ADVERTISEMENT

ಸೊನ್ನೆ ಎಷ್ಟೆಂದು ಮೋದಿಗೆ ಗೊತ್ತಿದೆಯೇ: ಸುರೇಶ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 13:43 IST
Last Updated 3 ಏಪ್ರಿಲ್ 2019, 13:43 IST

ರಾಮನಗರ: ‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ₹ 72 ಸಾವಿರಕ್ಕೆ ಎಷ್ಟು ಸೊನ್ನೆ ಎಂಬುದನ್ನು ರಾಹುಲ್‌ ಗಾಂಧಿ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವುದು ಒಳಿತು’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಸುರೇಶ್‌ ತಿರುಗೇಟು ನೀಡಿದರು.

ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಬಸ್‌ ನಿಲ್ದಾಣದ ಬಳಿ ಬುಧವಾರ ಪ್ರಚಾರದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ರಾಹುಲ್‌ರನ್ನು ಟೀಕೆ ಮಾಡುವ ಸಚಿವರು ಮೋದಿಯನ್ನು ಯಾಕೆ ₹ 15 ಲಕ್ಷಕ್ಕೆ ಸೊನ್ನೆಯೆಷ್ಟು ಎಂದು ಕೇಳುವುದಿಲ್ಲ’ ಎಂದು ಮರು ಪ್ರಶ್ನಿಸಿದ ಅವರು ‘ರಾಷ್ಟ್ರದ ಜನರು ಆಶೀರ್ವಾದ ಮಾಡಿದರೆ ಪ್ರತಿ ಬಡವನ ಖಾತೆಗೆ ₹ 72 ಸಾವಿರ ಹಾಕುತ್ತೇವೆ’ ಎಂದರು.

ಬಿಜೆಪಿ ಅಭ್ಯರ್ಥಿಯು ತಮ್ಮ ಐದು ವರ್ಷದ ರಿಪೋರ್ಟ್ ಕಾರ್ಡ್ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ನಾನು ಮತದಾರರಿಗೆ ವರದಿ ಕೊಟ್ಟಿದ್ದೇನೆ. ಮೇ 23ರಂದು ಅವರ ಫಲಿತಾಂಶ ಸಿಗಲಿದೆ’ ಎಂದರು.

ADVERTISEMENT

‘ಜೆಡಿಎಸ್‌–ಕಾಂಗ್ರೆಸ್‌ ಜಂಟಿ ಪ್ರಚಾರಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಸೂಚನೆ ನೀಡಿದ್ದಾರೆ. ಸಚಿವ ಡಿ.ಕೆ. ಶಿವಕುಮಾರ್ ಸಹ ಪಾಲ್ಗೊಳ್ಳುತ್ತಾರೆ’ ಎಂದರು.

ಕೊಳ್ಳೆ ಹೊಡೆದ ಹಣದಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂಬ ಸಿ.ಪಿ. ಯೋಗೇಶ್ವರ್‌ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ‘ಅವರು ಸದಾ ಸುದ್ದಿಯಲ್ಲಿ ಇರಲು ಏನಾದರೊಂದು ಹೇಳುತ್ತಲೇ ಇರುತ್ತಾರೆ. ನಮ್ಮ ಬಗ್ಗೆ ಮಾತನಾಡುವ ಮೊದಲು ಬಿಡದಿ ಬ್ಯಾಕೆಂಡ್‌ ಬಗ್ಗೆ ಚರ್ಚೆ ಮಾಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.