎಐಸಿಯು   

ಒಂದು ದೊಡ್ಡ ಹಾಲು, ಐದರಿಂದ ಆರು ಜನ ವಿದ್ಯಾರ್ಥಿಗಳು ಒಬ್ಬರು ಶಿಕ್ಷಕರನ್ನು ಸುತ್ತುವರಿದಿದ್ದಾರೆ. ಹಲವರು ಕನ್ನಡ ಕಲಿಯುತ್ತಿದ್ದಾರೆ. ಇನ್ನೂ ಕೆಲವರು ಗಣಿತವನ್ನು ಕಲಿಯುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗೂ ಒಂದೊಂದು ಅಸೆಸ್ಮೆಂಟ್‌ ಫಾರ್ಮ್‌ ಇದೆ. ಅಂದು ಅವೊತ್ತು ಏನು ಕಲಿತರು ಎಂಬುದನ್ನು ಅದರಲ್ಲಿ ದಾಖಲಿಸಲಾಗುತ್ತದೆ. ಯಾವತ್ತು ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತಾರೋ ಅಂದು ಅವರಿಗೆ ಮುಖ್ಯವಾಹಿನಿಯ ತರಗತಿಗೆ ಕೂರಿಸಲಾಗುತ್ತದೆ.

ಇದು ಎಐಸಿಯು ವ್ಯವಸ್ಥೆ. ಆಸ್ಪತ್ರೆಗಳಲ್ಲಿ ಇರುವ ಐಸಿಯು ಗೊತ್ತು, ಇದೇನಿದು ಶಾಲೆಗಳಲ್ಲಿ ಎಐಸಿಯು ಅಂದಿರಾ? ಇದನ್ನು ಆರಂಭಿಸಿರುವಬೀದರ್‌ನಶಾಹೀನ್‌ ಶೈಕ್ಷಣಿಕ ಸಂಸ್ಥೆಗಳ ಸಮೂಹದ ಕಾರ್ಯದರ್ಶಿ ಅಬ್ದುಲ್‌ ಖದೀರ್‌ ಅವರ ಮಾತಿನಲ್ಲಿಯೇ ಕೇಳಿ.

‘ನಮ್ಮಲ್ಲಿ ಮನೆಪಾಠಗಳಿಗೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ವಿದ್ಯಾರ್ಥಿಗಳಿಗೂ ಪಾಲಕರಿಗೂ ಸೂಚಿಸಿದೆವು. ಅವರಲ್ಲಿ ಸಾಕಷ್ಟು ಗೊಂದಲಗಳಿದ್ದವು. ತರಗತಿಯಲ್ಲಿ ಕಲಿಯಲಾಗದಿದ್ದರೆ, ಮನವರಿಕೆ ಮಾಡಿಕೊಡಲಾಗದಿದ್ದರೆ. ಅವರ ರಗಳೆಗಳೆಲ್ಲವೂ ನಮ್ಮ ಶಿಕ್ಷಕರ ಸಾಮರ್ಥ್ಯವನ್ನು ಪ್ರಶ್ನಿಸುವಂತಿದ್ದವು. ಶಿಕ್ಷಣ ಸಂಸ್ಥೆಯ ಶಿಕ್ಷಕ ಶಿಕ್ಷಕಿಯರಿಗೂ ಇದು ಅವಮಾನದ ವಿಷಯವೆನಿಸಿತು. ಆಗಲೇ ಐಸಿಯುನಂತಹ ವ್ಯವಸ್ಥೆ ಆರಂಭಿಸಬೇಕು. ಮಕ್ಕಳಿಗೆ ಯಾವ ವಿಷಯ ಕಠಿಣವೆನಿಸುತ್ತದೆಯೋ ಅದಕ್ಕಾಗಿ ಮದ್ದು ನೀಡಬೇಕು ಎಂದುಕೊಂಡೆವು. ಅದರಂತೆ ಪ್ರತಿ ಐದಾರು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ವಿಶೇಷ ಪಾಠಗಳನ್ನು ನೀಡಲು ಸಜ್ಜಾದರು.

