ADVERTISEMENT

SSC: 2ನೇ ಹಂತದ ಪರೀಕ್ಷೆಗೆ ಪೂರ್ವ ಸಿದ್ಧತೆ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆ

ಮಹೇಶ ನಾಯ್ಕ
Published 19 ಜನವರಿ 2022, 14:19 IST
Last Updated 19 ಜನವರಿ 2022, 14:19 IST
ಸ್ಟಾಫ್ ಸಲೆಕ್ಷನ್‌ ಕಮಿಷನ್‌– ಎಸ್ಎಸ್‌ಸಿ
ಸ್ಟಾಫ್ ಸಲೆಕ್ಷನ್‌ ಕಮಿಷನ್‌– ಎಸ್ಎಸ್‌ಸಿ   

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ (ಸ್ಟಾಫ್ ಸಲೆಕ್ಷನ್‌ ಕಮಿಷನ್‌– ಎಸ್ಎಸ್‌ಸಿ) ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೂರು ಹಂತದ ಪರೀಕ್ಷೆಗಳಿವೆ. ಕಳೆದ ಸಂಚಿಕೆಗಳಲ್ಲಿ ಮೊದಲ ಹಂತದ ಪರೀಕ್ಷೆ ಎದುರಿಸಲು ಬೇಕಾದ ಸಿದ್ಧತೆ ಹಾಗೂ ಅಧ್ಯಯನ ಸಾಮಗ್ರಿ ಸಂಗ್ರಹ ಕುರಿತು ಮಾಹಿತಿ ನೀಡಲಾಗಿತ್ತು. ಈ ಸಂಚಿಕೆಯಲ್ಲಿ ಎರಡನೇ ಹಂತದ (ಹಂತ –2) ಪರೀಕ್ಷೆ ಸಿದ್ಧತೆ ಕುರಿತು ಮಾಹಿತಿ ನೀಡಲಾಗುತ್ತಿದೆ.

ಎರಡನೇ ಹಂತದ ಪರೀಕ್ಷೆಗೆ ಅರ್ಹರಾಗಲು, ಮೊದಲನೇ ಹಂತದ ಪರೀಕ್ಷೆಯಲ್ಲಿಸಾಮಾನ್ಯ ಅಭ್ಯರ್ಥಿಗಳು ಶೇ 30 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು, ಒಬಿಸಿ ಮತ್ತು ಆರ್ಥಿಕವಾಗಿ ದುರ್ಬಲ ಅಭ್ಯರ್ಥಿಗಳು ಶೇ 25 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು ಹಾಗೂ ಎಸ್‌.ಸಿ ಮತ್ತು ಎಸ್‌.ಟಿ ಅಭ್ಯರ್ಥಿಗಳು ಶೇ 20 ಕ್ಕಿಂತ ಹೆಚ್ಚು ಅಂಕಗಳಿಸಿ ರಬೇಕು.

ಈ ಹಂತದ ಪ್ರಶ್ನೆಪತ್ರಿಕೆ ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ.ಒಟ್ಟು 4 ಪತ್ರಿಕೆಗಳಿರುತ್ತವೆ. ಪತ್ರಿಕೆ-1 ಮತ್ತು ಪತ್ರಿಕೆ-2, ಹಂತ-1ರ ಪರೀಕ್ಷೆಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಕಡ್ಡಾಯ. ಪತ್ರಿಕೆ-3ರ ಪರೀಕ್ಷೆಯು ಕೇಂದ್ರ ಜೂನಿಯರ್ ಸ್ಟಾಟಿಸ್ಟಿಕಲ್ ಆಫೀಸರ್ (ಕಿರಿಯ ಅಂಕಿಅಂಶ ಅಧಿಕಾರಿ) ಹಾಗೂ ರಿಜಿಸ್ಟಾರ್ ಜನರಲ್ ಅಂಕಿ ಅಂಶ ಮತ್ತು ಯೋಜನೆ ಜಾರಿ ಸಚಿವಾಲಯದಲ್ಲಿನ ಆಫ್ ಇಂಡಿಯದ ಕಚೇರಿಯಲ್ಲಿನ ಅಂಕಿಅಂಶ ತನಿಖಾಧಿಕಾರಿ ಗ್ರೇಡ್-II ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿರುತ್ತದೆ.

ADVERTISEMENT

ಪತ್ರಿಕೆ-4 ರ ಪರೀಕ್ಷೆಯು ಸಹಾಯಕ ಲೆಕ್ಕಪರಿಶೋಧನೆ ಅಧಿಕಾರಿ/ ಸಹಾಯಕ ಅಕೌಂಟ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿರುತ್ತದೆ.

