ADVERTISEMENT

ಸಮಾಜಮುಖಿ ಮಠ ತರಳಬಾಳು: ಬೊಮ್ಮಾಯಿ

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ನೂತನ ಶಾಲಾ–ಕಾಲೇಜು ಕಟ್ಟಡಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 15:23 IST
Last Updated 16 ಡಿಸೆಂಬರ್ 2018, 15:23 IST
ಹುಬ್ಬಳ್ಳಿಯ ಉಣಕಲ್‌ನಲ್ಲಿ ಭಾನುವಾರ ನಡೆದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನೂತನ ಶಾಲಾ–ಕಾಲೇಜು ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಉಣಕಲ್‌ನಲ್ಲಿ ಭಾನುವಾರ ನಡೆದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನೂತನ ಶಾಲಾ–ಕಾಲೇಜು ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಸಮಾಜಮುಖಿಯಾಗಿ ಧರ್ಮ ಆಚರಣೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ನಾಡಿನ ಏಕೈಕ ಮಠ ಸಿರಿಗೆರೆಯ ತರಳಬಾಳು ಪೀಠವಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇಲ್ಲಿನ ಉಣಕಲ್‌ನಲ್ಲಿ ಭಾನುವಾರ ನಡೆದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನೂತನ ಶಾಲಾ–ಕಾಲೇಜು ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಡಿನಲ್ಲಿ ಹಲವು ಮಠಗಳು ಭಕ್ತರ ಸಹಕಾರದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಿವೆ. ಆದರೆ, ತರಳಬಾಳು ಮಠವೇ ಸ್ವಂತ ಸಾಮಾರ್ಥ್ಯದಿಂದ ಶಿಕ್ಷಣ ಸಂಸ್ಥೆಗಳನ್ನು ಮುನ್ನೆಡೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ. ಗ್ರಾಮೀಣ ಭಾಗದಲ್ಲಿ ಶಾಲೆ, ಕಾಲೇಜುಗಳನ್ನು ಆರಂಭಿಸುವ ಮೂಲಕ ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಮಠವೇ ಮಾಡುತ್ತಿದೆ ಎಂದರು.

ADVERTISEMENT

ಜ್ಞಾನ, ತಂತ್ರಜ್ಞಾನಕ್ಕೆ ತರಳಬಾಳು ಮಠವು ಆದ್ಯತೆ ನೀಡಿದೆ. ರೈತರಿಗೆ ಅನ್ಯಾಯವಾದಾಗ ಮಠದ ಶ್ರೀಗಳು ಅನೇಕ ಬಾರಿ ದ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಪ್ರತಿ ವರ್ಷ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವವು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾ ಬಂದಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಮಾತನಾಡಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮೂರುಸಾವಿರಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಮಾತನಾಡಿ, ಜ್ಞಾನ, ಶಿಕ್ಷಣವನ್ನು ನೀಡುವ ಮೂಲಕ ತರಳಬಾಳು ಮಠವು ದೇಶ ಮಾತ್ರವಲ್ಲದೇ ವಿದೇಶಗಳ ಗಮನವನ್ನು ಸೆಳೆದಿದೆ. ನಾಡಿನ ಸರ್ವರ ಅಭ್ಯುದಯಕ್ಕೆ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಣಕವಾಡದ ಶ್ರೀಗುರು ಅನ್ನದಾನೀಶ್ವರ ದೇವಮಂದಿರ ಮಠದ ಸಿದ್ಧರಾಮ ದೇವರು ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತ ಪಾಟೀಲ ಪುಟ್ಟಪ್ಪ ಕಾರ್ಯಕ್ರಮ ಉದ್ಘಾಟಿಸಿದರು.ಶಾಸಕ ಅಮೃತ ದೇಸಾಯಿ, ಪಾಲಿಕೆ ಸದಸ್ಯೆ ಅಶ್ವಿನಿ ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಂ.ಹುಡೇದ, ಎಸ್‌.ಬಿ.ಸಂಶಿ, ಬಿ.ಎಲ್‌.ಶಿವಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.