ADVERTISEMENT

ರಸ್ತೆ ಅಭಿವೃದ್ಧಿಗೆ ಹಣ ಕೊಟ್ಟಿದ್ದು ಯಾರು?–ಸುರೇಶ್‌ಗೆ ಅಶ್ವಥ್‌ ನಾರಾಯಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 16:04 IST
Last Updated 3 ಮೇ 2019, 16:04 IST
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಮಾತನಾಡಿದರು. ಕಟ್ಟಾಸುಬ್ರಹ್ಮಣ್ಯ ನಾಯ್ಡು, ಅಭ್ಯರ್ಥಿ ಅಶ್ವಥ್‌ ನಾರಾಯಣ, ಶ್ರುತಿ ಹಾಗೂ ಎಂ. ರುದ್ರೇಶ್‌ ಇದ್ದರು
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಮಾತನಾಡಿದರು. ಕಟ್ಟಾಸುಬ್ರಹ್ಮಣ್ಯ ನಾಯ್ಡು, ಅಭ್ಯರ್ಥಿ ಅಶ್ವಥ್‌ ನಾರಾಯಣ, ಶ್ರುತಿ ಹಾಗೂ ಎಂ. ರುದ್ರೇಶ್‌ ಇದ್ದರು   

ರಾಮನಗರ: ‘ ಸಂಸದ ಡಿ.ಕೆ. ಸುರೇಶ್‌ ಕೇಂದ್ರ ಸರ್ಕಾರವನ್ನು ಜರಿಯುವುದಕ್ಕೆ ಮುನ್ನ ಇಲ್ಲಿನ ಹೆದ್ದಾರಿ ವಿಸ್ತರಣೆಗೆ, ನರೇಗಾ ಯೋಜನೆಗೆ ಹಣ ಕೊಟ್ಟಿದ್ದು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ ಗೌಡ ಸವಾಲು ಹಾಕಿದರು.

‘ಬೆಂಗಳೂರು–ಮೈಸೂರು ಹೆದ್ದಾರಿ ಅಭಿವೃದ್ಧಿಗೆ ₹ 6600 ಕೋಟಿ ಖರ್ಚಾಗುತ್ತಿದ್ದು, ಇದರಲ್ಲಿ ಬಹುಪಾಲು ಕೇಂದ್ರ ಸರ್ಕಾರದ್ದಾಗಿದೆ. ಕನಕಪುರ ನರೇಗಾದಲ್ಲಿ ಮುಂದಿದ್ದು, ಅಲ್ಲಿನ ಕೆರೆಗಳ ಪುನಶ್ಚೇತನ, ಚೆಕ್‌ ಡ್ಯಾಮ್‌ಗಳ ನಿರ್ಮಾಣದಲ್ಲೂ ಕೇಂದ್ರದ ಪಾಲಿದೆ. ಕೃಷಿ ಸಿಂಚಾಯಿ ಯೋಜನೆಯೊಂದರಲ್ಲಿಯೇ ಕೇಂದ್ರವು ಜಿಲ್ಲೆಗೆ ₹ 12 ಕೋಟಿ ನೀಡಿದೆ. ಸಂಸದರು ಇದೆಲ್ಲವನ್ನೂ ಮರೆಮಾಚಿ ತಮ್ಮದೇ ಸಾಧನೆ ಎಂದು ಬಿಂಬಿಸುತ್ತಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹರಿಹಾಯ್ದರು.

‘ರಾಮನಗರ ಜಿಲ್ಲೆಯಲ್ಲಿ 66 ಕಿ.ಮೀ. ಉದ್ದದ ರೈಲು ಹಳಿ ಹಾಯ್ಡು ಹೋಗುತ್ತದೆ. ನಿತ್ಯ ಸುಮಾರು 48 ರೈಲುಗಳು ಸಂಚರಿಸುತ್ತವೆ. ಸಾಕಷ್ಟು ಕಡೆ ಕೆಳಸೇತುವೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಸಂಸದರು ಎಷ್ಟು ಸೇತುವೆ ನಿರ್ಮಿಸಿಕೊಟ್ಟಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಜಿಲ್ಲೆಯ ಜನರ ಜೀವನಾಡಿಯಾದ ರೇಷ್ಮೆ ಪ್ರಗತಿಗೆ ಒಂದೂ ಕೆಲಸ ಮಾಡಿಲ್ಲ. ರಾಮನಗರದಲ್ಲಿ 10 ವರ್ಷದಿಂದ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಯತ್ನ ನಡೆದಿದ್ದು, ಇನ್ನೂ ಜಾಗದ ಸಮಸ್ಯೆ ಬಗೆಹರಿಸಲು ಆಗಿಲ್ಲ’ ಎಂದು ಟೀಕಿಸಿದರು.

