ADVERTISEMENT

SSLC ವಿಜ್ಞಾನ ಪರೀಕ್ಷೆ ದಿಕ್ಸೂಚಿ: ​ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

ಪ್ರಜಾವಾಣಿ ವಿಶೇಷ
Published 18 ಜನವರಿ 2022, 19:30 IST
Last Updated 18 ಜನವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಜ್ಞಾನ:ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

ಪ್ರಮುಖಾಂಶಗಳು
ಸಂಯೋಗಕ್ರಿಯೆ: ಎರಡು/ಹೆಚ್ಚು ಪ್ರತಿವರ್ತಕಗಳು ಸೇರಿ ಒಂದು ಉತ್ಪನ್ನವಾಗುವಿಕೆ.

ವಿಭಜನ ಕ್ರಿಯೆ: ಒಂದು ಪ್ರತಿವರ್ತಕ ವಿಭಜಿಸಿ ಎರಡು/ಹೆಚ್ಚು ಉತ್ಪನ್ನಗಳಾಗುವಿಕೆ.

ADVERTISEMENT

ಸ್ಥಾನಪಲ್ಲಟ ಕ್ರಿಯೆ: ಹೆಚ್ಚು ಕ್ರಿಯಾಶೀಲ ಧಾತುಗಳು ಸಂಯುಕ್ತದಲ್ಲಿನ ಕಡಿಮೆ ಕ್ರಿಯಾಶೀಲ ಧಾತುಗಳನ್ನು ಸ್ಥಾನಪಲ್ಲಟಗೊಳಿಸುವಿಕೆ.

ದ್ವಿಸ್ಥಾನಪಲ್ಲಟ ಕ್ರಿಯೆ: ಪ್ರತಿವರ್ತಕಗಳ ನಡುವೆ ಅಯಾನುಗಳ ವಿನಿಮಯವಾಗುವಿಕೆ.

ಉತ್ಕರ್ಷಣೆ: ರಾಸಾಯನಿಕ ಕ್ರಿಯೆಯಲ್ಲಿ ವಸ್ತುವೊಂದು O2 ಪಡೆದುಕೊಳ್ಳುವಿಕೆ/ H2 ಕಳೆದುಕೊಳ್ಳುವಿಕೆ.

ಅಪಕರ್ಷಣೆ: ರಾಸಾಯನಿಕ ಕ್ರಿಯೆಯಲ್ಲಿ ವಸ್ತುವೊಂದು H2 ಪಡೆದುಕೊಳ್ಳುವಿಕೆ/ O2 ಕಳೆದುಕೊಳ್ಳುವಿಕೆ.

ರೆಡಾಕ್ಸ್ ಕ್ರಿಯೆ: ರಾಸಾಯನಿಕ ಕ್ರಿಯೆಯಲ್ಲಿ ಒಂದು ಪ್ರತಿವರ್ತಕವು ಉತ್ಕರ್ಷಣೆಗೊಂಡು ಮತ್ತೊಂದು ಪ್ರತಿವರ್ತಕವು ಅಪಕರ್ಷಣೆಗೊಳ್ಳುವಿಕೆ.

ಬಹಿರುಷ್ಣಕ ಕ್ರಿಯೆ: ರಾಸಾಯನಿಕಕ್ರಿಯೆ ನಡೆದಾಗ ಉತ್ಪನ್ನದ ಜೊತೆಗೆ ಶಕ್ತಿಯು ಉಷ್ಣದ ರೂಪದಲ್ಲಿ ಬಿಡುಗಡೆಯಾಗುವಿಕೆ.

ಅಂತರುಷ್ಣಕ ಕ್ರಿಯೆ: ರಾಸಾಯನಿಕಕ್ರಿಯೆ ನಡೆದಾಗ ಉತ್ಪನ್ನದ ಜೊತೆಗೆ ಶಕ್ತಿಯು ಉಷ್ಣದ ರೂಪದಲ್ಲಿ ಹೀರಿಕೆಯಾಗುವಿಕೆ.

