ADVERTISEMENT

ಛಲದಲ್ಲಿ ಅರಳಿದ ನ್ಯಾಯದ ಕು‘ಸುಮ’: ಟಿ. ಸುಮಾ ಅವರ ಸ್ಫೂರ್ತಿಯ ಕಥೆ

ಚಿತ್ರದುರ್ಗ ಜಿಲ್ಲೆಯ ಮಠದ ಕುರುಬರಹಟ್ಟಿಯಲ್ಲಿ ಜನಿಸಿ, ಬಡತನದ ನಡುವೆ ಛಲ ಬಿಡದೆ ಓದಿ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸುಮಾ ಟಿ. ಅವರ ಸ್ಫೂರ್ತಿದಾಯಕ ಕಥನ

ರೂಪಾ .ಕೆ.ಎಂ.
Published 28 ಫೆಬ್ರುವರಿ 2024, 23:01 IST
Last Updated 28 ಫೆಬ್ರುವರಿ 2024, 23:01 IST
<div class="paragraphs"><p>ಟಿ. ಸುಮಾ</p></div>

ಟಿ. ಸುಮಾ

   

ಚಿತ್ರದುರ್ಗ ಜಿಲ್ಲೆಯ ಮಠದ ಕುರುಬರಹಟ್ಟಿಯಲ್ಲಿ ಜನಿಸಿ, ಬಡತನದ ನಡುವೆ ಛಲ ಬಿಡದೆ ಓದಿ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸುಮಾ ಟಿ. ಅವರ ಸ್ಫೂರ್ತಿದಾಯಕ ಕಥನ ಇಲ್ಲಿದೆ.

ಶಾಲಾ ದಿನಗಳಲ್ಲಿಯೇ ನ್ಯಾಯಾಧೀಶೆ ಆಗಬೇಕು ಅನ್ನುವ ಕನಸಿತ್ತೇ?

ADVERTISEMENT

ಖಂಡಿತಾ ಇಲ್ಲ. ಎಸ್ಸೆಸ್ಸೆಲ್ಸಿ ಎರಡನೇ ದರ್ಜೆಯಲ್ಲಿ ಪಾಸಾದ ಸಾಮಾನ್ಯ ಹುಡುಗಿ ನಾನು. ಅಲ್ಲಿಯವರೆಗೆ ಓದುವುದರ ಬಗ್ಗೆ, ಓದಿದರೆ ಆಗುವ ಅನುಕೂಲಗಳ ಬಗ್ಗೆ ಏನೊಂದೂ ತಿಳಿಯದ ಮುಗ್ಧೆ. ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಳಾದ ಅಕ್ಕನಿಗೆ ಮದುವೆ ಮಾಡಿದ್ದರು. ಅನುತ್ತೀರ್ಣಳಾದರೆ ಮದುವೆ ಮಾಡುತ್ತಾರೆ ಎನ್ನುವ ಭಯಕ್ಕೆ ಓದುತ್ತಾ ಹೋದೆ. ಅದು ಇಂದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ.

ದೊಡ್ಡ ಹುದ್ದೆ ಪಡೆಯಬೇಕು ಎನ್ನುವುದಕ್ಕೆ ಪ್ರೇರಣೆ ಏನು?

ಬಡತನವೇ. ರಸ್ತೆ ನಿರ್ಮಾಣಕ್ಕಾಗಿ ಕುರುಬರಹಟ್ಟಿಯಲ್ಲಿ ಮನೆ ಕಳೆದುಕೊಳ್ಳಬೇಕಾಯಿತು. ನಂತರ ಕೋಡೇನಹಟ್ಟಿಯ ಬಾಡಿಗೆ ಮನೆಗೆ ಬಂದೆವು.  ಅಪ್ಪಾಜಿ  ಆಟೋ ಡ್ರೈವರ್. ಅಣ್ಣ, ಅಕ್ಕ, ತಮ್ಮ ಇರುವ ತುಂಬು ಕುಟುಂಬ. ಹಳ್ಳಿಯಲ್ಲಿ ಬೆಳೆದ ನನಗೆ ಬಡತನ ಒಡ್ಡುವ ಸವಾಲು, ಮಿತಿಗಳ ಅರಿವು ಚೆನ್ನಾಗಿದೆ. ಅದು ಅಷ್ಟೆ ಮಾಡಲಿಲ್ಲ. ನನ್ನೊಳಗೆ ಓದಿ ಏನಾದರೂ ಸಾಧಿಸಲೇಬೇಕೆಂಬ ಛಲವನ್ನೂ ಹುಟ್ಟು ಹಾಕಿತು. ಬಡತನ ಕೊಟ್ಟ ಛಲದ ನೆರಳಿನಲ್ಲಿ ಬದುಕು ಕಂಡುಕೊಳ್ಳಲು ಪ್ರಯತ್ನಿಸುತ್ತಾ ಹೋದೆ. ಸವಾಲುಗಳೆಲ್ಲ ಅವಕಾಶಗಳಂತೆ ಕಂಡವು.

