ADVERTISEMENT

ಕ್ಷೇತ್ರ ಮಹಾತ್ಮೆ: ನಾಗ್ಪುರ (ಮಹಾರಾಷ್ಟ್ರ)

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 19:59 IST
Last Updated 29 ಮಾರ್ಚ್ 2024, 19:59 IST
ನಾಗ್ಪುರ
ನಾಗ್ಪುರ   

ಮಹಾರಾಷ್ಟ್ರದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲೊಂದಾದ ನಾಗ್ಪುರ ಕ್ಷೇತ್ರದಲ್ಲಿ ಕದನ ಕಲಿಗಳ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ, ವಿಕಾಸ್‌ ಠಾಕ್ರೆ ಅವರನ್ನು ಕಾಂಗ್ರೆಸ್‌ ಅಖಾಡಕ್ಕಿಳಿದೆ. ಎರಡು ಬಾರಿ ಇಲ್ಲಿಂದ ಗೆಲುವಿನ ನಗೆ ಬೀರಿರುವ ಗಡ್ಕರಿ ಅವರು ಸ್ಥಳೀಯವಾಗಿಯೂ ಸಾಕಷ್ಟು ಪ್ರಭಾವವಿರುವ ಮುಖಂಡರಾಗಿದ್ದಾರೆ. ಇದೇ ಕಾರಣಕ್ಕೆ ನಾಗ್ಪುರ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ವಿಕಾಸ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿಸಿದೆ. ನಾಗ್ಪುರ ಮಹಾನಗರ ಪಾಲಿಕೆಯ ಮೇಯರ್‌ ಆಗಿಯೂ ಕಾರ್ಯನಿರ್ವಹಿಸಿ ಅನುಭವವಿರುವ ವಿಕಾಸ್‌, ಸ್ಥಳೀಯ ರಾಜಕಾರಣದಲ್ಲಿ ಆಳವಾಗಿ ಬೇರು ಬಿಟ್ಟವರು. ಈ ಕಾರಣಕ್ಕೆ ಸ್ಪರ್ಧೆಯು ಕುತೂಹಲ ಮೂಡಿಸಿದೆ. ವಿಕಾಸ್‌ ಅವರು ನಾಗ್ಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್‌ನ ವಿಲಾಸ್‌ ಮುತ್ತೆಂವರ್‌ ಅವರು 2009ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ಬಳಿಕ ಗಡ್ಕರಿ ಅವರು ಇಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದರು. ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿರುವ ಗಡ್ಕರಿ, 2009ರಲ್ಲಿ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆಗೆ ದುಡಿದಿದ್ದರು. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಾಗಿರುವ ಇವರಿಗೆ ಈ ಬಾರಿಯೂ ನಾಗ್ಪುರದಿಂದ ಸುಲಭ ಜಯ ಲಭಿಸಲಿದೆ ಎಂಬುದು ಬಿಜೆಪಿಯ ವಿಶ್ವಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.