ADVERTISEMENT

ಗಣಿನಾಡಲ್ಲಿ ಮುದುಡಿದ ತಾವರೆ ಅರಳಿತು!

ಫಲಿಸದ ಮೈತ್ರಿ ತಂತ್ರ, ಬಿಜೆಪಿಗೆ ಮತ್ತೆ ಜನಬೆಂಬಲ

ಕೆ.ನರಸಿಂಹ ಮೂರ್ತಿ
Published 23 ಮೇ 2019, 14:35 IST
Last Updated 23 ಮೇ 2019, 14:35 IST
   

ಬಳ್ಳಾರಿ: 2018ರ ಉಪಚುನಾವಣೆಯ ಬಳಿಕ ಗಣಿನಾಡಿನಲ್ಲಿ ಮುದುಡಿದ್ದ ತಾವರೆಯು (ಬಿಜೆಪಿ) ಆರು ತಿಂಗಳ ಬಳಿಕ ನಡೆದ ಮಹಾ ಚುನಾವಣೆಯಲ್ಲಿ ಮತ್ತೆ ಅರಳಿದೆ.

ಉಪಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಬೀಗಿದ್ದ ಮೈತ್ರಿ ಪಕ್ಷಗಳ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರನ್ನು ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ 55 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಹಿಮ್ಮೆಟ್ಟಿಸಿದ್ದಾರೆ. ಆ ಮೂಲಕ, ಕ್ಷೇತ್ರದಲ್ಲಿ ಮತ್ತೆ ತಳ ಊರುವ ಅವಕಾಶದ ಬಾಗಿಲೂ ಬಿಜೆಪಿಗೆ ತೆರೆದುಕೊಂಡಿದೆ.

ಉಪಚುನಾವಣೆಗೂ ಮುನ್ನ ಸತತ 14 ವರ್ಷದಿಂದ ಅಜ್ಞಾತವಾಸದಲ್ಲಿದ್ದ ಕಾಂಗ್ರೆಸ್‌ ಮತ್ತೆ ಅದೇ ಸ್ಥಿತಿಗೆ ಮರಳುವಂತಾಗಿದೆ. ಪಕ್ಷಕ್ಕೆ ಅಜ್ಞಾತವಾಸದಿದ ಮುಕ್ತಿ ನೀಡಿದ್ದ ಉಗ್ರಪ್ಪ ಅವರಿಗೂ ಅದೇ ಸ್ಥಿತಿ ಎದುರಾಗಿದೆ.

ADVERTISEMENT

ಉಪಚುನಾವಣೆಯಲ್ಲಿ ಉಗ್ರಪ್ಪ ಎಲ್ಲ ಸುತ್ತುಗಳಲ್ಲೂ ಬಿಜೆಪಿಯ ಜೆ.ಶಾಂತಾ ಅವರಿಗಿಂತ ಮುಂದಿದ್ದರು. ಈ ಬಾರಿ ಫಲಿತಾಂಶ ಉಲ್ಟಾ ಆಗಿದೆ. ದೇವೇಂದ್ರಪ್ಪ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಗೆ ಜನಾದೇಶ ದೊರೆತಿದ್ದು, ಮೈತ್ರಿ ಪಕ್ಷಗಳ ತಂತ್ರ ಫಲಿಸಿಲ್ಲ.

ಚುನಾವಣೆ ಘೋಷಣೆಯಾಗುವ ಕೇವಲ ಹತ್ತು ದಿನ ಮುನ್ನ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ದೇವೇಂದ್ರಪ್ಪ, ತಮ್ಮಂತೆಯೇ ಟಿಕೆಟ್‌ ಆಕಾಂಕ್ಷೆಯಿಂದ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ, ಬಳ್ಳಾರಿ ಗ್ರಾಮೀಣ ಶಾಸಕ, ಕಾಂಗ್ರೆಸ್‌ನ ಬಿ.ನಾಗೇಂದ್ರ ಸಹೋದರ ಬಿ.ವೆಂಕಟೇಶ ಪ್ರಸಾದ್‌ ಅವರನ್ನೂ ಹಿಂದಿಕ್ಕಿ ಟಿಕೆಟ್‌ ಪಡೆದುಕೊಂಡಿದ್ದರು.