ಪತ್ರಿಕೆ-1: ಪರಿಮಣಾತ್ಮಕ ಸಾಮರ್ಥ್ಯ:

ಈ ಪತ್ರಿಕೆಯಲ್ಲಿ ಅಭ್ಯರ್ಥಿಯ ಅಂಕಿ ಸಂಖ್ಯೆಗಳ ಸರಿಯಾದ ಬಳಕೆ ಮತ್ತು ಸಂಖ್ಯಾ ಪರಿಜ್ಞಾನವನ್ನು ಪರೀಕ್ಷಿಸುವ ಉದ್ದೇಶದಿಂದ ಪರಿಮಾಣಾತ್ಮಕ ಸಾಮರ್ಥ್ಯ ಪತ್ರಿಕೆಯಲ್ಲಿ 100 ಪ್ರಶ್ನೆಗಳನ್ನು ಒಟ್ಟು 200 ಅಂಕಗಳಿಗೆ ಕೇಳಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಅಂಕಗಣಿತದ ಸಂಖ್ಯೆಗಳು, ಭಿನ್ನರಾಶಿಗಳು, ಶೇಕಡವಾರು, ಅನುಪಾತ, ಲಾಭ ಮತ್ತು ನಷ್ಟ, ರಿಯಾಯಿತಿ, ಸರಾಸರಿ, ವರ್ಗಮೂಲ, ಕಾಲ ಮತ್ತು ಕೆಲಸ, ಬಡ್ಡಿ ಮುಂತಾದ ವಿಷಯಗಳ ಮೇಲೆ ಮತ್ತು ಬೀಜಗಣಿತದಲ್ಲಿ ಮೂಲ ಬೀಜಗಣಿತದ ಅಂಶಗಳು, ತ್ರಿಕೋನ, ವೃತ್ತ, ಪಾಲಿಗನ್, ಪ್ರಿಸಂ, ಸಿಲಿಂಡರ್, ಪಿರಮಿಡ್ ಹಾಗೂ ರೇಖಾಗಣಿತದ ಕೋನಗಳು, ಹಿಸ್ಟೋಗ್ರಾಮ್, ಪೈ ಚಾರ್ಟ್, ಬಾರ್ ಗ್ರಾಫ್ ಮುಂತಾದ ವಿಷಯಗಳ ಮೇಲೆ ಪ್ರಶ್ನೆ ಕೇಳಲಾಗುತ್ತದೆ.

ಈ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ಬಿಡಿಸಲು ಗಣಿತದ ಮೂಲ ವಿಷಯಗಳ ಸರಿಯಾದ ಅಧ್ಯಯನ ಮತ್ತು ನಿರಂತರ ಪ್ರಯತ್ನ ಅಗತ್ಯವಿದೆ. ಈ ಪತ್ರಿಕೆಯಲ್ಲಿ ನಿಖರವಾಗಿ ಉತ್ತರಿಸಬಹುದಾದ ಹಲವಾರು ಪ್ರಶ್ನೆಗಳಿದ್ದು. ಪ್ರತಿದಿನ ಪಠ್ಯಕ್ರಮಾನುಸಾರವಾಗಿ ಹಳೆಯ ಪ್ರಶ್ನೆಪತ್ರಿಕೆಗಳನ್ನಿಟ್ಟುಕೊಂಡು ಅಭ್ಯಾಸ ಮಾಡಬೇಕು.

ಪತ್ರಿಕೆ-2 : ಇಂಗ್ಲಿಷ್‌ ಭಾಷೆ ಮತ್ತು ಗ್ರಹಿಕೆ

ಈ ಪತ್ರಿಕೆಯಲ್ಲಿ ಅಭ್ಯರ್ಥಿಯ ಇಂಗ್ಲಿಷ್‌ ಭಾಷಾಜ್ಞಾನ ಮತ್ತು ಗ್ರಹಿಕೆಯನ್ನು ಪರೀಕ್ಷಿಸಲಾಗುವುದು. ಈ ಪತ್ರಿಕೆಯು ಒಟ್ಟು 200 ಅಂಕಗಳಿಗೆ 200 ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಯಲ್ಲಿ ಸಮಾನಾರ್ಥಕ ಪದಗಳು, ವಿರುದ್ದಾರ್ಥಕ ಪದಗಳು, ವಾಕ್ಯಗಳನ್ನು ಸರಿಪಡಿ ಸುವಿಕೆ, ಕ್ರಿಯಾ ಪದ, ವಾಕ್ಯವೃಂದಗಳಿಗೆ ಸಂಬಂದಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಮೂಲಕ ಭಾಷಾಸಾಮಾರ್ಥ್ಯ ಪರೀಕ್ಷೆಯ ಬಗ್ಗೆ ತಿಳಿಯಬೇಕು.

