ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ | ಅರಸರ ಹೆಸರು ನೆನಪಿಟ್ಟುಕೊಳ್ಳುವುದು ಹೇಗೆ?

ವೆಂಕಟ ಸುಬ್ಬರಾವ್ ವಿ.
Published 19 ಜೂನ್ 2020, 19:30 IST
Last Updated 19 ಜೂನ್ 2020, 19:30 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ
ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ   

ಈಗ ಪರೀಕ್ಷೆಯ ಸಮಯ. ಸಮಾಜ ವಿಜ್ಞಾನದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕು ಎಂದರೆ ಮೊದಲು ಈ ವಿಷಯನ್ನು ಇಷ್ಟಪಡಿ, ಪ್ರೀತಿಸಿ. ಇಲ್ಲಿನ ವಿಷಯಗಳನ್ನು ಕೇವಲ ಪರೀಕ್ಷಾ ದೃಷ್ಟಿಯಿಂದಷ್ಟೇ ಅಲ್ಲದೇ, ಇಲ್ಲಿ ಕಲಿತ ಮೌಲ್ಯಗಳನ್ನು ಹಾಗೂ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ.

ಸಮಾಜ ವಿಜ್ಞಾನ ವಿಷಯವು ಅತ್ಯಂತ ಆಸಕ್ತಿದಾಯಕ ವಿಷಯ, ಈ ವಿಷಯದ ವ್ಯಾಪ್ತಿ ಬಹಳ ದೊಡ್ಡದು. ಇಲ್ಲಿನ ಇತಿಹಾಸ ವಿಷಯವು ನಮ್ಮನ್ನು ನಾವು ಅರಿತುಕೊಳ್ಳಲು ಸಹಾಯ ಮಾಡಿದರೆ, ಭೂಗೋಳವು ನಮ್ಮ ಭೂಮಿಯನ್ನು ಮತ್ತು ಇಲ್ಲಿನ ಸಂಪನ್ಮೂಲಗಳ ಬಗ್ಗೆ ಅರಿಯಲು ಹಾಗೂ ಇಲ್ಲಿನ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ಉಪಯೋಗಿಸುವ ತಿಳಿವಳಿಕೆಯನ್ನು ನೀಡುತ್ತದೆ. ರಾಜ್ಯಶಾಸ್ತ್ರವು ನಮ್ಮ ಹಾಗೂ ನೆರೆಹೊರೆಯವರ ಪ್ರಾಮುಖ್ಯತೆಯನ್ನು ತಿಳಿಸಿದರೆ, ಸಮಾಜಶಾಸ್ತ್ರವು ನಮ್ಮ ಸಮಾಜದಲ್ಲಿ ನಾವು ಹೇಗಿರಬೇಕು ಹಾಗೂ ಇಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಮ್ಮ ಪಾತ್ರವೇನು ಎಂಬುದನ್ನು ತಿಳಿಸುತ್ತದೆ. ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನಗಳಿಲ್ಲದೇ ನಾವು ಸಮಾಧಾನದಿಂದ ಬೇರೆಯವರ ಜೊತೆ ಹೊಂದಿಕೊಂಡು ಜೀವಿಸಲು ಸಾಧ್ಯವೇ? ಹೀಗೆ ಸಮಾಜ ವಿಜ್ಞಾನದ ಕಲಿಕೆಯು ನಾವು ಒಳ್ಳೆಯ ಮಾನವರಾಗುವುದಕ್ಕೆ ಸಹಾಯ ಮಾಡುತ್ತದೆ.

ಈಗ ಪರೀಕ್ಷೆಯ ದೃಷ್ಟಿಯಿಂದ ಕೆಲವು ವಿಷಯಗಳನ್ನು ತಿಳಿಯೋಣ.

ADVERTISEMENT

ಈಗಾಗಲೇ ನೀವು ಮಾದರಿ ಪ್ರಶ್ನಪತ್ರಿಕೆಗಳನ್ನು ನೋಡಿದ್ದೀರಿ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆದಿದ್ದೀರಿ ಅಲ್ಲವೇ? ಸಮಾಜ ವಿಜ್ಞಾನದ ಪರೀಕ್ಞೆಯಲ್ಲಿ ನೀವು ಎಷ್ಟು ಸಾಲಿನ ಉತ್ತರ ಬರೆದಿದ್ದೀರಿ ಎನ್ನುವುದರ ಜೊತೆಗೆ ಎಷ್ಟು ಅರ್ಥಪೂರ್ಣವಾದ ಉತ್ತರವನ್ನು ಬರೆದಿದ್ದೀರಿ ಎನ್ನುವುದೂ ಬಹಳ ಮುಖ್ಯ.