ADVERTISEMENT

ಇದೆಲ್ಲ ನಾಲ್ಕಾರು ವರ್ಷಗಳ ಹಿಂದಿನ ಮಾತು. ಇದೀಗ ಎಐಸಿಯುನಿಂದ ಲಾಭ ‍ಪಡೆದ ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನಮ್ಮಲ್ಲಿ ಕೇವಲ ಅಕ್ಷರ ಹಾಗೂ ಅಂಕಗಳನ್ನಲ್ಲ, ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುತ್ತೇವೆ. ಈ ಕಾರಣದಿಂದಾಗಿಯೇ ಒಂದೇ ಕುಟುಂಬದಲ್ಲಿ ಇಬ್ಬರಿಗಿಂತ ಹೆಚ್ಚು ವೈದ್ಯರು, ಉನ್ನತ ಅಧ್ಯಯನ ಮಾಡುತ್ತಿರುವ ಮಕ್ಕಳು ಕಾಣಿಸಿಕೊಳ್ಳುತ್ತಾರೆ. ಇಂಥ ಅನೇಕ ಉದಾಹರಣೆಗಳು ನಮ್ಮಲ್ಲಿವೆ.

ಮೆಕ್ಯಾನಿಕ್‌ ಅಂಗಡಿಯಲ್ಲಿದ್ದವ ಈಗ ಆಡಳಿತಾಧಿಕಾರಿ: ನಾವಿಬ್ಬರೂ ಸಹೋದರರು ಪಿಯುಸಿ ಕಲಾ ವಿಭಾಗದಲ್ಲಿ ಫೇಲಾಗಿದ್ದೆವು, ಹೀಗೆಂದಾಗ ಹುಬ್ಬೇರಿಸುವಂತಾಗಿತ್ತು. ಇದೀಗ ಒಬ್ಬರು ಎಂಎಸ್ಸಿ ಗಣಿತ, ಇನ್ನೊಬ್ಬರು ತೋಟಗಾರಿಕೆ ಇಲಾಖೆಯಲ್ಲಿ ಅಧಿಕಾರಿ. ಅವರದ್ದೂ ಎರಡು ಎಂಎಸ್ಸಿ ಹಾಗೂ ಪಿಎಚ್‌ಡಿಯಾಗಿದೆ. ಮೆಕ್ಯಾನಿಕ್‌ ಅಂಗಡಿಯಲ್ಲಿ ದುಡಿಯುತ್ತಿದ್ದೆ. ಓದು ತಲೆಗೆ ಹತ್ತುವುದೇ ಇಲ್ಲ ಎಂಬ ನಂಬಿಕೆ ಇತ್ತು. ಆದರೆ ಶಾಹೀನ್‌ ಸಂಸ್ಥೆಗೆ ಬಂದ ನಂತರ ವಿಶೇಷ ಕಾಳಜಿ ಹಾಗೂ ಪಾಠಗಳು ನಮ್ಮ ಜೀವನವನ್ನೇ ಬದಲಿಸಿತು. ಬೇರೆ ಕೆಲಸ ಸಿಗಬಹುದಾಗಿತ್ತು. ಆದರೆ ನನ್ನಂತೆಯೇ ಬರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿಸಲು, ಪ್ರೋತ್ಸಾಹಿಸಲು ಇದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದಾಗಿ ಹೇಳಿದೆ. ಇಲ್ಲಿಯೇ ಆಡಳಿತಾಧಿಕಾರಿಯಾಗಿದ್ದೇನೆ ಎನ್ನುತ್ತಾರೆ ಅವರು.

