ADVERTISEMENT

2.80 ಲಕ್ಷ ಮತಗಳಿಂದ ಜೆಡಿಎಸ್‌ ಗೆಲುವು-ಪ್ರೀತಂಗೌಡ ನಡೆಸಿದ ಆಡಿಯೊ ಸಂಭಾಷಣೆ ವೈರಲ್

ಕಾರ್ಯಕರ್ತನ ಜತೆ ಸಂಭಾಷಣೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 16:01 IST
Last Updated 2 ಮೇ 2019, 16:01 IST
ಪ್ರೀತಂ ಗೌಡ
ಪ್ರೀತಂ ಗೌಡ   

ಹಾಸನ: ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರಿಗೆ ಜೆಡಿಎಸ್ ಅಭ್ಯರ್ಥಿ ಸೋಲಿಸುವುದೇಗೆ ಎಂದು ಶಾಸಕ ಪ್ರೀತಂ ಗೌಡ ಪಾಠ ಹೇಳಿಕೊಡುವ ದೃಶ್ಯಾವಳಿ ವೈರಲ್ ಆದ ಬೆನ್ನಲ್ಲೇ, ಮಂಗಳವಾರ ಅವರದೇ ಪಕ್ಷದ ಅಭ್ಯರ್ಥಿ ವಿರುದ್ಧ ಮಾತನಾಡಿರುವ ಆಡಿಯೊ ಸಂಭಾಷಣೆ ಬೇರೊಂದು ರೀತಿಯಲ್ಲಿ ಕಂಪನ ಸೃಷ್ಟಿಸಿದೆ.

ತಮ್ಮ ಬೆಂಬಲಿಗನೊಂದಿಗೆ 1.37 ನಿಮಿಷ ಸಂಭಾಷಣೆ ನಡೆಸಿರುವ ಪ್ರೀತಂ ಗೌಡ, ಕಮಲ ಅಭ್ಯರ್ಥಿ ಸೋಲುವ ಮಾತುಗಳನ್ನಾಡಿದ್ದಾರೆ. ‘ಮಂಜು,ಮಂತ್ರಿಯಾಗಿದ್ದಾಗ ಯಾವುದೇ ಸಾಧನೆ ಮಾಡಿಲ್ಲ. ಹಿಂದೆ ಬಿಜೆಪಿಗೆ ಕೈ ಕೊಟ್ಟಿದ್ದಾರೆ. 2.80 ಲಕ್ಷ ಮತಗಳ ಅಂತರದಿಂದ ಜೆಡಿಎಸ್ ಗೆಲ್ಲುತ್ತೆ ಎಂದು ಬಿಟ್ಟಿದ್ದಾರೆ.

ಪ್ರೀತಂಗೌಡ-ಕಾರ್ಯಕರ್ತನ ನಡುವಿನ ಸಂಭಾಷಣೆ ವಿವರ ಹೀಗಿದೆ.

ADVERTISEMENT

ಕಾರ್ಯಕರ್ತ: ಅಲ್ಲಾ, ಹೋಗ್ಲಿ ಅವನಿಗೇನು ದರ್ದು? ನಮ್ ಪಾರ್ಟಿಗೆ ಬಂದು ಕ್ಯಾಂಡಿಡೇಟ್ ಆಗೋಕೆ?

ಪ್ರೀತಂಗೌಡ: ಪುಕ್ಸಟ್ಟೆ ಲೀಡರ್ ಆಗ್ತಾನಲ್ಲ.

ಕಾರ್ಯಕರ್ತ: ಹೌದಣ್ಣ ಹೌದು

ಪ್ರೀತಂಗೌಡ: ಇಲ್ಲೇನಾಗಿದೆ ಅಂದ್ರೆ ಜಿಲ್ಲೆಯಲ್ಲಿ ಬಿಜೆಪಿ ಡೆವಲಪ್ ಆಗಿದೆ‌. ಬೇಲೂರಲ್ಲಿ ಸೆಕೆಂಡ್ ಪ್ಲೇಸು. ಸಕಲೇಶಪುರ ಸೆಕೆಂಡ್ ಪ್ಲೇಸು.ಇಲ್ಲಿ ಗೆದ್ದಿದ್ದಿವಿ.ಅರಸೀಕೆರೆಲಿ ವೋಟ್ ಬ್ಯಾಂಕ್ ಇದೆ.ಕಡೂರಲ್ಲೂ ಇದೆ.‌

ಕಾರ್ಯಕರ್ತ: ಒಂದ್ ನಿಮಿಷ ಅಣ್ಣ, ನೀವು ಹೇಳಿದಂಗೆ ಪುಕ್ಸಟ್ಟೆ ಲೀಡರ್ ಆಗ್ತಾನೆ ನಿಜ. ಆದರೆ, ಕಾಂಗ್ರೆಸ್ ನಲ್ಲಿದ್ದಾಗ, ನಮ್ಮ ಮೇಲೆ, ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಹಾಕ್ಸಿದ್ದಾನಲ್ಲ.
ಜನ ಅದನ್ನು ಮರ್ತುಬಿಡ್ತಾರಾ?

ಪ್ರೀತಂಗೌಡ: ಹ್ಞಾಂ, ನೆಗಿಟಿವಿಟಿ ಹತ್ತು ವರ್ಷದ ಹಿಂದೆ ಆಗಿದ್ದರೆ ಜನ ಮರೆತುಬಿಡ್ತಾರೆ ಅನ್ಕೊಬಹುದು. ಆದರೆ ಏಳು ತಿಂಗಳ ಹಿಂದೆ, ಮಂಜು ಮಾಡಿರುವ ಅವಾಂತಗಳು ಮರಿಯೋಕೆ ಆಗಲ್ಲ.