‘ಹಳಬರಾದರೂ, ಹೊಸಮುಖ, ಪಕ್ಷಾಂತರಿ’ ಎಂಬ ಟೀಕೆಗಳ ನಡುವೆಯೇ ಅವರು ಗೆಲುವು ಸಾಧಿಸಿರುವುದು ಕ್ಷೇತ್ರದ ಮಟ್ಟಿಗೆ ಅಚ್ಚರಿಯ ಬೆಳವಣಿಗೆ.

ಗೆಲುವಿನ ಕಾರಣ: ಪಕ್ಷದಲ್ಲಿ ಆಕಾಂಕ್ಷಿಗಳಿದ್ದರೂ, ಅನಿರೀಕ್ಷಿತವಾಗಿ ವೈ.ದೇವೇಂದ್ರಪ್ಪ ಅವರನ್ನು ಕರೆತಂದು ಕಣಕ್ಕೆ ಇಳಿಸುವ ಅನಿವಾರ್ಯವೇನಿತ್ತು ಎಂಬ ಆಕ್ಷೇಪ, ಪ್ರತಿಸ್ಪರ್ಧಿ ವಿ.ಎಸ್‌.ಉಗ್ರಪ್ಪ ಅವರಿಗಿಂತ ಕಡಿಮೆ ವಿದ್ಯಾರ್ಹತೆ ಹಾಗೂ ವರ್ಚಸ್ಸಿನ ಅಭ್ಯರ್ಥಿ ಎಂಬ ದೂರು–ಅಸಮಾಧಾನದ ನಡುವೆಯೂ, ದೇವೇಂದ್ರಪ್ಪ, ತಮ್ಮ ಸಜ್ಜನಿಕೆಯ ಮಾತುಗಳಿಂದಲೇ ಮತದಾರರ ಮನಗೆದ್ದರು.

ಅದರೊಂದಿಗೆ, ‘ಮೋದಿ ಅಲೆಯೇ ತಮ್ಮ ಕೈ ಹಿಡಿಯಲಿದೆ’ ಎಂಬ ಅವರ ವಿಶ್ವಾಸಕ್ಕೆ ತಕ್ಕಂತೆ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ, ಶಾಸಕ ಬಿ.ಶ್ರೀರಾಮುಲು ಕೂಡ ಯುದ್ಧೋಪಾದಿಯಲ್ಲಿ ಪ್ರಚಾರಕ್ಕೆ ನಿಂತರು. ಉಪಚುನಾವಣೆಯಲ್ಲಿ ಸಹೋದರಿ ಜೆ.ಶಾಂತಾ ಅವರ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಅವರಿಗೆ ಈ ಚುನಾವಣೆಯಲ್ಲಿ ಪಕ್ಷ ಮತ್ತೆ ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿತ್ತು.

ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೇವಲ ಎರಡು (ಬಳ್ಳಾರಿ ನಗರ ಮತ್ತು ಕೂಡ್ಲಿಗಿ) ಕ್ಷೇತ್ರಗಳಲ್ಲಷ್ಟೇ ತನ್ನ ಶಾಸಕರನ್ನು ಹೊಂದಿರುವ ಬಿಜೆಪಿ, ಇಂಥ ಕೊರತೆಯ ನಡುವೆಯೇ ಗೆಲುವು ಸಾಧಿಸಿದೆ. ಆರಂಭದಲ್ಲಿ ‘ದೇವೇಂದ್ರಪ್ಪ ಬಳ್ಳಾರಿಯವರಲ್ಲ, ದಾವಣಗೆರೆಯವರು, ಕ್ಷೇತ್ರದ ಹೊರಗಿನವರು’ ಎಂಬ ಟೀಕೆಗಳನ್ನೂ ಪಕ್ಷ ಎದುರಿಸಿತ್ತು. ‘ಅವರನ್ನು ಹೈಕಮಾಂಡ್‌ ಆಯ್ಕೆ ಮಾಡಿದೆ’ ಎಂದಷ್ಟೇ ಹೇಳಿದ ಮುಖಂಡರು, ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

