ADVERTISEMENT

ಮನಸ್ಸಿದ್ದರಷ್ಟೇ ಮನಃಶಾಸ್ತ್ರದ ಮಾರ್ಗ

ಸುವರ್ಚಲಾ ಅಂಬೇಕರ್ ಬಿ.ಎಸ್.
Published 11 ಡಿಸೆಂಬರ್ 2018, 19:31 IST
Last Updated 11 ಡಿಸೆಂಬರ್ 2018, 19:31 IST
Shot of an unidentifiable woman consoling her friend by holding her handShot of an unidentifiable woman consoling her friend by holding her hand
Shot of an unidentifiable woman consoling her friend by holding her handShot of an unidentifiable woman consoling her friend by holding her hand   

ಆಕೆ ನೀಲವೇಣಿ, ಸದಾ ನಗುಮುಖದಿಂದ ಗೆಳತಿಯರೊಡನೆ ಹರಟುತ್ತಾ, ಕಾಲೇಜ್ ಕ್ಯಾಂಟೀನ್‌ನಲ್ಲಿ ಊಟಕ್ಕೆ ಬರುತ್ತಿದ್ದಳು. ಆಕೆಯ ಸರಳ ವ್ಯಕ್ತಿತ್ವ, ನೇರನುಡಿ ಅದು ಹೇಗೋ ಈ ಬಿ.ಕಾಂ. ವಿದ್ಯಾರ್ಥಿಯ ಮನಗೆದ್ದುಬಿಟ್ಟಿತ್ತು. ದಿನವೂ ಆಕೆ ಕ್ಯಾಂಟೀನ್‌ಗೆ ಬರುವ ಸಮಯಕ್ಕೇ ಈತನೂ ಅವಳ ಎದುರಿನ ಟೇಬಲ್‌ನಲ್ಲಿ ಕೂತು ಹೊಟ್ಟೆಯೊಂದಿಗೆ ಕಣ್ಮನವನ್ನೂ ತಣಿಸಲು ಪ್ರಯತ್ನಿಸುತ್ತಿದ್ದ. ಆದರೆ ಇದನ್ನು ಗಮನಿಸಿದ ಆತನ ಗೆಳೆಯರು, ’ಹೇ, ನಿಂಗೇನು ತಲೆಗಿಲೆ ಕೆಟ್ಟಿದೀಯಾ? ಮೊದಲೇ ಆಕೆ ಸೈಕಾಲಜಿ ಸ್ಟೂಡೆಂಟ್. ಹೋಗಿ ಹೋಗಿ ಅವಳ ಹಿಂದೆ ಬಿದ್ದಿದೀಯಲಾ ನೀನು, ನಿನ್ನ ಮುಖ ನೋಡಿನೇ ಆಕೆ ನಿನ್ನ ಮನಸ್ಸಿನೊಳಗೆ ಇರೋದೆಲ್ಲಾ ಹೇಳಿಬಿಡ್ತಾಳೆ. ನಿನ್ನ ಕಣ್ಣಲ್ಲೇ ಅವ್ಳಿಗೆಲ್ಲಾ ಅರ್ಥ ಆಗತ್ತೆ, ಜನ್ಮನೇ ಜಾಲಾಡಿಬಿಡ್ತಾಳೆ. ಅವಳ ಜೊತೆ ಸೇರಿದ್ರೆ ಕೊನೆಗೆ ನೀನು ಹುಚ್ಚ ಆಗ್ಬಿಡ್ತೀಯಾ ನೋಡು, ಅವಳನ್ನ ಆರಾಧಿಸೋದನ್ನು ಇವತ್ತೇ ಬಿಟ್ಟುಬಿಡು‘ ಅಂತ ಹೆದರಿಸಲು ಪ್ರಾರಂಭಿಸಿದರು.

