ADVERTISEMENT

ಯುಪಿಪಿ ಬೂದಿ ಮುಚ್ಚಿದ ಕೆಂಡವಿದ್ದಂತೆ: ಉಪೇಂದ್ರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 13:10 IST
Last Updated 15 ಏಪ್ರಿಲ್ 2019, 13:10 IST
ಚಿತ್ರನಟ ಉಪೇಂದ್ರ ಅವರು ಶಿರಸಿಯ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದರು
ಚಿತ್ರನಟ ಉಪೇಂದ್ರ ಅವರು ಶಿರಸಿಯ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದರು   

ಶಿರಸಿ: ಉತ್ತಮ ಪ್ರಜಾಕೀಯ ಪಕ್ಷ(ಯುಪಿಪಿ)ವು ಬೂದಿ ಮುಚ್ಚಿದ ಕೆಂಡ ಇದ್ದಂತೆ. ಅದು ಧಗಧಗ ಎಂದು ಉರಿಯುವುದಿಲ್ಲ ಬದಲಾಗಿ ಒಳಗೊಳಗೇ ಹಬ್ಬುತ್ತದೆ ಎಂದು ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.

ಇಲ್ಲಿನ ಮಾರಿಕಾಂಬಾ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ಪಕ್ಷದ ಅಭ್ಯರ್ಥಿ ಸುನೀಲ್ ಪವಾರ ಜತೆಗೂಡಿ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕಾರಣ ಉದ್ದಿಮೆಯಂತಾಗಿದೆ. ಹಣ ಬಲ, ತೋಳ್ಬಲದಿಂದ ರಾಜಕೀಯ ಮಾಡುವವರೇ ಅಧಿಕವಾಗಿದ್ದಾರೆ. ಆದರೆ, ಉತ್ತಮ ಪ್ರಜಾಕೀಯ ಪಕ್ಷ ಇವೆಲ್ಲವನ್ನೂ ಹೊರತುಪಡಿಸಿ ಬೇರೆ ರೀತಿಯಲ್ಲಿ ಯೋಚಿಸಿ, ರಾಜಕೀಯಕ್ಕೆ ಬಂದಿದೆ’ ಎಂದರು.

‘ಈಗಾಗಲೇ ಬಳ್ಳಾರಿಯನ್ನು ಹೊರತು ಪಡಿಸಿ ಉಳಿದ 27 ಲೋಕಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ನಮ್ಮ ಅಭ್ಯರ್ಥಿಗಳಿಗೆ ಜನರೇ ಹೈಕಮಾಂಡ್ ಹೊರತು, ಬೇರೆ ಯಾರೂ ಅವರನ್ನು ಪ್ರಶ್ನಿಸುವಂತಿಲ್ಲ. ಆ ನಿಟ್ಟಿನಲ್ಲಿ ನಮ್ಮ ವಿಚಾರ ಧಾರೆಯನ್ನು ಇಟ್ಟುಕೊಂಡು ಈ ಪಕ್ಷವನ್ನು ಕಟ್ಟಲಾಗಿದೆ. ಜನ ಏನು ಬಯಸುತ್ತಾರೋ ಅದನ್ನು ಮಾಡುವ ಕಾರ್ಮಿಕರು ನಾವಾಗಿರಬೇಕೇ ಹೊರತು ನಾಯಕನಾಗಬಾರದು. ನಮ್ಮಲ್ಲಿ ಯಾವುದೇ ಪ್ರಣಾಳಿಕೆ ಇಲ್ಲ. ಬದಲಿಗೆ ಮತದಾರ ನೀಡುವ ದೂರನ್ನು ಪರಿಶೀಲಿಸಿ ಸರಿಪಡಿಸುವುದೇ ನಮ್ಮ ಧ್ಯೇಯ’ ಎಂದು ಹೇಳಿದರು.

ADVERTISEMENT

ಪ್ರತಿಯೊಬ್ಬ ಜನಪ್ರತಿನಿಧಿಯೂ ಐದು ವರ್ಷಕ್ಕೆ ಒಮ್ಮೆ ಬರುವುದಲ್ಲ. ಬದಲಿಗೆ ಐದು ವರ್ಷದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಏನು ವರದಿ ಕೊಟ್ಟಿದ್ದಾರೆ ಎನ್ನುವುದು ಮುಖ್ಯ ಎಂದು ಉಪೇಂದ್ರ ಹೇಳಿದರು. ಅಭ್ಯರ್ಥಿ ಸುನೀಲ್ ಪವಾರ ಮಾತನಾಡಿ, ‘ಈಗಾಗಲೇ ಜಿಲ್ಲೆಯ ಹಲವು ಸಮಸ್ಯೆಗಳು ತಿಳಿದಿವೆ. ಯುವಜನರಿಗೆ ಉದ್ಯೋಗ ಸಿಗುತ್ತಿಲ್ಲ. ಅತಿಕ್ರಮಣ ಸಮಸ್ಯೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.