ADVERTISEMENT

ಅಮೇಠಿ ಕೋಟೆಯಲ್ಲಿ ಸ್ಮೃತಿ ಕಲರವ...

ಬಿಜೆಪಿ ಅಭ್ಯರ್ಥಿಯಿಂದ ರಾಹುಲ್‌ ಗಾಂಧಿಗೆ ಪ್ರಬಲ ಪೈಪೋಟಿ ನಿರೀಕ್ಷೆ l ಸ್ಥಳೀಯ ಶಾಸಕರ ಬಲ

​ಪ್ರಜಾವಾಣಿ ವಾರ್ತೆ
Published 20 ಮೇ 2019, 12:47 IST
Last Updated 20 ಮೇ 2019, 12:47 IST
ರಾಹುಲ್‌ ಗಾಂಧಿ ಹಾಗೂ ಸ್ಮೃತಿ ಇರಾನಿ
ರಾಹುಲ್‌ ಗಾಂಧಿ ಹಾಗೂ ಸ್ಮೃತಿ ಇರಾನಿ   

ಅಮೇಠಿ:ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರ ಪ್ರಬಲ ಪೈಪೋಟಿಯ ಕಾರಣಕ್ಕೆ ದೇಶದ ಗಮನ ಸೆಳೆದಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಈ ಕ್ಷೇತ್ರದಿಂದ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಲ್ಕನೇ ಬಾರಿ ಆಯ್ಕೆ ಬಯಸಿದ್ದಾರೆ. ಬಿಜೆಪಿಯ ‘ಫೈರ್‌ ಬ್ರ್ಯಾಂಡ್’ ನಾಯಕಿ ಸ್ಮೃತಿ ಇರಾನಿ ಅವರು ಈ ಬಾರಿ ರಾಹುಲ್ ಅವರನ್ನು ಸೋಲಿಸುವ ವಿಶ್ವಾಸದಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ ಈವರೆಗೆ 13 ಪೂರ್ಣ ಚುನಾವಣೆಗಳು ಮತ್ತು 2 ಉಪಚುನಾವಣೆಗಳು ನಡೆದಿವೆ. ಇವುಗಳಲ್ಲಿ ಎರಡು ಸಲ ಮಾತ್ರ ಕಾಂಗ್ರೆಸ್ ಸೋಲುಂಡಿದೆ. ಉಳಿದಂತೆ 13 ಬಾರಿ ಕಾಂಗ್ರೆಸ್‌ನದ್ದು ಜಯಭೇರಿ. ಈ ಕಾರಣಕ್ಕೇ ರಾಹುಲ್ ಇದೇ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ.

ಆದರೆ 2014ರ ಚುನಾವಣೆಯ ನಂತರ ಕ್ಷೇತ್ರದಲ್ಲಿ ಪರಿಸ್ಥಿತಿ ಬದಲಾಗಿದೆ. ರಾಹುಲ್ ವಿರುದ್ಧ ಸೋಲುಂಡಿದ್ದ ಸ್ಮೃತಿ ಇರಾನಿ, ನಂತರದ ದಿನಗಳಲ್ಲಿ ಕ್ಷೇತ್ರದ ಜನರೊಂದಿಗೆ ಒಡನಾಟ ಹೆಚ್ಚಿಸಿಕೊಳ್ಳುವ ಕೆಲಸ ಮಾಡಿದ್ದಾರೆ. 2014ರ ಚುನಾವಣೆಯಲ್ಲಿ ಸ್ಮೃತಿ ವಿರುದ್ಧ ರಾಹುಲ್ ಗೆದ್ದಿದ್ದು ಸುಮಾರು ಒಂದು ಲಕ್ಷದಷ್ಟು ಮತಗಳ ಅಂತರದಿಂದ ಮಾತ್ರ. ‘ನಾನು ಸೋತರೂ, ನೈತಿಕವಾಗಿ ಗೆದ್ದಿದ್ದೇನೆ’ ಎಂದೇ ಸ್ಮೃತಿ ಇರಾನಿ ಹೇಳಿದ್ದರು. ಈಗಲೂ ಅದೇ ಹುಮ್ಮಸ್ಸಿನಲ್ಲಿ ಅವರು ಪ್ರಚಾರ ನಡೆಸುತ್ತಿದ್ದಾರೆ.

