ಪ್ರಾತಿನಿಧಿಕ ಚಿತ್ರ
ಪರೀಕ್ಷೆಗೆ ತಯಾರಾಗುವ ಪ್ರತಿಯೊಬ್ಬರಿಗೂ ಹಿರಿಯರಾಗಲೀ, ಗುರುಗಳಾಗಲೀ ಹೇಳುವ ಮಾತೇನೆಂದರೆ ಬುದ್ಧಿವಂತಿಕೆಯಿಂದ ಅಧ್ಯಯನ ಮಾಡಿ ಎಂದು. ಯಾವುದೇ ಒಂದು ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಬುದ್ದಿವಂತಿಕೆಯಿಂದ ಅಧ್ಯಯನ ಮಾಡಬೇಕು ನಿಜ. ಆದರೆ ಬುದ್ದಿವಂತಿಕೆಯಿಂದ ಹೇಗೆ ಅಧ್ಯಯನ ಮಾಡುವುದು ಎಂಬುದೇ ಬಹುತೇಕ ವಿದ್ಯಾರ್ಥಿಗಳ ಸಮಸ್ಯೆ.
ಯಾವುದೇ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಪಡೆಯಲು ಬುದ್ಧಿವಂತಿಕೆಯ ಅಧ್ಯಯನ ವಿಧಾನಕ್ಕೆ ನಿಯಮಿತ ಅಧ್ಯಯನ, ಯೋಜಿತ ದಿನಚರಿ, ಗುಂಪು ಚರ್ಚೆಗಳು, ಮಾನಸಿಕ ಶಾಂತಿ ಮತ್ತು ಸೂಕ್ತ ಚಟುವಟಿಕೆಗಳ ಅಗತ್ಯವಿದೆ.
ಪ್ರತಿ ವಿದ್ಯಾರ್ಥಿಗೆ ಯಾವಾಗ ಅಧ್ಯಯನ ಮಾಡಬೇಕು ಮತ್ತು ಏನನ್ನು ಅಧ್ಯಯನ ಮಾಡಬೇಕು ಎಂದು ತಿಳಿದಿದೆ. ಆದರೆ ಹೇಗೆ ಅಧ್ಯಯನ ಮಾಡಬೇಕೆಂದು ಅರ್ಥಮಾಡಿಕೊಳ್ಳಲು ಆಳವಾದ ಒಳನೋಟ ಮತ್ತು ಅನುಭವದ ಅಗತ್ಯವಿದೆ.
ಶಾಲಾ ಜೀವನದಲ್ಲಿ ಅನೇಕ ವಿದ್ಯಾರ್ಥಿಗಳು ಪರಿಣಾಮಕಾರಿ ಕಲಿಕೆಯ ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಪರೀಕ್ಷೆಗೆ ತಯಾರಾಗುವವರಿಗೆ ಇಲ್ಲೊಂದು ಸ್ಮಾರ್ಟ್ ಮಾರ್ಗವಿದೆ. ಈ ಮಾರ್ಗವನ್ನು ಅನುಸರಿಸಿದರೆ ನಿಮ್ಮ ನಿಜವಾದ ಸಾಮರ್ಥ್ಯವನ್ನು ಸ್ಪರ್ಶಿಸಲು ಮತ್ತು ನಿಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸಲು ಸಾಧ್ಯವಾಗುತ್ತದೆ.
ಸ್ಮಾರ್ಟ್ ಪದದಲ್ಲಿಯೇ ಇದೆ ಬುದ್ದಿವಂತಿಕೆಯ ತಂತ್ರಗಾರಿಕೆ :
ಎಸ್ಸೆಸ್ಸೆಲ್ಸಿ, ಪಿಯುಸಿ. ಹಾಗೂ ನಂತರದ ನೀಟ್, ಜೆಇಇ ಸೇರಿದಂತೆ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪಠ್ಯಕ್ರಮವು ವಿಶಾಲವಾಗಿದ್ದು, ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಅಧ್ಯಯನ ತಂತ್ರಗಾರಿಕೆ ಸೂಕ್ತವಾದುದು. SMART ಪದವನ್ನು ವಿಶ್ಲೇಷಿಸಿ ಅನುಸರಿಸಿದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ.
S- Specific (ನಿರ್ದಿಷ್ಟತೆ)
M- Measurable (ಅಳೆಯಬಹುದಾದುದು)
A- Attainable(ಸಾಧಿಸಬಹುದಾದುದು)
R- Relevant (ಸಂಬಂಧಿತ ಅಂಶ)
T- Time-bound (ಸಮಯ ಬದ್ಧತೆ)
S- Specific(ನಿರ್ದಿಷ್ಟತೆ) : ಅಧ್ಯಯನ ಪ್ರಾರಂಭಿಸುವ ಮೊದಲು ಏನನ್ನು ಓದಬೇಕು? ಎಂಬ ನಿರ್ದಿಷ್ಟತೆ ಇರಬೇಕು. ಆಯ್ಕೆ ಮಾಡಿಕೊಂಡ ಕಲಿಕಾಂಶದಲ್ಲಿ ಯಾವುದು ಪರೀಕ್ಷೆಗೆ ಉಪಯುಕ್ತ ಎಂಬ ಖಚಿತತೆ ಇರಬೇಕು. ಖಚಿತಪಡಿಸಿಕೊಂಡ ಅಂಶಕ್ಕೆ ಹೆಚ್ಚು ಒತ್ತು ಕೊಟ್ಟು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಟಿಪ್ಪಣಿ ಮಾಡಿಕೊಳ್ಳಬೇಕು.
