ADVERTISEMENT

ಮಕ್ಕಳಲ್ಲಿ ನಿರಂತರ ಕಲಿಕೆಗೆ ವಿಡಿಯೊ ಮೂಲಕ ಬೋಧನೆ

ಸಿದ್ಧಾಂತ್‌ ಎಂ.ಜೆ.
Published 23 ಮಾರ್ಚ್ 2020, 19:30 IST
Last Updated 23 ಮಾರ್ಚ್ 2020, 19:30 IST
   
""

ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಪರೀಕ್ಷೆಯಿಂದ ವಿನಾಯ್ತಿ ನೀಡಿ ನಿಗದಿತ ಸಮಯಕ್ಕಿಂತ ಮೊದಲೇ ರಜೆ ಘೋಷಿಸಿರುವುದು ಯಥೋಚಿತ ನಿರ್ಧಾರ. ಈ ಸಲ ರಜೆಯ ಮಜವನ್ನು ಮಕ್ಕಳು ಮನೆಯೊಳಗೇ ಕಳೆಯಬೇಕಾಗಿದೆ. ಪಠ್ಯೇತರ ಚಟುವಟಿಕೆಗಳು, ಕುಶಲ ಕಲೆ, ನಾಟಕ, ನೃತ್ಯವೆಂದು ತರಬೇತಿ ನೀಡುವ ಬೇಸಿಗೆ ಶಿಬಿರಗಳು ಕೂಡ ಈ ಬಾರಿ ಇಲ್ಲ. ಯಾವ ವಿಷಯದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೋ ಅದಕ್ಕೆ ಟ್ಯೂಷನ್‌ಗೆ ಕಳಿಸೋಣವೆಂದರೆ ಅದೂ ಇಲ್ಲ. ಇನ್ನು ಪಾರ್ಕ್‌, ಪ್ರವಾಸ ಎಂಬುದು ದೂರದ ಮಾತೇ ಬಿಡಿ.

ಈ ರಜೆಯಲ್ಲಿ ಕಲಿಕೆಯ ಕೊಂಡಿಯೂ ಕಳಚಿಕೊಂಡು ಬಿಡುತ್ತದೆ. ಬಹುತೇಕ ಪೋಷಕರು ಪಾಠ ಓದಿಸಬಹುದು ಅಷ್ಟೆ, ಶಿಕ್ಷಕರ ರೀತಿ ಬೋಧನೆ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ; ಪೋಷಕರಿಬ್ಬರೂ ಉದ್ಯೋಗಿಗಳಾದರೆ ಅದಕ್ಕೆ ಸಮಯವನ್ನು ಹೊಂದಿಸಿಕೊಳ್ಳುವುದೂ ಕಷ್ಟ. ಜೊತೆಗೆ ರಜೆಯಲ್ಲೂ ಪುಸ್ತಕ ಓದಬೇಕೆ ಎಂಬುದು ಮಕ್ಕಳ ಅಳಲು. ಕೆಲಕಾಲ ಕಥೆ ಪುಸ್ತಕ ಓದಿಸಬಹುದು ಅಷ್ಟೆ. ಹಾಗಾದರೆ, ಮಕ್ಕಳ ಮನಸ್ಸನ್ನು ಹಿಡಿದಿಡಲು, ಕಲಿಕೆಯಲ್ಲಿ ಆಸಕ್ತಿ ಇರುವಂತೆ ಮಾಡಲು ಏನು ಮಾಡಬಹುದು?

ವಿಡಿಯೊ ಮೂಲಕ ಪಾಠ
ಶಿಕ್ಷಕರು ಮನಸ್ಸು ಮಾಡಿದರೆ ಪೋಷಕರ ಈ ಆತಂಕಕ್ಕೆ ನಾಂದಿ ಹಾಡಬಹುದು. ತರಗತಿಗಳಲ್ಲಿ ಕಪ್ಪು ಹಲಗೆಯ ಮೇಲೆ ಚಾಕ್‌ನಿಂದ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತ, ಪಾಠ ಓದಿ ಅರ್ಥ ಹೇಳುತ್ತ, ಮಕ್ಕಳ ಡೆಸ್ಕ್‌ ಮಧ್ಯೆ ಓಡಾಡಿ ಅವರ ಗೊಂದಲಗಳಿಗೆ ತೆರೆಯೆಳೆಯುತ್ತ ಕೆಲಸ ಮಾಡುತ್ತಿದ್ದ ಶಿಕ್ಷಕರು ಆನ್‌ಲೈನ್‌ನಲ್ಲಿ ವಿಡಿಯೊ ತಯಾರಿಸಿ ಪಾಠ ಮಾಡಬಹುದು. ಹೌದು, ಹೀಗೊಂದು ಪ್ರಯೋಗಕ್ಕೆ ನಗರಗಳ ಶಿಕ್ಷಕರು ಯಾಕೆ ಕೈ ಜೋಡಿಸಬಾರದು?