ಕಾರ್ಯಕರ್ತ: ಹೌದಣ್ಣ… ನಿಜ ನಿಜ.

ಪ್ರೀತಂಗೌಡ: ಹಂಗಾಗಿ ಜೆಡಿಎಸ್‌ಗೆ ಓಟು ಹೋಗುತ್ತೆ.

ಕಾರ್ಯಕರ್ತ: ಅಲ್ಲಾ ಅಣ್ಣ. ಜೆಡಿಎಸ್ ಗೆಲ್ಲುತ್ತೆ ಅಂತ ನೀವೇ ಹೇಳ್ತೀರಿ. ಹಾಗಾದ್ರೆ ನೀವು ಮಾಡುತ್ತಿರುವ ಶ್ರಮ ಎಲ್ಲಾ ವೇಸ್ಟ್ ಅಲ್ವೇನಣ್ಣ?

ಪ್ರೀತಂಗೌಡ: ಹ್ಞಾಂ, ನಾನು 20 ಗಂಟೆ ಕೆಲಸ ಮಾಡ್ತೀನಿ. ಆದರೆ ಬಿಜೆಪಿಯವರು-ಸಂಘದವರು ಇವರಿಗೆ ಮಾಡಲ್ಲ. ಬಳ್ಳಾರಿಯಲ್ಲಿ ಶ್ರೀರಾಮುಲು ಎಲೆಕ್ಷನ್ ರಿಪೀಟ್ ಆಗುತ್ತೆ. ಹೆಸರಿಗೆ ಮಾತ್ರ ಮಂಜು ಬಿಗ್ ಸ್ಟಾರ್. ಬೂತ್ ತೆಗೆದು ನೋಡಿದರೆ 2.80 ಸಾವಿರ ಓಟಿನಲ್ಲಿ ಜೆಡಿಎಸ್ ನವರು ಗೆದ್ದರು ಅಂತಾರೆ. ಆಗ, ಓ….. ದುಡ್ಡು ಹಂಚಿದರು ಜೆಡಿಎಸ್ ನವರು ಅಂತಾರೆ.

ಕಾರ್ಯಕರ್ತ: ಆಯ್ತು ಅಣ್ಣ. ನೀವು ಹೇಳಿದ್ದನ್ನು ಒಪ್ಪಿಕೊಳ್ತಿನಿ ನಾನು. ಒಕೆ. ನೀವು ಹೇಳಿದಂಗೆ ಸೋಲ್ತಾನೆ. ಒಂದು ಪಕ್ಷ ಅವನು ಗೆದ್ದರೆ, ನನಗೆ ಬಂದಿರುವ ಓಟೆಲ್ಲಾ ಪ್ರೀತಂಗೌಡರಿಂದ ಬಂತು ಅಂತ ಹೇಳ್ತಾನಾ?

ಪ್ರೀತಂಗೌಡ: ಓಟು ಬಂದರೆ ಮಂಜಣ್ಣ ನಾನು ತಂದಿದ್ದೆ ಅಂತಾರೆ. ಸೋತು ಬಿಟ್ಟರೆ ಆಮೇಲೆ ಓಡೋಗಿ ಬಿಡ್ತಾರೆ. ಸೋತರೆ ಮತ್ತೆ ಸಿದ್ದರಾಮಯ್ಯ ಅಂತ ಹೋರಟು ಬಿಡ್ತಾರೆ. ಅವರೇನು ಪಾರ್ಟಿಯಲ್ಲಿ ಇರೋರಲ್ಲ. ಎರಡು ಸಾರಿ ಬಿಜೆಪಿಗೆ ಕೈಕೊಟ್ಟು ಹೋಗಿದ್ದಾರೆ.
ಆಪರೇಷನ್ ಕಮಲ ಲಾಸ್ಟ್ ಟೈಮ್ 2008 ರಲ್ಲಿ ಬಂದು ಹೋದರು. ಅದಕ್ಕೂ ಮುಂಚೆ 99 ರಲ್ಲಿ ಗೆದ್ದು ವಾಪಸ್ ಹೋದರು. ಅವರು ಬಂದಾಗ ಏನೋ ಮಾಡ್ತಾರೆ. ಆಮೇಲೆ ಏನ್ ಗೊತ್ತಾ, ಈಗ ನಾವು ಸೆಕೆಂಡ್ ಪ್ಲೆಸಲ್ಲಿ ಇದ್ದೀವಿ. ಥರ್ಡ್ ಪ್ಲೇಸ್ ಇದ್ದೀವಿ. ಅವರು ಬಂದು ಪಾರ್ಟಿನಾ ಗುಡಿಸಿಕೊಂಡು ಹೋದರೆ, ಮತ್ತೆ ನಾವು ಥರ್ಡ್ ಪ್ಲೇಸಿಗೇ ಹೋಗ್ಬೇಕಾಗುತ್ತೆ.

ಕಾರ್ಯಕರ್ತ: ಆಯ್ತು ಬಿಡಣ್ಣ.ಅರ್ಥ ಆಯ್ತು. ವಾಪಸ್ ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳಿಸ್ತೀವಿ.
ಇಲ್ಲಿಗೆ ಇಬ್ಬರ ನಡುವಿನ ಸಂಭಾಷಣೆ ಮುಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.