ADVERTISEMENT

‘ಹ್ಯಾಟ್ರಿಕ್‌’ ಸಾಧನೆಯ ಬಸವರಾಜೇಶ್ವರಿ; ಘಟಾನುಘಟಿಗಳ ಸೋಲಿಸಿದ ಕೀರ್ತಿ

ನರಸಿಂಹರಾವ ಸಂಪುಟದಲ್ಲಿ ರಾಜ್ಯ ಖಾತೆ ಸಚಿವರಾಗಿ ಕೆಲಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಮಾರ್ಚ್ 2019, 20:30 IST
Last Updated 26 ಮಾರ್ಚ್ 2019, 20:30 IST
ಬಸವರಾಜೇಶ್ವರಿ
ಬಸವರಾಜೇಶ್ವರಿ   

ಹೊಸಪೇಟೆ: ಇದುವರೆಗೆ ನಡೆದ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಮೂವರು ಮಹಿಳೆಯರಿಗೆ ಮತದಾರರು ಮಣೆ ಹಾಕಿರುವುದು ವಿಶೇಷ.

ಅದರಲ್ಲೂ ಬಸವರಾಜೇಶ್ವರಿ ಅವರು ಸತತ ಮೂರು ಸಲ ಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಅವರು ಪಿ.ವಿ.ನರಸಿಂಹರಾವ ಅವರ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.

1984ರಲ್ಲಿ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಬಸವರಾಜೇಶ್ವರಿ ಅವರು ಎದುರಾಳಿಯನ್ನು 72,286 ಮತಗಳ ಅಂತರದಿಂದ ಸೋಲಿಸಿ ದೊಡ್ಡ ಜಯ ದಾಖಲಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು, ಜೆ.ಎನ್‌.ಪಿ. ಅಭ್ಯರ್ಥಿ ಎಂ.ಪಿ. ಪ್ರಕಾಶ ಅವರನ್ನು ಪರಾಭವಗೊಳಿಸಿದ್ದರು.

ADVERTISEMENT

1989ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಸವರಾಜೇಶ್ವರಿ ಅವರು ಮತ್ತೆ ಪುನರಾಯ್ಕೆಯಾದರು. ಈ ಸಲ ಅವರ ಗೆಲುವಿನ ಅಂತರ ಕೂಡ ಹೆಚ್ಚಾಯಿತು. ಬಸವರಾಜೇಶ್ವರಿ ಅವರು ಜನತಾ ದಳದ ಎನ್‌. ತಿಪ್ಪಣ್ಣ ಅವರನ್ನು 76,085 ಮತಗಳಿಂದ ಜನತಾ ದಳದ ಎನ್‌. ತಿಪ್ಪಣ್ಣ ಅವರನ್ನು ಸೋಲಿಸಿದರು.

1991ರಲ್ಲಿ ಬಸವರಾಜೇಶ್ವರಿ ಅವರು ಜನತಾ ದಳದ ವೈ. ನೆಟ್ಟಕಲ್ಲಪ್ಪ ಅವರನ್ನು 65,981 ಮತಗಳಿಂದ ಪರಾಭವಗೊಳಿಸಿದ್ದರು. ಸತತ ಮೂರು ಸಲ ಗೆದ್ದಿದ್ದಕ್ಕಾಗಿ ಅವರಿಗೆ ನರಸಿಂಹರಾವ ಅವರ ಸಂಪುಟದಲ್ಲಿ ಸಚಿವರಾಗುವ ಅದೃಷ್ಟ ಒಲಿದು ಬಂತು. ಪಿ.ವಿ. ನರಸಿಂಹರಾವ ಸರ್ಕಾರದ ಕೊನೆಯ ಅವಧಿಯಲ್ಲಿ ಸಚಿವರಾಗಿದ್ದರು.

ರಾಜೇಶ್ವರಿ ಅವರು ಮೂಲತಃ ಜಿಲ್ಲೆಯ ಗಡಿಭಾಗದ, ಆಂಧ್ರ ಪ್ರದೇಶದ ರಾಯದುರ್ಗಕ್ಕೆ ಸೇರಿದವರಾಗಿದ್ದರು. ಜಿಲ್ಲೆಯ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕೀಯದಲ್ಲಿ ಅವರದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದರು. ಹೀಗಾಗಿಯೇ ಚುನಾವಣೆಯಲ್ಲಿ ಅವರು ಘಟಾನುಘಟಿಗಳನ್ನು ಸೋಲಿಸಲು ಸಾಧ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.