ADVERTISEMENT

ಯುಪಿಎಸ್‌ಸಿ ಟಾಪರ್ಸ್‌ ಟಿಪ್ಸ್‌ | ಶ್ರದ್ಧೆ, ಶ್ರಮ, ಅಧ್ಯಯನ: ಯಶಸ್ಸಿನ ಮೆಟ್ಟಿಲು

ಯುಪಿಎಸ್‌ಸಿ ಟಾಪರ್ಸ್‌ ಟಿಪ್ಸ್‌

ಬಾಲಕೃಷ್ಣ ಪಿ.ಎಚ್‌
Published 8 ಜೂನ್ 2022, 19:45 IST
Last Updated 8 ಜೂನ್ 2022, 19:45 IST
ಅವಿನಾಶ್‌ ವಿ.
ಅವಿನಾಶ್‌ ವಿ.   

ದಾವಣಗೆರೆಯ ಅವಿನಾಶ್‌ ವಿ. ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ 31ನೇ ರ‍್ಯಾಂಕ್ ಪಡೆದಿದ್ದಾರೆ. ಈ ಯಶಸ್ಸಿನ ಹಿಂದಿರುವ ‘ಅಧ್ಯಯನ’ದ ಸಿದ್ಧತೆ ಕುರಿತು ಅವರು ‘ಸ್ಪರ್ಧಾವಾಣಿ‘ಯೊಂದಿಗೆ ಹಂಚಿಕೊಂಡಿದ್ದಾರೆ.

* ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದೀರಿ, ಅಭಿನಂದನೆಗಳು. ನಿಮ್ಮ ಮುಂದಿನ ಹೆಜ್ಜೆ?

ಐಎಫ್‌ಎಸ್‌(ಭಾರತೀಯ ವಿದೇಶಾಂಗ ಸೇವೆ) ಮಾಡಿ, ದೇಶದ ಅಂಬಾಸೆಡರ್‌ ಆಗಿ ಕಾರ್ಯನಿರ್ವಹಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಈಗ ಯುಪಿಎಸ್ಸಿಯಲ್ಲಿ 31ನೇ ರ‍್ಯಾಂಕ್ ಪಡೆದಿದ್ದೇನೆ. ಆ ಹುದ್ದೆ ಪಡೆಯುವುದು ಸುಲಭವಾಗಲಿದೆ.ನಮ್ಮ ದೇಶದ ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡಲಿದ್ದೇನೆ.

ADVERTISEMENT

* ಯುಪಿಎಸ್‌ಸಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳನ್ನು ಎಷ್ಟನೇ ಪ್ರಯತ್ನದಲ್ಲಿ ಪೂರ್ಣಗೊಳಿಸಿದಿರಿ?

ಮೊದಲ ಪ್ರಯತ್ನದಲ್ಲಿಯೇ ಪೂರ್ಣಗೊಳಿಸಿದ್ದೇನೆ. ಮೊದಲ ಪ್ರಯತ್ನದಲ್ಲಿ ಈ ಪ್ರಮಾಣದ ರ‍್ಯಾಂಕ್‌ ಬರಬಹುದು ಎಂಬ ಕಲ್ಪನೆ ಇರಲಿಲ್ಲ. ಹಾಗಾಗಿ ಎರಡನೇ ಪ್ರಯತ್ನಕ್ಕಾಗಿ ಮತ್ತೆ ತಯಾರಿ ನಡೆಸಿದ್ದೆ. ಜೂ.5ಕ್ಕೆ ಪ್ರಿಲಿಮ್ಸ್ ಪರೀಕ್ಷೆ ಬರೆಯಬೇಕಿತ್ತು. ಅಷ್ಟರೊಳಗೆ ಯುಪಿಎಸ್‌ಸಿ ಫಲಿತಾಂಶ ಬಂತು. ಎರಡನೇ ಬಾರಿ ಬರೆಯುವ ಶ್ರಮ ತಪ್ಪಿತು.

* ನೀವು ಅನುಸರಿಸಿದ ‘ಅಧ್ಯಯನ ತಂತ್ರ’ಗಳೇನು?

ದಿನಕ್ಕೆ ಆರೇಳು ಗಂಟೆ ಓದುತ್ತಿದ್ದೆ. ಓದಿನ ಜೊತೆಗೆ, ಯೋಗ, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದೆ. ಓದುವ ಸಮಯದಲ್ಲಿ ಮಾತ್ರ ಗಮನವಿಟ್ಟು ಓದುತ್ತಿದ್ದೆ.

ನನ್ನ ಪ್ರಕಾರ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ಗೆಲ್ಲುವ ಆತ್ಮವಿಶ್ವಾಸವಿರಬೇಕು. ಅದಕ್ಕೆ ತಕ್ಕಂತೆ ಬದ್ಧತೆ, ಶ್ರಮವಹಿಸಿ ಅಧ್ಯಯನ ಮಾಡಬೇಕು.