‘ನಾನೇನು ಹೊರಗಿನವನಲ್ಲ. ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಆರ್‌.ಆರ್. ನಗರ ಪಕ್ಕದಲ್ಲೇ ನನ್ನ ಮನೆ ಇದೆ. ವಿಧಾನ ಪರಿಷತ್‌ ಸದಸ್ಯನಾಗಿದ್ದುಕೊಂಡು ಜಿಲ್ಲೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಶ್ನೆ ಕೇಳಿದ್ದೇನೆ. ಇಲ್ಲಿನ ಮಂಚನಬೆಲೆ, ಶ್ರೀರಂಗ ಯೋಜನೆಗಳ ಬಗ್ಗೆ ಸಚಿವರಾದ ಡಿ.ಕೆ. ಶಿವಕುಮಾರ್‌ರನ್ನು ಪ್ರಶ್ನಿಸಿದ್ದೇನೆ. ಶ್ರೀರಂಗ ಏತ ನೀರಾವರಿ ಯೋಜನೆಗೆ ಸರ್ಕಾರ ₹ 200 ಕೋಟಿ ಅನುದಾನ ಖರ್ಚು ಮಾಡಿದ್ದು, ಹಣವೆಲ್ಲ ಗುತ್ತಿಗೆದಾರರ ಪಾಲಾಗಿದೆ. ಇದನ್ನು ಸಂಸದರು ಏಕೆ ಪ್ರಶ್ನಿಸುವುದಿಲ್ಲ’ ಎಂದು ಕೇಳಿದರು.

‘ಕುಣಿಗಲ್‌ನಲ್ಲಿ ಇದೇ 9, 10 ಹಾಗೂ ಚನ್ನಪಟ್ಟಣದಲ್ಲಿ 11 ಹಾಗೂ 13ರಂದು ಪ್ರಚಾರ ಕೈಗೊಳ್ಳಲಾಗುವುದು. 15ರಂದು ಚನ್ನಪಟ್ಟಣದಲ್ಲಿ ಸಮಾವೇಶ ನಡೆಯಲಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದರು.

ಪಕ್ಷದ ಮುಖಂಡ ಸಿ.ಪಿ. ಯೋಗೇಶ್ವರ್ ಮಾತನಾಡಿ ‘ಸಂಸದರದ್ದು ಬರೀ ದಬ್ಬಾಳಿಕೆ, ದೌರ್ಜನ್ಯದ ಮುಖವಾಗಿದೆ. ಅಣ್ಣ ತಮ್ಮ ಇಬ್ಬರು ವೈಯಕ್ತಿಕ ಲಾಭ ಗಳಿಕೆಯನ್ನೇ ಗುರಿಯಾಗಿಸಿಕೊಂಡಿದ್ದಾರೆ. ಅವರಲ್ಲಿ ಸಾಚತನ ಇದ್ದರೆ ತಮ್ಮ ಆಸ್ತಿ ಯಾವ ರೀತಿ ಬೆಳೆಯಿತು ಎಂಬುದನ್ನು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು.

‘ಜಿಲ್ಲೆಯಲ್ಲಿ ಚನ್ನಪಟ್ಟಣ ಹೊರತುಪಡಿಸಿ ಉಳಿದ ಯಾವ ತಾಲ್ಲೂಕಿನಲ್ಲಿಯೂ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ನಮ್ಮಲ್ಲಿನ ನೀರು ಪಡೆದು ಕನಕಪುರದ ಕೆಲವು ಕೆರೆಗಳನ್ನು ತುಂಬಿಸಿದ್ದಾರೆ. ಜಿಲ್ಲೆಯಲ್ಲಿರುವ ಎಲ್ಲ ಕ್ರಷರ್‌ಗಳೂ ಅವರದ್ದೇ ಆಗಿದ್ದು, ಹೆದರಿಸಿ ಆಡಳಿತ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಜೆಡಿಎಸ್‌ ಬೆಂಬಲಿಗರು ಸ್ವಾಭಿಮಾನಿ ಮತದಾರರಾಗಿದ್ದು, ಸಂಸತ್‌ ಚುನಾವಣೆಗಳಲ್ಲಿ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಈ ಬಾರಿ ಸಹ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಶ್ರುತಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್‌ ಇದ್ದರು.

ಅಭಿವೃದ್ಧಿಪರ ಪ್ರಣಾಳಿಕೆ
‘ಬಿಜೆಪಿಯ 2019ರ ಚುನಾವಣಾ ಪ್ರಣಾಳಿಕೆಯು ದೇಶಾಭಿಮಾನದ ಪರ, ಅಭಿವೃದ್ಧಿ ಪರವಾಗಿದೆ’ ಎಂದು ಅಶ್ವಥ್‌ ನಾರಾಯಣ ಹೇಳಿದರು.

‘ಸಂಕಲ್ಪ ಭಾರತ, ಸಶಕ್ತ ಭಾರತ ಎನ್ನುವುದು ಈ ಬಾರಿಯ ಘೋಷಣೆಯಾಗಿದ್ದು, ರೈತರು, ಯೋಧರು ಸೇರಿದಂತೆ ಎಲ್ಲ ವರ್ಗದವರ ಕಾಳಜಿ ಹೊಂದಲಾಗಿದೆ. ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಸಂವಿಧಾನದ 370 ಕಲಂ ಅಡಿ ಕಾಶ್ಮೀರಕ್ಕೆ ನೀಡಲಾದ ವಿಶೇಷ ಸೌಲಭ್ಯ ರದ್ದುಪಡಿಸುವುದಾಗಿ ಹೇಳಿರುವುದು ಮಹತ್ವದ್ದಾಗಿದೆ’ ಎಂದರು.

*ಕಾಂಗ್ರೆಸ್‌ನವರು ಸಭೆಗಳಿಗೆ ಹಣ ಕೊಟ್ಟು ಜನರನ್ನು ಕರೆತರುತ್ತಿದ್ದಾರೆ. ಅವರಿಗೆ ಎಲ್ಲೂ ಜನಬೆಂಬಲ ಇಲ್ಲ
–ಸಿ.ಪಿ. ಯೋಗೇಶ್ವರ್‌
ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.