ADVERTISEMENT

ಶಿವಮೊಗ್ಗ ಲೋಕಸಭಾ ಕ್ಷೇತ್ರ: 12 ಅಭ್ಯರ್ಥಿಗಳ ಮಧ್ಯೆ ಕದನಕ್ಕೆ ಕಣ ಸಿದ್ಧ

7 ಪಕ್ಷೇತರ ಅಭ್ಯರ್ಥಿಗಳಿಗೆ ವಿಭಿನ್ನ ಚಿಹ್ನೆಗಳ ಹಂಚಿಕೆ, 23ಕ್ಕೆ ಮತದಾನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 14:43 IST
Last Updated 8 ಏಪ್ರಿಲ್ 2019, 14:43 IST

ಶಿವಮೊಗ್ಗ: ಇಬ್ಬರು ಪಕ್ಷೇತರರು ನಾಮಪತ್ರ ಹಿಂಪಡೆದಿದ್ದು ಶಿವಮೊಗ್ಗ ಲೋಕಸಭಾ ಚುನಾವಣಾ ಕಣದಲ್ಲಿ ಅಂತಿಮವಾಗಿ 12 ಅಭ್ಯರ್ಥಿಗಳು ಉಳಿದಿದ್ದಾರೆ.

ಉತ್ತಮ ಪ್ರಜಾಕೀಯದ ವೈ.ಡಿ.ಸತೀಶ್, ಪಕ್ಷೇತರ ಅಭ್ಯರ್ಥಿ ಕೆ.ಶಿವಲಿಂಗಪ್ಪ ನಾಮಪತ್ರ ಹಿಂದಕ್ಕೆ ಪಡೆದವರು.

ಬಿಜೆಪಿಯ ಬಿ.ವೈ.ರಾಘವೇಂದ್ರ, ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಎಸ್‌.ಮಧು ಬಂಗಾರಪ್ಪ, ಬಹುಜನ ಸಮಾಜ ಪಕ್ಷದ ಗುಡ್ಡಪ್ಪ, ಉತ್ತಮ ಪ್ರಜಾಕೀಯದ ಆರ್‌.ವೆಂಕಟೇಶ್, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಕೆ.ಕೃಷ್ಣ, ಪಕ್ಷೇತರರಾಗಿ ಎನ್‌.ಟಿ. ವಿಜಯಕುಮಾರ್, ಎಸ್‌.ಉಮೇಶಪ್ಪ, ಬಿ.ಕೆ.ಶಶಿಕುಮಾರ್, ಶೇಖರ್‌ ನಾಯ್ಕ, ಉಮೇಶ ಶರ್ಮಾ, ಮಹಮದ್ ಯೂಸೂಫ್ ಖಾನ್, ಕೆ.ಸಿ.ವಿನಯ್ ಕಣದಲ್ಲಿ ಇದ್ದಾರೆ.

ADVERTISEMENT

ಚಿಹ್ನೆಗಳ ಹಂಚಿಕೆ: ಪಕ್ಷದ ಬಿ–ಫಾರಂ ಪಡೆದು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಆಯಾ ಪಕ್ಷಗಳ ಚಿಹ್ನೆ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿ ಕಮಲ, ಜೆಡಿಎಸ್‌ ತೆನೆಹೊತ್ತ ರೈತ ಮಹಿಳೆ, ಬಿಎಸ್‌ಪಿ ಆನೆ, ಉತ್ತಮ ಪ್ರಜಾಕೀಯ ಆಟೊರಿಕ್ಷಾ ಹಾಗೂ ಪಿರಾಮಿಡ್‌ ಪಾರ್ಟಿ ಆಫ್‌ ಇಂಡಿಯಾ ಅಭ್ಯರ್ಥಿ ಅನಾನಸ್‌ ಚಿಹ್ನೆ ಅಡಿ ಸ್ಪರ್ಧಿಸುತ್ತಿದ್ದಾರೆ.

ಹೆಲಿಕಾಪ್ಟರ್ ಪ್ರಿಯನಿಗೆ ಬಯಸಿದ್ದೇ ಸಿಕ್ಕಿತು

ವಿಧಾನಸಭಾ ಚುನಾವಣೆ ವೇಳೆ ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿ ಕೆ.ಸಿ.ವಿನಯ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಹೆಲಿಕಾಪ್ಟರ್ ಚಿಹ್ನೆ ದೊರೆತಿದೆ. ಕಾಂಗ್ರೆಸ್‌ ವಿರುದ್ಧ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಿದ್ದ ಉಮೇಶ್ ವರ್ಮಾ ಅವರಿಗೆ ವಜ್ರ, ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದ ಶಶಿಕುಮಾರ್ ಅವರಿಗೆ ಬ್ಯಾಟ್ಸ್‌ಮನ್, ಎಸ್‌.ಉಮೇಶಪ್ಪ ಅವರಿಗೆ ತೆಂಗಿನ ತೋಟ, ಮಹಮದ್‌ ಯೂಸುಫ್ ಖಾನ್‌ ಅವರಿಗೆ ಡೀಸೆಲ್‌ ಪಂಪ್, ವಿಜಯಕುಮಾರ್ ಅವರಿಗೆ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ, ಶೇಖರ್ ನಾಯ್ಕ ಅವರಿಗೆ ಸ್ಟೆತೊಸ್ಕೋಪ್ ಚಿಹ್ನೆಗಳು ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.