* ನಿಮ್ಮ ಅಧ್ಯಯನ ಪರಿಕರಗಳ ಬಗ್ಗೆ ತಿಳಿಸಿ

ಯುಪಿಎಸ್‌ಸಿ ಪರೀಕ್ಷೆ ಬರೆಯವವರಿಗೆ ಪತ್ರಿಕೆ ಓದುವ ಹವ್ಯಾಸ ಇರಲೇಬೇಕು. ನಾನು ‘ದಿ ಹಿಂದೂ ಪತ್ರಿಕೆ’ಯನ್ನು ನಿತ್ಯ ಓದುತ್ತಿದ್ದೆ. ರಾಷ್ಟ್ರದ ಆಗುಹೋಗುಗಳ ಬಗ್ಗೆ ನೋಟ್‌ ಮಾಡಿಕೊಳ್ಳುತ್ತಿದ್ದೆ. ಯಾವ್ಯಾವುದೋ ಪುಸ್ತಕ ಓದುವ ಬದಲು ಸರ್ಕಾರ ಪ್ರಕಟಿಸಿರುವ ಮಾಹಿತಿಪೂರ್ಣ ಪುಸ್ತಕಗಳನ್ನೇ ಓದಬೇಕು.

* ಈ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್‌ ಅಗತ್ಯವಿದೆಯೇ? ನೀವು ಕೋಚಿಂಗ್‌ಗೆ ಹೋಗಿ‌ದ್ದೀರಾ? ಈ ತರಬೇತಿಯಾವ ರೀತಿ ನೆರವಾಗುತ್ತದೆ ?

ಕೋಚಿಂಗ್‌ ಬೇಕೇ ಬೇಕು ಎಂದೇನಿಲ್ಲ. ಆದರೆ, ಸರಿಯಾದ ಮಾರ್ಗದರ್ಶನ ಬೇಕೇಬೇಕು. ನಾನು ಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್‌’ ಸಂಸ್ಥೆಯಲ್ಲಿ ತರಬೇತಿ ಪಡೆದೆ.

* ಎಷ್ಟು ಸಮಯದಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಿ?

2020ರಲ್ಲಿ ನನ್ನ ಎಲ್‌ಎಲ್‌ಬಿ ಪದವಿ ಮುಗಿಯಿತು. ಅದೇ ವರ್ಷದ ಅಕ್ಬೋಬರ್‌ನಿಂದಲೇ ಯುಪಿಎಸ್‌ಸಿಗೆ ಸಿದ್ಧತೆ ಮಾಡಲು ಆರಂಭಿಸಿದೆ. ಒಟ್ಟು ಒಂದೂವರೆ ವರ್ಷದ ಪ್ರಯತ್ನದ ಫಲ ಇದು.

* ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವರಿಗೆ ನಿಮ್ಮ ಸಲಹೆ?

ಕೆಲವರು ಒಂದೇ ಪ್ರಯತ್ನದಲ್ಲಿ ಉತ್ತೀರ್ಣರಾಗಬಹುದು. ಹಾಗೆಂದು ಅನುತ್ತೀರ್ಣರಾದವರು ನಿರಾಶರಾಗಬೇಕಿಲ್ಲ. ಮೂರು, ನಾಲ್ಕು ಪ್ರಯತ್ನಗಳನ್ನೂ ಮಾಡಬೇಕಾಗಬಹುದು. ನಿರಂತರ ಪ್ರಯತ್ನದಿಂದ ಗುರಿ ತಲುಪಬಹುದು.

ಸಾಧಿಸುವ ಮನಸ್ಸಿದ್ದರೆ ಸಾಕು, ಬಡತನ, ಗ್ರಾಮೀಣ ಪ್ರದೇಶದ ಹಿನ್ನೆಲೆಯಂತಹವು ಯುಪಿಎಸ್‌ಸಿ ಪಾಸಾಗಲು ಅಡ್ಡಿಯಾಗುವುದಿಲ್ಲ.

ಕೆಲವು ಕೋಚಿಂಗ್‌ ಸೆಂಟರ್‌ಗಳು ಚೆನ್ನಾಗಿ ಓದುವವರಿಗೆ ಸ್ಕಾಲರ್‌ಶಿಪ್ ನೀಡುತ್ತವೆ.ಅಂಥ ಅವಕಾಶವನ್ನು ಬಳಸಿಕೊಳ್ಳಬಹುದು.

ಕೋಚಿಂಗ್‌ ಸೆಂಟರ್‌ಗೆ ಹೋಗಲು ಆಗುವುದಿಲ್ಲ ಎಂದಾದರೆ, ಒಮ್ಮೆ ಕೋಚಿಂಗ್ ಸೆಂಟರ್‌ನವರನ್ನು ಭೇಟಿಯಾಗಿ ಅವರಿಂದ ಮಾರ್ಗದರ್ಶನ ಪಡೆದುಕೊಳ್ಳಬಹುದು. ನೀವು ಕೋಚಿಂಗ್‌ಗೆ ಸೇರಬೇಕಾಗಿಲ್ಲ. ಆದರೆ ಯಾವ ರೀತಿ ಓದಬೇಕೆಂಬುದನ್ನು ತಿಳಿದುಕೊಂಡು ಸ್ವತಂತ್ರ ವಾಗಿಯೂ ಅಧ್ಯಯನ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.