ಓದುವ ಹಂಬಲ ಯಾವಾಗ ಬಂತು?
ನಾನು ಈಗಾಗಲೇ ಹೇಳಿದ ಹಾಗೆ ಕಾನೂನು ಪದವಿ ಪಡೆಯುವುದು, ಈ ಪರೀಕ್ಷೆಗೆ ಕುಳಿತುಕೊಳ್ಳುವುದೆಲ್ಲ ಯೋಜಿತ ನಿರ್ಧಾರವಲ್ಲ.  ಓದದೆ ಉಳಿದರೆ ಮದುವೆ ಆಗಿಬಿಡಬೇಕು ಎನ್ನುವ ಕಾರಣಕ್ಕೆ ಪಿಯು ಕಲಿತೆ. ಅಲ್ಲಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತೆ.  ಆಮೇಲೆ ಪದವಿ ಪೂರೈಸಿದೆ. ನಂತರ ಬಿ.ಇಡಿ ಮಾಡಿದೆ.ಆಮೇಲೆ  ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿದೆ.  ಅದು ಮುಗಿದ ಕೂಡಲೇ ಎಲ್‌ಎಲ್‌ಬಿ ಪೂರೈಸಿದೆ. ಹೀಗೆ ತಡೆರಹಿತವಾಗಿ ಒಂದಾದರ ಮೇಲೆ ಒಂದು ಪದವಿ ಪಡೆಯುವುದಕ್ಕೆ ಶುರು ಮಾಡಿದೆ. ಪಿಯುವರೆಗೂ ಕನ್ನಡ ಮಾಧ್ಯಮದಲ್ಲಿಯೇ ಕಲಿತಿದ್ದೇನೆ.

 ಕಾನೂನು ಕ್ಷೇತ್ರದ ಸೆಳೆತ ಹೇಗೆ?