ಪತ್ರಿಕೆ-3 ಅಂಕಿ-ಅಂಶಗಳು(Statistics):

ಈ ಪತ್ರಿಕೆಯು ಕೆಲ ಹುದ್ದೆಗಳಿಗೆ ಮಾತ್ರ ಕಡ್ಡಾಯವಾಗಿದೆ. ಇದರಲ್ಲಿ ಅಭ್ಯರ್ಥಿಯ ಅಂಕಿ-ಅಂಶಗಳ ಕುರಿತಾದ ನಿಖರತೆ ಹಾಗೂ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಈ ಪತ್ರಿಕೆಯಲ್ಲಿ ಸ್ಟಾಟಿಸ್ಟಿಕಲ್ ಡೇಟಾ, ಸೆಂಟ್ರಲ್ ಟೆಂಡೆನ್ಸಿ, ಸಂಭವನೀಯತೆ ಸಿದ್ಧಾಂತ, ಸ್ಯಾಂಪ್ಲಿಂಗ್ ಸಿದ್ಧಾಂತ, ಅಂಕಿ ಅಂಶ ನಿರ್ಣಯ, ಕಾಲ ನಿರ್ಣಯ, ಇಂಡೆಕ್ಸ್ ನಂಬರ್ ಮತ್ತಿತರೆ ವಿಷಯಗಳ ಕುರಿತು ಪ್ರಶ್ನೆ ಕೇಳಲಾಗುವುದು. ಈ ಪ್ರಶ್ನೆಗಳು ಪದವಿ ಮಟ್ಟದಾಗಿದ್ದು ಹೆಚ್ಚಿನ ಅಧ್ಯಯನದ ಅಗತ್ಯವಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ವಿಷಯ ಸಂಗ್ರಹಣೆ ಮಾಡಿ ಒಂದು ಯೋಜನೆಯನ್ನು ರೂಪಿಸಿಕೊಂಡು ಅಧ್ಯಯನ ಮಾಡಿದಲ್ಲಿ ಯಶಸ್ಸು ಗಳಿಸಬಹುದು.

ಪತ್ರಿಕೆ- 4: ಸಾಮಾನ್ಯ ಅಧ್ಯಯನ (ಹಣಕಾಸು ಮತ್ತು ಅರ್ಥಶಾಸ್ತ್ರ)

ಈ ಪತ್ರಿಕೆಯಲ್ಲಿ ಹಣಕಾಸು ವಿಭಾಗದಲ್ಲಿ 40 ಪ್ರಶ್ನೆಗಳನ್ನು 80 ಅಂಕಗಳಿಗೆ ಮತ್ತು ಅರ್ಥಶಾಸ್ತ್ರ ವಿಭಾಗದಲ್ಲಿ 60 ಪ್ರಶ್ನೆಗಳನ್ನು 120 ಅಂಕಗಳಿಗೆ ಕೇಳಲಾಗುತ್ತದೆ. ಹಣಕಾಸು ವಿಭಾಗದಲ್ಲಿ ಆರ್ಥಿಕ ಲೆಕ್ಕಾಚಾರ ಹಾಗೂ ಆಕೌಂಟಿಂಗ್‌ನ ಮೂಲ ಪರಿಕಲ್ಪನೆಗಳ ಕುರಿತು ಪ್ರಶ್ನೆ ಕೇಳಲಾಗುವುದು. ಇನ್ನು ಅರ್ಥಶಾಸ್ತ್ರ ವಿಭಾಗದಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್, ಹಣಕಾಸು ಆಯೋಗ, ಸೂಕ್ಮ ಅರ್ಥಶಾಸ್ತ್ರ, ಬೇಡಿಕೆ ಮತ್ತು ಪೂರೈಕೆ ಸಿದ್ಧಾಂತ, ಉತ್ಪಾದನೆ ಮತ್ತು ದರ, ವಿವಿಧ ಹಣಕಾಸು ಮಾರುಕಟ್ಟೆ ವ್ಯವಸ್ಥೆ, ಭಾರತೀಯ ಅರ್ಥಶಾಸ್ತ್ರ, ಭಾರತದ ಆರ್ಥಿಕ ಸುಧಾರಣೆ, ಹಣ ಮತ್ತು ಬ್ಯಾಂಕಿಂಗ್, ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮುಂತಾದ ವಿಷಯಗಳ ಕುರಿತು ಪ್ರಶ್ನೆ ಕೇಳಲಾಗುವುದು.

ಈ ಪ್ರಶ್ನೆಗಳು ಪದವಿ ಮಟ್ಟದಲ್ಲಿದ್ದು, ಅಭ್ಯರ್ಥಿಗಳು ಸುದೀರ್ಘ ಅಧ್ಯಯನ ಮಾಡಬೇಕಾಗಿರುತ್ತದೆ. ಹಾಗೂ ಪ್ರಚಲಿತ ಆರ್ಥ ವ್ಯವಸ್ಥೆ ಕುರಿತ ದಿನ ಪತ್ರಿಕೆ, ಮಾಸ ಪತ್ರಿಕೆಗಳ ಅಧ್ಯಯನವು ಅಗತ್ಯವಾಗಿರುತ್ತದೆ.

(ಮುಂದಿನ ವಾರ: ಮೂರನೇ ಹಂತದ ಪರೀಕ್ಷಾ ಸಿದ್ಧತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.