ADVERTISEMENT

ಬಿ.ವಿ.ನಾಯಕ ವಿರುದ್ಧ ಆಯೋಗಕ್ಕೆ ದೂರು: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 10:19 IST
Last Updated 24 ಏಪ್ರಿಲ್ 2019, 10:19 IST

ರಾಯಚೂರು: ಮಹಾತ್ಮಗಾಂಧಿ ಅವರನ್ನು ಬಿಜೆಪಿಯವರು ಕೊಂದಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಆರ್‌ಎಸ್‌ಎಸ್‌ನವರು ಮಹಾತ್ಮಗಾಂಧಿಯನ್ನು ಕೊಂದಿದ್ದಾರೆ ಎಂದಿದ್ದರು. ನಂತರ ಸುಪ್ರೀಂಕೋರ್ಟ್‌ನಲ್ಲಿ ಕ್ಷಮಾಪಣೆ ಕೇಳಿದ್ದರು. 1948ರಲ್ಲಿ ಮಹಾತ್ಮಗಾಂಧಿ ಸಾವಿಗೀಡಾಗಿದ್ದಾರೆ. 1952ರಲ್ಲಿ ಜನಸಂಘ ಸ್ಥಾಪನೆಯಾಗಿದೆ. ಇತಿಹಾಸ ಅರಿತುಕೊಳ್ಳದೇ ಹೇಳಿಕೆ ನೀಡಿರುವ ಬಿ.ವಿ.ನಾಯಕ ಬಹಿರಂಗ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಿ.ವಿ.ನಾಯಕ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವಂತೆ ದೂರು ನೀಡಲಾಗುವುದು. ಈಗಾಗಲೇ ಈ ಬಗ್ಗೆ ರಾಜ್ಯ ಸಮಿತಿಗೆ ಮಾಹಿತಿಯೂ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಜೆ.ಶರಣಪ್ಪಗೌಡ ಮಾತನಾಡಿ, ಏಪ್ರಿಲ್ 12ರಂದು ಗಂಗಾವತಿಯಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಪಾಲ್ಗೊಳ್ಳಲಿದ್ದು, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಯು.ದೊಡ್ಡ ಮಲ್ಲೇಶಪ್ಪ, ಎ.ಚಂದ್ರಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.