8ನೇ ತರಗತಿಯಲ್ಲಿ ವಕೀಲರು ಆಗಿದ್ದ ಮನೆಪಾಠದ ಮೇಷ್ಟ್ರು ಎಂ.ಸಿ.ಪಾಪಣ್ಣ ಅವರ ಸಂಪರ್ಕ ಸಿಕ್ಕಿತ್ತು. ಎಂ.ಎ. ಮುಗಿಸಿ ಕಾಲೇಜು ಉಪನ್ಯಾಸಕಿ ಆಗಬೇಕು ಅಂದುಕೊಂಡಿದ್ದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ  ಬರೆಯಬೇಕು ಎಂದುಕೊಂಡಿದ್ದೆ. ಎಲ್‌ಎಲ್‌ಬಿ ಮುಗಿಸಿದರೆ ಸ್ಟೈಫಂಡ್‌ ಸಿಗುತ್ತೆ. ಅದರಲ್ಲಿ ಮತ್ತೇನಾದರೂ ಓದಬಹುದು ಎನ್ನುವ ಆಸೆಯಿತ್ತು. ಪಾಪಣ್ಣ ಅವರು ಹುರಿದುಂಬಿಸಿದ್ದರಿಂದ  ಎಲ್‌ಎಲ್‌ಬಿಗೆ 2017ರಲ್ಲಿ ಪ್ರವೇಶ ಪಡೆದು, 2021ರಲ್ಲಿ ಮುಗಿಸಿದೆ. ಅದೇ ವರ್ಷ ಸಿವಿಲ್‌ ನ್ಯಾಯಾಧೀಶರ ಪರೀಕ್ಷೆಯ ಪ್ರಿಲಿಮ್‌ನರಿ ಹಂತದಲ್ವಿ ಪಾಸಾದೆ. ವೈವಾದಲ್ಗಿ ಫೇಲಾದೆ.  ಎರಡನೇ ಪ್ರಯತ್ನದಲ್ಲಿ ಪ್ರಿಲಿಮ್‌ನರಿ ಬರೆದೆ. ವೈವಾಗೆ ತಯಾರಿ ನಡೆಸುವಾಗ ಬೆನ್ನುಹುರಿಯಲ್ಲಿ ಸಮಸ್ಯೆ ಉಂಟಾಯಿತು. ಓದುವಾಗ ಕುಳಿತ ಭಂಗಿ ಸರಿ ಇಲ್ಲದ ಕಾರಣದಿಂದ ಹೀಗಾಗುತ್ತದೆ ಎಂಬ ವೈದ್ಯಕೀಯ ವರದಿ ಬಂತು. ಶಸ್ತ್ರಚಿಕಿತ್ಸೆಯೂ ನಡೆಯಿತು. ಇಡೀ ವರ್ಷ ಬೆಡ್‌ನಲ್ಲಿಯೇ ಇರಬೇಕಾಯಿತು. ಆರೋಗ್ಯ ಚೇತರಿಸಿಕೊಂಡ ಮೇಲೆ ಮೂರನೇ ಪ್ರಯತ್ನ ಮಾಡಿದೆ. ಅದರಲ್ಲಿ ಯಶಸ್ವಿಯಾಗಿರುವುದಕ್ಕೆ ಖುಷಿ ಇದೆ.  ಅಪ್ಪ ಅಮ್ಮ ಇಡೀ ಕುಟುಂಬದಲ್ಲಿ ನಾನೇ ಇಷ್ಟು ಓದಿದ್ದು. ಈ ಬಗ್ಗೆ ಮನೆಯವರಿಗೆಲ್ಲ ಹೆಮ್ಮೆ ಇದೆ.  

ಪರೀಕ್ಷೆ ತಯಾರಿ ಹೇಗಿತ್ತು?

ಮೊದಲ ಬಾರಿಗೆ ಪರೀಕ್ಷೆ ಬರೆಯುವಾಗ ತುಮಕೂರಿನಲ್ಲಿ ಹದಿನೈದು ದಿನಗಳ ಕಾಲ ಕೋಚಿಂಗ್‌ ತೆಗೆದುಕೊಂಡಿದ್ದೆ ಅಷ್ಟೆ. ಆದಾದ ಮೇಲೆ ಪ್ರತಿ ವಿಷಯಗಳ ಮೇಲೆ ನಾನೇ ಸ್ವಯಂ ವೇಳಾಪಟ್ಟಿ ಹಾಕಿಕೊಂಡು ಅದರ ಅನ್ವಯ ಬೆಳಿಗ್ಗೆ 8 ರ ನಂತರ ರಾತ್ರಿ 11ರವರೆಗೆ ಮಧ್ಯೆ ವಿರಾಮ ತೆಗೆದುಕೊಂಡು ಓದುತ್ತಿದ್ದೆ. ಲಾಯರ್ಸ್‌ ಯುನಿಯನ್‌ ‘ಎಐಎಲ್‌ಯು’ ಸಂಯೋಜಿಸುತ್ತಿದ್ದ ಬೋಧನಾ ತರಗತಿಗಳ ಆಡಿಯೊಗಳನ್ನು ಹೆಚ್ಚು ಕೇಳುತ್ತಿದ್ದು, ಟಿಪ್ಪಣಿ ಮಾಡಿಕೊಳ್ಳಲು ಶುರು ಮಾಡಿದೆ.  ಅದರಲ್ಲಿಯೂ ನ್ಯಾಯಾಧೀಶರಾಗಿದ್ದ ಎಚ್‌.ಆರ್‌. ರವಿಕುಮಾರ್‌ ಅವರ ಬೋಧನಾ ಆಡಿಯೊಗಳು ನನಗೆ ಒಟ್ಟು ಪರೀಕ್ಷೆಯಲ್ಲಿ ಸಹಾಯ ಮಾಡಿದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.