‘ಐಸಿಯು ತುರ್ತು ಚಿಕಿತ್ಸೆಗಾಗಿ. ಇಲ್ಲಿ ಸೌಂದರ್ಯವರ್ಧಕ ಚಿಕಿತ್ಸೆಗೆ ಆಸ್ಪದವಿರುವುದಿಲ್ಲ. ನಮ್ಮಲ್ಲಿಯೂ ಹಾಗೆಯೇ ಸಮಸ್ಯೆಯ ಮೂಲಕ್ಕೆ ಪರಿಹಾರ ನೀಡುತ್ತೇವೆ. ಅಂಕ ಅಕ್ಷರಗಳಿಂದಲ್ಲ. ಹೀಗಾಗಿ ಇದಕ್ಕೆ ಅಕಾಡೆಮಿಕ್‌ ಐಸಿಯು ಅಂತ ಹೆಸರಿಸಿದ್ದೇವೆ. ನಮ್ಮಲ್ಲಿಯ ಫಲಿತಾಂಶವೂ ಉತ್ತಮವಾಗಿದೆ. ಕಳೆದ ವರ್ಷ 304 ಜನ ವೈದ್ಯಕೀಯ ಸೀಟು ಗಳಿಸಿದ್ದಾರೆ. ನೀಟ್‌ಗಾಗಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನೀಟ್‌ ರಿಪೀಟರ್ಸ್‌ ಸಹ ಬಂದು ಸೇರಿದ್ದಾರೆ. ಎಐಸಿಯು ವ್ಯವಸ್ಥೆ ಎಲ್ಲ ವರ್ಗದ ಮಕ್ಕಳಿಗೆ ಮಾಡಲಾಗಿದೆ’ ಎನ್ನುತ್ತಾರೆ ಅಬ್ದುಲ್‌ ಖದೀರ್.

**

ಡ್ರಾಪೌಟ್ಸ್‌ಗಾಗಿ ವಿಶೇಷ ವಸತಿ ಸೌಲಭ್ಯ

ಬಿಹಾರ್‌, ಉತ್ತರಪ್ರದೇಶ, ಹರಿಯಾಣ ಹಾಗೂ ದೇಶದ ಇತರ ಭಾಗಗಳಿಂದ ಮದರಸಾದಲ್ಲಿ ಓದಿರುವ ಮಕ್ಕಳು, ಓದನ್ನು ಮೊಟಕುಗೊಳಿಸಿದ ಮಕ್ಕಳು ಇಲ್ಲಿ ವಸತಿವ್ಯವಸ್ಥೆಯಲ್ಲಿದ್ದುಕೊಂಡು ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ರಾಜ್ಯದ ಪಠ್ಯಕ್ರಮವಿರುವುದರಿಂದ ಅವರೆಲ್ಲ ಕಡ್ಡಾಯವಾಗಿ ಕನ್ನಡ ಕಲಿಯುತ್ತಿದ್ದಾರೆ. ಪತ್ರಲೇಖನ, ಪ್ರಬಂಧ–ಲೇಖನವನ್ನು ರಚಿಸುವಷ್ಟು ಪ್ರಬುದ್ಧವಾಗಿ ಕನ್ನಡ ಕಲಿಯುತ್ತಾರೆ. ಈ ವ್ಯವಸ್ಥೆಗೆ ನಾರಾಯಣ ಹೃದಯಾಲಯದ ವೈದ್ಯರಾದ ಡಾ. ದೇವಿಶೆಟ್ಟಿ ಅವರು ಆರ್ಥಿಕ ಸಹಾಯ ನೀಡುತ್ತಿದ್ದಾರೆ. ಹಲವಾರು ಜನರು ದೇಣಿಗೆ ನೀಡುತ್ತಿದ್ದಾರೆ. ಈ ಮಕ್ಕಳೆಲ್ಲ ಉತ್ತಮ ಫಲಿತಾಂಶ ಪಡೆದು ಒಳ್ಳೆಯ ನಾಗರಿಕರಾಗುತ್ತಿದ್ದಾರೆ.

ಬಡಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ, ವಸತಿ, ಊಟದ ಸೌಲಭ್ಯವನ್ನು ನೀಡಲಾಗುತ್ತಿದೆ.

**

ಶಿಕ್ಷಣಸಂಸ್ಥೆಗಾಗಿ ಮನೆ ಮಾರಾಟ

ಶಾಲೆ ಆರಂಭಿಸುವಾಗ ಬಂಡವಾಳ ಇರಲಿಲ್ಲ. ಮನೆ ಮಾರಾಟ ಮಾಡಿದೆ. ಒಂದು ತರಗತಿಯ, 17 ವಿದ್ಯಾರ್ಥಿಗಳಿಂದ ಈ ಶಾಲೆ ಆರಂಭವಾಗಿತ್ತು. ಇದೀಗ 12 ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಅವರಿಗಾಗಿ ಎರಡು ಪ್ರತ್ಯೇಕ ಕಟ್ಟಡಗಳಿವೆ. ಈವರೆಗೂ ಮನೆ ಕಟ್ಟಿಸಲಾಗಿಲ್ಲ. ಬಾಡಿಗೆ ಮನೆಯಲ್ಲಿಯೇ ಇದ್ದೆವು. ಇದೀಗ ಶಾಲಾ ಕಟ್ಟಡದಲ್ಲಿಯೇ ಒಂದು ತರಗತಿ ಹಾಗೂ ಪ್ಯಾಸೇಜಿನ ಜಾಗ ಬಳಸಿಕೊಂಡು ಮನೆ ಮಾಡಿಕೊಂಡಿದ್ದೇವೆ.

**

ಮಹಿಳಾ ಸಬಲೀಕರಣಕ್ಕಾಗಿ ಮೆಹರ್‌ ಮೀಸಲು

ಕಿರಿಯ ವಯಸ್ಸಿನ ವಿಧವೆಯರು, ಪರಿತ್ಯಕ್ತೆಯರು ಸಹಾಯ ಕೇಳಿ ಬರುತ್ತಿದ್ದರು. ಅವರಿಗೆ ಸಲಹೆ ನೀಡಿ ಕಳುಹಿಸುತ್ತಿದ್ದೆವು. ಇವರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡಾಗ ನನ್ನ ಹೆಂಡತಿ ಝಕಿಯಾ ಫಾತಿಮಾ ತಮ್ಮ ಮದುವೆಯಲ್ಲಿ ಪಡೆದಿದ್ದ ಮಹರ್‌ (ವಧುದಕ್ಷಿಣೆ) ಹಣವನ್ನು ನೀಡಿದರು. ಅದರಿಂದ ಬೀದರ್‌ನ ಹೆಣ್ಣುಮಕ್ಕಳಿಗಾಗಿ ಜರ್ದೋಸಿ ಕಾರ್ಯಾಗಾರ ಆರಂಭಿಸಿದೆವು. ಮಾರುಕಟ್ಟೆ ಮಾಡುವ ಹಂತವನ್ನೂ ತಲುಪಿದೆವು. ಇದೀಗ ಈ ಹೆಣ್ಣುಮಕ್ಕಳೆಲ್ಲ ಸ್ವಾವಲಂಬಿಗಳಾಗಿದ್ದಾರೆ.

**

ದೇಶದಲ್ಲಿ ವೈದ್ಯರ ಕೊರತೆ ಇದೆ. ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ತರಬೇತಿ ನೀಡಲಾಗುತ್ತದೆ. ಮದರಸಾದಲ್ಲಿ ಓದಿದ ಮಕ್ಕಳನ್ನೂ ಎಐಸಿಯು ಮೂಲಕ ಮುಖ್ಯವಾಹಿನಿಗೆ ತರುತ್ತಿದ್ದೇವೆ. ಧರ್ಮವೆಂಬುದು ಮನುಜ ಕುಲದ ಸೇವೆಯಲ್ಲಿದೆ.

-ಅಬ್ದುಲ್‌ ಖದೀರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.