ಮೈತ್ರಿ ಪಕ್ಷಗಳ ಭಿನ್ನಮತ: ದೇವೇಂದ್ರಪ್ಪ ಗೆಲುವಿಗೆ ಮತ್ತು ಉಗ್ರಪ್ಪ ಸೋಲಿಗೆ, ಮೈತ್ರಿ ಪಕ್ಷಗಳ ಶಾಸಕರಲ್ಲಿ ಮೂಡಿದ್ದ ಭಿನ್ನಮತದ ಪಾಲು ಕೂಡ ಇದೆ.

ಕ್ಷೇತ್ರದಲ್ಲಿರುವ ಕಾಂಗ್ರೆಸ್‌ನ ಆರು ಶಾಸಕರ ಪೈಕಿ ಬಿ.ನಾಗೇಂದ್ರ, ಆನಂದ್‌ಸಿಂಗ್‌ ಹಾಗೂ ಭೀಮಾನಾಯ್ಕ ಅವರಲ್ಲಿ, ಮೈತ್ರಿ ಸರ್ಕಾರ ರಚನೆ ಆದಂದಿನಿಂದಲೂ, ಸಚಿವ ಸ್ಥಾನದ ಆಸೆ ಈಡೇರದ ಅಸಮಾಧಾನವೂ ಪ್ರಚಾರದ ಮೇಲೆ ಪರಿಣಾಮ ಬೀರಿತ್ತು.

ಆನಂದ್‌ಸಿಂಗ್‌ ಮತ್ತು ಜೆ.ಎನ್‌.ಗಣೇಶ್‌ ನಡುವಿನ ಹೊಡೆದಾಟ ಪ್ರಕರಣವು, ವಿಜಯನಗರ ಮತ್ತು ಕಂಪ್ಲಿ ಕ್ಷೇತ್ರದಲ್ಲಿ ಸಂಚಲನೆ ಮೂಡಿಸಿ, ಪಕ್ಷದ ಕಾರ್ಯಕರ್ತರ ಅಸಮಾಧಾನವನ್ನೂ ಉಗ್ರಪ್ಪ ಎದುರಿಸಿದ್ದರು.

ಮೈತ್ರಿ ಸರ್ಕಾರದ ಭಾಗೀದಾರರಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣೆಯ ವೈಯಕ್ತಿಕ ತುರ್ತುಗಳೂ ಏರ್ಪಟ್ಟು, ಉಪ ಚುನಾವಣೆಯಲ್ಲಿ ಕಂಡು ಬಂದಂಥ ಜಿದ್ದಾಜಿದ್ದಿಯೂ ಏರ್ಪಡಲಿಲ್ಲ. ‘ಉಗ್ರಪ್ಪ ಏಕಾಂಗಿಯಾಗಿದ್ದಾರೆ’ ಎಂಬ ಮಾತುಗಳೂ ಕೇಳಿಬಂದಿದ್ದವು. ಉಗ್ರಪ್ಪ ಆರು ತಿಂಗಳ ಸಂಸದರಾಗಿ ತಮ್ಮ ವೈಯಕ್ತಿಕ ವರ್ಚಸ್ಸನ್ನೂ ಪಣಕ್ಕೆ ಇಟ್ಟು ಪ್ರಚಾರದಲ್ಲಿ ಪಾಲ್ಗೊಂಡರೂ ಮತದಾರರು ಕೈ ಹಿಡಿದಿಲ್ಲ.

‘ಉಪಚುನಾವಣೆಯಲ್ಲಿ ಗಳಿಸಿದಷ್ಟು ಮುನ್ನಡೆ ಸಾಧಿಸದಿದ್ದರೂ, ಕನಿಷ್ಠ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವೆ’ ಎಂದು ಅವರು ಆಪ್ತರ ಬಳಿ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಫಲಿತಾಂಶದ ಬಳಿಕ ಅವರೇ ಹೇಳಿದಂತೆ, ‘ಕ್ಷೇತ್ರದ ಮತದಾರರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದೆನೇನೋ ಎನಿಸಿದೆ’.