ADVERTISEMENT

2017ರ ವಿಧಾನಸಭೆ ಚುನಾವಣೆಯಲ್ಲೂ ಅಮೇಠಿಯ ನಾಲ್ಕೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಇದರಲ್ಲಿ ಮೂರು ಬಿಜೆಪಿ ಮತ್ತು ಒಂದು ಎಸ್‌ಪಿ ಪಾಲಾಗಿವೆ.

‘ರಾಹುಲ್ 15 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ, ಕ್ಷೇತ್ರದ ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಕ್ಷೇತ್ರವನ್ನು ಕಡೆಗಣಿಸಿದ್ದಾರೆ’ ಎಂದೇ ಸ್ಮೃತಿ ಇರಾನಿ, ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ ಒಂದು ಸಂಕಥನವನ್ನು ರೂಪಿಸಿದ್ದಾರೆ. ಬಿಜೆಪಿಯ ಪ್ರಚಾರವನ್ನೂ ಇದೇ ಕಾರ್ಯಸೂಚಿಯಂತೆ ನಡೆಸಲಾಗುತ್ತಿದೆ.

‘ಎಲ್ಲೆಡೆ ರಸ್ತೆಗಳಲ್ಲಿ ಗುಂಡಿಗಳಿರುತ್ತವೆ. ಆದರೆ ಅಮೇಠಿಯಲ್ಲಿ ಗುಂಡಿಗಳಲ್ಲಿ ರಸ್ತೆಯಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸ್ಥಳೀಯ ಶಾಸಕರು ಎಲ್ಲರೂ ಬಿಜೆಪಿಯವರೇ. ಸಂಸದ ಮಾತ್ರ ಯಾಕೆ ಕಾಂಗ್ರೆಸ್‌ನವರಾಗಬೇಕು’ ಎಂಬುದು ಪ್ರತಿ ಭಾಷಣದಲ್ಲೂ ಸ್ಮೃತಿ ಇರಾನಿ ಅವರು ಆಡುವ ಮಾತು.ಇನ್ನೊಂದೆಡೆ ರಾಹುಲ್ ಪರವಾಗಿ ಕಾಂಗ್ರೆಸ್‌ನ ಯುವ ನಾಯಕ ರೆಲ್ಲರೂ ಪ್ರಚಾರ ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತಿತರರು ಮತ ಯಾಚನೆ ಮಾಡಿದ್ದಾರೆ. ಈ ಸಲ ರಾಹುಲ್ ಅವರ ಗೆಲುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ. ನೋಟು ರದ್ದತಿ, ಜಿಎಸ್‌ಟಿ, ರಫೇಲ್ ಮತ್ತು ನಿರುದ್ಯೋಗದ ಸಮಸ್ಯೆಗಳು ಕಾಂಗ್ರೆಸ್‌ನ ಪ್ರಚಾರದ ಸರಕುಗಳಾಗಿವೆ.

ತಂತ್ರಕ್ಕೆ–ಪ್ರತಿತಂತ್ರ

* 2014ರ ಚುನಾವಣೆಯಲ್ಲಿ ಸೋತ ನಂತರವೂ ಸ್ಮೃತಿ ಇರಾನಿ ಅವರು ಕ್ಷೇತ್ರದ ಜನರೊಂದಿಗೆ ಬೆರೆತು, ತಮ್ಮ ಒಡನಾಟವನ್ನು ಉತ್ತಮಪಡಿಸಿಕೊಂಡಿದ್ದಾರೆ. ಐದು ವರ್ಷದುದ್ದಕ್ಕೂ ಕ್ಷೇತ್ರದ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿ ಜನರೊಂದಿಗೆ ಸಭೆ–ಸಂವಾದಗಳನ್ನು ನಡೆಸಿದ್ದಾರೆ. ಜನರು ತಮ್ಮನ್ನು ‘ದೀದಿ’ (ಅಕ್ಕ) ಎಂದು ಗುರುತಿಸುವಂತಹ ವಾತಾವರಣವನ್ನು ಸ್ಮೃತಿ ಸೃಷ್ಟಿಸಿಕೊಂಡಿದ್ದಾರೆ

* ಅಮೇಠಿಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ, ರಾಹುಲ್ ತಮ್ಮ ಗೆಲುವಿನತ್ತ ಮಾತ್ರ ಗಮನ ಹರಿಸುತ್ತಾರೆ. ದೇಶದ ಉಳಿದ ಕ್ಷೇತ್ರಗಳನ್ನು ಕಡೆಗಣಿಸುತ್ತಾರೆ ಎಂಬುದು ಬಿಜೆಪಿಯ ಉನ್ನತ ನಾಯಕರ ತಂತ್ರವಾಗಿತ್ತು. ಹೀಗಾಗಿಯೇ ಸ್ಮೃತಿ ಅವರನ್ನು ಕಣಕ್ಕೆ ಇಳಿಸಲಾಯಿತು ಎಂದು ಪಕ್ಷದ ಮೂಲಗಳು ಹೇಳಿವೆ

* ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಹುಲ್ ಗಾಂಧಿ ಅವರು ಅಮೇಠಿಯಲ್ಲಿ ಪ್ರಚಾರ ನಡೆಸಿದ್ದು ಕಡಿಮೆ. ನಾಮಪತ್ರ ಸಲ್ಲಿಕೆಯ ದಿನ ಮಾತ್ರ ಬೃಹತ್ ರೋಡ್‌ ಷೋ ನಡೆಸಿ, ಬಲ ಪ್ರದರ್ಶಿಸಿದರು. ಉಳಿದಂತೆ ಪಕ್ಷದ ಸ್ಥಳೀಯ ನಾಯಕರೇ ಪ್ರಚಾರ ನಡೆಸುತ್ತಿದ್ದಾರೆ. ಅಮೇಠಿಯ ಜತೆಗೆ ಕೇರಳದ ವಯನಾಡ್‌ನಿಂದಲೂ ಸ್ಪರ್ಧೆಗೆರಾಹುಲ್ ಇಳಿದಿದ್ದರಿಂದ ಬಿಜೆಪಿಯ ತಂತ್ರಕ್ಕೆ ತುಸು ಹಿನ್ನಡೆ ಆದಂತಾಗಿದೆ

* ಅಮೇಠಿಯಲ್ಲಿ ಸೋಲುವ ಭಯದಿಂದಲೇ ರಾಹುಲ್ ವಯನಾಡ್‌ನಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡುತ್ತಿದೆ. ಆದರೆ ‘ರಾಹುಲ್ ಅವರನ್ನು ಗೆಲ್ಲಿಸದೇ ಬಿಡುವುದಿಲ್ಲ’ ಎಂದು ಇಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಪಣತೊಟ್ಟಿದ್ದಾರೆ

* 2014ರಲ್ಲಿ ಮೋದಿ ಅಲೆ ಇತ್ತು. ಹೀಗಾಗಿ ಸ್ಮೃತಿ ಇರಾನಿ ಭಾರಿ ಸಂಖ್ಯೆಯ ಮತ ಪಡೆದಿದ್ದರು. ಆದರೆ ಈ ಬಾರಿ ಮೋದಿಯ ಅಲೆ ಇಲ್ಲ. ಬದಲಿಗೆ ಮೋದಿ ವಿರೋಧಿ ಅಲೆ ಇದೆ. ಜತೆಗೆ ರಾಜ್ಯ ಸರ್ಕಾರದ ವಿರುದ್ಧವೂ ಇಲ್ಲಿನ ಜನರಿಗೆ ಅಸಮಾಧಾನವಿದೆ. ಹೀಗಾಗಿ ಈ ಬಾರಿ ರಾಹುಲ್ ಅವರ ಗೆಲುವಿನ ಅಂತರ ಹಿಗ್ಗಲಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ

* ಎಸ್‌ಪಿ ಮತ್ತು ಬಿಎಸ್‌ಪಿ ಈ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಮತಗಳನ್ನು ಹೊಂದಿವೆ. ಎರಡೂ ಪಕ್ಷಗಳ ಮೈತ್ರಿಕೂಟವು ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಆದರೆ ರಾಹುಲ್‌ಗೆ ಮತ ನೀಡಿ ಎಂದೂ ಈ ಪಕ್ಷಗಳು ಘೋಷಿಸಿಲ್ಲ. ಈ ಮತಗಳೇ ಇಲ್ಲಿನ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕವೂ ಆಗಿಬಿಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.