M- Measurable(ಅಳೆಯಬಹುದಾದುದು) : ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಕಲಿಕಾಂಶವನ್ನು ಅಳೆಯಲು ಸೂಕ್ತ ಮಾನಕಗಳಿರಬೇಕು. ಅಧ್ಯಯನದ ವಿಷಯವನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಅದು ಸ್ವಮೌಲ್ಯಮಾಪನವಾಗಿರಬಹುದು ಅಥವಾ ಎರಡನೇ ವ್ಯಕ್ತಿಯ ಮೌಲ್ಯಮಾಪನವಾಗಿರಬಹುದು. ವಿಷಯವನ್ನು ಖಚಿತ ಮಾನಕಗಳೊಂದಿಗೆ ಅಳೆತೆ ಒಳಪಡಿಸಬೇಕು. ಇದರಿಂದ ಕಲಿಕಾ ನ್ಯೂನತೆಗಳ ಸ್ಪಷ್ಟತೆ ದೊರೆಯುತ್ತದೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಪುನಃ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು.
A- Attainable(ಸಾಧಿಸಬಹುದಾದುದು) : ಸಾಧಿಸಲು ಸಾಧ್ಯವಾದ ಅಂಶವನ್ನು ಓದಲು ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಅಧ್ಯಯನ ನಿಮಗೆ ಯಶಸ್ಸು ತಂದುಕೊಡುತ್ತದೆ. ನಿಗದಿತ ಸಮಯದಲ್ಲಿ ಅಧ್ಯಯನಕ್ಕೊಂದು ಎಲ್ಲೆ ಹಾಕಿಕೊಳ್ಳಬೇಕು. ನಿಗದಿತ ಸಮಯದಲ್ಲಿಯೇ ಅದನ್ನು ಪೂರೈಸುವ ಹಾಗೂ ಮೌಲ್ಯಮಾಪನಕ್ಕೆ ಒಳಪಡಿಸಿ ಕಲಿತದ್ದನ್ನು ಖಾತ್ರಿಪಡಿಸಿಕೊಳ್ಳುವ ಹಂಬಲ ಇರಬೇಕು. ಆಗ ಮಾತ್ರ ನಿಮ್ಮ ಗುರಿಯನ್ನು ಸಾಧಿಸಲು ಸಮರ್ಥರಾಗುತ್ತೀರಿ.
R- Relevant (ಸಂಬಂಧಿತ ಅಂಶ) : ಅಧ್ಯಯನ ಮಾಡಿ ಖಾತ್ರಿಪಡಿಸಿಕೊಂಡ ಅಂಶವನ್ನು ಪ್ರಚಲಿತ ಘಟನೆಗಳೊಂದಿಗೆ ಸಂಬಂಧಿಕರಿಸಬೇಕು. ಪ್ರಚಲಿತ ಅಂಶಗಳನ್ನು ನಿಮ್ಮ ಜ್ಞಾನವನ್ನು ಒರೆಗೆ ಹಚ್ಚುವ ಸಹಸಂಬAದಿತ ಅಂಶಗಳಾಗಿವೆ. ಪ್ರಚಲಿತ ವಿಷಯಗಳಿಗಾಗಿ ದಿನಪತ್ರಿಕೆ ಹಾಗೂ ವೃತ್ತ ಪತ್ರಿಕೆಗಳ ಅಧ್ಯಯನ ಹೆಚ್ಚು ಪರಿಣಾಮಕಾರಿಯಾಗಿದೆ.
T- Time-bound (ಸಮಯ ಬದ್ಧತೆ) : ನಿಗದಿತ ಗುರಿ ಸಾಧನೆಗೆ ಸಮಯಕ್ಕೆ ಬದ್ಧವಾಗಿ ಅಧ್ಯಯನ ಮಾಡುವುದು ತುಂಬಾ ಮಹತ್ವದ್ದು. ಅಧ್ಯಯನ ಮಾಡಲು ದೊರೆಯುವ ಸಮಯಕ್ಕೆ ಅನುಗುಣವಾಗಿ ನಿಮ್ಮ ದಿನಚರಿಯನ್ನು ಹೊಂದಿಸಿಕೊಳ್ಳಬೇಕು. ನಿಗದಿತ ವೇಳಾಪಟ್ಟಿಯಂತೆ ಅಧ್ಯಯನ ಮಾಡಬೇಕು. ಅಧ್ಯಯನದ ವೇಳೆ ಪ್ರತಿ ನಿಮಿಷವೂ ಸಹ ಅಮೂಲ್ಯ. ಅನಗತ್ಯ ಚಟುವಟಿಕೆಗಳಿಗೆ ಸಮಯವನ್ನು ವ್ಯರ್ಥಗೊಳಿಸದೆ ನಿಗದಿತ ಅಧ್ಯಯನಕ್ಕೆ ಮಾತ್ರ ಸಮಯವನ್ನು ಬದ್ಧತೆಯಿಂದ ಬಳಸಿಕೊಳ್ಳಬೇಕು. ಅಂದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯು ನಿಮ್ಮ ಸಾಮಾನ್ಯ ಶಾಲಾ ಅಥವಾ ಕಾಲೇಜು ಶಿಕ್ಷಣಕ್ಕಿಂತ ಭಿನ್ನವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೀರ್ಘಾವಧಿಯ ಅಧ್ಯಯನದ ಅಗತ್ಯವಿದೆ. ಎಲ್ಲಾ ವಿಷಯಗಳನ್ನು ಒಂದೇ ಹಂತಕ್ಕೆ ಅಧ್ಯಯನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕಲಿಕೆಯ ಅಂಶವನ್ನು ಹಂತಹಂತವಾಗಿ ಆಯ್ಕೆ ಮಾಡಿಕೊಂಡು ಸ್ಮಾರ್ಟ್ ತಂತ್ರ ಬಳಸಿ ಅಧ್ಯಯನ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.