ADVERTISEMENT

ಕಾಂಗ್ರೆಸ್‌ಗಿಂತಲೂ ಬಿಜೆಪಿಯಲ್ಲಿ ವೇಗದ ಕೆಲಸ: ರತ್ನಪ್ರಭಾ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 11:15 IST
Last Updated 13 ಏಪ್ರಿಲ್ 2019, 11:15 IST
ರತ್ನಪ್ರಭಾ
ರತ್ನಪ್ರಭಾ   

ರಾಯಚೂರು:ಕಾಂಗ್ರೆಸ್‌ ಪಕ್ಷಕ್ಕಿಂತಲೂ ಬಿಜೆಪಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ನಾಯಕಿ ರತ್ನಪ್ರಭಾ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತಿ ನಂತರವೂ ಜನಸೇವೆ ಮಾಡಬೇಕು ಎನ್ನುವ ಹಂಬಲದಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಚುನಾವಣೆ ನಂತರ ರಾಜ್ಯದಾದ್ಯಂತ ಪ್ರವಾಸ ಕೈಗೊಂಡ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಮಸ್ಯೆಗಳು ಬೇಕಾದಷ್ಟಿದ್ದು, ಅವುಗಳನ್ನು ಶಾಶ್ವತವಾಗಿ ಪರಿಹರಿಸುವ ಅಗತ್ಯವಿದೆ ಎಂದರು.

ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ಸದ್ಯಕ್ಕಿಲ್ಲ. ಆದರೆ, ಪಕ್ಷ ವಹಿಸುವ ಕೆಲಸ ಮಾಡುತ್ತೇನೆ. ರಾಯಚೂರಿನಲ್ಲಿಯೂ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ಸಾಕ್ಷರತೆ ಹೆಚ್ಚಿಸುವುದು ಹಾಗೂ ಮಾಜಿ ದೇವದಾಸಿಯರಿಗೆ ವಸತಿ ಕಲ್ಪಿಸುವುದಕ್ಕೆ ಯೋಜನೆ ರೂಪಿಸುವ ಕಾರ್ಯ ಮಾಡಿದ್ದೇನೆ. ನ್ಯಾ. ಸದಾಶಿವ ಆಯೋಗದ ವರದಿ ಈಗಾಗಲೇ ಜಾರಿಯಾಗಬೇಕಿತ್ತು. ಈ ಬಗ್ಗೆ ಆಡಳಿತ ಪಕ್ಷಗಳು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡುವ ಆಸೆ ಜನರದ್ದು. ಹೀಗಾಗಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಚಾರ ಮಾಡುತ್ತೇನೆ. ದೇಶದೆಲ್ಲೆಡೆ ಮೋದಿ ಅಲೆ ಕಾಣುತ್ತಿದೆ ಎಂದು ತಿಳಿಸಿದರು.

ಸಚಿವ‍ಪ್ರಿಯಾಂಕ ಖರ್ಗೆ ಮಾಡಿದ ಟೀಕೆಗೆ ಪ್ರತಿಕ್ರಿಯೆ ನೀಡಿ, ‘ನಾನು ರಾಜ್ಯ ಕಾರ್ಯದರ್ಶಿಯಾಗಿದ್ದಾಗ ಲೋಪಗಳಾಗಿದ್ದರೆ ದೂರು ಕೊಡಬಹುದಿತ್ತು. ಸಚಿವ ಪ್ರಿಯಾಂಕ ನಿದ್ದೆ ಮಾಡುತ್ತಿದ್ದರಾ’ ಎಂದು ಪ್ರಶ್ನಿಸಿದರು.

ಶಾಸಕ ಡಾ. ಶಿವರಾಜ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಮುಖಂಡರಾದ ಎನ್‌.ಶಂಕ್ರಪ್ಪ, ಎ.ಪಾಪಾರೆಡ್ಡಿ, ಯು.ದೊಡ್ಡಮಲ್ಲೇಶಪ್ಪ, ರಾಜಕುಮಾರ, ರವೀಂದ್ರ ಜಾಲ್ದಾರ, ಶರಣಮ್ಮ ಕಾಮರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.