ADVERTISEMENT

ಕಾಂಗ್ರೆಸ್‌ನ ಅಶ್ವಮೇಧ ಕುದುರೆ ಕಟ್ಟಿ ಹಾಕುತ್ತೇವೆ: ಶಾಸಕ ಉಮಾನಾಥ ಕೋಟ್ಯಾನ್

ಬಿಜೆಪಿ ಮಹಿಳಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:58 IST
Last Updated 5 ಏಪ್ರಿಲ್ 2019, 13:58 IST
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶುಕ್ರವಾರ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯರು.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶುಕ್ರವಾರ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯರು.   

ಮೂಡುಬಿದಿರೆ:`ಕಾಂಗ್ರೆಸ್ ಪಕ್ಷದ ಒಂದಲ್ಲ, ಮೂರು ಅಶ್ವಮೇಧ ಕುದುರೆಗಳನ್ನು ಮೂಡುಬಿದಿರೆಯಲ್ಲಿ ಕಟ್ಟಿ ಹಾಕುವ ತಾಕತ್ತು ಬಿಜೆಪಿಗಿದೆ' ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಶುಕ್ರವಾರ ಇಲ್ಲಿನ ಸಮಾಜ ಮಂದಿರದಲ್ಲಿ ನಡೆದ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಕಾಂಗ್ರೆಸ್‌ಗೆ ಖಡಕ್‌ ಉತ್ತರ ನೀಡಿದರು.

ದೇಶದ ಈಗಿನ ಪರಿಸ್ಥಿತಿ ಗಮನಿಸುವಾಗ ಕೇಂದ್ರದಲ್ಲಿ ಬಿಜೆಪಿಯೇ ಆಡಳಿತಕ್ಕೆ ಬರಬೇಕು, ಮೋದಿ ಪ್ರಧಾನಿಯಾಗಬೇಕು ಎಂಬ ಅಲೆ ವ್ಯಕ್ತವಾಗುತ್ತಿದೆ. ಇದು ಅನಿವಾರ್ಯವು ಕೂಡಾ. ಮೋದಿ ಕುಟುಂಬ ರಾಜಕಾರಣದಿಂದ ಬಂದವರಲ್ಲ. ಬಡ ಕುಟುಂಬದಿಂದ ಬಂದವರು. ಮೋದಿ ಅವರು ರಾಜಕೀಯದ ವಿವಿಧ ಹಂತಗಳಲ್ಲಿ ಬೆಳೆದು ಪ್ರಧಾನಿಯಾಗಿದ್ದಾರೆ. ಐದು ವರ್ಷ ದೇಶವನ್ನು ಸಮರ್ಥವಾಗಿ ಮುನ್ನಡೆಸಿ ವಿಶ್ವವೆ ಭಾರತವನ್ನು ಗಮನಿಸುವಂತೆ ಮಾಡಿದ್ದಾರೆ. ಪಾಕಿಸ್ತಾನ್‌ ಗಡಿಯೊಳಗೆ ನುಗ್ಗಿ ಸರ್ಜಿಕಲ್‌ ದಾಳಿ ಮಾಡಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸುವ ದಿಟ್ಟ ಸಾಹಸ ಮಾಡಿದ್ದಾರೆ. ಉರಿ ಹಾಗೂ ಪುಲ್ವಾಮಾ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಪಾಕ್‌ಗೆ ಮಾತ್ರವಲ್ಲ ಭಾರತದ ತಂಟೆಗೆ ಬಂದರೆ ಯಾವ ದೇಶ ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದವರು ಪ್ರಧಾನಿ ಮೋದಿ. ಇಂತಹ ಧೈರ್ಯವನ್ನು ಭಾರತದ ಯಾವ ಪ್ರಧಾನಿಯೂ ಇದುವರೆಗೆ ಮಾಡಿಲ್ಲ. ದೇಶದ ಭದ್ರತೆಗೆ ಮತ್ತೊಮ್ಮೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಮಂಗಳೂರು ಸಂಸದ ನಳಿನ್ ಕುಮಾರ್ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿರೋಧ ಪಕ್ಷದವರ ಆರೋಪಗಳಿಗೆ ಜನತೆ ಕಿವಿ ಕೊಡಬೇಕಾಗಿಲ್ಲ. ನಳಿನ್ ಸಾಮಾನ್ಯ ಕುಟುಂಬದಿಂದ ಬಂದವರು. ಎಂಎಲ್ಎ ಚುನಾವಣೆಯಲ್ಲಿ ನೀವು ನನ್ನನ್ನು 30 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಳಿನ್ ಅವರಿಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಮತಗಳ ಮುನ್ನಡೆ ಸಿಗಬೇಕು. ಈ ಗುರಿಯನ್ನಿಟ್ಟುಕೊಂಡು ಪಕ್ಷದ ಕಾರ್ಯಕರ್ತರು ದುಡಿಯಬೇಕು ಎಂದರು.

ರಾಜ್ಯ ಮಹಿಳಾ ಮೋರ್ಚಾ ಸಹ ವಕ್ತಾರೆ ಸುಲೋಚನಾ ಭಟ್ ಮಾತನಾಡಿ `ರಾಜ್ಯದಲ್ಲಿ ಮೈತ್ರಿಕೂಟದ ಆಡಳಿತ ಎಂದರೆ ಅಪ್ಪ, ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ನಿಲ್ಲುವುದು ಎಂಬಂತಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ ಮಂಡ್ಯ, ಮೈಸೂರು, ತುಮಕೂರಿನಲ್ಲಿ ಮೈತ್ರಿ ಪಕ್ಷದೊಳಗಿನ ಕಚ್ಚಾಟ ನೋಡಿದರೆ ಕುಂಟ ಮತ್ತು ಕರುಡರ ಕತೆ ನೆನಪಾಗುತ್ತದೆ' ಎಂದು ವ್ಯಂಗ್ಯ ವಾಡಿದರು.


ಬಿಜೆಪಿ ಪ್ರಮುಖರಾದ ಈಶ್ವರ್ ಕಟೀಲು, ಜಗದೀಶ್ ಅಧಿಕಾರಿ, ಸುಕೇಶ್ ಶೆಟ್ಟಿ ಮಹಿಳಾ ಪ್ರಮುಖರಾದ ಸುಜಾತ, ಲೀಲಾ ಬಂಜನ್, ಶಶಿಕಲಾ ಶೆಟ್ಟಿ, ರೇಖಾ ಸಾಲ್ಯಾನ್, ನಾಗವೇಣಿ, ಜಯಲಕ್ಷ್ಮಿ ನಾಯಕ್,ಅನಿತಾ ಬಲ್ಲಾಳ್, ಗೀತಾ ಆಚಾರ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.