ADVERTISEMENT

ಮತದಾನ ಜಾಗೃತಿಗೆ ಆಟೊ ಏರಿದ ಸಿಇಒ

ಆಮಿಷಕ್ಕೆ ಬಲಿಯಾಗದೆ ಸ್ವಇಚ್ಛೆಯಿಂದ ಮತ ಹಾಕಿ: ಜಗದೀಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 13:20 IST
Last Updated 1 ಏಪ್ರಿಲ್ 2019, 13:20 IST
ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ ಸಿಇಒ ಜಿ.ಜಗದೀಶ್‌ ಕೋಲಾರದಲ್ಲಿ ಸೋಮವಾರ ಆಟೊದಲ್ಲಿ ನಗರ ಪ್ರದಕ್ಷಿಣೆ ಹಾಕಿ ಮತದಾನದ ಜಾಗೃತಿ ಮೂಡಿಸಿದರು.
ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ ಸಿಇಒ ಜಿ.ಜಗದೀಶ್‌ ಕೋಲಾರದಲ್ಲಿ ಸೋಮವಾರ ಆಟೊದಲ್ಲಿ ನಗರ ಪ್ರದಕ್ಷಿಣೆ ಹಾಕಿ ಮತದಾನದ ಜಾಗೃತಿ ಮೂಡಿಸಿದರು.   

ಕೋಲಾರ: ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌ ಅವರು ಸೋಮವಾರ ಸ್ವತಃ ಆಟೊ ಚಾಲನೆ ಮಾಡುತ್ತಾ ನಗರ ಪ್ರದಕ್ಷಿಣೆ ಹಾಕಿ ನಗರವಾಸಿಗಳಿಗೆ ಮತದಾನದ ಜಾಗೃತಿ ಮೂಡಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಆಟೊ ಚಾಲಕರ ಸಂಘದ ಸಹಯೋಗದಲ್ಲಿ ಇಲ್ಲಿ ಹಮ್ಮಿಕೊಂಡಿದ್ದ ಕಡ್ಡಾಯ ಮತದಾನ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಗದೀಶ್‌ ಆಟೊ ಏರಿ ನಗರ ಸುತ್ತಿದರು. ಮತದಾನದ ಬಗ್ಗೆ ಪ್ರಚಾರ ಮಾಡಲು ಆಟೊಗೆ ಬ್ಯಾನರ್‌ ಕಟ್ಟಲಾಗಿತ್ತು.

ಡೂಂಲೈಟ್‌ ವೃತ್ತ, ಕ್ಲಾಕ್‌ ಟವರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಎಂ.ಬಿ.ರಸ್ತೆ, ಅಮ್ಮವಾರಿ ಪೇಟೆ ವೃತ್ತ, ಮೆಕ್ಕೆ ವೃತ್ತ, ಹಳೇ ಬಸ್ ನಿಲ್ದಾಣ, ಕಾಲೇಜು ವೃತ್ತ, ಇಟಿಸಿಎಂ ವೃತ್ತ, ಬಂಗಾರಪೇಟೆ ವೃತ್ತ, ಪ್ರವಾಸಿ ಮಂದಿರ ಮಾರ್ಗದಲ್ಲಿ ಸಿಇಒ ಆಟೊ ಚಾಲನೆ ಮಾಡಿ ಜಾಗೃತಿ ಮೂಡಿಸಿದರು. ಸ್ವೀಪ್ ಸಮಿತಿ ಸದಸ್ಯರಾದ ಗೋವಿಂದಗೌಡ, ಎಂ.ಸೌಮ್ಯ, ಆರ್.ಗೀತಾ ಅವರು ಆಟೊದಲ್ಲಿ ಕುಳಿತು ಮೈಕ್ ಹಿಡಿದು ‘ಕಡ್ಡಾಯ ಮತದಾನ ಮಾಡಿ’ ಎಂದು ಪ್ರಚಾರ ನಡೆಸಿದರು.

