ADVERTISEMENT

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌–ಸಿಪಿಎಂ ದೋಸ್ತಿ

ಕಾಂಗ್ರೆಸ್‌ ಹೊರತುಪಡಿಸಿ ತೃಣಮೂಲ ಕಾಂಗ್ರೆಸ್‌ ವಿರುದ್ಧ ದಾಳಿಗೆ ಮಾತ್ರ ಚಿಂತನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:35 IST
Last Updated 27 ಏಪ್ರಿಲ್ 2019, 20:35 IST
   

ಕೋಲ್ಕತ್ತ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೇರಳದಲ್ಲಿ ಸಿಪಿಎಂ ಬಗ್ಗೆ ಸೌಜನ್ಯ ತೋರಿದ್ದಕ್ಕೆ ಪ್ರತಿಯಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ವಿರುದ್ಧ ಅಂಥದ್ದೇ ಸೌಜನ್ಯ ಪ್ರದರ್ಶಿಸಲು ಸಿಪಿಎಂ ನಾಯಕತ್ವ ನಿರ್ಧರಿಸಿದೆ.

ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ರಾಹುಲ್‌, ಚುನಾವಣೆಗೂ ಮುನ್ನ ಸಿಪಿಎಂ ವಿರುದ್ಧ ವಾಗ್ದಾಳಿ ನಡೆಸದಿರಲು ತೀರ್ಮಾನಿಸಿದ್ದರು. ಕಾಂಗ್ರೆಸ್‌ನ ಹೋರಾಟ ಬಿಜೆಪಿ ವಿರುದ್ಧವಾಗಿದ್ದುದರಿಂದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಮಾತ್ರ ವಾಗ್ದಾಳಿ ನಡೆಸಿದ್ದರು. ಈಗ ಪಶ್ಚಿಮ ಬಂಗಾಳದಲ್ಲಿ ಅದೇ ನೀತಿ ಅನು
ಸರಿಸಲು ಸಿಪಿಎಂ ಮುಂದಾಗಿದೆ. ಅಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ವಿರುದ್ಧ ಮಾತ್ರ ವಾಗ್ದಾಳಿ ನಡೆಸಲು ಸಿಪಿಎಂ ನಿರ್ಧರಿಸಿದೆ.

‘ಬಂಗಾಳದಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸುವುದಿಲ್ಲ ಎಂಬುದನ್ನು ಪಕ್ಷದ ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದೇ ಸಂದೇಶವನ್ನು ಕಾಂಗ್ರೆಸ್‌ ಹೈಕಮಾಂಡ್‌ಗೂ ತಲುಪಿಸಲಾಗಿದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ ಜೊತೆಗಿನ ಸೀಟು ಹೊಂದಾಣಿಕೆಕುರಿತ ಮಾತುಕತೆ ನಂತರ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ.ಜಾಧವ್‌ಪುರ ಮತ್ತು ಬಂಕುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಅದೇ ರೀತಿ, ಕಾಂಗ್ರೆಸ್‌ ಪ್ರಾಬಲ್ಯದ ದಕ್ಷಿಣ ಮಾಲ್ಡಾ ಮತ್ತು ಬಹರಾಂಪುರ ಕ್ಷೇತ್ರಗಳಲ್ಲಿ ಸಿಪಿಎಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ.

‘ಮುಲಾಜಲ್ಲಿ ಸಿಪಿಐ’

‘ಪಶ್ಚಿಮ ಬಂಗಾಲದಲ್ಲಿ ಸಿಪಿಎಂ ಬಿಜೆಪಿಯ ಮುಲಾಜಿನಲ್ಲಿದೆ. ಅದು ಕೇಸರಿ ಪಕ್ಷದೊಂದಿಗೆ ಕೈ ಜೋಡಿಸಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ,ತೃಣಮೂಲಕಾಂಗ್ರೆಸ್‌ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಹೂಗ್ಲಿಯಲ್ಲಿ ನಡೆದ ರ‍್ಯಾಲಿ ವೇಳೆ ಬಿಜೆಪಿ ಮತ್ತು ಸಿಪಿಐ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಸಿಪಿಐನ ಗೂಂಡಾಗಳು, ಬಿಜೆಪಿಯ ಕೊಲೆಗಡುಕರಾಗಿ ಬದಲಾಗಿದ್ದಾರೆ’ ಎಂದೂ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.