ADVERTISEMENT

ಮಲ್ಲಿಕಾರ್ಜುನಗೆ ಸುತ್ತಿಕೊಂಡ ‘ಉಸ್ತುವಾರಿ ಉರುಳು’

ಬಗೆಹರಿಯದ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಸಮಸ್ಯೆ

ವಿನಾಯಕ ಭಟ್ಟ‌
Published 1 ಏಪ್ರಿಲ್ 2019, 19:11 IST
Last Updated 1 ಏಪ್ರಿಲ್ 2019, 19:11 IST
ಎಸ್‌.ಎಸ್‌. ಮಲ್ಲಿಕಾರ್ಜುನ
ಎಸ್‌.ಎಸ್‌. ಮಲ್ಲಿಕಾರ್ಜುನ   

ದಾವಣಗೆರೆ: ಸೋಲಿನ ಕಹಿ ಅನುಭವದ ಹಿನ್ನೆಲೆಯಿಂದ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸದೆ ಆಪ್ತರಿಗೆ ಟಿಕೆಟ್‌ ಕೊಡಿಸಲು ಮುಂದಾಗಿದ್ದ ಕಾಂಗ್ರೆಸ್‌ ನಾಯಕ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಕೊರಳಿಗೆ ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ‘ಉಸ್ತುವಾರಿಯ ಉರುಳು’ ಸುತ್ತಿಕೊಂಡಿದೆ.

ದಾವಣಗೆರೆ ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನಾಗಿ ಮಲ್ಲಿಕಾರ್ಜುನ ಅವರನ್ನೇ ಸೋಮವಾರ ಕೆಪಿಸಿಸಿ ನೇಮಿಸಿದ್ದರಿಂದ ಅವರೇ ಅಭ್ಯರ್ಥಿ ಆಗಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಎದುರು 2004ರಿಂದ ಸತತವಾಗಿ ಮೂರು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮಲ್ಲಿಕಾರ್ಜುನ ಸೋತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸೋಲಿನ ರುಚಿ ಉಂಡ ಅವರು ಸಾರ್ವಜನಿಕ ಜೀವನದಿಂದ ದೂರವಾಗಿದ್ದರು. ಈ ಬಾರಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಮಲ್ಲಿಕಾರ್ಜುನ ಅವರನ್ನೇ ಮತ್ತೆ ಕಣಕ್ಕಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಶಿಫಾರಸು ಮಾಡಿತ್ತು. ಆದರೆ, ಮಲ್ಲಿಕಾರ್ಜುನ ಮಾತ್ರ ಉತ್ಸಾಹ ತೋರಲಿಲ್ಲ.

ADVERTISEMENT

ಜಿಲ್ಲೆಯಲ್ಲಿ ಲಿಂಗಾಯತರನ್ನೇ ಕಣಕ್ಕೆ ಇಳಿಸಬೇಕು ಎಂಬ ಜಾತಿ ಲೆಕ್ಕಾಚಾರದಿಂದ ಕಾಂಗ್ರೆಸ್‌ ಹೈಕಮಾಂಡ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್‌ ನೀಡಿತ್ತು. ಆದರೆ, ವಯಸ್ಸಿನ ಕಾರಣ ನೀಡಿದ ಅವರು ಟಿಕೆಟ್‌ ನಿರಾಕರಿಸಿದರು. ಜೊತೆಗೆ ತಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ ಎಂಬ ಸಂದೇಶವನ್ನು ರಾಜ್ಯದ ನಾಯಕರಿಗೆ ರವಾನಿಸಿದ್ದರು.

ಇದರ ಬೆನ್ನಿಗೇ ರಾಜ್ಯ ನಾಯಕರು, ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಕುಟುಂಬದ, ಜಿಲ್ಲಾ ಪಂಚಾಯಿತಿ ಪಕ್ಷೇತರ ಸದಸ್ಯ ತೇಜಸ್ವಿ ಪಟೇಲ್‌ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಆಹ್ವಾನಿಸಿದ್ದು ಶಾಮನೂರು ಕುಟುಂಬಕ್ಕೆ ಪಥ್ಯವಾಗಲಿಲ್ಲ. ಜಿಲ್ಲೆಯ ಆಡಳಿತದ ಮೇಲೆ ಹೊಂದಿರುವ ಹಿಡಿತ ಸಡಿಲಗೊಳ್ಳಬಹುದು, ಲಿಂಗಾಯತ ಸಮುದಾಯದವರೇ ಆಗ ಪಟೇಲ್‌ ಕುಟುಂಬದ ಇನ್ನೊಬ್ಬ ನಾಯಕ ಬೆಳೆದರೆ ತಮ್ಮ ಕುಟುಂಬದ ರಾಜಕೀಯ ಭವಿಷ್ಯ ಮಂಕಾಗಲಿದೆ ಎಂಬ ಆತಂಕ ಕಾಡತೊಡಗಿತು.

