ADVERTISEMENT

ಸಂತೋಷ್‌ ‘ಡಿಎನ್‌ಎ’ ಹೇಳಿಕೆ: ಬಿಜೆಪಿಯಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 18:41 IST
Last Updated 12 ಏಪ್ರಿಲ್ 2019, 18:41 IST

ಬೆಂಗಳೂರು: ‘ಡಿಎನ್‌ಎ, ವಂಶವಾಹಿನಿ ಆಧಾರದಲ್ಲಿ ಟಿಕೆಟ್‌ ಕೊಡಬೇಕು ಎಂದರೆ ಹೇಗೆ? ಹಾಗೆ ಕೊಡುತ್ತಾ ಹೋದರೆ, ಪಕ್ಷದ ಸದಸ್ಯತ್ವದ ರಸೀದಿಗೆ ಬೆಲೆ ಬೇಕಲ್ಲವೇ’ ಎಂಬ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಹೇಳಿಕೆಗೆ ತೀವ್ರ ಆಕ್ಷೇ‍‍‍ಪ ವ್ಯಕ್ತವಾಗಿದೆ.

‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಕೊಡಿ ಎಂದು ತೇಜಸ್ವಿನಿ ಅನಂತಕುಮಾರ್ ಅರ್ಜಿ ಹಾಕಿದ್ದರೆ? ರಾಜ್ಯ ಮುಖಂಡರೇ ಒತ್ತಡ ಮಾಡಿದ್ದು ಮರೆತಿರಾ? ಚುನಾವಣಾ ಕಚೇರಿ ತೆರೆಯಲು ಹೇಳಿದ್ದು ಯಾರು‘ ಎಂದು ತೇಜಸ್ವಿನಿ ಅನಂತಕುಮಾರ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅವರ ಹೇಳಿಕೆಗೆ ಬಿಜೆಪಿಯಲ್ಲೂ ಅಸಮಾಧಾನ ವ್ಯಕ್ತವಾಗಿದೆ.

‘ಲೋಕಸಭಾ ಚುನಾವಣಾ ಸಮಯದಲ್ಲಿ ಈ ಹೇಳಿಕೆ ನೀಡುವ ಅಗತ್ಯ ಏನಿತ್ತು’ ಎಂದು ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಹಾಗಿದ್ದರೆ ಅಣ್ಣಾ ಸಾಹೇಬ್‌ ಜೊಲ್ಲೆ ಅವರಿಗೆ ಟಿಕೆಟ್‌ ಕೊಟ್ಟಿದ್ದು ಏಕೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂತೋಷ್‌ ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ದೂರು ನೀಡಲು ಕೆಲವು ಮುಖಂಡರು ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

'ಹಿಂದೆ ವಂಶವಾಹಿನಿ (ಡಿಎನ್‌ಎ) ಆಧಾರದಲ್ಲಿ ಯಾರಿಗೂ ಟಿಕೆಟ್‌ ಕೊಟ್ಟಿಲ್ಲವೇ? ಒಂದೇ ಕುಟುಂಬದಲ್ಲಿ ಟಿಕೆಟ್‌ ಕೊಟ್ಟಿರುವವರಿಗೆ ಡಿಎನ್ಎ ಮ್ಯಾಚ್‌ ಇಲ್ವಾ? ಸಮಾಜಮುಖಿ ಕೆಲಸ ಮಾಡುವವರಿಗೆ ಡಿಎನ್‌ಎ ಬೇಕು. ಕತ್ತಿ ಲಾಂಗು ಹಿಡಿಯುವವರಿಗೆ ಡಿಎನ್ಎ ಬೇಡ’ ಎಂದು ರುದ್ರೇಶಪ್ಪ ರುದ್ರೇಶ್‌ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

