ADVERTISEMENT

ಮಧುಗಿರಿ: ಜೆಡಿಎಸ್, ಕಾಂಗ್ರೆಸ್ ಸಭೆಗೆ ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ ಗೈರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 12:50 IST
Last Updated 5 ಏಪ್ರಿಲ್ 2019, 12:50 IST
ಮುದ್ದಹನುಮೇಗೌಡ
ಮುದ್ದಹನುಮೇಗೌಡ   

ಮಧುಗಿರಿ: ಲೋಕಸಭಾ ಚುನಾವಣೆ ಪ್ರಯುಕ್ತ ಪಟ್ಟಣದಲ್ಲಿ ಶುಕ್ರವಾರ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಗೆ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಧುಗಿರಿ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎನ್.ರಾಜಣ್ಣ ಗೈರಾಗಿದ್ದು ಎದ್ದು ಕಂಡಿತು.

ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಮುದ್ದಹನುಮೇಗೌಡರನ್ನು ವರಿಷ್ಠರು, ಪಕ್ಷದ ಮುಖಂಡರು ಸಮಾಧಾನ ಪಡಿಸಿ ಪ್ರಚಾರಕ್ಕೆ ಆಹ್ವಾನಿಸಿದ್ದರು. ದೇವೇಗೌಡರ ಸ್ಪರ್ಧೆ ವಿರೋಧಿಸಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಎನ್.ರಾಜಣ್ಣ ಅವರೂ ಪಕ್ಷದ ಮುಖಂಡರ ಸೂಚನೆ ಮೇರೆಗೆ ನಾಮಪತ್ರ ಹಿಂದಕ್ಕೆ ಪಡೆದಿದ್ದರು. ಬಳಿಕ ಜಿಲ್ಲೆಯಲ್ಲಿ ಈವರೆಗೆ ನಡೆದ ಯಾವ ಪ್ರಚಾರ ಸಭೆಯಲ್ಲೂ ಉಭಯ ಮುಖಂಡರು ಭಾಗವಹಿಸಿರಲಿಲ್ಲ.

ಮಧುಗಿರಿ ರಾಜಣ್ಣ ಅವರು ಪ್ರತಿನಿಧಿಸಿದ ಕ್ಷೇತ್ರ. ಹೀಗಾಗಿ, ಗುರುವಾರದ ಸಭೆಯಲ್ಲಿ ರಾಜಣ್ಣ ಅವರ ಬೆಂಬಲಿಗರು ಭಾಗವಹಿಸುವ ನಿರೀಕ್ಷೆ ಮುಖಂಡರಲ್ಲಿತ್ತು. ಆದರೆ, ಇಬ್ಬರೂ ಮುಖಂಡರು ಗೈರಾಗಿದ್ದು ಎದ್ದು ಕಂಡಿತು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಶಾಂತಲಾ ರಾಜಣ್ಣ, ಮಂಜುಳಾ, ಸದಸ್ಯರಾದ ಜಿ.ಜೆ.ರಾಜಣ್ಣ, ಚೌಡಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೇನಾ ನಾಯ್ಕ ಮತ್ತು ತಾ.ಪಂ. ಕಾಂಗ್ರೆಸ್ ಸದಸ್ಯರು, ಪುರಸಭೆ ಕಾಂಗ್ರೆಸ್ ಸದಸ್ಯರು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಭೆಗೆ ಗೈರಾಗಿದ್ದರು.

ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಶಾಸಕ ಎಂ.ವಿ. ವೀರಭದ್ರಯ್ಯ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.