ಸರಳ ವಾಕ್ಯಗಳು

ಇಲ್ಲಿನ ವಿಷಯಗಳನ್ನು ಸುಲಭವಾಗಿ ನೆನಪಿಡುವುದಕ್ಕಾಗಿ ಸರಳವಾದ ವಾಕ್ಯಗಳನ್ನೋ, ಪದಗಳನ್ನೋ ಅಥವಾ ಪದಪುಂಜಗಳನ್ನೋ ಮಾಡಿಕೊಳ್ಳಿ.

ಉದಾ : ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರೇನು?

ಉತ್ತರಕ್ಕಾಗಿ ಈ ವಾಕ್ಯವನ್ನು ನೆನಪಿಡಿ ‘ಔರಂಗೀಜೇಬು ಮುರಿದು ಹೋಯ್ತು, ಸೂಜಿ ದಾರದಿಂದ ಹೊಲಿಯಿರಿ’. ಸರಳವಲ್ಲವೇ? ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರು ‘ಔರಂಗೀಜೇಬು -ಔರಂಗಜೇಬ್, ಮುರಿದು ಹೋಯ್ತು - ಮುರಾದ್, ಸೂಜಿ - ಸೂಜ, ದಾರ - ದಾರ’! ಅಷ್ಟೇ! ಹಾಗೆಯೇ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು’ ಪಾಠದ ಮುಖ್ಯಾಂಶಗಳಾದ ಬ್ರಹ್ಮ ಸಮಾಜ, ಆರ್ಯಸಮಾಜ, ರಾಮಕೃಷ್ಣ ಮಿಷನ್, ನಾರಾಯಣಗುರು ಧರ್ಮಪರಿಪಾಲನ ಯೋಗಂ, ಪ್ರಾರ್ಥನಾ ಸಮಾಜಗಳನ್ನು ನೆನಪಿಡಲು ‘ಆರ್ಯರು ಬ್ರಹ್ಮ, ರಾಮನಾರಾಯಣರನ್ನು ಪ್ರಾರ್ಥನೆ ಮಾಡುತ್ತಿದ್ದರೇ?’ ಎನ್ನಬಹುದೇ? ಹೀಗೆ, ನಿಮ್ಮದೇ ಆದ ಸರಳ ವಾಕ್ಯ ಅಥವಾ ಪದಗಳನ್ನು ಮಾಡಿ ಹಲವಾರು ಅಂಶಗಳನ್ನು ನೆನಪಿನಲ್ಲಿಡಬಹುದು.

ಪರೀಕ್ಷೆಗೆ ಮೊದಲು ಸಮಾಜ ವಿಜ್ಞಾನದ ಪಾಠಗಳ ಮೈಂಡ್ ಮ್ಯಾಪ್‌ಗಳನ್ನು ರಚಿಸಿಕೊಳ್ಳಿ. ಮೈಂಡ್ ಮ್ಯಾಪ್‌ಗಳು ಪುನರಾವರ್ತನೆಯ ಅವಧಿಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತವೆ ಹಾಗೂ ಪಾಠವನ್ನು ಸರಿಯಾದ ರೀತಿಯಲ್ಲಿ ದೃಶ್ಯೀಕರಿಸಿಕೊಳ್ಳಲು ಉಪಯುಕ್ತ.

ಪಾಠದ ಮುಖ್ಯ ಅಂಶಗಳನ್ನು ಒಂದು ಹಾಳೆಯಲ್ಲಿ ಬರೆಯಿರಿ ಹಾಗೂ ನೀವು ಓದುವ ಒಂದು ಸ್ಥಳದಲ್ಲಿ ನೇತುಹಾಕಿರಿ ಮತ್ತು ಸಾಧ್ಯವಾದಾಗಲೆಲ್ಲಾ ಅದನ್ನು ಓದುತ್ತಿರಿ. ಹೀಗೆ ಪ್ರತಿ ಪಾಠದ ಮುಖ್ಯಾಂಶಗಳನ್ನೂ ಪುನರಾವರ್ತಿಸಿ. ಸಮಾಜ ವಿಜ್ಞಾನದ ಕಲಿಕೆಯನ್ನು ಸರಳೀಕರಿಸುವ ಇನ್ನೂ ಕೆಲವು ಅಂಶಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.

(ಲೇಖಕ: ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.