ಜೊತೆಗೆ ಪಕ್ಷದ ಜಿಲ್ಲೆಯ ಮುಖಂಡರು ‘ನೀವೇ ಸ್ಪರ್ಧಿಸಿ; ಇಲ್ಲವೇ ನಿಮ್ಮ ಆಪ್ತರನ್ನು ಕಣಕ್ಕೆ ಇಳಿಸಿ’ ಎಂದು ಮಲ್ಲಿಕಾರ್ಜುನ ಅವರ ಮೇಲೆ ಒತ್ತಡ ಹಾಕಿದರು. ಅದುವರೆಗೂ ತಟಸ್ಥರಾಗಿದ್ದ ಮಲ್ಲಿಕಾರ್ಜುನ, ಬೆಂಗಳೂರಿಗೆ ದೌಡಾಯಿಸಿ ತಮ್ಮ ಆಪ್ತ, ಕುರುಬ ಸಮಾಜದವರಾದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರಿಗೆ ಟಿಕೆಟ್‌ ಕೊಡುವಂತೆ ವಶೀಲಿ ನಡೆಸಿದರು. ಆದರೆ, ‘ನೀವು ಸ್ಪರ್ಧಿಸುವುದಾದರೆ ಮಾತ್ರ ಟಿಕೆಟ್‌ ಕೊಡುತ್ತೇವೆ; ಬೇರೆ ಯಾರಿಗೆ ಟಿಕೆಟ್‌ ಕೊಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ’ ಎಂದು ರಾಜ್ಯ ನಾಯಕರು ನಿಷ್ಠುರರಾಗಿ ಹೇಳಿದರು.

ಎರಡು ದಿನಗಳ ಕಾಲಾವಕಾಶ ತೆಗೆದುಕೊಂಡು ಬಂದಿದ್ದ ಮಲ್ಲಿಕಾರ್ಜುನ, ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರದ ಭರಾಟೆ ಜೋರಾಗಿರುವುದನ್ನು ಕಂಡು ತಾವು ಸ್ಪರ್ಧಿಸುವ ಧೈರ್ಯವನ್ನು ತೋರಿಸದೇ ಕಾದು ನೋಡುವ ತಂತ್ರ ಅನುಸರಿಸಿದ್ದರು. ಇದರ ನಡುವೆಯೇ ಮಲ್ಲಿಕಾರ್ಜುನ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ನೀಡಲಾಗಿದೆ. ತೇಜಸ್ವಿ ಪಟೇಲ್‌, ಮಂಜಪ್ಪ ಅಥವಾ ಮಾಜಿ ಸಂಸದ ಕೊಂಡಜ್ಜಿ ಬಸಪ್ಪ ಅವರ ಮೊಮ್ಮಗ ನಿಖಿಲ್‌ ಕೊಂಡಜ್ಜಿ ಪೈಕಿ ಯಾರಿಗೆ ‘ಟಿಕೆಟ್‌ ಭಾಗ್ಯ’ ಸಿಗಲಿದೆ ಎಂಬುದು ಎರಡು ದಿನಗಳ ಒಳಗೆ ಗೊತ್ತಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

**

ಟಿಕೆಟ್‌ ನೀಡುವ ಬಗ್ಗೆ ಇನ್ನೂ ನನ್ನನ್ನು ಸಂಪರ್ಕಿಸಿಲ್ಲ. ಕಾಂಗ್ರೆಸ್‌ ಪಕ್ಷದ ಹಿತದೃಷ್ಟಿಯಿಂದ ಆದಷ್ಟು ಬೇಗನೆ ಅಭ್ಯರ್ಥಿ ಆಯ್ಕೆ ಮಾಡಬೇಕು.
– ತೇಜಸ್ವಿ ಪಟೇಲ್‌, ಜಿ.ಪಂ. ಸದಸ್ಯ

**

ಎಸ್‌.ಎಸ್‌. ಮಲ್ಲಿಕಾರ್ಜುನ ತಮ್ಮ ನಿಲುವು ಪ್ರಕಟಿಸಲು ವಿಳಂಬ ಮಾಡಿದ್ದರಿಂದ ಟಿಕೆಟ್‌ ಯಾರಿಗೆ ಕೊಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಎರಡು ದಿನದೊಳಗೆ ಗೊಂದಲ ಬಗೆಹರಿಯಲಿದೆ.
– ಎಚ್‌.ಬಿ. ಮಂಜಪ್ಪ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.