ADVERTISEMENT

ಸಾಧನೆಗೆ ಉತ್ತೇಜನ ವಿದ್ಯಾಧನ: ಕ್ರೀಡಾಪಟುಗಳ ಮನದಾಳ

ಬಸವರಾಜ ದಳವಾಯಿ
Published 23 ಜನವರಿ 2022, 19:30 IST
Last Updated 23 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ಯೋಜನೆಗಳು ಇನ್ನಷ್ಟು ಸಾಧನೆ ಮಾಡಲು ಅವರನ್ನು ಉತ್ತೇಜಿಸುತ್ತಿವೆ. ಆರ್ಥಿಕ ಸಂಕಷ್ಟ ಎದುರಿಸುವ ಗ್ರಾಮೀಣ ಭಾಗದ ಬಡ ಕುಟುಂಬಗಳ ಹಲವು ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಮರುಪಾವತಿ, ನಗದು ಬಹುಮಾನದ ಕೊಡುಗೆಗಳು ವರದಾನವಾಗಿವೆ. ಈ ಅಭಿಪ್ರಾಯಗಳು ಕ್ರೀಡಾಪಟುಗಳ ಮಾತಿನಲ್ಲಿ ವ್ಯಕ್ತವಾಗಿವೆ.

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ಸೈಕ್ಲಿಂಗ್ ಪಟು ರೇಣುಕಾ ದಂಡಿನ ಅವರಿಗೆ 2014ರಲ್ಲಿ ರಾಜ್ಯ ಸರ್ಕಾರ ₹ 1 ಲಕ್ಷ ಪ್ರೋತ್ಸಾಹ ನೀಡಿತ್ತು. ಸೈಕ್ಲಿಂಗ್‌ಗಾಗಿ ಸೈಕಲ್‌ ಕೂಡ ನೀಡಲಾಗಿತ್ತು.ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿರುವ ಅವರು, ಪದವಿ ಮುಗಿಸಿದ್ದು, ಸೈಕ್ಲಿಂಗ್ ಕೋಚ್‌ ಆಗುವ ಹಂಬಲದಲ್ಲಿದ್ದಾರೆ.

ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ಪದವಿ ಮಾಡುವ ಸಂದರ್ಭದಲ್ಲಿ ಶಿಕ್ಷಣ ಶುಲ್ಕ ಮರುಪಾವತಿಯ ಸೌಲಭ್ಯ ಪಡೆದವರು ಬೆಂಗಳೂರಿನ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್‌. ರಾಜ್ಯ ಸರ್ಕಾರ ಉದ್ಯೋಗ ನೀಡುವುದರ ಮೂಲಕವೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಿ ಎನ್ನುತ್ತಾರೆ ಅವರು.

ADVERTISEMENT

ನಿರಂಜನ್ ಅವರು ಇತ್ತೀಚೆಗೆ ಕ್ರೊವೇಷ್ಯಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದುಈ ವರ್ಷ ನಡೆಯಲಿರುವ ವಿಶ್ವ ಪ್ಯಾರಾ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಅಮರಾವತಿಯ ಸೈಕ್ಲಿಂಗ್ ಪಟು ಸಂಪತ್‌ ಪಾಸಮೇಲ್‌ ಅವರಿಗೆ ಖೇಲೊ ಇಂಡಿಯಾ ಯೋಜನೆಯಡಿ ತಿಂಗಳಿಗೆ ₹ 10 ಸಾವಿರ ಪ್ರೋತ್ಸಾಹಧನ ಸಿಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಕೈಸೇರಿಲ್ಲ. ತಾಯಿ ಟೇಲರಿಂಗ್‌ ವೃತ್ತಿ ಮಾಡುತ್ತಾರೆ. ಪ್ರೋತ್ಸಾಹಧನವು ತನ್ನ ಓದಿಗೆ, ಕ್ರೀಡಾ ಸಲಕರಣೆಗಳ ಖರೀದಿಗೆ ವಿನಿಯೋಗವಾಗುತ್ತಿತ್ತು ಎನ್ನುತ್ತಾರೆ ಅವರು.

ಸದ್ಯ ಡಿಪ್ಲೊಮಾ ಓದುತ್ತಿರುವ ಸಂಪತ್‌, 2018ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 2021ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಚಿನ್ನ ಅವರ ಮುಡಿಗೇರಿತ್ತು.

ನಡಿಗೆ ಸ್ಪರ್ಧಿ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ತಟ್ಟಿಗೇರಿಯ ವಿಜಯಲಕ್ಷ್ಮಿ ಅವರಿಗೆ 2019ರ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹಧನವಾಗಿ ₹ 1 ಲಕ್ಷ ನೀಡಿದೆ. ಅದರಲ್ಲಿ ಅರ್ಧದಷ್ಟು ಹಣದಲ್ಲಿ ಕ್ರೀಡಾ ಪರಿಕರಗಳ ಖರೀದಿಸಿದ ಅವರು, ವ್ಯವಸಾಯದ ಖರ್ಚಿಗೆಂದು ತಂದೆಯ ಕೈಗೆ ಒಪ್ಪಿಸಿದರು. ಶುಲ್ಕ ಮರುಪಾವತಿ ಸೌಲಭ್ಯ; ಕಾಲೇಜಿನಿಂದಲೂ ನೆರವು ಸಿಕ್ಕಿದೆ‘ ಎನ್ನುತ್ತಾರೆ ಅವರು.

ಬಿಎಸ್‌ಸಿ ಓದುತ್ತಿರುವ ವಿಜಯಲಕ್ಷ್ಮಿ, 2019ರಲ್ಲಿ ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.

ಏಕಲವ್ಯ ಪ್ರಶಸ್ತಿ ಪುರಸ್ಕೃತ ಸೈಕ್ಲಿಂಗ್ ಪಟು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ. ಅವರಿಗೆ ರಾಜ್ಯ ಸರ್ಕಾರ 2019–20ನೇ ಸಾಲಿನಲ್ಲಿ ₹ 70 ಸಾವಿರ ನಗದು ಪುರಸ್ಕಾರ ನೀಡಿತ್ತು. ಕ್ರೀಡಾ ಸಲಕರಣೆಗಳ ಖರೀದಿಗೆ ಇದನ್ನು ಬಳಸಿಕೊಂಡೆ ಎನ್ನುವ ಅವರು, ಸದ್ಯ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾರೆ.

(ಮುಂದಿನ ವಾರ: ಖಾಸಗಿ ಸಂಸ್ಥೆಗಳಿಂದ ಕ್ರೀಡಾ ವಿದ್ಯಾರ್ಥಿವೇತನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.