ಸೈಕಾಲಜಿ (ಮನಃಶಾಸ್ತ್ರ) ಅಂದ್ರೆ ಇದೇನಾ?
ಬಹುತೇಕ ವಿದ್ಯಾರ್ಥಿಗಳ, ಅಧ್ಯಾಪಕರ ಅನುಭವದ ಪ್ರಕಾರ ಮನಃಶಾಸ್ತ್ರ ಅಂದ ಕೂಡಲೇ ಸಾಮಾನ್ಯವಾಗಿ ಬರುವುದು, ‘ಹೋ, ನಿನ್ನ ಹತ್ತಿರ ಮಾತನಾಡುವುದು ಕಷ್ಟ ಮಾರಾಯ್ತಿ. ನೀನು ನನ್ನ ಮಾತು, ಮುಖ, ಕಣ್ಣು, ಹಾವ-ಭಾವಗಳಲ್ಲೇ ನನ್ನನ್ನು ಅಳೆದು ಬಿಡ್ತೀಯ ಅಲ್ವಾ? ನನ್ನ ಮನಸ್ಸಿನೊಳಗಿರೋದೆಲ್ಲಾ ಹೇಳಿಬಿಡು ನೋಡೋಣ’ – ಎಂಬಂತಹ ಮಾತುಗಳು! ಆದರೆ ನಿಜವಾದ ಮನಃಶಾಸ್ತ್ರ ಅದಲ್ಲ. ಮನುಷ್ಯನ ಆಂತರಿಕ ಭಾವನೆಗಳು, ಮನಸ್ಸಿನ ಸ್ವಭಾವ, ಆಲೋಚನೆಗಳು, ಕ್ರಿಯೆ-ಪ್ರತಿಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದು. ಮನುಷ್ಯರ ಗುಣ-ನಡತೆಗಳನ್ನು ಆಳವಾಗಿ ಗಮನಿಸುತ್ತಾ ಆತನ ನಡೆಗೆ ಮೂಲಕಾರಣವನ್ನು ಹುಡುಕುವುದು ಹಾಗೂ ಬದಲಾವಣೆಯ ಅಗತ್ಯತೆಯಿದ್ದಲ್ಲಿ ಅದರತ್ತ ಕಾರ್ಯೋನ್ಮುಖರಾಗುವುದು. ಒಟ್ಟಿನಲ್ಲಿ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಒಬ್ಬ ವ್ಯಕ್ತಿ ಆರೋಗ್ಯಪೂರ್ಣವಾಗಿ ಬದುಕಲು ಬೇಕಾದ ಎಲ್ಲಾ ರೀತಿಯ ಸಹಾಯಗಳನ್ನು ಮಾಡುವುದು ಮನಃಶಾಸ್ತ್ರ.