ನಶಿಸುವಿಕೆ: ಲೋಹವು ತನ್ನ ಸುತ್ತಲಿನ ಗಾಳಿ, ತೇವಾಂಶ, ಆಮ್ಲಗಳೊಂದಿಗೆ ವರ್ತಿಸಿ, ತನ್ನ ಗುಣಗಳನ್ನು ಕಳೆದುಕೊಂಡು ಹಾಳಾಗುವಿಕೆ.

ಕಮಟುವಿಕೆ: ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಸುತ್ತಲಿನ ಗಾಳಿಯೊಂದಿಗೆ ವರ್ತಿಸಿ ಉತ್ಕರ್ಷಣೆಗೊಂಡು, ಅವುಗಳ ವಾಸನೆ ಮತ್ತು ರುಚಿ ಬದಲಾಗುವಿಕೆ.

ಸಂಭವನೀಯ ಪ್ರಶ್ನೆಗಳು– ಉತ್ತರಗಳು
1.ರಾಸಾಯನಿಕ ಕ್ರಿಯೆ ನಡೆದಿದೆ ಎಂದು ನಿರ್ಧರಿಸುವ ಅಂಶಗಳಾವುವು?

1. ಸ್ಥಿತಿ ಬದಲಾವಣೆ
2. ಬಣ್ಣದಲ್ಲಿ ಬದಲಾವಣೆ
3. ತಾಪದಲ್ಲಿ ಬದಲಾವಣೆ
4. ಅನಿಲದ ಬಿಡುಗಡೆ

2. ಈ ರಾಸಾಯನಿಕ ಕ್ರಿಯೆಗಳ ಸಮೀಕರಣ ಬರೆದು ಸರಿದೂಗಿಸಿರಿ.
ಎ)
ಕಬ್ಬಿಣವು ತೇವಾಂಶದೊಂದಿಗೆ ವರ್ತಿಸಿದಾಗ
Fe + 4 H2O ------ Fe3O4 + 4H2
ಬಿ) ಸೋಡಿಯಂ ಚೂರೊಂದನ್ನು ನೀರಿಗೆ ಹಾಕಿದಾಗ
2Na + 2H2O ------ 2NaOH + H2
ಸಿ) ಸೀಸದ ನೈಟ್ರೇಟ್ ಪುಡಿಯನ್ನು ಕಾಸಿದಾಗ
2Pb(NO3)2 -- 2PbO + 4NO2 + O2
ಡಿ) ನೈಸರ್ಗಿಕ ಅನಿಲದ ದಹನ
CH4 + 2O2 ---------- CO2 + 2H2O

3.ವಿಭಜನಾ ಕ್ರಿಯೆಯ ಮೂರು ವಿಧಗಳನ್ನು ಹೆಸರಿಸಿ. ಪ್ರತಿಯೊಂದಕ್ಕೂ ಉದಾಹರಣೆ ಕೊಡಿ. -*ಉಷ್ಣ ವಿಭಜನಾ ಕ್ರಿಯೆ.
ಉದಾ:
CaCO3 ----- CaO + CO2
* ವಿದ್ಯುದ್ವಿಭಜನಾ ಕ್ರಿಯೆ.
ಉದಾ: 2H2O---2H2 + O2
*ದ್ಯುತಿ ವಿಭಜನಾ ಕ್ರಿಯೆ.
ಉದಾ: 2AgCl----2Ag + Cl2

4. ರೆಡಾಕ್ಸ್ ಕ್ರಿಯೆ ಎಂದರೇನು? ಉದಾಹರಣೆ ಕೊಡಿ.
ಒಂದು ರಾಸಾಯನಿಕ ಕ್ರಿಯೆಯಲ್ಲಿ ಒಂದು ಪ್ರತಿವರ್ತಕವು ಉತ್ಕರ್ಷಣೆಗೊಂಡು, ಮತ್ತೊಂದು ಪ್ರತಿವರ್ತಕವು ಅಪಕರ್ಷಣೆಗೊಂಡರೆ, ಅಂತಹ ಕ್ರಿಯೆಯನ್ನು ರೆಡಾಕ್ಸ್ ಕ್ರಿಯೆ ಎನ್ನುವರು. ಉದಾ: CuO + H2 ---- Cu + H2O