ADVERTISEMENT

ಮನೆಯಲ್ಲೇ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಬೋಧನಾ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ತರಗತಿಯಲ್ಲಿ ಪಾಠ ಮಾಡಬೇಕಾದಾಗ ತಯಾರಿಸಿಕೊಂಡ ಚಾರ್ಟ್‌ಗಳು, ಮಾದರಿಗಳನ್ನೆಲ್ಲ ಪುಟ್ಟ ಜಾಗದಲ್ಲೇ ಜೋಡಿಸಿಕೊಳ್ಳಿ. ಕ್ಯಾಮೆರಾ ಮೂಲಕ ವಿಡಿಯೊ ಚಿತ್ರೀಕರಿಸಿ. ಅದನ್ನು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿ. ಇದರಿಂದ ಶಿಕ್ಷಕರೂ ಮನೆಯಿಂದಲೇ ಕೆಲಸ ಮಾಡುವ ಅನುಭವ ಪಡೆಯಬಹುದು.

ಡಿಜಿಟಲ್‌ ಬಳಕೆ ಬಯಕೆಯೂ ಪೂರೈಕೆ
ರಜೆಯಲ್ಲಿ ಮಕ್ಕಳು ಟಿವಿ, ಮೊಬೈಲ್‌, ಕಂಪ್ಯೂಟರ್‌ನಂತಹ ಡಿಜಿಟಲ್‌ ಸಾಧನಗಳಿಗೆ ಅಂಟಿಕೊಳ್ಳದಂತೆ ತಡೆಯುವುದು ಪೋಷಕರಿಗೆ ಕಷ್ಟವೇ. ‘ಸ್ಕ್ರೀನ್‌’ ಸಮಯವನ್ನು ನಿರ್ಬಂಧಿಸುವುದು ಇನ್ನಿಲ್ಲದ ತಲೆನೋವು. ಹೋಗಲಿ, ರಜೆ ದಿನಗಳಲ್ಲಿ ಬೇಕಾದಂತೆ ಟಿವಿ ನೋಡಲಿ, ಮೊಬೈಲ್‌, ಕಂಪ್ಯೂಟರ್‌ ಗೇಮ್ಸ್‌ ಆಡಿಕೊಳ್ಳಲಿ ಎಂದರೆ ಮುಂದೆ ತರಗತಿಗಳು ಶುರುವಾದ ಮೇಲೂ ಅದೊಂದು ಅಭ್ಯಾಸಕ್ಕೆ ಅಂಟಿಕೊಂಡರೆ ಎಂಬ ಆತಂಕ ಇಲ್ಲದಿಲ್ಲ.

ಆದರೆ ಡಿಜಿಟಲ್‌ ಸಾಧನಗಳನ್ನು ಬಳಸುವ ಮಕ್ಕಳಿಗೆ ಮನೆಯಲ್ಲೇ ಕಂಪ್ಯೂಟರ್‌ ಮುಂದೆಯೋ, ಕೈಯಲ್ಲಿ ಸ್ಮಾರ್ಟ್‌ಫೋನ್‌ ಹಿಡಿಸಿಯೋ, ಇಂತಹ ‘ವರ್ಚುವಲ್‌’ ತರಗತಿಗಳಲ್ಲಿ ಭಾಗವಹಿಸಲು ಅವಕಾಶ ನೀಡಬಹುದು. ದಿನಕ್ಕೆ ಕೆಲವು ಗಂಟೆಗಳ ಕಾಲ ಈ ರೀತಿ ಪಾಠವನ್ನು ಬೋಧಿಸುವ ಕೆಲಸವನ್ನು ಮುಂಬೈ, ಪುಣೆ, ದೆಹಲಿಯಂತಹ ಮಹಾನಗರಗಳಲ್ಲಿ ಕೆಲವು ಖಾಸಗಿ ಶಾಲೆಗಳು ಶುರು ಮಾಡಿವೆ. ಇಂತಹ ಹೊಸ ಪ್ರಯೋಗಕ್ಕೆ ಮಕ್ಕಳು ಮಾತ್ರವಲ್ಲ, ಪೋಷಕರು ಕೂಡ ಕುತೂಹಲದಿಂದ ಒಡ್ಡಿಕೊಳ್ಳಬಹುದು.