ಯಾರು ಬೇಕಾದ್ರೂ ಕಲಿಯಬಹುದು ಮನಃಶಾಸ್ತ್ರ
ಅನೇಕರ ಮನಸ್ಸಿನಲ್ಲಿ ‘ಮನಃಶಾಸ್ತ್ರ ಕಲಿತರೆ ನಂಗೂ ಎಲ್ಲಿ ಇತರರ ಸಮಸ್ಯೆಗಳು ಬಂದು ಬಿಡುತ್ತವೋ ಅಥವಾ ನಂಗೆ ಹುಚ್ಚು ಹಿಡಿಯುತ್ತದೇನೋ, ಜನರೆಲ್ಲಾ ಹುಚ್ಚ ಅಂತ ಕರೀತಾರೇನೋ’ ಎನ್ನುವ ಭಯ, ಅಳುಕು ಇರುತ್ತದೆ. ಆದರೆ ಇದ್ಯಾವುದೂ ನಿಜವಲ್ಲ, ಯಾರು ಬೇಕಾದ್ರೂ ಮನಃಶಾಸ್ತ್ರ ಅಧ್ಯಯನ ಮಾಡಬಹುದು. ತನ್ನನ್ನೇ ತಾನು ಅರಿಯದವ ಇತರರನ್ನು ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಮೊದಲು ತನ್ನೊಳಗನ್ನು ಅರ್ಥ ಮಾಡಿಕೊಳ್ಳಲು, ತನ್ನ ಶಕ್ತಿ, ಸಾಮರ್ಥ್ಯಗಳನ್ನು ಅರಿಯಲು ಮನಃಶಾಸ್ತ್ರ ಸಹಾಯ ಮಾಡುತ್ತದೆ. ಅನಂತರವಷ್ಟೇ ಇತರರಿಗೆ ಆಪ್ತಸಮಾಲೋಚನೆಯ ಮೂಲಕ ಸಹಾಯ ಮಾಡಲು ಸಾಧ್ಯ. ತಾಳ್ಮೆ, ಗಮನಿಸುವಿಕೆ, ಸಂವಹನ ಕೌಶಲ, ಇತರರ ಸಮಸ್ಯೆಗಳನ್ನು ಆಲಿಸುವಿಕೆ ಹಾಗೂ ಸ್ಪಂದಿಸುವಿಕೆ, ಸಮಸ್ಯೆಗಳನ್ನು ಹಲವು ದೃಷ್ಟಿಕೋನಗಳಲ್ಲಿ ನೋಡಿ ವಿಮರ್ಶಿಸಿ ಪರಿಹರಿಸುವ ಗುಣ, ಕಾಳಜಿ, ಕರುಣೆ, ಇತರರನ್ನು ಅವರ ಸ್ಥಾನದಲ್ಲಿ ನಿಂತು ಅರ್ಥ ಮಾಡಿಕೊಳ್ಳುವಂತಹ ಕೆಲವೊಂದು ವಿಶೇಷ ಗುಣಗಳು ಮನಃಶಾಸ್ತ್ರಜ್ಞರಾಗಲು ಬಹುಮುಖ್ಯ.

ADVERTISEMENT

ಸೈಕಾಲಜಿ ಒಂದು ಕೋರ್ಸ್
ಜೀವವಿಜ್ಞಾನದ ಮೂಲತತ್ತ್ವವನ್ನು ಹೊಂದಿದ್ದರೂ, ಕೆಲವು ಕಾಲೇಜುಗಳಲ್ಲಿ ಪಿ.ಯು.ಸಿ.ಯಲ್ಲಿಯೇ ಕಲಾವಿಭಾಗವನ್ನು ಆಯ್ಕೆ ಮಾಡಿಕೊಂಡು ಮನಃಶಾಸ್ತ್ರವನ್ನು ಒಂದು ವಿಷಯವಾಗಿ ಆರಿಸಿಕೊಳ್ಳುವ ಅವಕಾಶವಿದೆ. ಅನಂತರ ಬಿ.ಎ. ಹಾಗೂ ಬಿ.ಎಸ್ಸಿ. ಪದವಿಗಳಲ್ಲಿ ಇದನ್ನು ಒಂದು ವಿಷಯವಾಗಿ ಆಯ್ಕೆ ಮಾಡಬಹುದು. ಪದವಿಯಲ್ಲಿ ಕಡ್ಡಾಯವಾಗಿ ಒಂದು ವಿಷಯ ಮನಃಶಾಸ್ತ್ರವನ್ನು ಅಭ್ಯಸಿಸಿದ ವಿದ್ಯಾರ್ಥಿಯು ಮಾತ್ರ ಸ್ನಾತಕೋತ್ತರ ಪದವಿ (ಎಂ.ಎಸ್ಸಿ.) ಮನಃಶಾಸ್ತ್ರ ವಿಷಯದಲ್ಲಿ ಮಾಡಲು ಸಾಧ್ಯ. ಸಮಾಜಕಾರ್ಯ ಪದವಿಯಲ್ಲೂ ಒಂದು ವಿಭಾಗವಾಗಿ ಮನಃಶಾಸ್ತ್ರವನ್ನು ತೆಗೆದುಕೊಳ್ಳಬಹುದು. ಪಿಎಚ್.ಡಿ. ಮಾಡಲೂ ಅವಕಾಶವಿದೆ. ಇದಲ್ಲದೇ, ಇಂದು ಅನೇಕ ಡಿಪ್ಲೊಮೊ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯವಿದ್ದು, ಆಸಕ್ತಿಯುಳ್ಳ ಯಾರು ಬೇಕಾದರೂ ದೂರಶಿಕ್ಷಣದ ಮೂಲಕವೂ ಮಾಡಲು ಸಾಧ್ಯವಿದೆ.