5. ಸೋಡಿಯಂ ಸಲ್ಫೇಟ್ ದ್ರಾವಣಕ್ಕೆ ಅಷ್ಟೇ ಪ್ರಮಾಣದ ಬೇರಿಯಂ ಕ್ಲೋರೈಡ್ ದ್ರಾವಣವನ್ನು ಸೇರಿಸಿದಾಗ ಉಂಟಾಗುವ ಪ್ರಕ್ಷೇಪ ಯಾವುದು? ಈ ಕ್ರಿಯೆಯ ಸಮೀಕರಣ ಬರೆಯಿರಿ.
ಬೇರಿಯಂಸಲ್ಫೇಟ್ (BaSO4)
Na2SO4+BaCl2----BaSO4+ 2NaCl

ಅನ್ವಯ ಮಾದರಿ ಪ್ರಶ್ನೆಗಳು– ಉತ್ತರಗಳು.
6.ಚಿಪ್ಸ್ ಪೊಟ್ಟಣದಲ್ಲಿ ನೈಟ್ರೋಜನ್‌ನಂತಹ ಅನಿಲವನ್ನು ಹಾಯಿಸುತ್ತಾರೆ. ಏಕೆ?

ಏಕೆಂದರೆ ನೈಟ್ರೋಜನ್ ಚಿಪ್ಸ್ ಉತ್ಕರ್ಷಣೆಗೊಳ್ಳುವುದನ್ನು ತಡೆಗಟ್ಟುತ್ತದೆ.

7.ಒಂದು ಬೀಕರ್‌ನಲ್ಲಿ ಸುಟ್ಟಸುಣ್ಣವನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ. ಬೀಕರಿನ ತಳಭಾಗವನ್ನು ಮುಟ್ಟಿದಾಗ ನಿಮಗಾಗುವ ಅನುಭವವೇನು? ಏಕೆ?
ಬೀಕರ್ ಬಿಸಿಯಾಗಿರುತ್ತದೆ. ಏಕೆಂದರೆ ಇದೊಂದು ಬಹಿರುಷ್ಣಕ ಕ್ರಿಯೆಯಾಗಿದ್ದು ಉಷ್ಣ ಬಿಡುಗಡೆಯಾಗುತ್ತದೆ.

8. ಫೆರಸ್ ಸಲ್ಫೇಟ್ ಹರಳುಗಳನ್ನು ಶುಷ್ಕ ಕುದಿಗೊಳವೆಯಲ್ಲಿ ಕಾಸಿದಾಗ ಅದರ ಬಣ್ಣ ಬದಲಾಗುತ್ತದೆ. ಏಕೆ?
ಏಕೆಂದರೆ ಕಾಯಿಸಿದಾಗ ನೀರಿನ ಅಣುಗಳನ್ನು ಕಳೆದುಕೊಳ್ಳುತ್ತವೆ.

9.ಬೆಳ್ಳಿಯ ಕ್ಲೋರೈಡ್ ದ್ರಾವಣವನ್ನು ಸೂರ್ಯನ ಬೆಳಕಿನಲ್ಲಿಟ್ಟರೆ, ಅದು ಬೂದುಬಣ್ಣಕ್ಕೆ ತಿರುಗುತ್ತದೆ. ಏಕೆ?
ಏಕೆಂದರೆ ಬೆಳಕು ಬೆಳ್ಳಿಯ ಕ್ಲೋರೈಡ್‌ನ್ನು ಬೆಳ್ಳಿ ಮತ್ತು ಕ್ಲೋರಿನ್ ಆಗಿ ವಿಭಜಿಸುತ್ತದೆ.

ಪರೀಕ್ಷೆಗೆ ಸಂಭವನೀಯ ಚಿತ್ರ:
10.ನೀರಿನ ವಿದ್ಯುದ್ವಿಭಜನೆಯ ಚಿತ್ರ ಬರೆದು ಭಾಗಗಳನ್ನು ಗುರ್ತಿಸಿ.

***

Chemical Reactions and Equations

-ಬಾಲರಾಜು.ಎ, ಎಂ.ಎಸ್ಸಿ.,ಎ.ಇಡಿ,
ವಿಜ್ಞಾನ ಶಿಕ್ಷಕರು, ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.