ADVERTISEMENT

‘ಜನರಿಗೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳುತ್ತಿದ್ದೇವೆಯೆ ಹೊರತು ಇಂತಹವರಿಗೆ ಮತ ಹಾಕಿ ಎಂದು ಹೇಳುತ್ತಿಲ್ಲ. ಜನರು ಯೋಗ್ಯ ಅಭ್ಯರ್ಥಿಗೆ ಮತ ನೀಡಿ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಜಗದೀಶ್‌ ಕಿವಿಮಾತು ಹೇಳಿದರು.

‘ದೇಶದ ಭದ್ರ ಬುನಾದಿಗೆ ಚುನಾವಣೆ ಹಾಗೂ ಮತದಾನವು ಅಡಿಗಲ್ಲು ಹಾಕುತ್ತವೆ. ಮತದಾನ ದಿನದಂದು ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಸ್ವಇಚ್ಛೆಯಿಂದ ಮತ ಹಾಕಬೇಕು. ರಜೆ ಇರುತ್ತದೆ ಎಂದು ಮೋಜು ಮಸ್ತಿಗೆ ಹೋಗಬಾರದು ಅಥವಾ ಮನೆಯಲ್ಲಿ ಕುಳಿತು ಕುಟುಂಬ ಸದಸ್ಯರ ಜತೆ ಕಾಲಹರಣ ಮಾಡಬಾರದು’ ಎಂದು ಸಲಹೆ ನೀಡಿದರು.

ಶೇ 85 ಮೀರಲಿ: ‘ಜಿಲ್ಲೆಯಲ್ಲಿ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶೇ 74ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣ ಶೇ 85 ಮೀರಬೇಕು. ಇದಕ್ಕೆ ಪೂರಕವಾಗಿ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ಆಟೊಗಳಿಗೆ ಮತದಾನ ಜಾಗೃತಿಯ ಸ್ಟಿಕ್ಕರ್‌ಗಳನ್ನು ಚುನಾವಣಾ ಶಾಖೆಯಿಂದಲೇ ಮುದ್ರಿಸಿ ಕೊಡಬೇಕಿತ್ತು, ಆದರೆ, ಆಟೊ ಸಂಘದ ಸದಸ್ಯರೇ ಮುದ್ರಿಸಿಕೊಂಡು ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ. ಆಟೊ ಚಾಲಕರ ಈ ಕಾರ್ಯ ಇತರ ಸಂಘಗಳಿಗೂ ಮಾದರಿಯಾಗಿದ್ದು, ಏ.18ರಂದು ಮತದಾನದ ದಿನ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು’ ಎಂದು ಮನವಿ ಮಾಡಿದರು.

ಉಚಿತ ಸೇವೆ: ‘ಮತದಾನದ ದಿನ ಜಿಲ್ಲೆಯಲ್ಲಿ ಮತಗಟ್ಟೆಗೆ ಬರುವ ಅಶಕ್ತರು, ವಯೋವೃದ್ಧರು ಮತ್ತು ಅಂಗವಿಕಲರಿಗೆ ಉಚಿತವಾಗಿ ಆಟೊ ಸೇವೆ ಒದಗಿಸುತ್ತೇವೆ’ ಎಂದು ರಾಜ್ಯ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಘೋಷಿಸಿದರು.

ಸ್ವೀಪ್ ಸಮಿತಿ ಸದಸ್ಯೆ ಎಂ.ಸೌಮ್ಯ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿ ಆಟೊಗೆ ಮತದಾನ ಜಾಗೃತಿಯ ಸ್ಟಿಕ್ಕರ್‌ ಅಂಟಿಸಲಾಯಿತು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಜಿ.ಪಂ ಅಧಿಕಾರಿ ಗೋವಿಂದಗೌಡ, ನಗರಸಭೆ ವ್ಯವಸ್ಥಾಪಕ ತ್ಯಾಗರಾಜ್, ಆಟೊ ಚಾಲಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.