ವಿಫುಲ ಅವಕಾಶಗಳು
ಇಂದು ಮನಸ್ಸೇ ಎಲ್ಲಾ ಚಟುವಟಿಕೆಗಳಿಗೆ ಮೂಲ. ಮನಸ್ಸಿನ ಆರೋಗ್ಯ ಹದಗೆಟ್ಟರೆ ಮನುಷ್ಯ ಬದುಕಿದ್ದೂ ಪ್ರಯೋಜನವಿಲ್ಲದಂತೆ. ಹಾಗಾಗಿ ಇಂದಿನ ಒತ್ತಡದ ಯುಗದಲ್ಲಿ ಈ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಶಿಕ್ಷಣ, ಕೈಗಾರಿಕೆ, ಆಸ್ಪತ್ರೆ, ಸ್ವಯಂಸೇವಾ ಸಂಸ್ಥೆಗಳು, ಅನಾಥಾಶ್ರಮ, ವೃದ್ಧಾಶ್ರಮ, ಪುನರ್ವಸತಿ ಕೇಂದ್ರಗಳು, ಸರ್ಕಾರಿ ಸಂಸ್ಥೆಗಳು, ಕಾರ್ಪೋರೇಟ್ ವಲಯಗಳು, ಬ್ಯಾಂಕುಗಳು, ಕಾರಾಗೃಹಗಳು ಮುಂತಾದ ಅನೇಕ ಕಡೆಗಳಲ್ಲಿ ಇಂದು ಮನಃಶಾಸ್ತ್ರಜ್ಞರ ಅಗತ್ಯತೆ ಬಹಳ ಇದೆ. ಇದಲ್ಲದೇ, ತಮ್ಮದೇ ಆದ ಆಪ್ತಸಮಾಲೋಚನಾ ಕೇಂದ್ರಗಳನ್ನು ತೆರೆದು ಆಪ್ತಸಮಾಲೋಚನೆ ಸೌಲಭ್ಯ ಒದಗಿಸಲು ಕೂಡ ಸಾಧ್ಯವಿದೆ.

ಇಂದಿನ ಆಧುನಿಕ ದಿನಮಾನದಲ್ಲಿ ಮನಃಶಾಸ್ತ್ರ ಬಹುಬೇಡಿಕೆಯ ವಿಷಯವಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಆಪ್ತಸಮಾಲೋಚಕರ ಅಗತ್ಯತೆ ಇದ್ದೇ ಇದೆ. ದಿನನಿತ್ಯದ ಜೀವನದಲ್ಲಿ ಸೈಕಾಲಜಿ ಮುಖ್ಯಪಾತ್ರವಹಿಸುತ್ತದೆ. ಆನ್ಲೈನ್ ಸೈಕಾಲಜಿಯಿಂದ ಹಿಡಿದು ಸ್ಪೋರ್ಟ್ಸ್ ಸೈಕಾಲಜಿಯವರೆಗೂ ಅವಕಾಶಗಳು ಖಂಡಿತ ಇವೆ. ಮನಃಶಾಸ್ತ್ರ ಎಂಬುದು ಮುಖ ನೋಡಿ ಮನಸ್ಸನ್ನು ಅಳಿಯುವುದೂ ಅಲ್ಲ, ಮನಃಶಾಸ್ತ್ರ ಓದುವವರು ಹುಚ್ಚರಾಗುವುದೂ ಇಲ್ಲ. ಆಸಕ್ತಿಯಿರುವ ಯಾವುದೇ ವ್ಯಕ್ತಿಯೂ ಮನಃಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು ಸ್ವಪ್ರಯತ್ನದಿಂದ ತನ್ನ ಕೌಶಲವನ್ನು ಬೆಳೆಸಿಕೊಂಡು ಬೆಳೆಯಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.