ADVERTISEMENT

ಗುಜರಾತ್: ‘ಮಣ್ಣಿನ ಮಕ್ಕಳಿಗೆ’ ಗೆಲುವಿನ ಶ್ರೇಯ

ಎಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ; 2014ರ ಫಲಿತಾಂಶ ಪುನರಾವರ್ತನೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 19:38 IST
Last Updated 23 ಮೇ 2019, 19:38 IST

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ತವರು ಗುಜರಾತ್‌ನಲ್ಲಿ ನಿರೀಕ್ಷೆಯಂತೆ ಬಿಜೆಪಿ ಎಲ್ಲ 26 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಕನಿಷ್ಠ 6 ಕಡೆ ಗೆಲುವಿನ ವಿಶ್ವಾಸ ಹೊಂದಿದ್ದ ಕಾಂಗ್ರೆಸ್‌ಗೆ ಭ್ರಮನಿರಸನವಾಗಿದೆ. 2014ರಲ್ಲಿಯೂ ಬಿಜೆಪಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗೆದ್ದಿತ್ತು. ಮೋದಿ ವರ್ಚಸ್ಸು, ಶಾ ಕಾರ್ಯತಂತ್ರ’ ಗೆಲುವಿಗೆ ಕಾರಣ ಎಂಬ ಅನಿಸಿಕೆ ಮುಖ್ಯವಾಗಿ ಕೇಳಿಬರುತ್ತಿದೆ.

ಅಮಿತ್‌ ಶಾ ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸುತ್ತಿದ್ದು, ಬಿಜೆಪಿಯ ಹಿರಿಯ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ಅನಾಯಾಸವಾಗಿ ಗೆದ್ದಿದ್ದಾರೆ. ಇಲ್ಲಿ ಶಾ ಗೆಲುವಿನ ಅಂತರ ಸುಮಾರು 5.57 ಲಕ್ಷಕ್ಕೂ ಅಧಿಕ. ಎಲ್.ಕೆ. ಅಡ್ವಾಣಿ 4,83,121 ಮತಗಳ ಅಂತರದಿಂದ ಗೆದ್ದಿದ್ದರು.

ADVERTISEMENT

ಗುಜರಾತ್‌ನಲ್ಲಿ ಕಾಂಗ್ರೆಸ್‌ ವಿಧಾನಸಭೆ ವಿರೋಧಪಕ್ಷದ ನಾಯಕ ಪರೇಶ್‌ ಧನ್ನಾನಿ ಸೇರಿ ಏಳು ಶಾಸಕರನ್ನು ಕಣಕ್ಕಿಳಿಸಿತ್ತು. ಇನ್ನೊಂದೆಡೆ, ಬಿಜೆಪಿಯು 12ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಿ ಹೊಸಬರನ್ನು ಕಣಕ್ಕಿಳಿಸಿತ್ತು. ಕೇಂದ್ರದ ಮಾಜಿ ಸಚಿವ ಭರತ್‌ಸಿಂಹ ಸೋಳಂಕಿ (ಆನಂದ್‌), ವಿಧಾನಸಭೆ ಪ್ರತಿಪಕ್ಷದ ನಾಯಕ ಪರೇಶ್‌ ಧನ್ನಾನಿ (ಅಮ್ರೇಲಿ), ಲಲಿತ್‌ ವಸೋಯ (ಪೋರಬಂದರ್‌) ಅವರು ಗೆಲ್ಲಬಹುದೆಂಬ ವಿಶ್ವಾಸವನ್ನು ಕಾಂಗ್ರೆಸ್‌ ಹೊಂದಿತ್ತು. ಆದರೆ ಬಿಜೆಪಿಯ ಅಲೆಯಲ್ಲಿ ಎಲ್ಲರೂ ಕೊಚ್ಚಿಹೋಗಿದ್ದಾರೆ.

‘ಒಂದೆರಡು ಕ್ಷೇತ್ರಗಳಲ್ಲಿ ನಮಗೆ ಸೋಲುವ ಆತಂಕವಿತ್ತು. ಆದರೆ, ಕಾಂಗ್ರೆಸ್‌ ಆ ಅವಕಾಶಗಳನ್ನು ಬಳಸಿ ಕೊಳ್ಳಲು ವಿಫಲವಾಯಿತು. ಪ್ರಧಾನಿ ಕೈಗೊಂಡ ರ‍್ಯಾಲಿಗಳು ಪಕ್ಷಕ್ಕೆ ಗೆಲುವು ತಂದು ಕೊಟ್ಟವು’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಯುವ ನಾಯಕ ಹಾರ್ದಿಕ್ ಪಟೇಲ್‌ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ್ದರೂ ಪರಿಣಾಮ ಬೀರಿಲ್ಲ. ಹಿಂದುಳಿದ ವರ್ಗದ ನಾಯಕ ಅಲ್ಪೆಶ್ ಠಾಕೂರ್ ಪ್ರಚಾರದ ನಡುವೆ ಪಕ್ಷ ತ್ಯಜಿಸಿದ್ದರೆ‌ ದಲಿತ ಮುಖಂಡ ಜಿಗ್ನೇಶ್‌ ಮೆವಾನಿ ಅವರ ಪ್ರಚಾರ ಕಾಂಗ್ರೆಸ್‌ನ ನೆರವಿಗೆ ಬರಲಿಲ್ಲ.

‘ಮೋದಿ ಅವರ ಜನಪ್ರಿಯತೆ ಹಾಗೂ ಶಾ ಅವರ ಕಾರ್ಯತಂತ್ರದ ಪರಿಣಾಮವೇ ಈ ಫಲಿತಾಂಶ’ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.