ADVERTISEMENT

ಕ್ಷೇತ್ರ ಪರಿಚಯ: ಮೈನ್‌ಪುರಿ (ಉತ್ತರ ಪ್ರದೇಶ)

​ಪ್ರಜಾವಾಣಿ ವಾರ್ತೆ
Published 1 ಮೇ 2024, 22:33 IST
Last Updated 1 ಮೇ 2024, 22:33 IST
   

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಅವರ ಕುಟುಂಬದ ಪ್ರಾಬಲ್ಯವಿರುವ ಮೈನ್‌ಪುರಿ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಅವರ ಸೊಸೆ ಡಿಂಪಲ್‌ ಯಾದವ್‌ ಅವರು ಸಮಾಜವಾದಿ ಪಕ್ಷದಿಂದ (ಎಸ್‌ಪಿ) ಕಣಕ್ಕಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮುಲಾಯಂ ಅವರು ಗೆದ್ದಿದ್ದರು. ಅವರ ನಿಧನಾನಂತರ 2022ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಡಿಂಪಲ್‌ ಅವರು 2,88,461 ಮತಗಳ ಅಂತರದಿಂದ ಬಿಜೆಪಿಯ ರಘುರಾಜ್‌ ಸಿಂಗ್‌ ಶಾಕ್ಯಾ ಅವರನ್ನು ಸೋಲಿಸಿದ್ದರು. 2019ರ ಲೋಕಸಭಾ ಚುನಾವಣೆಯ ವೇಳೆ ಉತ್ತರ ಪ್ರದೇಶದಾದ್ಯಂತ ಬಿಜೆಪಿ ಪರ ಅಲೆ ಇದ್ದಾಗಲೂ ಮೈನ್‌ಪುರಿ ಕ್ಷೇತ್ರದ ಜನರು ಮುಲಾಯಂ ಅವರ ಕೈಬಿಟ್ಟಿರಲಿಲ್ಲ. ಡಿಂಪಲ್‌ ಅವರ ಗೆಲುವಿವ ಓಟಕ್ಕೆ ಕಡಿವಾಣ ಹಾಕಲು ಬಿಜೆಪಿಯು ಈ ಸಲ ರಾಜ್ಯ ಸಚಿವ ಜೈವೀರ್‌ ಸಿಂಗ್‌ ಅವರನ್ನು ಅಖಾಡಕ್ಕಿಳಿಸಿದೆ. ಬಿಎಸ್‌ಪಿಯು ಶಿವಪ್ರಸಾದ್‌ ಯಾದವ್‌ ಅವರನ್ನು ಸ್ಪರ್ಧಿಯಾಗಿಸಿದೆ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿಯು ಎಸ್‌ಪಿಯ ಜೊತೆಗೆ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಬಿಎಸ್‌ಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಎಸ್‌ಪಿಯ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ಷೇತ್ರವು ಮೂರು ದಶಕಗಳಿಂದಲೂ ಎಸ್‌ಪಿಯ ಕೈವಶದಲ್ಲಿದೆ. ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಅವರು ಈ ಕ್ಷೇತ್ರದಲ್ಲಿ ಪ್ರಭಾವಿ ನಾಯಕಿಯಾಗಿದ್ದಾರೆ. ಎಸ್‌ಪಿಯು ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದು ಅವರ ಗೆಲುವಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.