ADVERTISEMENT

ಪೊಲೀಸ್ ಸಿಬ್ಬಂದಿಗೆ ‘ವಿಶೇಷ ಕಿಟ್’

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರಿಗೆ 11 ವಸ್ತುಗಳ ಬ್ಯಾಗ್‌

ಈರಪ್ಪ ಹಳಕಟ್ಟಿ
Published 13 ಏಪ್ರಿಲ್ 2019, 20:00 IST
Last Updated 13 ಏಪ್ರಿಲ್ 2019, 20:00 IST
ಪೊಲೀಸ್ ಸಿಬ್ಬಂದಿಗೆ ನೀಡುವ ಕಿಟ್‌ನಲ್ಲಿರುವ ವಸ್ತುಗಳು
ಪೊಲೀಸ್ ಸಿಬ್ಬಂದಿಗೆ ನೀಡುವ ಕಿಟ್‌ನಲ್ಲಿರುವ ವಸ್ತುಗಳು   

ಚಿಕ್ಕಬಳ್ಳಾಪುರ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಪೊಲೀಸ್‌ ಸಿಬ್ಬಂದಿಗೆ ಸಾಮಾನ್ಯವಾಗಿ ಇಲಾಖೆಯಿಂದ ಟೂತ್ ಪೇಸ್ಟ್, ಬ್ರಷ್‌, ಸೋಪ್‌, ಶಾಂಪೂ ಕೊಡುವುದು ವಾಡಿಕೆ. ಆದರೆ ಈ ಬಾರಿ ಜಿಲ್ಲೆಯ ಪೊಲೀಸರಿಗೆ ಎಸ್ಪಿ ಕೆ.ಸಂತೋಷ್‌ ಬಾಬು ಅವರ ಕಾಳಜಿಯಿಂದ 11 ವಸ್ತುಗಳನ್ನು ಒಳಗೊಂಡ ‘ವಿಶೇಷ ಕಿಟ್‌’ ದೊರೆಯುತ್ತಿದೆ.

ಎಲ್ಲ ಜಿಲ್ಲೆಗಳಲ್ಲಿ ಸಿಬ್ಬಂದಿಗೆ ಟೂತ್ ಪೇಸ್ಟ್, ಬ್ರಷ್‌, ಸೋಪ್‌, ಶಾಂಪೂ ದೊರೆತರೆ, ಜಿಲ್ಲೆಯ ಪೊಲೀಸರಿಗೆ ಅವುಗಳ ಜತೆಗೆ ಶೇವಿಂಗ್ ಸೆಟ್, ಟಿಪನ್ ಬಾಕ್ಸ್‌, ನೀರಿನ ಬಾಟಲಿ, ಗ್ಲೂಕೋಸ್ ಪ್ಯಾಕೆಟ್, ಬಿಸ್ಕಿಟ್‌, ಕೊಬ್ಬರಿ ಎಣ್ಣೆ, ಸೊಳ್ಳೆಬತ್ತಿ ನೀಡಲಾಗುತ್ತಿದೆ. ಈ ಎಲ್ಲ ವಸ್ತುಗಳನ್ನಿಡಲು ಒಂದು ಜಲನಿರೋಧಕ ಬ್ಯಾಗ್‌ ಕೂಡ ಒದಗಿಸುತ್ತಿರುವುದು ವಿಶೇಷ.

ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮತ್ತು ಸಿವಿಲ್‌ ಸೇರಿದಂತೆ 1,050 ಸಿಬ್ಬಂದಿಗೆ ನೀಡಲು ವಿಶೇಷ ಕಿಟ್‌ಗಳನ್ನು ಖರೀದಿಸಿ, ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ ಸರಬರಾಜು ಮಾಡಲಾಗಿದೆ. ಕೆಲವು ಕಡೆ ವಿತರಣೆ ಕೂಡ ನಡೆದಿದೆ. ಇತರೆ ಜಿಲ್ಲೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ₹ 250 ಮೌಲ್ಯದ ವಸ್ತುಗಳನ್ನು ಕೊಡಲಾಗುತ್ತದೆ. ಆದರೆ ಜಿಲ್ಲೆಯ ಪೊಲೀಸರಿಗೆ ₹ 685 ಮೌಲ್ಯದ ವಸ್ತುಗಳನ್ನು ನೀಡಲಾಗುತ್ತಿದೆ.