’ಉಗ್ರಪ್ಪ ಎಲ್ಲಿ ಎಡವಿದರು?’ ಎಂಬು ಕುರಿತು ಮೈತ್ರಿ ಪಕ್ಷಗಳು ಒಟ್ಟಾಗಿ ಚರ್ಚಿಸುವುದರ ಜೊತೆಗೆ ಆತ್ಮಾವಲೋಕನಕ್ಕೂ ಫಲಿತಾಂಶ ದಾರಿ ಮಾಡಿದೆ.

ಅಭಿವೃದ್ಧಿ, ಹೊರಗಿನವರು, ವಿದ್ಯಾವಂತರು...

ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಹೂಳು ತೆರವು, ಹಂಪಿ ಅಭಿವೃದ್ಧಿ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚೆಗಳು ನಡೆದವು.

ಸಂಸದರಾಗಿ ಉಗ್ರಪ್ಪ ಮಾಡಿರುವ ಕೆಲಸಗಳು, ಅವರ ಜನಪ್ರಿಯತೆ, ಅವರ ಒಬ್ಬಂಟಿತನ, ದೇವೇಂದ್ರಪ್ಪನವರ ಕಡಿಮೆ ವಿದ್ಯಾರ್ಹತೆ, ದೇಸಿ ವ್ಯಕ್ತಿತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ, ವಾಗ್ವಾದ ನಡೆದವು. ಉಗ್ರಪ್ಪ ತಮ್ಮನ್ನು ತಾವು ಸರಸ್ವತಿ ಪುತ್ರ ಎಂದು ಕರೆದುಕೊಂಡು, ದೇವೇಂದ್ರಪ್ಪ ಅವರನ್ನು ಲಕ್ಷ್ಮೀಪುತ್ರ ಎಂದು ಕರೆದರು. ‘ಸರಸ್ವತಿಯ ಮುಂದೆ ಲಕ್ಷ್ಮಿ ಸೋತರೆ ಅಚ್ಚರಿ ಪಡಬೇಕಿಲ್ಲ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದರು.

------------

18 ಸುತ್ತಿನಲ್ಲೂ ದೇವೇಂದ್ರಪ್ಪ ಮುನ್ನಡೆ

ಮೊದಲು ನಡೆದ ಅಂಚೆ ಮತಗಳ ಎಣಿಕೆಯಿಂದಲೇ ಉಗ್ರಪ್ಪ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದ ದೇವೇಂದ್ರಪ್ಪ ನಂತರದ ಸುತ್ತುಗಳಲ್ಲೂ ಅದನ್ನು ಬಿಟ್ಟುಕೊಡಲಿಲ್ಲ.

ಮೊದಲ ಸುತ್ತಿನಲ್ಲಿ ಕೇವಲ 1,550 ಮತಗಳ ಮುನ್ನಡೆ ಸಾಧಿಸಿದ್ದ ದೇವೇಂದ್ರಪ್ಪ, 19ನೇ ಸುತ್ತಿನ ಹೊತ್ತಿಗೆ 55,707 ಮತಗಳ ಅಂತರವನ್ನು ಮುಟ್ಟಿದ್ದರು. ಮತ ಎಣಿಕೆಯ ಒಟ್ಟಾರೆ 19 ಸುತ್ತುಗಳ ಪೈಕಿ 7ನೇ ಸುತ್ತಿನಲ್ಲಿ ಮಾತ್ರ ಉಗ್ರಪ್ಪ ಕೇವಲ 746 ಮತಗಳ ಅಂತರ ಕಾಯ್ದುಕೊಂಡಿದ್ದರು. ನಂತರ ಪೈಪೋಟಿ ನೀಡಬಹುದು ಎಂಬ ಕಾಂಗ್ರೆಸ್‌ ಕಾರ್ಯಕರ್ತರ ನಿರೀಕ್ಷೆ ಈಡೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.