ಸವಾಲುಗಳು
ಹೌದು, ಬೋಧನೆ ಎಂಬುದು ಹಿಂದೆಲ್ಲ ಶಿಕ್ಷಕರು ಹಾಗೂ ಮಕ್ಕಳ ನಡುವಿನ ಬಾಂಧವ್ಯ ವೃದ್ಧಿಗೆ ಒಂದು ಸಂಪರ್ಕ ಸೇತುವೆ ಎಂದೇ ಬಿಂಬಿತವಾಗಿತ್ತು. ಮಕ್ಕಳನ್ನು ಹೆಸರು ಹಿಡಿದು ಕರೆಯುತ್ತ, ಕೆಲವೊಮ್ಮೆ ಆ ಪುಟ್ಟ ಕೈಗಳನ್ನು ಹಿಡಿದು ಅಕ್ಷರವನ್ನು ತಿದ್ದುತ್ತ, ಗಮನ ನೀಡದಿದ್ದರೆ ಮುದ್ದು ಮಾತಿನಲ್ಲಿ ಗದರುತ್ತ ಬೋಧಿಸುವುದೇ ಒಂದು ರೀತಿಯ ಖುಷಿಯ ಅನುಭೂತಿ. ಇದರಿಂದ ಮಕ್ಕಳಲ್ಲೂ ಶಿಕ್ಷಕರ ಬಗ್ಗೆ ಒಂದು ರೀತಿಯ ಬಾಂಧವ್ಯ ಬೆಳೆಯುತ್ತದೆ. ಆದರೆ ವಿಡಿಯೊ ಪಾಠಗಳ ಮೂಲಕ ಹೊಸ ಬಗೆಯ ಸವಾಲಗಳಿಗೆ, ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದರ ಜೊತೆಗೆ ವಿಶೇಷ ಅನುಭವವನ್ನು ಮಕ್ಕಳಿಗೆ, ಹಾಗೆಯೇ ಶಿಕ್ಷಕರಿಗೆ ನೀಡಬಹುದು.

ಆನ್‌ಲೈನ್‌ ಬೋಧನೆಯಲ್ಲಿ ಯುಟ್ಯೂಬ್‌ ವಿಡಿಯೊ ಮಾಡಿ ಮಕ್ಕಳಿಗೆ ತಲುಪಿಸಬಹುದು ಅಥವಾ ಇಮೇಲ್‌ ಮೂಲಕ ಆಸಕ್ತ ಪೋಷಕರಿಗೆ ಕಳಿಸಬಹುದು. ಕೇವಲ ಪಠ್ಯ ಮಾತ್ರವಲ್ಲ, ಭಾಷೆ ಸುಧಾರಿಸಬಹುದು. ಶಾಲೆಯ ಕ್ರಾಫ್ಟ್‌ ತರಗತಿಗಳಲ್ಲಿ, ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಕಲಿಯಬಹುದಾದಂತಹ ಕಲೆ ಮತ್ತು ಕೌಶಲಗಳನ್ನು ಹೇಳಿಕೊಡಬಹುದು.

ಹೊಸ ರೀತಿಯ ಕಲಿಕೆ
ಇದೊಂದು ಹೊಸ ರೀತಿಯ ಕಲಿಕೆಯಾಗಬಹುದು. ಏಕೆಂದರೆ ಸಾಂಪ್ರದಾಯಿಕ ತರಗತಿಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ಮಕ್ಕಳು ಮಾತ್ರ ಅವರೆದುರು ಕೇಳುತ್ತ ಕೂತಿರುತ್ತಾರೆ. ಆದರೆ ಇಲ್ಲಿ, ಮಕ್ಕಳ ಜೊತೆ ಪೋಷಕರೂ ಆಡಿಯೊ– ವಿಡಿಯೊ ಮೂಲಕ ಶಿಕ್ಷಕರ ಪಾಠ ಕೇಳಬಹುದು. ಶಿಕ್ಷಕರಿಗೆ ಇ–ಮೇಲ್‌ ಮೂಲಕ ಪ್ರಶ್ನೆಗಳನ್ನು ಕಳಿಸಿ ಮಕ್ಕಳಲ್ಲಿ ಕೂಡ ಪ್ರಶ್ನೆ ಕೇಳುವ ಅಭ್ಯಾಸ ಹೆಚ್ಚಿಸಬಹುದು.

ಈ ಹೊಸ ಪ್ರಯೋಗದ ಬಗ್ಗೆಯೂ ಪೋಷಕರಲ್ಲಿ ಕೆಲವು ಪ್ರಶ್ನೆಗಳಿರಬಹುದು. ಪುಟ್ಟ ಮಕ್ಕಳಿಗೆ ಇಂತಹ ತಂತ್ರಜ್ಞಾನದ ಮೂಲಕ, ಮುಖಾಮುಖಿ ಇಲ್ಲದೇ ಸ್ಕ್ರೀನ್‌ ಮೂಲಕ ಕಲಿಸಲು ಸಾಧ್ಯವೇ? ಶಿಕ್ಷಕರ ಜೊತೆ, ನಂತರ ತರಗತಿಯ ಇತರ ಮಕ್ಕಳ ಜೊತೆ ಬಾಂಧವ್ಯ ಬೆಳೆಸಿಕೊಳ್ಳುತ್ತವೆಯೇ? ಇವೇ ಮೊದಲಾದ ಅನುಮಾನಗಳು ಪೋಷಕರಲ್ಲಿ ಏಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.