‘ಅನಂತಕುಮಾರ್‌ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪಕ್ಷಕ್ಕಾಗಿ ದುಡಿದು ಪ್ರಾಣ ಕಳೆದುಕೊಂಡಿದ್ದನ್ನು ಜನರು ಇನ್ನೂ ಮರೆತಿಲ್ಲ. ಆಗಲೇ, ಅವರ ಸಾವಿನ ಫಲ ಉಣ್ಣಲು ಕಾದು ಕುಳಿತವರು ನೀವು. ನನಗೆ ಟಿಕೆಟ್‌ ಕೊಡಿ ಎಂದು ತೇಜಸ್ವಿನಿ ಮೇಡಂ ಕೇಳಿದ್ದರೇನು? ಗಂಡನ ಸಾವಿನಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಅವರನ್ನು ಈ ರೀತಿ ಅವಮಾನಿಸಿದ್ದು ಸಂಸ್ಕಾರ ಸಂಸ್ಕೃತಿ ಎಂದೆಲ್ಲ ಬೋಧನೆ ಮಾಡುವ ನಿಮಗೆ ತರವೇ? ಅಷ್ಟೊಂದು ರಹಸ್ಯವಾಗಿಟ್ಟು ಮಧ್ಯರಾತ್ರಿಯಲ್ಲಿ ಟಿಕೆಟ್‌ ನೀಡಿದ ನಿಮ್ಮ ಧೋರಣೆಯ ಹಿಂದೆ ಬೇರೆ ಏನೋ ಸ್ವಾರ್ಥ ಇದೆ ಎಂದೆನಿಸುತ್ತಿದೆ’ ಎಂದು ಮಲ್ಲಾರಿ ಗೌಡ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಯಾವ ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ಕೊಟ್ರಿ? ಸಿ.ಎಂ. ಉದಾಸಿ ಮಗನಿಗೆ ಟಿಕೆಟ್‌ ಕೊಡುವಾಗ ಯಾವ ಮಾನದಂಡ ಅನುಸರಿಸಿದ್ರಿ? ತೇಜಸ್ವಿನಿ ಅವರು ಚಿಕ್ಕಂದಿನಿಂದಲೇ ಎಬಿವಿಪಿ ಸಂಘಟನೆಯಲ್ಲಿ ಇದ್ದು ಬೆಳೆದು ಬಂದವರು. ನಿಮ್ಮ ಹಾಗೆ ಉದ್ಭವ ಮೂರ್ತಿ ಅಲ್ಲ’ ಎಂದು ಶಾಹಿದ್‌ ಜನ್ಸಾಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸುಮಲತಾ ಅಂಬರೀಷ್‌ ಅವರಿಗೆ ಬೆಂಬಲ ನೀಡಲು ತುದಿಗಾಲಿನಲ್ಲಿ ನಿಂತಿದ್ದೂ ಯಾಕೋ’ ಎಂದು ಜಗದೀಶ್‌ ಜಿ. ಲೇವಡಿ ಮಾಡಿದ್ದಾರೆ. ‘ತೇಜಸ್ವಿನಿ ಮೇಡಂ ಈಗ ಗೊತ್ತಾಯಿತಲ್ಲವೇ? ನಿಮ್ಮ ಪರವಾಗಿ, ವಿರುದ್ಧವಾಗಿ ಯಾರಿದ್ದಾರೆ ಅಂತ’ ಎಂದು ಗುರುರಾಜ್‌ ಕುಲಕರ್ಣಿ ಮಾರ್ಮಿಕವಾಗಿ ನುಡಿದಿದ್ದಾರೆ.

‘ಇನ್ನೊಂದು ವಿಷಯ– ವೈಜ್ಞಾನಿಕವಾಗಿ ಗಂಡ ಹೆಂಡತಿಯ ಡಿಎನ್‌ಎಗೆ ಸಂಬಂಧ ಇರಲ್ಲ. ಚಿಕ್ಕಪ್ಪ–ಅಣ್ಣನ ಮಗನಲ್ಲಿ ಇರಬಹುದು’ ಎಂದು ಪ್ರತಾಪ್‌ ಪರಾಶರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.