ADVERTISEMENT

‘ಚುನಾವಣೆ ಕರ್ತವ್ಯದಲ್ಲಿ ಸಿಬ್ಬಂದಿಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಊಟ ಸಿಗುತ್ತದೆ. ಅದನ್ನು ಕೆಲಸದ ಒತ್ತಡದಲ್ಲಿ ತುಂಬಾ ಹೊತ್ತು ಇಟ್ಟುಕೊಂಡು ತಿನ್ನಲು ಕಷ್ಟ. ಅದಕ್ಕಾಗಿ ಊಟ ತೆಗೆದಿಟ್ಟುಕೊಂಡು ತಿನ್ನಲು ಅನುಕೂಲವಾಗಲಿ ಎಂದು ಟಿಪನ್ ಬಾಕ್ಸ್‌ ನೀಡಲು ನಿರ್ಧರಿಸಿದ್ದೇವೆ’ ಎಂದು ಎಸ್ಪಿ ಕೆ.ಸಂತೋಷ್‌ ಬಾಬು ಮಾಹಿತಿ ನೀಡುವರು.

‘ಈ ಕಿಟ್ ಚುನಾವಣೆ ಬಂದೋಬಸ್ತ್‌ ಮಾತ್ರವಲ್ಲದೆ ಇತರೆ ದಿನಗಳಲ್ಲಿ ನಡೆಯುವ ಬಂದೋಬಸ್ತ್‌ಗಳ ಸಮಯ
ದಲ್ಲೂ ಬಳಕೆ ಮಾಡಬಹುದು. ಟಿಪನ್‌ ಬಾಕ್ಸ್‌, ನೀರಿನ ಬಾಟಲಿ ನಿತ್ಯವೂ ಬಳಕೆ ಮಾಡಲು ಅನುಕೂಲವಾಗುತ್ತವೆ. ಇದಕ್ಕೆ ಇಲಾಖೆಯಲ್ಲಿ ಪ್ರತ್ಯೇಕ ಅನುದಾನ ಇಲ್ಲ. ನಾವು ಪೊಲೀಸರ ಕಲ್ಯಾಣ ನಿಧಿಯ ಹಣದಲ್ಲಿ ಸ್ವಲ್ಪ ಈ ಕೆಲಸಕ್ಕೆ ಬಳಸುತ್ತಿದ್ದೇವೆ’ ಎಂದು ತಿಳಿಸಿದರು.

‘ಈ ಹಿಂದೆ ಯಾವ ಅಧಿಕಾರಿಗಳು ಈ ರೀತಿ ಸಿಬ್ಬಂದಿಯ ಬಗ್ಗೆ ಕಾಳಜಿ ತೋರಿದ ಉದಾಹರಣೆ ಇಲ್ಲ. ಕೆಳ ಹಂತದ ಸಿಬ್ಬಂದಿ ಕಷ್ಟ ಅರಿತು ಸ್ಪಂದಿಸುವ ಅಧಿಕಾರಿಗಳು ಇಂದು ವಿರಳ. ಸಂತೋಷ್‌ ಬಾಬು ಅವರ ಈ ಕೆಲಸ ಇತರರಿಗೆ ಮಾದರಿಯಾಗಿದೆ. ಇದು ಸಿಬ್ಬಂದಿಯ ಕೆಲಸಕ್ಕೆ ಉತ್ತೇಜನ ನೀಡಲಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಸಂತೋಷ್‌ ಬಾಬು ಅವರು ಈ ಹಿಂದೆ ಗದಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾಗಲೂ ಇದೇ ರೀತಿ ಸಿಬ್ಬಂದಿಗೆ ವಿಶೇಷ ಕಿಟ್‌ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.